ಕೋಲಾರ

ಮೊಯ್ಲಿಗೆ ಮೋದಿ ಮಾತಿನೇಟು

Published On :

ಗುಜರಾತ್‌ನಲ್ಲಿ ಸಾಧ್ಯವಾಗುವ ಅಭಿವೃದ್ಧಿ ಚಿಕ್ಕಬಳ್ಳಾಪುರದಲ್ಲೇಕಿಲ್ಲ? ಟಿ ದೇವೇಗೌಡರೇ ಗುಜರಾತ್‌ಗೆ ಬನ್ನಿ!
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಏ.13
ಗುಜರಾತ್ ಮತ್ತು ಚಿಕ್ಕಬಳ್ಳಾಪುರವನ್ನು ಪರಸ್ಪರ ಹೋಲಿಕೆ ಮಾಡಿ ಈ ಭಾಗದ ನೀರಾವರಿ, ರೇಷ್ಮೆ ಸೇರಿದಂತೆ ಗಂಭೀರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ತಮ್ಮ ಭಾಷಣದಲ್ಲಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ರಾಜ್ಯ ಕಾಂಗ್ರೆಸ್ ಮತ್ತು ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದ ದೇವೇಗೌಡರಿಗೆ ಟಾಂಗ್ ಕೊಟ್ಟ ಮೋದಿ, 'ಗುಜರಾತ್‌ಗೆ ಬನ್ನಿ. ನಿಮ್ಮ ಮಗನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನನ್ನು ನಿಮ್ಮ ಮಗ ಎಂದು ಭಾವಿಸಿ. ತಂದೆಗೆ ನೀಡುವ ರಾಜ ಮರ್ಯಾದೆಯನ್ನು ಸ್ವೀಕರಿಸಿ' ಎಂದು ವ್ಯಂಗ್ಯವಾಗಿ ಆಹ್ವಾನ ನೀಡಿದರು.
ತಾಲೂಕಿನ ಕೊತ್ತನೂರು(ಎಸ್ ಜೆಸಿಐಟಿ ಕಾಲೇಜು) ಬಳಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, '2014ರಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು, ಅದರಲ್ಲೂ ಯುವ ಜನಾಂಗವನ್ನು ಬೀದಿಪಾಲು ಮಾಡುತ್ತಿರುವ ರಿಮೋಟ್ ಕಂಟ್ರೋಲ್, ಅಂಗವಿಕಲ ಸರ್ಕಾರ ಅಧಿಕಾರಕ್ಕೆ ಬರಬೇಕೇ? ಭಾರತದ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಸುಭದ್ರ ಬಿಜೆಪಿ ಸರ್ಕಾರ ಬೇಕಾ? ನೀವೇ ನಿರ್ಧಾರ ಮಾಡಿ' ಎಂದರು.
ಮೊಯ್ಲಿ ವಿರುದ್ಧ ವಾಗ್ದಾಳಿ: 2009ರಲ್ಲಿ ಆಯ್ಕೆಯಾದ ವೀರಪ್ಪ ಮೊಯ್ಲಿ ಕೇಂದ್ರದಲ್ಲಿ ಅನೇಕ ಪ್ರಭಾವಿ ಹುದ್ದೆಗಳನ್ನು ಅಲಂಕರಿಸಿದರು. ಆದರೆ, ಅವುಗಳಿಂದ ಈ ಭಾಗಕ್ಕೆ ಯಾವುದೇ ಅನುಕೂಲವಾಗಲಿಲ್ಲ. ಕೇವಲ 9ರಿಂದ 12 ಅಡುಗೆ ಅನಿಲ ಸಿಲಿಂಡರ್ ಕೊಡಬೇಕಾ? ಬೇಡವಾ? ಎಂಬ ಚರ್ಚೆಯಲ್ಲೇ ಅವರು ಕಾಲ ತಳ್ಳಿದರು. 