ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ
ನರೇಂದ್ರ ಮೋದಿ ಭಾರತ ಗೆಲ್ಲಿಸಿ ರ್ಯಾಲಿಯಿಂದ ಕಾರ್ಯಕರ್ತರಲ್ಲಿ ಉತ್ಸಾಹ
ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕುವವರೇ ಗಡಿ ನಾಡಿನ ಮತದಾರರು?
ವೆಂಕಟೇಶ್. ಎನ್
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಛಿದ್ರ ಮಾಡಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಕರೆಸಿ ಶಕ್ತಿ ಪ್ರದರ್ಶನ ಮಾಡಿದ್ದು, ಮೋದಿ ಭೇಟಿಯ ಯಶಸ್ವಿಯಿಂದ ಪಕ್ಷ ಗೆಲವಿನ ಲೆಕ್ಕಾಚಾರದಲ್ಲಿದೆ.
ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಪ್ರಾಬಲ್ಯ ಮೆರೆಯದಿದ್ದರೂ 2009 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಅಶ್ವತ್ಥನಾರಾಯಣ್ ಸ್ಪರ್ಧಿಸಿ, ನೆಲೆಯೇ ಇಲ್ಲದಿದ್ದರೂ ಗೆಲವಿನ ಸಮೀಪ ತಲುಪಿದ್ದರು. ಇದರ ಪರಿಣಾಮದ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪಮೊಯ್ಲಿ ವಿರುದ್ಧದ ಅಲೆ ಕ್ಷೇತ್ರದಾದ್ಯಂತ ಹಬ್ಬಿದ್ದು, ಇದು ಬಿಜೆಪಿ ಪಾಲಿಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ.
ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಕ್ಷೇತ್ರದಲ್ಲಿ ವ್ಯಾಪಕವಾಗಿದ್ದು, ಶಾಶ್ವತ ನೀರಾವರಿ ಯೋಜನೆ ವಿಚಾರದಲ್ಲಿ ಮೊಯ್ಲಿಯವರ ನಿರ್ಲಕ್ಷ್ಯದ ವಿರುದ್ಧ ಜನ ಕಾಂಗ್ರೆಸ್ನಿಂದ ವಿಮುಖರಾಗುತ್ತಿದ್ದಾರೆ.
ಇನ್ನು ಜೆಡಿಎಸ್ ಅಭಅಯರ್ಥಿ ಎಚ್.ಡಿ. ಕುಮಾರಸ್ವಾಮಿ ಪ್ರತ್ಯೇಕ ಜಿಲ್ಲಾ ರಚನೆ ಹೊರತು ಪಡಿಸಿದರೆ ಜಿಲ್ಲೆಗೆ ನೀಡಿರುವ ಕೊಡು ಅಷ್ಟರಲ್ಲೇ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಜೊತೆಗೆ ಮೇಕೆ ದಾಟುವಿನಿಂದ ನೀರು ನೀಡುವ ಕುಮಾರಸ್ವಾಮಿ ಹೇಳಿಕೆ ಕ್ಷೇತ್ರದಲ್ಲಿ ಅಷ್ಟೇನೂ ಪ್ರಯೋಜನಕ್ಕೆ ಬರಲಾರದು ಎಂಬುದು ರಾಜಕೀಯ ವಿಶ್ಲೇಶಕರ ಅಂಬೋಣ.
ಮೋದಿ ಅಲೆ ಪ್ರಭಾವ: ದೇಶದೆಲ್ಲೆಡೆ ಹಬ್ಬಿರುವ ಬಿಜೆಪಿ ಅಲೆ ಜಿಲ್ಲೆಯಲ್ಲಿಯೂ ಇದೆ ಎಂಬ ಹುಮ್ಮಸ್ಸಿನಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಕ್ಷೇತ್ರದಲ್ಲಿ ತಿರುಗಾಡಿ ಜನರ ಕಷ್ಟ ಅರಿತಿದ್ದು, ಅವರ ನೋವಿಗೆ ಸ್ಪಂದಿಸುವ ಭರವಸೆ ನೀಡಿ ಮತಗಳಿಸಲು ತೀವ್ರ ಪೈಪೋಟಿ ನಡೆಸಿದ್ದಾರೆ. ಜೊತೆಗೆ ವೀರಪ್ಪ ಮೊಯ್ಲಿ ಮತ್ತು ಕುಮಾರಸ್ವಾಮಿ ಇಬ್ಬರೂ ಹೊರಗಿನವರಾಗಿದ್ದು, ಬಚ್ಚೇಗೌಡರು ಮಾತ್ರ ಸ್ಥಳೀಯ ಅಭ್ಯರ್ಥಿ ಆಗಿರುವುದು ಅವರ ಗೆಲವಿಗೆ ಪ್ರಮುಖ ಕಾರಣವಾಗಲಿದೆ ಎಂಬ ವಿಶ್ವಾಸದಲ್ಲಿ ಬಚ್ಚೇಗೌಡರಿದ್ದಾರೆ.
