ಕೋಲಾರ

ಬ್ರಹ್ಮರಥೋತ್ಸವ

Published On :

ಮಾಲೂರು: ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಚೈತ್ರ ಮಾಸ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಮಾಲೂರು ತಾಲೂಕು ಸೇರಿದಂತೆ ಪಕ್ಕದ ತಮಿಳುನಾಡು ಕಡೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಚೈತ್ರ ಮಾಸ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿ ದರ್ಶನ ಪಡೆಯಲು ಭಕ್ತರು ಬೆಳಗ್ಗಿನಿಂದಲೇ  ಸರದಿಯಲ್ಲಿ ನಿಂತಿದ್ದರು. ಸುತ್ತಮುತ್ತಲ ಗ್ರಾಮಸ್ಥರು ಎತ್ತಿನ ಗಾಡಿಗಳಲ್ಲಿ ಬಂದು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗಾಗಿ ಪಾನಕ-ಮಜ್ಜಿಗೆ ವಿತರಿಸಿದರು. ದೇವಾಲಯ ಸಮಿತಿ ಸಹ ಭಕ್ತಾಧಿಗಳಿಗಾಗಿ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಿದ್ದರು. ಮಾಲೂರು ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಸಕಲ ರೀತಿಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಮಂಜುನಾಥ್‌ಗೌಡ, ತಾಪಂ ಅಧ್ಯಕ್ಷೆ ಆಶಾರಾಜಪ್ಪ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಕೃಷ್ಣಯ್ಯ, ತಹಸೀಲ್ದಾರ್ ಶಿವಕುಮಾರ್, ಹುಚೇಗೌಡ,ರಾಮೇಗೌಡ, ಶ್ರೀನಿವಾಸಗೌಡ,ನರಸಿಂಹ ಮೂರ್ತಿ,ನಾರಾಯಣಚಾರ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಪರ ಮತಯಾಚನೆ
ಗುಡಿಬಂಡೆ: ಕೇಂದ್ರ ಸರ್ಕಾರ ಹಗರಣಗಳ ಮೂಟೆ ಹೊತ್ತಿದೆ.
ಕೇಂದ್ರದ ಯುಪಿಎ ಸರ್ಕಾರ ಅನೇಕ ಹಗರಣಗಳಲ್ಲಿ ಭಾಗಿಯಾಗಿ ಇಡಿ ದೇಶಕ್ಕೆ ಕಪ್ಪುಚುಕ್ಕೆ ತಂದಿದೆ ಎಂದು  ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಿ.ಎ.ಅಮರೇಶ್ ಆರೋಪಿಸಿದರು.
ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಗರುಡಚಾರ್ಲಹಳ್ಳಿ ಮತ್ತು ಮಾಚಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಅವರು ಮತಯಾಚಿಸಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ್‌ರೆಡ್ಡಿ, ಎಸ್.ಸಿ ಮೋರ್ಚಾ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

27ರಂದು ಕರಗ
ಮಾಲೂರು: ಏ. 27 ರಂದು ಪಟ್ಟಣದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕಾಗಿ ಸಾಟು ಇಡುವ ಕಾರ್ಯಕ್ರಮ ಪಟ್ಟಣದ ಗ್ರಾಮ ದೇವತೆ ಮಾರಿಕಾಂಬ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆಯಿತು. ಪಟ್ಟಣದಲ್ಲಿರುವ ಎಲ್ಲ ಸಮುದಾಯದ ಮುಖಂಡರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಆಹ್ವಾನ ನೀಡುವ ಮೂಲಕ ಕರೆ ತರಲಾಯಿತು. ಗ್ರಾಮದ ಯಜಮಾನ, ಪಟೇಲ, ಮೌಲ್ವಿ ಸೇರಿದಂತೆ ಎಲ್ಲ ಸಮುದಾಯಗಳ ಪ್ರಮುಖರ ಒಪ್ಪಿಗೆ ಮೇರೆಗೆ ಏ. 27 ರಂದು ಹೂವಿನ ಕರಗ ನಡೆಯಲಿದೆ.

ದೇವಾಲಯ ಕಳವು
ಚಿಂತಾಮಣಿ: ದೇವಾಲಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಬೆಲೆಬಾಳುವ ಒಡವೆ ಮತ್ತು ಹುಂಡಿ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬುಕ್ಕನಹಳ್ಳಿ ತಿಮ್ಮಸಂದ್ರ ಗ್ರಾಮದ ವೆಂಕಟರವಣಸ್ವಾಮಿ ದೇವಾಲಯದಲ್ಲಿ ನಡೆದಿದೆ. ತಾಲೂಕಿನ ಬುಕ್ಕನಹಳ್ಳಿ ತಿಮ್ಮಸಂದ್ರ ಗ್ರಾಮದಲ್ಲಿರುವ ವೆಂಕಟರವಣಸ್ವಾಮಿ ದೇವಾಲಯದ ಬೀಗ ಒಡೆದು ಒಳ ನುಗ್ಗಿದ ಕಳ್ಳರು ದೇವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಹುಂಡಿಯಲ್ಲಿನ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.