5 ವರ್ಷದೊಳಗಡೆ ಈ ಭಾಗಕ್ಕೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯವನ್ನು ಒದಗಿಸುವುದಾಗಿ ಜನರಿಗೆ ಭರವಸೆ ನೀಡಿದ್ದ ಅವರಿಂದ ಇಲ್ಲಿಯವರೆಗೂ ಜನರ ದಾಹವನ್ನು ತೀರಿಸಲು ಸಾಧ್ಯವಾಗಿದೆಯೇ? ಎಂದು ಪ್ರಶ್ನಿಸಿದರು. ಗುಜರಾತ್‌ನಲ್ಲಿ ನೀರಿನ ಸಮಸ್ಯೆ ಬಗೆಹರಿಸಬಹುದಾದರೆ, ಇಲ್ಲಿ ಯಾಕೆ ಸಾಧ್ಯವಿಲ್ಲ. ಕಾರಣ ಇಷ್ಟೆ, ಇಲ್ಲಿನ ನೀರಾವರಿ ಸಮಸ್ಯೆ ನಿವಾರಿಸುವ ಬಗ್ಗೆ ಮೊಯ್ಲಿಗಾಗಲಿ, ಕಾಂಗ್ರೆಸ್ ಸರ್ಕಾರಕ್ಕಾಗಲಿ ಕಾಳಜಿ ಇಲ್ಲ. ಕನ್ನಡ ತಾಯಿ ಭುವನೇಶ್ವರಿ ಮಾತೆಯ ಮೇಲೆ ಆಣೆ ಮಾಡಿ ಜನರಿಗೆ ನೀರು ಕೊಡುವ ನೀಡಿದ್ದನ್ನು ಮರೆತು ಹೋದ ನಿಮ್ಮ ಮೊಯ್ಲಿ, ಕೇವಲ ದೆಹಲಿ ಸರ್ಕಾರದ ಮಹಿಳೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.  
ಬಿಜೆಪಿ ಅಭ್ಯರ್ಥಿಗಳಾದ ಬಿ.ಎನ್.ಬಚ್ಚೇಗೌಡ, ಎಂ.ನಾರಾಯಣಸ್ವಾಮಿ, ಎನ್.ರವಿನಾರಾಯಣರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ತಾರಾ, ವೈ.ಎನ್.ನಾರಾಯಣಸ್ವಾಮಿ, ಶಾಸಕ ವಿಶ್ವನಾಥ್, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೋದಿ ಅಲೆಯಲ್ಲಿ ತೇಲಿದ ಜನಸಾಗರ!
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಏ.13
ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಎಲ್ಲಾ ಕಡೆ ಜನಸಾಗರ. ಎಲ್ಲಿ ನೋಡಿದರಲ್ಲಿ ಕೇಸರಿ ಟೋಪಿ. ಮೋದಿ ಮೋದಿ ಎನ್ನುವ ಕೂಗು. ಸುಡು ಬಿಸಲಲ್ಲಿ ನಿಂತುಕೊಂಡು ಭಾಷಣ ಆಲಿಸಿದ ಅಸಂಖ್ಯಾತರು.
- ಇವು ಚಿಕ್ಕಬಳ್ಳಾಪುರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ 'ಭಾರತ ಗೆಲ್ಲಿಸಿ' ಕಾರ್ಯಕ್ರಮದಲ್ಲಿ ಕಂಡು ಬಂದ ಝಲಕ್‌ಗಳು.  ತಾಲೂಕಿನ ಕೊತ್ತನೂರು ಬಳಿ 18 ಎಕರೆ ಪ್ರದೇಶವನ್ನು ಈ ಕಾರ್ಯಕ್ರಮಕ್ಕಾಗಿ ಬಳಸಿಕೊಳ್ಳಲಾಗಿತ್ತು. ಕಾರ್ಯಕರ್ತರು ಮತ್ತು ವೇದಿಕೆಗಾಗಿ 16 ಎಕರೆ, ಹೆಲಿಕಾಪ್ಟರ್ ಗಾಗಿ 2 ಎಕರೆ ಜಾಗವನ್ನು ಮೀಸಲಿರಿಸಲಾಗಿತ್ತು. ಮೋದಿಯ ಮೇಲಿನ ಅಭಿಮಾನದಿಂದ ಗ್ರಾಮದ ರೈತರು ತಮ್ಮ ಕೃಷಿ ಭೂಮಿಯನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದ ವೇದಿಕೆ. ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಪ್ರಾರಂಭ. ಮೋದಿ ಕಾಣಬೇಕೆಂಬ ಕಾತರದಿಂದ ಆಗಾಗಲೇ ಆಗಮಿಸಿದ್ದ ಸುಮಾರು 60 ಸಾವಿರಕ್ಕೂ ಹೆಚ್ಚು ಜನ ಸುಡು ಬಿಸಿಲಿನಲ್ಲಿ ಗಂಟೆಗಟ್ಟಲೇ ಬೆಂದು ಹೋದರು.
