ಕೋಲಾರ

ಅಪಾರ ಮೌಲ್ಯದ ರಕ್ತಚಂದನ ವಶ

Published On :

ಗುಡಿಬಂಡೆ: ತಾಲೂಕಿನ ರಾ.ಹೆ 7ರ ಯರ್ರಲಕ್ಕೇನಹಳ್ಳಿ ಬಳಿ ಟಾಟಾ ಸುಮೋ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 300 ಕೆ.ಜಿ. ರಕ್ತ ಚಂದನವನ್ನು ವಶಪಡಿಸಿಕೊಳ್ಳುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಾಸ್ಪದವಾಗಿ ನಿಂತಿದ್ದ ವಾಹನವನ್ನು ತಪಾಸಣೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ವಾಹನ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಶಿವಕುಮಾರ್, ಎಸ್.ಐ. ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವಪತ್ತೆ
ಗುಡಿಬಂಡೆ:
ತಾಲೂಕಿನ ಯಲ್ಲೋಡು ವ್ಯಾಪ್ತಿಯ ಬುಳ್ಳಸಂದ್ರ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ. ಮೃತವ್ಯಕ್ತಿ ಸುಮಾರು 55 ರಿಂದ 60 ವರ್ಷ ವಯಸ್ಸುಳ್ಳವನೆಂದು ಹೇಳಲಾಗಿದೆ. ಅರಣ್ಯ ಕಾವಲುಗಾರ ವೆಂಕಟರಾಯಪ್ಪ ಎಂಬಾತ ನೀಡಿದ್ದ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚೇತರಿಸಿಕೊಳ್ಳುತ್ತಿರುವ ವೃದ್ಧ
ಚಿಕ್ಕಬಳ್ಳಾಪುರ:
ಭೂದಾಹದ ವಕೀಲನ ಅಕ್ರಮ ಬಂಧನದಿಂದ ಮುಕ್ತರಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧ ಮುನಿಯಪ್ಪ ಚೇತರಿಸಿಕೊಳ್ಳುತ್ತಿದ್ದಾರೆ. ತಾಲೂಕಿನ ಗವಿಗಾನಹಳ್ಳಿಯ ವಕೀಲ ಯುಮನಾಚಾರಿಯು ಪತ್ನಿಯಿಂದ ದೂರವಾಗಿದ್ದ ಅದೇ ಗ್ರಾಮದ ವೃದ್ಧ ಮುನಿಯಪ್ಪರವರನ್ನು ಜೀತಕ್ಕಿಟ್ಟುಕೊಂಡಿದ್ದು ಈ ನಡುವೆ ಮುನಿಯಪ್ಪಗೆ ಸೇರಿರುವ 2 ವರೆ ಎಕರೆ ಜಮೀನನ್ನು ಕಬಳಿಸಲು ಯತ್ನಿಸಿ ತೋಟದ ಮನೆಯಲ್ಲಿ ಸರಿಯಾಗಿ ಊಟ ಆಹಾರವನ್ನು ನೀಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ.
ದೂರಿನ ಬೆದರಿಕೆ: ಮುನಿಯಪ್ಪ ದುಸ್ಥಿತಿಯನ್ನು ಕಂಡು ಗ್ರಾಮದಲ್ಲಿ ಅನೇಕರು ಮರುಗಿದ್ದಾರೆ. ಆಗಾಗ ಯಮುನಾಚಾರಿ ಕುಟುಂಬದವರೊಂದಿಗೆ ಗಲಾಟೆ ಸಹ ಮಾಡಿ ಮುನಿಯಪ್ಪನನ್ನು ಹೊರಗಡೆಗೆ ಬಿಡುವಂತೆ ಒತ್ತಾಯಿಸುತ್ತಿದ್ದರು. ಆದರೆ,ಯಮುನಾಚಾರಿ ಕುಟುಂಬದವರು  ಪ್ರಶ್ನಿಸುವವರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸುವ ಮೂಲಕ ಕಿರುಕುಳವನ್ನು ಕೊಡುತ್ತಿದ್ದರು ಎನ್ನಲಾಗಿದೆ. ಸ್ವತಃ ಮುನಿಯಪ್ಪನವರ ಕುಟುಂಬದವರು ಹೋದರೇನೇ ಮಾತನಾಡಿಸಲು ಬಿಡುತ್ತಿರಲಿಲ್ಲ. ಗಲಾಟೆ ಮಾಡಿ ವಾಪಸ್ ಕಳುಹಿಸುತ್ತಿದ್ದರು ಎನ್ನುವುದು ಗ್ರಾಮಸ್ಥರ ಪ್ರಶ್ನೆ. ಆಸ್ಪತ್ರೆಯ ವೈದ್ಯರು ಮುನಿಯಪ್ಪಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಪೊಲೀಸರು ಗ್ರಾಮದಲ್ಲಿ ಹಲವರನ್ನು ಭೇಟಿ ಮಾಡಿ, ಅಕ್ರಮ ಬಂಧನದ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.