ಶಾಸಕರ ವರ್ತನೆಗೆ ನಗರಸಭಾ ಸದಸ್ಯರ ವಿರೋಧ
ಚಿಕ್ಕಬಳ್ಳಾಪುರ: ನಗರದ ಸಮಸ್ಯೆಗಳ ಪರಿಹಾರ ಮತ್ತು ಅನುದಾನ ಬಿಡುಗಡೆ ವಿಚಾರದಲ್ಲಿ ರಾಜಕೀಯ ಬೆರೆಸಿ ಶಾಸಕ ಕೆ. ಸುಧಾಕರ್ ಜನಪ್ರತಿನಿಧಿಗಳಾಗಿರುವ ತಮ್ಮ ವಿರುದ್ಧ ಜನರನ್ನು ಎತ್ತಿ ಕಟ್ಟುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭಾ ಕಚೇರಿಯಲ್ಲಿ ಹಿರಿಯ ಸದಸ್ಯ ಎಸ್.ಎಂ. ರಫಿಕ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 23 ಮಂದಿ ನಗರಸಭಾ ಸದಸ್ಯರು, ಶಾಸಕ ಸುಧಾಕರ್ ಯಾರನ್ನೂ ಗಣನೆಗೆ ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸದಸ್ಯ ಎಸ್.ಎಂ. ರಫಿಕ್ ಮಾತನಾಡಿ, ಯುವ ನಾಯಕರಾಗಿರುವ ಶಾಸಕ ಸುಧಾಕರ್ ಅವರಿಗೆ ಉತ್ತಮ ಭವಿಷ್ಯವಿದೆ. ಸರ್ಕಾರದ ಮೇಲೆ ಒತ್ತಡವನ್ನು ಹೇರಿ ನಗರದ ಅಭಿವೃದ್ಧಿಗೆ ಅಗತ್ಯವಿರುವ ಕೋಟ್ಯಂತರ ರುಪಾಯಿ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಬರಲಿ, ಜನರ ಸಮಸ್ಯೆಗಳನ್ನು ದೂರ ಮಾಡಲಿ, ಇದಕ್ಕೆ ನಾವು ಅಗತ್ಯವಿರುವ ಸಹಕಾರವನ್ನು ಕೊಡುತ್ತೇವೆ. ಆದರೆ, ಒಬ್ಬ ಜನಪ್ರತಿನಿಧಿಯಾಗಿ ನಗರಸಭೆಯ ಆಧಾರಸ್ತಂಭಗಳಾಗಿರುವ ನಗರಸಭಾ ಸದಸ್ಯರನ್ನು ಕೀಳಾಗಿ ಕಾಣುವಂತಹುದು ಸರಿಯಲ್ಲ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಯುವ ನಾಯಕರೆಂಬ ಆಶಾ ಭಾವನೆಯೊಂದಿಗೆ ನಾವೆಲ್ಲರೂ ಸೇರಿಕೊಂಡು ಗೆಲ್ಲಿಸಿದೆವು. ಆಗ ನಮ್ಮ ಸಹಕಾರವನ್ನು ಪಡೆದುಕೊಂಡರು. ಆದರೆ, ಗೆದ್ದ ನಂತರ ನಾವು ಬೇಕಾಗಿಲ್ಲವೇ ಚುನಾವಣೆಯ ಸಂದರ್ಭದಲ್ಲಿ ಜತೆಗಿರಿಸಿಕೊಂಡು ಆ ನಂತರ ಮರೆಯುವುದು ಶೋಭೆಯಲ್ಲ ಎಂದರು.