ಹೆಲಿಕಾಪ್ಟರ್‌ನಲ್ಲಿ ನರೇಂದ್ರ ಮೋದಿ ಸರಿಯಾಗಿ ಬೆಳಿಗ್ಗೆ 11.15 ಕ್ಕೆ ಆಗಮಿಸಿ ವೇದಿಕೆಯನ್ನೇರಿದರು. ಎಂದಿನಂತೆ ತಮ್ಮ ಕೈ ಬಿಸಿ ಆ ಕಡೆಯಿಂದ ಈ ಕಡೆಗೆ ವೇದಿಕೆಯಲ್ಲಿ ತಿರುಗಾಡುತ್ತಿದ್ದಂತೆ ಕಾರ್ಯಕರ್ತರು ಎದ್ದು ನಿಂತು ಮೋದಿ ಮೋದಿ ಎಂದು ಕೂಗಿದರು. ಇನ್ನೂ ಭಾಷಣ ಶುರುವಾಗುತ್ತಿದ್ದಂತೆ ಚಪ್ಪಾಳೆ ಸದ್ದು, ಘೋಷಣೆಗಳಿಂದ ಪುಳುಕಿತರಾದ ಮೋದಿ, ಮೊದಲು ತಡವಾಗಿ ಆಗಮಿಸಿದ್ದಕ್ಕೆ ತಮ್ಮ ಅಭಿಮಾನಿಗಳ ಕ್ಷಮೆಯಾಚಿಸಿದರು. ಆ ನಂತರ ವ್ಯಂಗ್ಯ ಮಿಶ್ರಿತ ಭಾಷಣದಲ್ಲಿ ಅನೇಕರನ್ನು ತರಾಟೆಗೆ ತೆಗೆದುಕೊಂಡು 300 ಮಿಷನ್ ಅನ್ನು ಪ್ರಸ್ತಾಪಿಸಿದರು. ಇದಕ್ಕೂ ಮುನ್ನ ಮುಖಂಡರು ಮೋದಿಗೆ ಮೈಸೂರು ಪೇಟ ತೊಡಿಸಿ, ಕತ್ತಿಯನ್ನು ಕೊಟ್ಟು ಸನ್ಮಾನಿಸಿದರು. ರಾಜ್ಯದ ಪ್ರತೀಕವಾಗಿ ಮೈಸೂರು ಅರಮನೆಯ ಪ್ರತಿಕೃತಿ ನೀಡಿ ಗೌರವಿಸಿದರು.

ವಿಶೇಷ ವ್ಯವಸ್ಥೆ ನಕಾರ
ಮೋದಿ ಮಾತನಾಡುವ ಸಲುವಾಗಿ ಬುಲೆಟ್ ಪ್ರೂಫ್ ಪೋಡಿಯಂ ಅನ್ನು ವೇದಿಕೆಯಲ್ಲಿರಿಸಲಾಗಿತ್ತು. ಆದರೆ, ಅದನ್ನು ಮೋದಿ ಬಳಕೆ ಮಾಡಲಿಲ್ಲ. ಸಾಮಾನ್ಯ ಪೋಡಿಯಂನಲ್ಲಿಯೇ ಸುಮಾರು 45 ನಿಮಿಷ  ಕಾಲ ಮಾತನಾಡಿದರು.

