ಯುಪಿಎ ಜನಪರವಾಗಿಲ್ಲ
ಚಿಕ್ಕಬಳ್ಳಾಪುರ: ದೇಶದಲ್ಲಿ ಕಾಂಗ್ರೆಸ್ ಸಾಮಾನ್ಯ ಜನತೆ ಪರವಾಗಿಲ್ಲ. ಕೋಟ್ಯಧಿಪತಿಗಳ ಪರವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಕೆ. ಪದ್ಮನಾಭಂ ಆರೋಪಿಸಿದರು.
ನಗರದ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಏರ್ಪಡಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬೆಲೆ ಏರಿಕೆ, ಭ್ರಷ್ಟಾಚಾರ, ಕೋಮುವಾದ ದೇಶದ ಜನತೆ ಎದುರಿಸುತ್ತಿದ್ದಾರೆ. ಈ ಭಾಗದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿದ್ದ ಎಂ. ವೀರಪ್ಪಮೊಯ್ಲಿ ಅವರು ಪೆಟ್ರೋಲಿಯಂ ಸಚಿವರಾದ ನಂತರ ರಿಲಯನ್ಸ್ ಕಂಪನಿಯ ಅನಿಲ್ ಅಂಬಾನಿ ಮಕ್ಕಳಿಗೆ ಲಾಭ ಮಾಡಿಕೊಡಲು ಬೆಲೆ ಏರಿಕೆ ಮಾಡಿದರು ಎಂದರು.
ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡರು 1 ರು.ಗೆ ಅಕ್ಕಿ ಕೊಡುವ ಬದಲು ನೀರು ಕೊಡಬಹುದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅವರೇ ನೀರಾವರಿ ಮಂತ್ರಿ, ಪ್ರಧಾನಿ, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಮಧ್ಯ ಕರ್ನಾಟಕದ 9 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಯೋಚನೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರಮಶಿವಯ್ಯನವರ ಯೋಜನೆ ಅವೈಜ್ಞಾನಿಕ ಎಂದು ಹೇಳಿದ್ದರು. ಇತ್ತೀಚೆಗೆ ಮೇಕೆ ದಾಟುವಿನಿಂದ 50 ಟಿಎಂಸಿ ನೀರು ಕೊಡುತ್ತೇನೆ ಎಂದು ಹೇಳುತ್ತಾರೆ. ಮೇಕೆದಾಟುವಿನಿಂದ ಕನಿಷ್ಠ 5 ಟಿಎಂಸಿ ನೀರು ಸಿಗುವುದಿಲ್ಲ 50 ಟಿಎಂಸಿ ನೀರನ್ನು ಎಲ್ಲಿಂದ ತರುತ್ತಾರೆ ಎಂದು ವ್ಯಂಗ್ಯವಾಡಿದರು.
ವೀರಪ್ಪಮೊಯ್ಲಿ ಎತ್ತಿನಹೊಳೆ ಯೋಜನೆಗೆ ಅಡ್ಡಿ ಪಡಿಸಬೇಡಿ ನನ್ನನ್ನು ಸುಟ್ಟು ಹಾಕಿ ಎಂದು ಹೇಳುತ್ತಾರೆ. ಮೊಯ್ಲಿ ಅವರು ಕೆಲಸಕ್ಕೆ ಬಾರದ ವಸ್ತು (ವೇಸ್ಟು ಪ್ರಾಡೆಕ್ಟ್) ಅವರನ್ನು ಸುಟ್ಟರು ಪ್ರಯೋಜನವಿಲ್ಲ, ಮೊಯ್ಲಿ ಮಹಾನ್ ಸುಳ್ಳುಗಾರ ಅವರು ಸುಳ್ಳುಗಳಿಂದ ಪಕ್ಷ ಹಾಳಾಗುತ್ತಿದೆ ಎಂದು ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಧಾನಸಭೆಯಲ್ಲಿ ಅವರ ಪಕ್ಷದವರೇ ಹೇಳುತ್ತಿದ್ದರು. ಮೊಯ್ಲಿಗೆ ಪ್ರಾಮಾಣಿಕತೆ ಇದ್ದರೆ ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಡಿಪಿಆರ್ ವರದಿ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಜನರಿಗೆ ಎಷ್ಟು ನೀರು ದೊರೆಯುತ್ತದೆ ಎಂಬುದು ತೋರಿಸಲಿ ಎಂದು ಸವಾಲೆಸೆದರು.
ಸಿಪಿಎಂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವಿ.ಜಿ.ಕೆ.ನಾಯರ್, ಪ್ರಸನ್ನಕುಮಾರ್, ಮಾರುತಿ ಮಾನ್ಪಡೆ, ವಿಜಯ್ಕೃಷ್ಣನ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಜಿಪಂ ಸದಸ್ಯರಾದ ಸಾವಿತ್ರಮ್ಮ, ನಾರಾಯಣಮ್ಮ, ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಚನ್ನರಾಯಪ್ಪ, ಗೋಪಿನಾಥ್, ಸಿದ್ದಗಂಗಪ್ಪ, ಬಿ.ಎನ್. ಮುನಿಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

