ಬಿಜೆಪಿ ಸಭೆಯಲ್ಲಿ ಭಿನ್ನಮತ ಸ್ಫೋಟ
ಕೋಲಾರ: ತಾಲೂಕಿನ ನರಸಾಪುರದಲ್ಲಿ ಭಾನುವಾರ ನಡೆದ ಬಿಜೆಪಿ ಸಭೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್ ವರ್ತನೆಯಿಂದ ಬೇಸತ್ತ ಮುಖಂಡರು ಪಕ್ಷದ ಉಸ್ತುವಾರಿ ವಹಿಸಿರುವ ಬಿಬಿಎಂಪಿ ಸದಸ್ಯರೂ ಆದ ಶಿವಕುಮಾರ್ ಅವರಿಗೆ ದೂರು ನೀಡಿ ವೇದಿಕೆಯಿಂದ ಪ್ರಮೋದ್ ಅವರನ್ನು ಕೆಳಗಿಳಿಸಿದ ಘಟನೆ ನಡೆದಿದೆ.
ನರಸಾಪುರ ಹೋಬಳಿಯ ಪಳ್ಳಿಗ ಜನಾಂಗಕ್ಕೆ ಸೇರಿದ ಮುಖಂಡರ ಸೇರ್ಪಡೆಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ತಾಲೂಕು ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ ಬಂದಾಗ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಮೋದ್ ಅಡ್ಡಿಪಡಿಸಿದರು. ಇದರಿಂದ ಗೊಂದಲ ಉಂಟಾಯಿತು. ಪಕ್ಷದ ಹಿರಿಯ ಮುಖಂಡ ತಲಗುಂದ ನಾರಾಯಣಸ್ವಾಮಿ ಮಧ್ಯ ಪ್ರದೇಶಿಸಿ ಪ್ರಮೋದ್ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಏನೇ ವ್ಯತ್ಯಾಸಗಳು ಇದ್ದರೂ ನಾಲ್ಕುಗೋಡೆಯ ಮಧ್ಯೆ ಬಗೆಹರಿಸಿಕೊಳ್ಳಬೇಕು, ವೇದಿಕೆಯಲ್ಲಿ ಈ ರೀತಿಯ ವರ್ತನೆ ಸರಿಯಲ್ಲವೆಂದು ಎಚ್ಚರಿಸಿದಾಗ ಪ್ರಮೋದ್ ಮತ್ತು ನರಸಿಂಹರಾಜು ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಗ್ರಾಮಾಂತರ ವಿಭಾಗದ ಅಧ್ಯಕ್ಷರನ್ನು ವೇದಿಕೆಗೆ ಕರೆಯದಿರುವುದನ್ನು ಕೆಲ ಕಾರ್ಯಕರ್ತರು ಪ್ರಶ್ನಿಸಿದಾಗ ಸಭೆಯಲ್ಲಿ ಮತ್ತಷ್ಟು ಗೊಂದಲ ಉಂಟಾಯಿತು. ಕೆಲವರು ಪಕ್ಷಕ್ಕೆ ಕೆಟ್ಟ ಹೆಸರು ತರಲು ಹಾಗೂ ಅಭ್ಯರ್ಥಿಯನ್ನು ಸೋಲಿಸಲೆಂದೇ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರಲ್ಲದೆ, ಪಕ್ಷ ವಿರೋಧಿಗಳಿಗೆ ಮಣೆ ಹಾಕುವುದು ಸರಿಯಲ್ಲವೆಂದು ಉಸ್ತುವಾರಿ ಶಿವಕುಮಾರ್ ಅವರಿಗೆ ತಿಳಿಸಿದರು.
ಸಭೆಯಲ್ಲಿ ಉಂಟಾದ ಗೊಂದಲದಿಂದ ಬೇಸತ್ತ ಶಿವಕುಮಾರ್ ವೇದಿಕೆಯಿಂದ ಇಳಿಯುವಂತೆ ಪ್ರಮೋದ್ಗೆ ಸೂಚಿಸಿದರಲ್ಲದೆ, ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ತಲಗುಂದ ನರಸಿಂಹರಾಜು ಅವರನ್ನು ಸಮಾಧಾನಪಡಿಸಿ ವೇದಿಕೆಯಲ್ಲಿ ಉಳಿಸಿಕೊಂಡರು.
ಅಭ್ಯರ್ಥಿ ನಾರಾಯಣಸ್ವಾಮಿ ವೇದಿಕೆಯಲ್ಲಿ ಕಂಡ ಬಿನ್ನಮತದಿಂದ ಬೇಸತ್ತು, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡುವುದು ಸರಿಯಲ್ಲ, ಪಕ್ಷ ಗೆಲ್ಲುವ ಅವಕಾಶ ಹೆಚ್ಚಾಗಿರುವುದರಿಂದ ಕಾರ್ಯಕರ್ತರು ಮುಖಂಡರು ಯಾವುದೇ ವ್ಯತ್ಯಾಸಗಳಿಗೆ ಅವಕಾಶ ಮಾಡದೆ ಒಗ್ಗೂಡಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು. ಜಿಪಂ ಸದಸ್ಯ ಎಂ.ಎಸ್. ಆನಂದ್, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