ರಸ್ತೆಯಲ್ಲಿ ಜನರ ದಂಡು
ರಾಷ್ಟ್ರೀಯ ಹೆದ್ದಾರಿ 7 ರಲ್ಲಿನ ಸಮಾವೇಶ ನಡೆಯುವ ಸ್ಥಳದಿಂದ ಹಿಡಿದು ಚೊಕ್ಕಹಳ್ಳಿ ಗೇಟಿನವರೆಗೆ ರಸ್ತೆಯಲ್ಲಿ ದೊಡ್ಡ ಜನಸಾಗರವೇ ಇತ್ತು. ಕಾರ್ಯಕ್ರಮ ಮುಗಿದ ನಂತರ ಕೆಲ ತಾಸು ರಸ್ತೆ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಮುಂಜಾಗ್ರತಾ ಕ್ರಮವಾಗಿ ಮೊದಲೇ ಪೊಲೀಸ್ ಇಲಾಖೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿತ್ತು. ಬೆಂಗಳೂರು-ಚಿಕ್ಕಬಳ್ಳಾಪುರ ಮಾರ್ಗದ ಎನ್.ಎಚ್.7 ರಸ್ತೆಯಲ್ಲಿ ನಂದಿ ಕ್ರಾಸ್ ನಿಂದ ಅಗಲಗುರ್ಕಿ ಗೇಟ್‌ವರೆಗೂ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

ಅಟಲ್ ಕನಸು ನನಸು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನದಿ ಜೋಡಣೆ ಕನಸು ನನಸು ಮಾಡುತ್ತೇವೆ. ನಿಮ್ಮೆಲರ ಬೆಂಬಲದೊಂದಿಗೆ ಖಂಡಿತವಾಗಿ ಭಾರತವನ್ನು ಇಡೀ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವನ್ನಾಗಿಸುತ್ತೇನೆ. ಒಮ್ಮೆ ನನ್ನನ್ನು ನಂಬಿ. ಈ ಬಾರಿ ಬಿಜೆಪಿಗೆ 300 ಸ್ಥಾನಗಳಲ್ಲಿ ಗೆಲುವು ತಂದು ಕೊಟ್ಟು ಆಮೇಲೆ ದೇಶದ ಅಭಿವೃದ್ಧಿಯನ್ನು ನೀವೇ ನೋಡಿ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಒಂದು ಸ್ಥಾನವನ್ನು ಸಹ ಕೊಡಬೇಡಿ ಎಂದು ಮನವಿ ಮಾಡಿದರು.

  ಮೋದಿ ಮೋಡಿ
 ಕಾಂಗ್ರೆಸ್ ದುರಾಡಳಿತವನ್ನು ನೋಡಿಕೊಂಡು ಸುಮ್ಮನಿರುವ ದೇವೇಗೌಡರಿಗೆ ನನ್ನ ಮೇಲೆ ಅತಿಯಾದ ಕೋಪ. ಆದರೆ, ನನಗೆ ಅವರ ಮೇಲೆ ಕೋಪವಿಲ್ಲ. ಮೋದಿ ಪ್ರಧಾನಿಯಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದಿದ್ದಾರೆ. ಪಾಪ, ಅವರು ಹಾಗೆ ಹೇಳಬಾರದಾಗಿತ್ತು. ಅವರಿಗೆ ಗಂಡು ಮಕ್ಕಳಿದ್ದಾರೆ. ಅವರ ಜೊತೆಗೆ ನನ್ನನ್ನು ಒಬ್ಬ ಮಗ ಎಂದು ಭಾವಿಸಲಿ. ಅವರು ನಮ್ಮ ಗುಜರಾತಿಗೆ ಬರಲಿ. ನಮ್ಮ ಕಡೆ ವೃದ್ಧಾಶ್ರಮದಲ್ಲಾದರೂ ಸರಿ, ರಾಜಕೀಯದಲ್ಲಾದರೂ ಸರಿ ಇರಲಿ. ನಾವು ರಾಜ ಮರ್ಯಾದೆಯನ್ನು ಕೊಟ್ಟು ಗೌರವಿಸುತ್ತೇವೆ.
