ಕೋಲಾರ

ಸ್ಟಾರ್ ಚಿರಂಜೀವಿ ಮೆಗಾ ಪ್ರಚಾರ

Published On :

ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪ್ರಚಾರದಲ್ಲಿ ನಾಪತ್ತೆ, ಪಕ್ಷದ ನಾಯಕರ ಸಾಥ್
ಚಿಕ್ಕಬಳ್ಳಾಪುರ: ಕೇಂದ್ರ ಪ್ರವಾಸೋದ್ಯಮ ಸಚಿವ, ಮೆಗಾಸ್ಟಾರ್ ಚಿರಂಜೀವಿ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಪರವಾಗಿ ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು ಮತ್ತು ಬಾಗೇಪಲ್ಲಿಯಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತಯಾಚಿಸಿದರು.
ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಚಿರಂಜೀವಿಯ ರೋಡ್ ಶೋ ಆರಂಭವಾಯಿತು. ಇದರಲ್ಲಿ ಅಪಾರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಚಿರಂಜೀವಿ, ಈ ಭಾಗದ ಜನರು ತಮ್ಮ ಮೇಲೆ ಅಭೂತಪೂರ್ವ ಅಭಿಮಾನ ಇಟ್ಟುಕೊಂಡಿರುವುದು ತಮಗೆ ಸಂತಸದ ವಿಷಯವಾಗಿದೆ ಎಂದರು. ಮೊಯ್ಲಿ ಮುಖ್ಯಮಂತ್ರಿಯಾಗಿದ್ದವರು, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿ ಜನಪರ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೇ ಈ ಭಾಗದ ಪ್ರಮುಖ ಸಮಸ್ಯೆಯಾದ ನೀರಾವರಿ ಸೌಲಭ್ಯವನ್ನು ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ಇದರಿಂದ ಅವರಿಗೆ ಜನರು ಬೆಂಬಲ ನೀಡಬೇಕೆಂದು ಕೋರಿದರು.
ನಗರದ ಬಿ.ಬಿ.ರಸ್ತೆಯ ಮೂಲಕ ಬಲಮುರಿ ಗಣಪತಿ ವೃತ್ತ, ಶಿಡ್ಲಘಟ್ಟ ವೃತ್ತ, ಎಪಿಎಂಸಿ ಮಾರ್ಕೆಟಿನವರೆಗೂ ಸಾಗಿ ರೋಡ್ ಶೋ ಅಂತ್ಯಗೊಳಿಸಿ ಗೌರಿಬಿದನೂರಿಗೆ ತೆರಳಿದರು. ಗೌರಿಬಿದನೂರಿನಲ್ಲೂ ಜನರು ಚಿರಂಜೀವಿಯನ್ನು ನೋಡಲು ರಸ್ತೆಗಳಲ್ಲಿ ಕಿಕ್ಕಿರಿದು ನಿಂತಿದ್ದರು.
ಅಭ್ಯರ್ಥಿ ಮೊಯ್ಲಿ ಇರಲಿಲ್ಲ: ಮೆಗಾಸ್ಟಾರ್ ಚಿರಂಜೀವಿ ರೋಡ್ ಶೋ ಕಾರ್ಯಕ್ರಮದಲ್ಲಿ ಜನರ ಗಮನ ಸೆಳೆದರೆ, ಸ್ವಯಂ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿರವರೇ ಇರಲಿಲ್ಲ. ಕ್ಷೇತ್ರದ ಶಾಸಕರು ಮತ್ತು ಮುಖಂಡರು ಚಿರಂಜೀವಿಗೆ ಸಾಥ್ ನೀಡಿದರು. ಚಿರಂಜೀವಿ ಬಂದಿರುವುದು ವೀರಪ್ಪ ಮೊಯ್ಲಿ ಪರ ಮತ ಯಾಚಿಸಲು, ಆದರೆ, ಸ್ವಯಂ ಅಭ್ಯರ್ಥಿಯೇ ಇಲ್ಲದಿದ್ದರೆ ಹೇಗೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಬಾಗೇಪಲ್ಲಿಯಲ್ಲಿ: ಬಾಗೇಪಲ್ಲಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಪ್ರಮುಖ ರಸ್ತೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ರೋಡ್ ಶೋ ನಡೆಸಿದರು. ಚಿರಂಜೀವಿರನ್ನು ನೋಡಲು ಪ್ರಮುಖ ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಜನರು ನಿಂತಿದ್ದರು. ಚಿರಂಜೀವಿ ನೆರದಿದ್ದ ಜನರತ್ತ ಕೈ ಬೀಸುತ್ತಾ ಖುಷಿಪಡಿಸಿದರು. ಚಿರಂಜೀವಿ ಬೆಳಿಗ್ಗೆ 12 ಗಂಟೆಗೆ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಸೇರಿದಂತೆ ನೆರೆಯ ಆಂಧ್ರ ಪ್ರದೇಶದ ಚಿರಂಜೀವಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಸುಡುವ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಮಂದಿ ಅಭಿಮಾನಿಗಳು ಚಿರಂಜೀವಿ ಆಗಮನದ ನಿರೀಕ್ಷೆಯಲ್ಲಿದ್ದರು. ಸುಮಾರು ಮಧ್ಯಾಹ್ನ 1 ಗಂಟೆಗೆ ಪಟ್ಟಣಕ್ಕೆ ಆಗಮಿಸಿದ ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನೋಡಲು ಮುಗಿಬಿದ್ದರು. ಚುನಾವಣಾ ಪ್ರಚಾರದ ಅಂಗವಾಗಿ ಇತ್ತೀಚೆಗೆ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ನೇತೃತ್ವದ ಸಭೆಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಆ ಸಭೆಯಲ್ಲಿ ಮಾಜಿ ಶಾಸಕ ಎನ್. ಸಂಪಂಗಿ ಮಾತನಾಡಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ನಂತರ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಎನ್. ಸಂಪಂಗಿ ಪ್ರತ್ಯೇಕವಾಗಿ ವೀರಪ್ಪಮೊಯ್ಲಿ ಪರ ಮತಯಾಚನೆ ಮಾಡುತ್ತಿದ್ದರು. ಆದರೆ, ಈ ರೋಡ್ ಶೋ ಕಾರ್ಯಕ್ರಮದಲ್ಲಿ ಜಂಟಿಯಾಗಿ ಕಾಣಿಸಿಕೊಂಡರು.