ಬಿಡುಗಡೆ ಮಾಡಿಸಿದ್ದು: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಗರೋತ್ಥಾನ ಯೋಜನೆಯಡಿ ರು. 30 ಕೋಟಿ ಈ ಹಿಂದೆಯೇ ನೀಡಿದ್ದು ಚುನಾವಣೆ ಮತ್ತು ತಾಂತ್ರಿಕ ಸಮಸ್ಯೆಯಿಂದ ಬಿಡುಗಡೆಗೆ ವಿಳಂಬವಾಯಿತು. ಈಗ ನಾವು ಬಿಡುಗಡೆ ಮಾಡಿಸಿಕೊಂಡು ಬಂದಿದ್ದು ಇದರಲ್ಲಿ ಶಾಸಕ ಸುಧಾಕರ್ ಪಾತ್ರವೇನಿಲ್ಲ. ಆದರೆ, ಶಾಸಕರು ತಾವು ಬಿಡುಗಡೆ ಮಾಡಿಸಿಕೊಂಡಿರುವುದಾಗಿ ತಪ್ಪು ಮಾಹಿತಿ ಹೇಳುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಅವರು ಬಂದು ದೇವರ ಮುಂದೆ ಪ್ರಮಾಣವನ್ನು ಮಾಡಿ ಸತ್ಯವನ್ನು ಹೇಳಲಿ,ನಾವು ಬರುತ್ತೇವೆ ಎಂದು ಸವಾಲೆಸೆದ ಅವರು, ಜಕ್ಕಲಮಡಗು ಜಲಾಶಯದಿಂದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಮನೆಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ರು. 12 ಕೋಟಿ ಯೋಜನೆಯ ಟೆಂಡರ್ಗೆ ತಾವು ಮತ್ತು ಸದಸ್ಯರು ಅನುಮೋದನೆಯನ್ನು ಪಡೆದುಕೊಂಡು ಬಂದಿದ್ದು ಇನ್ನೂ 15 ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.
ಅವರು ಕೆಲಸ ಮಾಡಲಿ: ಶಾಸಕರಿಗೆ ತಮ್ಮದೇ ಆದ ಜವಾಬ್ದಾರಿ ಮತ್ತು ಕರ್ತವ್ಯಗಳಿರುತ್ತವೆ. ಆ ಕೆಲಸವನ್ನು ಮಾಡಿ ಶಾಸಕರು ಜನರ ಮೆಚ್ಚುಗೆಗೆ ಪಾತ್ರವಾದರೆ ತಪ್ಪೇನಿಲ್ಲ. ಆದರೆ, ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಮೂಗು ತೂರಿಸಿ ಸದಸ್ಯರ ಹಕ್ಕು ಮತ್ತು ಕರ್ತವ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳದಿರಲಿ, ಜನರ ಸಮಸ್ಯೆಗಳನ್ನು ಆಲಿಸುವ ಅವರು ನಗರಸಭಾ ಸದಸ್ಯರು ಸರಿಯಾಗಿ ಇದ್ದಿದ್ದರೆ ಈ ರೀತಿ ಸಮಸ್ಯೆಗಳು ತಾಂಡವವಾಡುತ್ತಿರಲಿಲ್ಲ. ನಿಮ್ಮ ವಾರ್ಡಿನ ಸದಸ್ಯರನ್ನು ಪ್ರಶ್ನಿಸಿ ಎಂದು ಹೇಳುವ ಮೂಲಕ ಜನರಲ್ಲಿ ಸದಸ್ಯರ ಬಗ್ಗೆ ತಪ್ಪು ಭಾವನೆ ಮೂಡುವಂತೆ ಮಾಡುವುದು. ನನಗೆ ಯಾವುದೇ ಸದಸ್ಯರ ಅನುಮತಿಯೂ, ಸಹಕಾರ ಬೇಕಾಗಿಲ್ಲ. ನನಗೆ ಇಷ್ಟ ಬಂದಂತೆ ಕೆಲಸ ಮಾಡುತ್ತೇನೆ ಎಂದೆಲ್ಲಾ ಒಬ್ಬ ಜನಪ್ರತಿನಿಧಿ ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.
ನಗರದ ಆಡಳಿತದ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲದೇ ವರ್ತಿಸುತ್ತಿರುವ ಪೌರಾಯುಕ್ತರ ಧೋರಣೆಯೇ ನಗರದಲ್ಲಿ ಸಮಸ್ಯೆಗಳು ತುಂಬಿ ತುಳುಕಾಡಲು ಕಾರಣವಾಗಿದೆ. ಇಂತಹವರನ್ನು ವರ್ಗಾವಣೆ ಮಾಡುವವರೆಗೂ ನಗರ ಅಭಿವೃದ್ಧಿಯಾಗುವುದಿಲ್ಲ ಎಂದು ಟೀಕಿಸಿದರು. ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಮಂಜುನಾಥಾಚಾರಿ, ಶ್ರೀನಾಥ್, ಶ್ರೀನಿವಾಸ್, ಮಹಾಕಾಳಿ ಬಾಬು,ಜಯಮ್ಮ, ಸಿಂಧೂರ್ ಸೇರಿದಂತೆ 23 ಸದಸ್ಯರು ಹಾಜರಿದ್ದರು.
