ಕಾಂಗ್ರೆಸ್ ಭದ್ರಕೋಟೆ ಕೇಸರಿಮಯ!
ಅಂತಿಮ ಕ್ಷಣದಲ್ಲಿ ಬಿಜೆಪಿ ಪರ ಒಲವು ತೋರಿದ ಮತದಾರ
-ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಈವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರ ಪ್ರಸ್ತುತ ಕೇಸರಿಮಯವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಕಳೆದ ಮೂರು ವಾರಗಳಿಂದ ಅಬ್ಬರದ ಪ್ರಚಾರ ನಡೆಸಿದ ನಾಯಕರಿಗೆ ಯಾವುದೇ ಗುಟ್ಟು ಬಿಟ್ಟುಕೊಡದ ಮತದಾರ ಅಂತಿಮ ಕ್ಷಣದಲ್ಲಿ ಬಿಜೆಪಿ ಪರ ಒಲವು ತೋರುತ್ತಿರುವ ಲಕ್ಷಣಗಳು ಸ್ಪಷ್ಟವಾಗಿವೆ.
ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠನಾದಲ್ಲಿ ವಿಫಲವಾಗಿರುವ ವೀರಪ್ಪ ಮೊಯ್ಲಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಬಿ.ಎನ್ ಬಚ್ಚೇಗೌಡರ ನಡುವೆ ತ್ರಿಕೋನ ಸ್ಪರ್ಧೆಯಂತೆ ಮೇಲ್ನೋಟಕ್ಕೆ ಕಾಣುತ್ತಿದ್ದ ಕ್ಷೇತ್ರ ಈಗ ನೇರ ಹಣಾಹಣಿಯಾಗಿ ಮಾರ್ಪಟ್ಟಿದೆ. ಬಿಜೆಪಿಯ ಬಿ.ಎನ್. ಬಚ್ಚೇಗೌಡ ಮತ್ತು ಕುಮಾರಸ್ವಾಮಿ ನಡುವೆ ನೇರ ಪೈಪೋಟಿಯಾಗಿ ಕೊನೆ ಕ್ಷಣದಲ್ಲಿ ಬದಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆ ಮಾಡಿದ್ದು ತಾವೇ ಎಂದು ಕುಮಾರಸ್ವಾಮಿ ಎಷ್ಟೇ ಹೇಳಿದರೂ ಅದು ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿಯೇ ಅಂತಿಮ ರೂಪ ಪಡೆದಿದ್ದು, ಕುಮಾರಸ್ವಾಮಿ ಕೇವಲ ಘೋಷಣೆ ಮಾಡಿದರು. ಮತ್ತೊಂದು ಕಾರಣ ಜೆಡಿಎಸ್ ಕೇವಲ ಎರಡು ಮೂರು ಸ್ಥಾನಗಳಿಗೆ ಸೀಮಿತವಾಗಲಿದೆ ಎಂಬ ಸಮೀಕ್ಷೆಗಳಿಂದಾಗಿ ಕಡಿಮೆ ಸ್ಥಾನದಲ್ಲಿ ಮಾತ್ರ ಗೆಲ್ಲುವ ಪಕ್ಷದಿಂದ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ದೇಶಾದ್ಯಂತ ಮೋದಿ ಅಲೆ ಇದ್ದು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಸಮೀಕ್ಷೆಗಳಿಂದಾಗಿ ಇಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಬಲಜಿಗ ಸಮುದಾಯ ಬೆಂಬಲ: ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾತಿ ವರ್ಗ ವಿಂಗಡಣೆಯಲ್ಲಿ 2ಎ ನಲ್ಲಿದ್ದ ಬಲಿಜಿಗ ಜನಾಂಗವನ್ನು 3ಎ ಗೆ ಸೇರಿಸಿ ಅನ್ಯಾಯ ಮಾಡಲಾಯಿತು ಎಂಬ ಆರೋಪ ಆ ಜನಾಂಗವನ್ನು ಕೆರಳಿಸಿದೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಬಲಿಜಿಗನ್ನು 3ಎ ನಿಂದ ಶೈಕ್ಷಣಿಕವಾಗಿ 2ಎ ಮೀಸಲಾತಿ ನೀಡಿದ ಕಾರಣ ಸುಮಾರು 3 ಲಕ್ಷದಷ್ಟಿರುವ ಬಲಜಿಗರು ಆಗ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ.
ವಕ್ಕಲಿಗರೂ ಸೈ: ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಕ್ಕಲಿಗ ಜನಾಂಗದ ನಾಯಕರಾದ ಆರ್. ಅಶೋಕ್ ಸೇರಿ ಹಲವು ನಾಯಕರು ಬಿಜೆಪಿ ಪರ ಪ್ರಚಾರವನ್ನು ಕ್ಷೇತ್ರದಲ್ಲಿ ಕೈಗಂಡಿದ್ದಾರೆ. ಜೊತೆಗೆ ಕುಮಾರಸ್ವಾಮಿ ಒಕ್ಕಲಿಗರಾದರೂ ಸ್ಥಳೀಯರಲ್ಲ ಮತ್ತು ಚಿಕ್ಕಬಳ್ಳಾಪುರಕ್ಕಿಂತ ರಾಮನಗರದ ಕಡೆಯೇ ಹೆಚ್ಚಿನ ಒಲವು ತೋರುತ್ತಾರೆ ಎಂಬ ಆರೋಪಗಳಿರುವ ಕಾರಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಬಚ್ಚೇಗೌಡರದು.
ಜಾತಿವಾರು ಮತದಾರರು
ಒಕ್ಕಲಿಗರು 3.20 ಲಕ್ಷ, ಬಲಿಜಿಗರು 2.80 ಲಕ್ಷ, ಲಿಂಗಾಯಿತರು ಮತ್ತು ನೇಕಾರರು 1.8 ಲಕ್ಷ, ಕುರುಬರು ಮತ್ತು ನಾಯಕರು 3.10 ಲಕ್ಷ, ಹಿಂದುಳಿದ, ಪರಿಶಿಷ್ಟ ವರ್ಗ, ಪಂಗಡ 1.8 ಲಕ್ಷ, ಗೊಲ್ಲರು 85 ಸಾವಿರ, ಬೋವಿಗಳು 80 ಸಾವಿರ, ಇತರೆ 3 ಲಕ್ಷ ಮಂದಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

