ಶಾಶ್ವತ ಪರಿಹಾರಕ್ಕೆ ತಾತ್ಕಾಲಿಕ ಭರವಸೆ!
-ಪಾ.ಶ್ರೀ.ಅನಂತರಾಮ್
ಕನ್ನಡಪ್ರಭ ವಾರ್ತೆ, ಕೋಲಾರ, ಏ.14
ಯಾವುದೇ ನದಿ, ನಾಲೆ ಇಲ್ಲದೆ, ಮಳೆಯನ್ನು ಆಶ್ರಯಿಸಿ ಜೀವನ ಸಾಗಿಸುತ್ತಿರುವ ಕೋಲಾರ ಜಿಲ್ಲೆ ಜನರಿಗೆ ಶಾಶ್ವತ ನೀರಿನ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳಿಂದ ಈವರೆಗೆ ಸಾಧ್ಯವಾಗಿಲ್ಲ ಎಂದರೆ ನೀವು ನಂಬಲೇಬೇಕು.
ರಾಜಧಾನಿ ಬೆಂಗಳೂರಿಗೆ ಕೇವಲ 65 ಕಿ.ಮೀ. ದೂರದಲ್ಲಿದ್ದರೂ ಜಿಲ್ಲೆಯ ಸಮಸ್ಯೆಗಳು ಅಲ್ಲಿವರೆಗೂ ತಲುಪುತ್ತಿಲ್ಲ ಎಂದರೆ ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ ಇದು. ಜನರು ಸಾಮಾಜಿಕವಾಗಿ, ಆರ್ಥಿಕವಾಗಿ ಸಧೃಡವಾಗಬೇಕಾದರೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಪಾತ್ರ ಮುಖ್ಯ. ಚುನಾವಣೆಯಲ್ಲಿ ನಿರಂತರ ಗೆಲುವು ಸಾಧಿಸಿರುವುದೇ ದೊಡ್ಡ ಸಾಧನೆ ಎಂದು ಭಾವಿಸುವುದು ತಪ್ಪು.
ಕೋಲಾರ ಕ್ಷೇತ್ರದಲ್ಲಿ ಕಳೆದ 10 ಹತ್ತು ವರ್ಷಗಳಲ್ಲಿ ಹೊಸಕೋಟೆಯಿಂದ ಮುಳಬಾಗಿಲುವರೆಗೆ ಹೆದ್ದಾರಿ ನಿರ್ಮಾಣವಾಗಿದೆ. ಭೂಮಿ ಸ್ವಾಧೀನವಾಗದಿದ್ದರೂ ಶ್ರೀನಿವಾಸಪುರ ತಾಲೂಕಿನಲ್ಲಿ 1460 ಕೋಟಿ ವೆಚ್ಚದಲ್ಲಿ ರೇಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗೆ ಚುನಾವಣೆಗೆ ಮುನ್ನ ಶಂಕುಸ್ಥಾಪನೆ ಮಾಡಲಾಗಿದೆ. ಚಿನ್ನದ ಗಣಿಗೆ ಗ್ಲೋಬಲ್ ಟೆಂಡರ್ ಕರೆಯದೇ ಪುನಃಶ್ಚೇತನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದು ಸಹ ಜನಪರ ಕಾರ್ಯವೇ ಸರಿ. ನೆನೆಗುದಿಗೆ ಬಿದ್ದಿದ್ದ ರೇಲ್ವೆ ಯೋಜನೆಗಳಿಗೆ ಚಾಲನೆ ಸಿಕ್ಕಿರುವುದಕ್ಕೆ ಅಭಿನಂದನೆ. ಆದರೆ, ಫ್ಲೋರೈಡ್ ನೀರಿನಿಂದ ಅಂಗವಿಕಲತೆಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಜನರಿಗೆ ನ್ಯಾಯ ಒದಗಿಸಲು ಜನಪ್ರತಿನಿಧಿಗಳ ಕರ್ತವ್ಯವಲ್ಲವೇ?
ವ್ಯರ್ಥ ಅಭಿವೃದ್ಧಿ?!
ಕೇಂದ್ರ ಸರ್ಕಾರದಿಂದ ಪ್ರತಿವರ್ಷ ಸಿಗುವ ಅನುದಾನವನ್ನು ಲೋಕಸಭಾ ಸದಸ್ಯರು ಒಂದಿಷ್ಟು ಸಿಮೆಂಟ್ ರಸ್ತೆ, ಪ್ರಯಾಣಿಕರ ತಂಗುದಾಣ, ಶಾಲಾ ಆವರಣ ಗೋಡೆ ನಿರ್ಮಾಣ, ಸಮುದಾಯ ಭವನಗಳಿಗೆ ನೀಡಲಾಗಿದೆ. ಇದರಿಂದ ಮಾನವನ ಅಭಿವೃದ್ಧಿಗೆ ಪ್ರಯೋಜನವಾಗಿಲ್ಲ. ಈ ಹಣ ಕಲ್ಯಾಣಿಗಳ ಪುನಃಶ್ಚೇತನಕ್ಕೆ ಬಳಕೆ ಮಾಡಿದ್ದರೆ ಅಂತರ್ಜಲ ಸಮಸ್ಯೆ ಸ್ವಲ್ಪಮಟ್ಟಿಗಾದರೂ ನಿಗೀಸಬಹುದಿತ್ತು.
