ಕೋಲಾರ

ಬರೀ ಅಭಿಮಾನ ಸಾಲದು, ಬಿಜೆಪಿ ಗೆಲ್ಲಿಸಿ: ನಟ ಪವನ್

Published On :

ಕೋಲಾರದಲ್ಲಿ ಬಿಜೆಪಿ ಪರ ಮತಯಾಚಿಸಿದ ತೆಲುಗು ನಟ
ಕೋಲಾರ: ನನ್ನನ್ನು ಕೇವಲ ಸಿನಿಮಾ ನಟನೆಂಬ ಕಾರಣಕ್ಕೆ ಬೆಂಬಲಿಸಿದರೆ ಸಾಲದು. ಅಭಿಮಾನದ ಜೊತೆಗೆ ಉತ್ತಮ ಆಡಳಿತಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಬಿಜೆಪಿಗೇ ಮತ ನೀಡಿ ಎಂದು ಖ್ಯಾತ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಕರೆ ನೀಡಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೋಲಾರ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಹಾಗೂ ಚಿಕ್ಕಬಳ್ಳಾಪುರದ ಬಿ.ಎನ್.ಬಚ್ಚೇಗೌಡರ ಪರವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, '60 ವರ್ಷಗಳಿಂದ ಮತ್ತು ಕಳೆದ 10 ವರ್ಷದಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶವನ್ನು ಅಭಿವೃದ್ಧಿಯುತ್ತ ಕೊಂಡೊಯ್ಯುವಂತಹ ಯಾವುದೇ ಕೆಲಸ ಮಾಡಿಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಮೋದಿ ಪ್ರಧಾನಿಯಾದರೆ ಖಂಡಿತ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಒಳ್ಳೆಯ ಹೆಸರು ಬರಲಿದೆ' ಎಂದರು.
ಮುನಿಯಪ್ಪಗೆ ವಿಶ್ರಾಂತಿ ನೀಡಿ: ಹಾಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಆರು ಬಾರಿ ಸಂಸದರಾಗಿ 10 ವರ್ಷ ಸಚಿವರಾಗಿ ಕೆಲಸ ಮಾಡಿದ್ದರೂ ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಅಂತರ್ಜಲ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಫ್ಲೋರೈಡ್‌ನಿಂದ ಜನ ಸಾಯುತ್ತಿದ್ದಾರೆ.  ಈ ಬಾರಿ ಮುನಿಯಪ್ಪ ಅವರಿಗೆ ವಿಶ್ರಾಂತಿ ನೀಡಿ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದರು. ಈ ಸಂದರ್ಭದಲ್ಲಿ ಕೋಲಾರ ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರದ ಬಚ್ಚೇಗೌಡ, ಶಾಸಕ ವಿಶ್ವನಾಥ್, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮುಖಂಡರಾದ ಶಿವಕುಮಾರ್, ಸತ್ಯನಾರಾಯಣ ಮಹೇಶ್, ಓಂಶಕ್ತಿ ಚಲಪತಿ, ನೀಲಿ ಜಯಶಂಕರ್,ಪ್ರಮೀಳಾ ಮಲ್ಲಿಕಾರ್ಜುನ್, ಜಯಂತಿಲಾಲ್, ಚಿನ್ನಾಪುರ ನಾರಾಯಣಸ್ವಾಮಿ, ವೇಣುಗೋಪಾಲ್, ರಘುನಾಥ್, ಮುಕುಂದ, ಯತೀಶ್, ರಂಗಪ್ಪ ಇನ್ನಿತರರು ಇದ್ದರು.

ಖಾಲಿ ಕುರ್ಚಿ; ಜನ ಕರೆ ತರಲು ಹೈಡ್ರಾಮಾ!
ಚಿತ್ರನಟ ಪವನ್ ಕಲ್ಯಾಣ್ ಭಾಗವಹಿಸಿದ್ದ ಸಮಾವೇಶದಲ್ಲಿ ಸಾವಿರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9-30ಕ್ಕೆ ಸಭೆಯನ್ನು ಏರ್ಪಡಿಸಲಾಗಿತ್ತಾದರೂ 10.30ಗಂಟೆಯಾದರೂ ಜನ ಸೇರಿರಲಿಲ್ಲ. ಸುಮಾರು 10 ಸಾವಿರ ಜನರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರ ಜನರು ಮಾತ್ರ ಕುರ್ಚಿಗಳಲ್ಲಿ ಅಸಿನರಾಗಿದ್ದರು! ಕಾರ್ಯಕ್ರಮದ ವ್ಯವಸ್ಥೆ ಗಮನಿಸಲು ಬಂದಿದ್ದ ಪವನ್ ಕಲ್ಯಾಣ್ ಭದ್ರತಾ ಸಿಬ್ಬಂದಿ ಕಡಿಮೆ ಜನರು ಬಂದಿರುವುದನ್ನು ಗಮನಿಸಿ, ಕನಿಷ್ಠ 10 ರಿಂದ 15 ಸಾವಿರ ಜನರು ಬರದಿದ್ದರೆ ನಮ್ಮ ನಾಯಕರು ಬರುವುದಿಲ್ಲ ಬೇಗನೆ ಜನರನ್ನು ಕರೆತನ್ನಿ ಎಂದು ಮುಖಂಡರಿಗೆ ತಿಳಿಸಿದರು. ಆದರೆ, ಇನ್ನು ಜನ ಹೆಚ್ಚಿಗೆ ಬರುವುದಿಲ್ಲ ಎಂದು ಕೆಲವು ಬಿಜೆಪಿ ಮುಖಂಡರು ಪವನ್ ಕಲ್ಯಾಣ್ ಭದ್ರತಾ ಸಿಬ್ಬಂದಿಗೆ ತಿಳಿಸಿದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಕೆಲವು ಕಾರ್ಯಕರ್ತರು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಸಂಘಟನಾ ಕಾರ್ಯದರ್ಶಿ ಯತೀಶ್, ಮುಖಂಡರಾದ ಸತ್ಯನಾರಾಯಣ ಮಹೇಶ್, ಮುಕುಂದ ಇನ್ನಿತರರಿಗೆ ತಿಳಿಸಿದರು. ಹಳ್ಳಿಗಳಿಂದ ಜನ ಬರುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಬರುತ್ತಿರುವುದರಿಂದ ಅರ್ಧ ಗಂಟೆ ತಡವಾಗಬಹುದು. ನಮ್ಮ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಅನುಮಾನ ಬೇಡ ಎಂದು ನಾಯಕರು ಭದ್ರತಾಪಡೆಯವರಿಗೆ ತಿಳಿಸಿದರು. ಕೊನೆಗೂ 10.45ಕ್ಕೆ ಪವನ್ ಕಲ್ಯಾಣ ಕ್ರೀಡಾಂಗಣ ಪ್ರವೇಶ ಮಾಡುತ್ತಿದ್ದಂತೆ ಕುರ್ಚಿಗಳೆಲ್ಲ ಭರ್ತಿಯಾಯಿತು. ನೆರೆದಿದ್ದ ಅಭಿಮಾನಿಗಳ ವೇದಿಕೆಯತ್ತ ನುಗ್ಗಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದರು. ಕೂಗಾಡುತ್ತಿದ್ದರು. ಇದರಿಂದ ಪವನ್ ಕಲ್ಯಾಣ್ ಏನು ಮಾತನಾಡುತ್ತಿದ್ದಾರೆಂಬುದು ಗೊತ್ತಾಗಲಿಲ್ಲ. ಇದರಿಂದಾಗಿ ಕೆಲವರು ನಿರಾಸೆಯಿಂದ ಮರಳಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.