ಶಾಸಕರ ಸ್ಪಷ್ಟನೆ: ನಗರ ಪ್ರದಕ್ಷಿಣೆ ವೇಳೆ ರಾಜಕೀಯ ಮಾಡುತ್ತಿಲ್ಲ. ಪಕ್ಷದ ಪರವಾದ ಕರಪತ್ರವನ್ನೂ ಹಂಚುತ್ತಿಲ್ಲ. ಜನಪ್ರತಿನಿಧಿಯಾಗಿ ಕೇವಲ ಖುದ್ಧು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಅಲ್ಲದೇ ಚಿಕ್ಕಬಳ್ಳಾಪುರಕ್ಕೆ ನಗರೋತ್ಥಾನ ಯೋಜನೆಯಡಿ ರು. 30 ಕೋಟಿ ನಾನೇ ಬಿಡುಗಡೆ ಮಾಡಿಸಿದ್ದೇನೆ ಎಂದು ಹೇಳಿಲ್ಲ. ಕೇವಲ ಬಿಡುಗಡೆಯಾಗಿದೆ ಎಂದಷ್ಟೇ ಹೇಳಿದ್ದೇನೆ. ಆದರೆ, ತಮ್ಮ ಜನಪರ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸಿ ಅಡ್ಡಿಪಡಿಸುವುದು ತರಹವಲ್ಲ ಎಂದು ಶಾಸಕ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳಿಂದ ಕಾಂಗ್ರೆಸ್ ಪಕ್ಷದ ಪ್ರಚಾರ
ನಗರದಲ್ಲಿ ತುಂಬಿ ತುಳುಕಾಡುತ್ತಿರುವ ಸಮಸ್ಯೆಗಳನ್ನು ಮತ್ತು ಜನರ ಅಹವಾಲುಗಳನ್ನು ಸ್ವೀಕರಿಸಲು ಶಾಸಕ ಸುಧಾಕರ್ಕೈಗೊಳ್ಳುತ್ತಿರುವ ನಗರ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಅಧಿಕಾರಿಗಳ ವಿರುದ್ಧ ಸದಸ್ಯರು ತಿರುಗಿ ಬಿದ್ದಿದ್ದಾರೆ. ನಗರದ ಪ್ರದಕ್ಷಿಣೆ ಸಂದರ್ಭದಲ್ಲಿ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷದ ಕರಪತ್ರವನ್ನು ಜನರಿಗೆ ನೀಡುವ ಮೂಲಕ ಪಕ್ಷದ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಪೌರಾಯುಕ್ತರು ಸೇರಿದಂತೆ ನಗರಸಭೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಈ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಪಕ್ಷದ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಸದಸ್ಯರು, ಅಧಿಕಾರಿಗಳು ಸರ್ಕಾರದ ಪರವಾಗಿ ಕೆಲಸ ಮಾಡುವುದೋ ಇಲ್ಲವೋ ರಾಜಕೀಯ ಪಕ್ಷವೊಂದರ ಪರವಾಗಿ ಕೆಲಸ ಮಾಡುವುದೋ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕರಪತ್ರವನ್ನು ಪ್ರದರ್ಶಿಸಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ಮತ್ತು ತಮ್ಮನ್ನು ಶಾಸಕನಾಗಿ ಆಯ್ಕೆ ಮಾಡಿರುವುದಕ್ಕೆ ಜನರಿಗೆ ಕೃತಜ್ಞತೆಗಳನ್ನು ಹೇಳುವುದಕ್ಕೆ ನಗರ ಪ್ರದಕ್ಷಿಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ವತಃ ಶಾಸಕರು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಶಾಸಕರ ಪರವಾದ ಕರಪತ್ರಗಳನ್ನೂ ಹಂಚಲಾಗುತ್ತಿದೆ. ಇದರಿಂದ ನಗರ ಪ್ರದಕ್ಷಿಣೆ ರಾಜಕೀಯವಾಗಿ ಪರಿವರ್ತನೆಯಾಗಿದ್ದು ಇದರಲ್ಲಿ ಅಧಿಕಾರಿಗಳು ಭಾಗವಹಿಸುತ್ತಿರುವುದು ಕಾನೂನಿಗೆ ವಿರುದ್ಧವಾದುದು ಎಂದು ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

