ಲೈನ್ಮನ್ ಪ್ರಕರಣ ಸುಖಾಂತ್ಯ
ಟೇಕಲ್: ಟೇಕಲ್ ಬೆಸ್ಕಾಂ ವ್ಯಾಪ್ತಿಯ ಗೋಪಸಂದ್ರ ಗ್ರಾಮದಲ್ಲಿ ಲೈನ್ಮನ್ ಕಿರುಕುಳದ ವಿರುದ್ಧ ಬಂದಿದ್ದ ಆರೋದ ಹಿನ್ನೆಲೆಯಲ್ಲಿ ಟೇಕಲ್ ಬೆಸ್ಕಾಂ ಅಧಿಕಾರಿಗಳು, ವಿದ್ಯುತ್ ಗ್ರಾಹಕರು ಸೇರಿ ವಿದ್ಯುತ್ ಇಲಾಖೆ ಮತ್ತು ಜನರು ಉತ್ತಮ ಬಾಂಧವ್ಯದಿಂದ ಇರಬೇಕೆಂದು ಶಾಂತಿ ಮಾತುಕತೆ ನಡೆಸಿ ಘಟನೆಗೆ ಸುಖಾಂತ್ಯ ಹಾಡಲಾಯಿತು. ಈ ಸಂದರ್ಭದಲ್ಲಿ ಟೇಕಲ್ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜಿ. ರಾಮಮೂರ್ತಿ, ಎಲ್. ವೆಂಕಟೇಶ್, ಬೆಸ್ಕಾಂ ಅಧಿಕಾರಿಗಳು ಇದ್ದರು.
ಮಣ್ಣಿನ ಆರೋಗ್ಯ ಕಾರ್ಯಕ್ರಮ
ಟೇಕಲ್: ಸಮೀಪದ ಬನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಮಣ್ಣಿನ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಭೂಮಿಯ ಮಣ್ಣಿನ ಮಾದರಿಗಳನ್ನು ಬನಹಳ್ಳಿ ಸುತ್ತಮುತ್ತಲಿನ ಸುಮಾರು 60ಕ್ಕೂ ಹೆಚ್ಚು ರೈತರ ಜಮೀನಿನ ಮಣ್ಣಿನ ಮಾದರಿ ತೆಗೆದು ಕೃಷಿ ವಿಶ್ವವಿದ್ಯಾನಿಲಯದ ಜಿ.ಕೆ.ವಿ.ಕೆ. ಮಣ್ಣು, ಕೃಷಿ ರಾಸಾಯನ ಶಾಸ್ತ್ರ ವಿಭಾಗಕ್ಕೆ ಕಳುಹಿಸಿದ್ದರು. ಮಣ್ಣಿನ ಫಲಿತಾಂಶ ಬಂದಿದ್ದು ಸ್ನಾತಕೋತ್ತರ ವಿದ್ಯಾರ್ಥಿಗಳು ಮಣ್ಣಿನ ಮಾದರಿ ಫಲಿತಾಂಶಗಳನ್ನು ರೈತರಿಗೆ ನೀಡಿದರು. ಅವರ ಜಮೀನಿನ ಮಣ್ಣಿನಲ್ಲಿರುವ ಮಣ್ಣಿನ ಫಲವತ್ತತೆ ಹಾಗೂ ಅದರ ಪೋಷಕಾಂಶಗಳನ್ನು ವೃದ್ಧಿಸಲು ಯಾವ ಕ್ರಮಗಳನ್ನು ಜರುಗಿಸಬೇಕೆಂದು ರೈತರಿಗೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾದ ಡಾ. ರಾಮಕೃಷ್ಣಪ್ಪ, ಡಾ.ಸಿ.ಎ. ಶ್ರೀನಿವಾಸಮೂರ್ತಿ, ಡಾ.ಎನ್.ಬಿ. ಪ್ರಕಾಶ್, ಡಾ. ಸುಬ್ಬರಾಯಪ್ಪ ಹಾಗೂ ಟೇಕಲ್ ಹೋಬಳಿ ಕೃಷಿ ಅಧಿಕಾರಿ ಪ್ರಕಾಶ್ ಬಾಬು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಸಮುದಾಯ ಅಭಿವೃದ್ಧಿ ತರಬೇತಿ
ಗುಡಿಬಂಡೆ; ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನೆಹರು ಯುವಕೇಂದ್ರ ಹಾಗೂ ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ನಡೆದ 3 ದಿನಗಳ ಯುವ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ತರಭೇತಿ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿತು.