ಬಾಗೇಪಲ್ಲಿ: ವೀರಪ್ಪ ಮೊಯ್ಲಿ ಪರ ಪ್ರಚಾರ
ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪಮೊಯ್ಲಿಯವರಿಗೆ ಮತ ನೀಡಿ ಗೆಲ್ಲಿಸಿವಂತೆ ಕೇಂದ್ರ ಸಚಿವ ಚಿರಂಜೀವಿ ಕೋರಿದರು. ಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪಮೊಯ್ಲಿ ಪರ ರೋಡ್ ಶೋ ನಡೆಸಿ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಕೇವಲ ಬ್ರಮೆ. ಮತ್ತೊಮ್ಮ ಯುಪಿಎ ಸರ್ಕಾರ ಬರಲಿದ್ದು ಇನ್ನೂ ಹೆಚ್ಚಿನ ಸೇವಾ ಕಾರ್ಯಗಗಳನ್ನು ಮಾಡಲು ಸಹಕಿಸಿ ಎಂದರು. ರೋಡ್ ಶೋನಲ್ಲಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ, ಪುರಸಭಾಧ್ಯಕ್ಷ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಜಿ.ಕೆ. ಸತೀಶ್, ಅಬ್ದುಲ್, ವೇಣುಗೋಪಾಲರೆಡ್ಡಿ, ಮಂಜುನಾಥ್, ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಮಾಜಿ ಶಾಸಕ ಸಂಪಂಗಿ, ಪ್ರಧಾನ ಕಾರ್ಯದರ್ಶಿ ವೆಂಕಟರಮಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.