ಏನೇನು ಮಾಡಬಹುದು?
-ಕೆರೆಗಳನ್ನು ಸಂರಕ್ಷಣೆ ಮಾಡಲು, ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರಬೇಕು.
-ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಮಾಡಿಸಿ ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ಕೆರೆಗಳನ್ನು ಸಂರಕ್ಷಣೆ ಮಾಡುವ ಅಗತ್ಯ.
-ಎತ್ತಿನಹೊಳೆ ಮತ್ತು ಯರಗೋಳ್ ಯೋಜನೆ ತ್ವರಿತಗತಿಯಲ್ಲಿ ಮುಗಿಸಿ ಅದಕ್ಕೂ ಮುನ್ನ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸವಾಗಬೇಕಿದೆ.
ಕಷ್ಟಪಡುವ ರೈತರು
ಕೋಲಾರದಲ್ಲಿ ನೀರಿನ ಅಭಾವದ ನಡುವೆಯೂ ರೈತರು ಕಷ್ಟುಪಟ್ಟು ತರಕಾರಿ, ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಹೈನುಗಾರಿಕೆ ಕಾಲುಬಾಯಿ ಜ್ವರದಿಂದಾಗಿ ನೆಲಕಚ್ಚಿದೆ. ರೈತರು ಧೃತಿಗೆಡದೆ, ಹಾಲು ಉತ್ಪಾದಿಸಿ, ಬೇರೆ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ. ರೈಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದರೂ ರೈತರಿಗೆ ಹೆಚ್ಚಿನ ಅನುಕೂಲವಿಲ್ಲ. ಆಲೂಗಡ್ಡೆ, ಟಮೋಟೋ, ಹೂವು, ಮಾವು ಇತ್ಯಾದಿ ಹೊರ ರಾಜ್ಯಗಳಿಗೆ ಸಾಗಾಣೆ ಮಾಡಬೇಕಾದರೆ ಅತಿ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತಿದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ವ್ಯಾಗನ್ಗಳ ಸೌಲಭ್ಯ ಕಲ್ಪಿಸದಿರಲು ಏನು ಕಾರಣ?
ಶಾಶ್ವತ ನೀರು ಮರೀಚೀಕೆ
ಶಾಶ್ವತ ನೀರಾವರಿಗಾಗಿ ಕಳೆದ 15 ವರ್ಷದಿಂದ ನಡೆದ ಹೋರಾಟದಲ್ಲಿ ಜನಪ್ರತಿನಿಧಿಗಳು ಎಷ್ಟು ಬಾರಿ ಭಾಗವಹಿಸಿ ಜನತೆಯ ನೋವಿಗೆ ಸ್ಪಂದಿಸಿದ್ದಾರೆ? ಚುನಾವಣೆ ವೇಳೆ ಶಾಶ್ವತ ನೀರಾವರಿಯ ವಿಚಾರವನ್ನು ಪ್ರಸ್ತಾವಿಸಿ, ಮತ ಪಡೆದವರು ಜನರ ದಾಹ ತೀರಿಸಲು ನೀಡಿದ ಕೊಡುಗೆ ಏನು? ನೀರಿನ ಸಮಸ್ಯೆಯನ್ನು ಟ್ಯಾಂಕರ್ ಮಾಫಿಯಾ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಇದೇಕೆ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲ? ಕೋಲಾರ ಜಿಲ್ಲೆಯು ಕೆರೆಗಳ ಸಂಖ್ಯೆಯಲ್ಲಿ ದಾಖಲೆ ಮಾಡಿದೆ. ನಮ್ಮ ಪೂರ್ವಿಕರು ನಿರ್ಮಿಸಿರುವ ಕೆರೆಗಳು ಭೂಗಳ್ಳರ ಪಾಲಾಗಿವೆ. ಕಲ್ಯಾಣಿಗಳು ಮುಚ್ಚಿ ಹೋಗಿವೆ. ರಾಜಕಾಲುವೆಗಳ ಮೇಲೆ ಕಟ್ಟಡಗಳು, ಗೋಪುರಗಳು ನಿರ್ಮಾಣವಾಗಿವೆ. ಒತ್ತುವರಿ ತೆರವು ಮಾಡಿ ಎಂದು ಸಭೆಗಳಲ್ಲಿ ಬಡಾಯಿಕೊಚ್ಚಿಕೊಳ್ಳುವ ಜನಪ್ರತಿನಿಧಿಗಳು ನ್ಯಾಯ ಸಮ್ಮತವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಅಡ್ಡಿಯಾಗಿದ್ದಾರೆ! ಪ್ರತಿವರ್ಷ ಕೊಳವೆ ಬಾವಿಗಳಿಗಾಗಿ ಕೋಟಿಗಟ್ಟಲೆ ಹಣ ಪಾದರ್ಶಕತೆ ಹಾಗೂ ಉತ್ತರದಾಯಿತ್ವ ಇಲ್ಲದೆ ಖರ್ಚಾಗುತ್ತಿದೆ. ಅಭಿವೃದ್ಧಿ ಮತ್ತು ಪ್ರಗತಿ ಕಿರುಹೊತ್ತಿಗೆಗಳಲ್ಲಿ ಕಾಣಲಾಗುತ್ತಿದೆಯೇ ಹೊರತು ವಾಸ್ತವದಲ್ಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

