ಕೋಲಾರ

ಮಾಸ್ತಿ ವಸತಿ ಶಾಲೆ ಸಮಸ್ಯೆಗಳ ಆಸ್ತಿ!

Published On :

-ಟೇಕಲ್ ಲಕ್ಷ್ಮೀಶ್
ಟೇಕಲ್ :
'ಕನ್ನಡದ ಆಸ್ತಿ' ಎಂದೇ ಪ್ರಖ್ಯಾತರಾದ ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಹೆಸರಿನ ಮಾಲೂರು ತಾಲೂಕಿನ ಮಾಸ್ತಿಯಲ್ಲಿರುವ ಮಾಸ್ತಿ ವಸತಿ ಶಾಲೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳ ಆಗರವಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಮಾಸ್ತಿ ಅವರ ಹೆಸರನ್ನು ಹುಟ್ಟೂರಿನಲ್ಲಿ ನೆನಪಿಸುವ ಉದ್ದೇಶದಿಂದ ಮಾಸ್ತಿ ವಸತಿ ಶಾಲೆಯನ್ನು 2007-08ರಲ್ಲಿ ಆರಂಭಿಸಲಾಯಿತು. ಆದರೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು ವಸತಿ ಶಾಲೆಗೆ ಸ್ವಂತ ಕಟ್ಟಡವೂ ಇಲ್ಲ. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳಲ್ಲೆ ಶಾಲೆ ನಡೆಯುತ್ತಿದೆ. ಅಲ್ಲಿಯೇ ಮಕ್ಕಳ ವಸತಿ, ಊಟಕ್ಕೂ ವ್ಯವಸ್ಥೆ ಮಾಡಲಾಗಿದೆ. ವಸತಿ ಶಾಲೆ ಆರಂಭವಾದಾಗ ರಾಜ್ಯದ ಬೆಂಗಳೂರು, ತುಮಕೂರು, ಕೋಲಾರ, ಇನ್ನಿತರ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಈ ಈ ಶೈಕ್ಷಣಿಕ ವರ್ಷದಲ್ಲಿ ಕೇವಲ 20 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ದಾಖಲಾಗಿದ್ದಾರೆ.
ಮೂಲ ಸೌಕರ್ಯಗಳ ಕೊರತೆ: ಮಕ್ಕಳಿಗೆ ಸಧ್ಯಕ್ಕೆ ವ್ಯವಸ್ಥೆ ಮಾಡಿರುವ ಶಾಲೆಯ ಸುತ್ತಮುತ್ತ ಸ್ವಚ್ಛೆತೆ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸದಾ ಇಲ್ಲಿರುವ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ವಸತಿ ಶಾಲೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಹಾರ, ಬಟ್ಟೆ, ಪುಸ್ತಕ ಇತರೆ ಸಲಕರಣೆಗಳೂ ಈ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗಿಲ್ಲ. ವಸತಿ ಶಾಲೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ವಿ. ರಾಜಗೋಪಾಲ್ ಸಾಲ ಮಾಡಿ ವಿದ್ಯಾರ್ಥಿಗಳಿಗೆ ಬೇಕಾಗುವ ದಿನಸಿ, ಬಟ್ಟೆ ಪುಸ್ತಕಗಳನ್ನು ಖರೀದಿಸಿದ್ದಾರೆ. ಈ ಸಾಲ ತೀರಿಸುವುದೇ ಅವರಿಗೆ ಸಮಸ್ಯೆಯಾಗಿದೆ.