 ಕೇಂದ್ರ ಸಚಿವ ಮೊಯ್ಲಿ ಕನ್ನಡ ಭುವನೇಶ್ವರಿ ಮಾತೆ ಸೇವೆ ಮಾಡಲು ಮುಂದಾಗುವುದಿಲ್ಲ. ಅವರು ದೆಹಲಿ ಸರ್ಕಾರದ(ಕೇಂದ್ರ ಸರ್ಕಾರ) ಮಹಿಳೆಯ ಸೇವೆ ಮಾಡುವುದೇ ದೊಡ್ಡ ಕೆಲಸ!
 ಗ್ಯಾಸ್(ಸುಳ್ಳು) ಹೊಡೆದಿದ್ದೇ ಅವರ ಸಾಧನೆ. 9-12 ಸಿಲಿಂಡರ್ ಚರ್ಚೆಯಲ್ಲೇ ಕಾಲ ತಳ್ಳಿದರು. ಪ್ರತಿ ವರ್ಷ ಒಬ್ಬ ಗ್ರಾಹಕರಿಗೆ 12 ಅಡುಗೆ ಅನಿಲ ಸಿಲಿಂಡರ್ ಕೊಡುವಂತೆ ದೊಡ್ಡವರು(ರಾಹುಲ್ ಗಾಂಧಿ) ಸೂಚಿಸಬೇಕಾಯಿತು!
 ಮೊಯ್ಲಿ ಕಾನೂನು ಮಂತ್ರಿಯಾಗಿದ್ದಾಗ ಎಲ್ಲಾ ಕಡೆ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗುವುದು ಎಂದಿದ್ದರು. ಆದರೆ, ಇದುವರೆಗೂ ಸ್ಥಾಪನೆ ಮಾಡಿಲ್ಲ. ಸ್ವತಃ ಗ್ರಾಮ ನ್ಯಾಯಾಲಯಗಳು ಎಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತೀವೆ ಎನ್ನುವುದನ್ನು ಅವರೇ ಹೇಳಬೇಕು.
 ಇಲ್ಲಿನ ಜನರಿಗೆ ಮೊಯ್ಲಿ ನೀಡಿದ ಭರವಸೆಗಳನ್ನು ಅವರೇ ಮರೆತು ಹೋಗಿದ್ದು ಅವರನ್ನು ಈ ಬಾರಿ ನೇರವಾಗಿ ಮನೆಗೆ ಕಳುಹಿಸುವುದೇ ಒಳಿತು.
 ಕೇಂದ್ರದಲ್ಲಿ ರಿಮೋಟ್ ಕಂಟ್ರೋಲ್ ಸರ್ಕಾರ, ಪುಂಗಿ ಬಜಾಯಿಸುವ ಸರ್ಕಾರ, ಅಂಗವಿಕಲ ಸರ್ಕಾರ ಆಡಳಿತ ನಡೆಸುತ್ತಿದೆ. ಇಂಥ ಸರ್ಕಾರ ಏತಕ್ಕೆ ಬೇಕು?

ಕೇಂದ್ರದಲ್ಲಿ ಅಧಿಕಾರಕ್ಕೆ ಪುಂಗಿ, ಡೋಂಗಿ ಸರ್ಕಾರ (ಯುಪಿಎ) ಬರಬೇಕಾ, ಇಡೀ ವಿಶ್ವದಲ್ಲಿಯೇ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಮೋದಿ ಸರ್ಕಾರ ಬೇಕಾ ಎನ್ನುವುದನ್ನು ದೇಶದ ಜನರೇ ನಿರ್ಧರಿಸಬೇಕು.
   ನರೇಂದ್ರ ಮೋದಿ
ರಾಜ್ಯ ರಾಜಧಾನಿ ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಯನ್ನು ಬಂಧಿಸಲು ಇದುವರೆಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಯಲ್ಲಾಗಿಲ್ಲ.
  ತಾರಾ, ನಟಿ, ವಿಧಾನ ಪರಿಷತ್ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.