ನರೇಂದ್ರ ಮೋದಿ ಬಿರುಗಾಳಿ ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಿಗೆ ಇರುವ ಒಕ್ಕಲಿಗರು ಮತ್ತು ಬಲಿಜಿಗರ ಒಲವನ್ನು ಗಿಟ್ಟಿಸಿಕೊಳ್ಳುವ ಕಾಯಕದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ನಿರತರಾಗಿದ್ದಾರೆ. ಜಾತಿ ವರ್ಗದಲ್ಲಿ ಬಲಿಜಿಗ ಜನಾಂಗವನ್ನು ರಾಜ್ಯ ಬಿಜೆಪಿ ಸರ್ಕಾರ 3ಎ ನಿಂದ 2ಎ ಮೀಸಲಾತಿ ನೀಡಿ ಜನಾಂಗಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದ ಆಜನಾಂಗ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂಬ ವಿಶ್ವಾ ಅವರಲ್ಲಿದೆ. ಮತ್ತೊಂದೆಡೆ ಮಾಜಿ ಗೃಹ ಸಚಿವ ಆರ್. ಅಶೋಕ್ ಸೇರಿದಂತೆ ಅನೇಕ ಮುಖಂಡರನ್ನು ಕರೆಸಿ ಒಕ್ಕಲಿಗ ಜನಾಂಗದವರನ್ನು ಒಲಿಸಿಕೊಳ್ಳುತ್ತಿದ್ದು ವೀರಪ್ಪ ಮೊಯ್ಲಿ ಎದುರು ಬಿ.ಎನ್. ಬಚ್ಚೇಗೌಡ ಗೆಲವನ್ನು ಸಾಧಿಸುತ್ತಾರೆ ಎನ್ನುವುದನ್ನು ಅರಿತು ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದೂ ಬಹಿರಂಗವಾಗಿ ಹೇಳಲಾಗುತ್ತಿದೆ.
ಚಿಕ್ಕಬಳ್ಳಾಪುರಕ್ಕೆ ಸಂಬಂಧಪಟ್ಟಂತೆ ನರೇಂದ್ರ ಮೋದಿ ಕಾರ್ಯಕ್ರಮವೇ ದೊಡ್ಡ ಶಕ್ತಿ ಪ್ರದರ್ಶನ ಎನಿಸಿಕೊಂಡಿದ್ದು ಇದರಲ್ಲಿ ಭಾಗವಹಿಸಿದ್ದ ಜನ ಸಮುದಾಯದಿಂದ ತಮ್ಮ ಪರ ಹೆಚ್ಚಿಗೆ ಮತ ಸೆಳೆದರೆ ಗೆಲವಿನ ಮೆಟ್ಟಿಲು ಸುಲಭವಾಗಿ ಹತ್ತಿದ್ದಂತೆ ಎಂಬ ವಿಶ್ವಾಸ ಬಿಜೆಪಿಯಿಂದ ವ್ಯಕ್ತವಾಗುತ್ತಿದೆ. ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದ್ದು, ನಾಳೆ ಒಂದು ದಿನ ಮನೆಮನೆಗೆ ಭೇಟಿ ನೀಡಿ ಮತ ಕೇಳಬಹುದಾಗಿದೆ. ಮೇಲ್ನೋಟಕ್ಕೆ ಬಿಜೆಪಿ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಕಾಣುತ್ತಿದ್ದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಲ್ಲಲ್ಪಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೈಪೋಟಿ ತೀವ್ರವಾಗಿರುವುದರಿಂದ ಗೆಲವಿನ ಅಂತರ ತೀರಾ ಕಡಿಮೆ ಆಗಲಿದೆ ಎಂಬ ಲೆಕ್ಕಾಚಾರಗಳು ಕೇಳಿಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