ಅಡುಗೆ ಸಿಬ್ಬಂದಿ ಕೊರತೆಯಿದ್ದು, ಸರ್ಕಾರಿ ಶಾಲೆಯಲ್ಲಿ ನೀಡುವ ಆಹಾರವನ್ನೇ ಇಲ್ಲಿಯೂ ನೀಡಲಾಗುತ್ತಿದೆ. ಇರುವ ಒಬ್ಬ ಶಿಕ್ಷಕರಿಗೂ ಸರ್ಕಾರ ಗೌರವ ಧನ ನೀಡುತ್ತಿಲ್ಲ.  ಒಟ್ಟಾಗಿ ಸಮಸ್ಯೆಗಳನ್ನೇ ಹೊತ್ತಿರುವ ಈ ವಸತಿ ಶಾಲೆಯಿಂದ ಇರುವ ಕೆಲವೇ ಕೆಲವು ವಿದ್ಯಾರ್ಥಿಗಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ಸೇರಿಸಲು ಪೋಷಕರು ಆಸಕ್ತರಾಗಿದ್ದಾರೆ.
ವಸತಿ ಶಾಲೆಗೆ ಸ್ವಂತ ಕಟ್ಟಡ: ವಸತಿ ಶಾಲೆಗಾಗಿ ಸ್ವಂತ ಕಟ್ಟಡ ನಿರ್ಮಿಸಲು ಗ್ರಾಮದ ವರದಾಪುರ ರಸ್ತೆಯ ಸರ್ವೆ ನಂ.525 ರಲ್ಲಿ 5 ಎಕರೆ ಜಮೀನು ಮಂಜೂರಾಗಿದ್ದು, ಸರ್ವೆ ಕಾರ್ಯವೂ ಮುಗಿದಿದೆ.  'ವಸತಿ ಶಾಲೆಯನ್ನು ಕಟ್ಟಲು ರಾಜ್ಯದ ಭೂಸೇನಾ ನಿಗಮ(ಔಛಟಿಜ ಆ್ಠಟಣ) ಕ್ಕೆ ಒಪ್ಪಿಸಲಾಗಿದೆ. ಅಂದಾಜು 6 ರಿಂದ 7 ಕೋಟಿ ವೆಚ್ಚವಾಗುವ ಸಾಧ್ಯತೆಯಿದ್ದು ಇದನ್ನು ರಾಜ್ಯ ಸಚಿವ ಸಂಪುಟದಲ್ಲಿ ಹಣ ಬಿಡುಗಡೆಗೆ ಒಪ್ಪಿಗೆ ಪಡೆಯಬೇಕಾಗಿದೆ. ಇದರ ಕಡತಗಳನ್ನೆಲ್ಲಾ ನಾನೇ ರಾಜ್ಯ ಸರ್ಕಾರಕ್ಕೆ ನೀಡಿದ್ದು ಇನ್ನು 10, 15 ದಿನಗಳಲ್ಲಿ ಒಪ್ಪಿಗೆ ಪಡೆದು ಗುದ್ದಲಿ ಪೂಜೆ ನೆರವೇರಲಿದೆ' ಎನ್ನುತ್ತಾರೆ ಶಾಸಕ ಕೆ.ಎಸ್. ಮಂಜುನಾಥಗೌಡ.
ಆದಷ್ಟು ಬೇಗ ಮೂಲ ಸೌಲಭ್ಯಗಳನ್ನು ಒದಗಿಸಿ ವಸತಿ ಶಾಲೆಯನ್ನು ಮಾಸ್ತಿಯಲ್ಲಿಯೆ ಉಳಿಸಿ ಕನ್ನಡ ಆಸ್ತಿಯಾಗಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.

ಮಕ್ಕಳಿಗೆ ಬಿಇಒ ಮಾರ್ಗದರ್ಶನದಲ್ಲಿ ಉತ್ತಮ ಊಟದ ವ್ಯವಸ್ಥೆ ಮಾಡಲಾಗುವುದು. ಇದರ ಅಂದಾಜು ವೆಚ್ಚ ವರ್ಷಕ್ಕೆ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ಕಟ್ಟಡದ ಕಾಮಗಾರಿ ಪ್ರಾರಂಭಕ್ಕೆ ಎರಡು ಮುಕ್ಕಾಲು ಕೋಟಿ ಹಣವಿದ್ದು, ಸರ್ಕಾರ ಅದನ್ನು ಹಂತ ಹಂತವಾಗಿ ಕೊಡುತ್ತಿದೆ.
-ಪದ್ಮನಾಭ್, ಕೋಲಾರ ಜಿಲ್ಲಾ ಶಿಕ್ಷಣ ಉಪನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.