ಬಡ ರೋಗಿಗಳಿಗೆ ಉಚಿತ ಸೇವೆ ನೀಡಿ
ಕೋಲಾರ: ವೈದ್ಯರು ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬಡ ಜನರು ಆರೋಗ್ಯ ಸೇವೆಯಿಂದ ವಂಚಿತರಾಗದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರ ವೈದ್ಯ ಕ್ರೀಡಾ ಮತ್ತು ಸಂಸ್ಕೃತಿಕ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡಲು ಇಚ್ಚಿಸಿರುವವರು ತಮ್ಮ ಜೀವನ ಮತ್ತು ನಡವಳಿಕೆಯಲ್ಲಿ ಗಾಂಭೀರ್ಯತೆಯನ್ನು ಹೊಂದಿರಬೇಕೆಂದು ಸಲಹೆ ನೀಡಿದರು.
ವಿಶೇಷ ಅಭಿಮಾನ: ವೈದ್ಯ ವಿದ್ಯಾರ್ಥಿಗಳು ಪಾಠ-ಪ್ರವಚನ ಜೊತೆಗೆ ನಮ್ಮ ಸಂಸ್ಕೃತಿ, ನಾಡು ನುಡಿಯ ಬಗ್ಗೆ ವಿಶೇಷ ಅಭಿಮಾನ ಬೆಳೆಸಿಕೊಳ್ಳಿ, ವೈದ್ಯಕೀಯ ಪದವಿ ಪಡೆದು ವೃತ್ತಿ ಜೀವನ ಆರಂಭಿಸಿದ ಮೇಲೂ ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದ ಹವ್ಯಾಸಿ ಕಲಾವಿದರಾಗಿ ಕೀರ್ತಿ ಸಂಪಾದಿಸಿ ಎಂದು ಕಿವಿ ಮಾತು ಹೇಳಿದ ಸಚಿವರು, ಬಡ ರೋಗಿಗಳಿಗೆ ಉಚಿತ ಸೇವೆ ನೀಡುವ ಮೂಲಕ ಜೀವನ ಸಾರ್ಥವಾಗಿಸಿಕೊಳ್ಳಿ ಎಂದರು.
ಪೈಪೋಟಿ: ಸಚಿವೆ ಉಮಾಶ್ರೀ ಅವರು ಇದೇ ಸಂದರ್ಭದಲ್ಲಿ ದೇವರಾಜ ಅರಸ್ ವೈದ್ಯಕೀಯ ಕಾಲೇಜಿನ ಸ್ಥಾಪಕ ಆರ್.ಎಲ್. ಜಾಲಪ್ಪನವರ ಪರಿಶ್ರಮವನ್ನು ಕೊಂಡಾಡಿದರು.
ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಆರ್.ಎಲ್. ಜಾಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಓದಿನಿಂದ ಜ್ಞಾನ ಸಂಪಾದನೆ ಆಗುವುದಿಲ್ಲ. ಸಾಮಾನ್ಯ ಜ್ಞಾನ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರಬೇಕೆಂದರು. ಪ್ರಾಂಶುಪಾಲ ಡಾ. ಸಾಣಿಕೊಪ್, ಉಪ ಕುಲಪತಿ ಡಾ. ಪ್ರೇಮನಾಥ್ ಎಫ್. ಕೊಟೂರ್, ವೈದ್ಯಕೀಯ ಆಧೀಕ್ಷಕ ಡಾ.ಶ್ರೀರಾಮುಲು, ಡಾ. ಚಂದ್ರಪ್ಪ, ಡಾ. ವಿದ್ಯಾಸಾಗರ್, ಸಾಂಸ್ಕೃತಿಕ ಸಂಚಾಲಕಿ ಡಾ. ಸಂಗೀತ, ಕುಲಸಚಿವ ಡಾ.ಎ.ವಿ.ಎಂ. ಕುಟ್ಟಿ ಇದ್ದರು.
ಬಿಜೆಪಿ ನಾಯಕರ ವರ್ತನೆ ಹಿಂದೆ ರಾಜಕೀಯ ದುರುದ್ದೇಶ
ಬಂಗಾರಪೇಟೆ: ಮಿನಿ ವಿಧಾನಸೌಧ ಕಟ್ಟಡಕ್ಕೆ ಕೋಲಾರದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿರುವುದಕ್ಕೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಶಂಷುದ್ದಿನ್ ಬಾಬು, ಶಾಸಕ ನಾರಾಯಣಸ್ವಾಮಿಯವರು ಗೆದ್ದ ನಾಲ್ಕು ತಿಂಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಮಂಜೂರು ಮಾಡಿಸಿ ಪೂರ್ಣಗೊಳಿಸಿ ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸಿದ್ದಾರೆ. ಇದನ್ನು ಸಹಿಸದೆ ಅಪಪ್ರಚಾರ ಮಾಡಿದ್ದಾರೆ ಎಂದು ಕಿಡಿಕಾರಿದರು. ಕೆಜಿಎಫ್ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಟ್ಟಲು ಮಾಜಿ ಶಾಸಕರಿಗೆ ತಾಕತ್ತಿಲ್ಲ ಎಂದರು. ಗೋಷ್ಠಿಯಲ್ಲಿ ಬ್ಲಾಕ್ ಅಧ್ಯಕ್ಷ ಮಂಜುನಾಥ್,ಬಿ. ಹೊಸರಾಯಪ್ಪ, ಶಫಿ, ವೆಂಕಟೇಶಗೌಡ, ಅರುಣಾಚಲಂಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