ಶಿಬಿರದಲ್ಲಿ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೆರೆದಿದ್ದ ಗಣ್ಯರಿಂದ ವಿತರಿಸಲಾಯಿತು. ಉತ್ತಮ ನಾಗರಿಕ ಜವಾಬ್ದಾರಿ, ವ್ಯಕ್ತಿವಿಕಾಸ, ವ್ಯವಹಾರಿಕ ಕಲೆ, ಕಂಪ್ಯೂಟರ್ ಮತ್ತು ಅಂತರ್ಜಾಲ ಶಿಕ್ಷಣ ಮೊದಲಾದ ವಿಚಾರಗಳ ತಿಳಿಸಲಾಯಿತು.
ವಿಭಾಗ ಮಟ್ಟದ ಕ್ರೀಡಾಕೂಟ
ಕೋಲಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2013-14ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವವನ್ನು ಸೆ.27 ರಿಂದ 29 ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಕ್ರೀಡಾಪಟುಗಳು ಮತ್ತು ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳು ಮಾತ್ರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮಾನವನ ಮೇಲೆ ಮಾರ್ವೇ ಮೀನಿನ ಪರಿಣಾಮ
ಚಿಂತಾಮಣಿ: ಮಾನವನ ದೇಹದ ಮೇಲೆ ಮಾರ್ವೇ ಮೀನು(ಆಫ್ರಿಕನ್ ಕ್ಯಾಟ್) ಸಾಕಾಣಿಕೆಯಿಂದ ಹಲವಾರು ರೋಗಗಳು ಹರಡುವ ಹಾಗೂ ಪರಿಸರ ನಾಶದ ಬಗ್ಗೆ ಬೆಂಗಳೂರು ವಿಶ್ಯವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಪ್ರೊ. ರವಿಚಂದ್ರಾರೆಡ್ಡಿ ವಿವರಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿಜ್ಞಾನ ವಿಭಾಗದ ಜೀವಶಾಸ್ತ್ರ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಜೀವ ವಿಜ್ಞಾನ ವಿಷಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಂಶೋಧನಾ ಕ್ರಿಯಾಶೀಲತೆ ಬೆಳೆಸುವ ಉದ್ದೇಶದಿಂದ ಮಾನವನ ಮೇಲೆ ಮಾರ್ವೇ ಮೀನು ಹಲವಾರು ರೋಗಗಳು ಹರಡುವ ಬಗ್ಗೆ ಒಂದು ದಿನದ ವಿಚಾರಣಾ ಸಂಕಿರಣವನ್ನು ಕರ್ನಾಟಕ ಅಸೋಶಿಯೇಷನ್ ಫರ್ ದಿ ಅಡ್ವಾನ್ಸಮೆಂಟ್ ಆಫ್ ಸೈನ್ಸ್ ಬೆಂಗಳೂರು ಮತ್ತು ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಪ್ರಮೋಷನ್ ಸೊಸೈಟಿ ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲ ಜಿ. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರು ವಿಶ್ಯವಿದ್ಯಾಲಯದ ಡಾ.ಶ್ರೀನಿವಾಸನ್, ಡಾ.ಎನ್.ಎಸ್. ಲೀಲಾ, ಜಿ. ಮೌಲೇಶ್ವರಿ, ಡಾ. ವೇಣುಗೋಪಾಲ್ ಉಪಸ್ಥಿತರಿದ್ದರು. ಡಾ. ಜಿ. ಸತೀಶ್ ಬಾಬು, ಕೆ. ರಾಜಾರೆಡ್ಡಿ, ಡಾ. ಕೆ. ವಾಸುದೇವರೆಡ್ಡಿ, ಡಾ.ಎಸ್. ಶಂಕರ, ಡಾ. ಎಂ.ವಿ.ಶ್ರೀನಿವಾಸಲು, ಡಾ. ಮುನಿರಾಜು, ಆರ್. ಕೆಂಪರಾಜು, ಎಸ್. ಪ್ರಿಯಾ ಇದ್ದರು.
ಗಾಂಧಿ ಜಯಂತಿ ಆಚರಿಸಲು ಸೂಚನೆ
ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಣೆಯನ್ನು ಅ.2 ರಂದು ಗಾಂಧಿವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು. ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಏರ್ಪಡಿಸಲು ಹಲವಾರು ಸೂಚನೆ ನೀಡಿದ್ದಾರೆ. ಅ.2 ರಂದು ಬೆಳಿಗ್ಗೆ 7.30 ಕ್ಕೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿ ಜಯಂತಿಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಂತರ ಬೆಳಿಗ್ಗೆ 9 ಗಂಟೆಗೆ ಕೋಲಾರ ಗಾಂಧಿವನದಲ್ಲಿ ನಡೆಯುವ ಸರ್ವ ಧರ್ಮ ಪ್ರಾರ್ಥನೆಯ ಸಮಾರಂಭದಲ್ಲಿ ಅದಿಕಾರಿಗಳು ಮತ್ತು ಸಿಬ್ಬಂದಿ ಹಾಜರಾಗುವಂತೆ ತಿಳಿಸಿದ್ದಾರೆ. ಗಾಂಧಿವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೇಕಾದ ಶಾಮಿಯಾನ ವ್ಯವಸ್ಥೆ, ಧ್ವನಿವರ್ಧಕ, ಉದ್ಘಾಟನೆ ಸಲಕರಣೆಗಳು, ಮಹಾತ್ಮಗಾಂಧಿ ಭಾವಚಿತ್ರ ಹಾಗೂ ಹೂವಿನ ಹಾರಗಳ ವ್ಯವಸ್ಥೆಯನ್ನು ನಗರಸಭೆ ಪೌರಾಯುಕ್ತರು ಕ್ರಮಕೈಗೊಳ್ಳಬೇಕು. ಮಹಾತ್ಮ ಗಾಂಧಿ ಜಯಂತಿಯ ದಿನಾಚರಣೆ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧೀನದಲ್ಲಿರುವ ವಿದ್ಯಾರ್ಥಿನಿಲಯಗಳ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಗಾಂಧಿಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದಾರೆ.
ಅ.9 ಕ್ಕೆ ಉಪ ಲೋಕಾಯುಕ್ತರ ಭೇಟಿ
ಕೋಲಾರ: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್.ಬಿ. ಅಡಿ ಅವರು ಸಾರ್ವಜನಿಕರಿಂದ ದೂರುಗಳ ಸ್ವೀಕಾರ ಹಾಗೂ ದೂರುಗಳ ವಿಚಾರಣೆ ಸಂಬಂಧ ಜಿಲ್ಲೆಗೆ ಅ.9 ರಂದು ಭೇಟಿ ನೀಡಲಿದ್ದಾರೆ. ಅಂದು ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸುವರು. ಸಾರ್ವಜನಿಕರು ದೂರುಗಳನ್ನು ಲಿಖಿತ ಅರ್ಜಿಗಳ ಮೂಲಕ ಸಲ್ಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ತಾಪಂ ಚುನಾವಣೆ: ಮದ್ಯ ನಿಷೇಧ
ಕೋಲಾರ: ಕೋಲಾರ ತಾಲೂಕಿನ ಅರಾಭಿಕೊತ್ತನೂರು ಹಾಗೂ ಶ್ರೀನಿವಾಸಪುರ ತಾಲೂಕಿನ ಪುಲಗೂರಕೋಟೆ ತಾಪಂ ಕ್ಷೇತ್ರಗಳಿಗೆ ಸೆ.29 ರಂದು ಮತದಾನ ನಡೆಯುವುದರಿಂದ ಸೆ.29ರಂದು ಮಧ್ಯರಾತ್ರಿಯವರೆಗೆ ತಾಪಂಗಳಲ್ಲಿ ಮತದಾನ ನಡೆಯುವ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವಂತಹ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಿದೆ. ಮತ ಎಣಿಕೆ ದಿನವಾದ ಅ.1 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯರಾತ್ರಿಯವರೆಗೆ ಆಯಾ ತಾಲೂಕು ಕೇಂದ್ರ ಸ್ಥಾನದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಡಿ.ಕೆ. ರವಿ ಆದೇಶ ಹೊರಡಿಸಿದ್ದಾರೆ.
ಇಂದು ಚಿನ್ಮಯಶ್ರೀ ರಂಗ ಪ್ರವೇಶ
ಕೋಲಾರ: ನಗರದ ಜಯ ನಾಟ್ಯ ಕಲಾ ಅಕಾಡೆಮಿಯ 27 ನೇ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವನ್ನು ಸೆ.29 ರ ಮಧ್ಯಾಹ್ನ 3.05 ಗಂಟೆಗೆ ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಚಂದ್ರಕಲಾ ಮತ್ತು ಜಯಶಂಕರ್ರವರ ಪುತ್ರಿಯರು ಹಾಗೂ ಗುರು ವಿದ್ವಾನ್ ಕೋಲಾರ ರಮೇಶ್ರವರ ಶಿಷ್ಯೆಯರಾದ ಚಿನ್ಮಯಶ್ರೀ, ರೂಪಶ್ರೀ ರವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ಮಾಜಿ ಶಾಸಕರ ಪ್ರವಾಸ
ಶಿಡ್ಲಘಟ್ಟ: ಬಂಗಾರಪೇಟೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿಯವರು ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಸುರೇಂದ್ರ ಗೌಡ, ದಾಮೋದರ್, ತ್ಯಾಗರಾಜು, ಚಂದ್ರು, ನರೇಶ್, ರವಿಚಂದ್ರ ಸೇರಿದಂತೆ ಮತ್ತಿರರು ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

