ಕೋಲಾರ

ಭರವಸೆ ಸಾಕು, ಅಭಿವೃದ್ಧಿ ಬೇಕು

Published On :

ಕ್ಷೇತ್ರದ ಮತದಾರರ ಒಕ್ಕೂರಲ ಅಭಿಮತ, ಸದೃಢ ನಾಯಕತ್ವದತ್ತ ಯುವಕರ ಚಿತ್ತ
-ಅಶ್ವತ್ಥನಾರಾಯಣ ಎಲ್.
ಚಿಕ್ಕಬಳ್ಳಾಪುರ: ಸುಳ್ಳು ಹೇಳಿ ಜನರನ್ನು ಮರುಳು ಮಾಡಿದ್ದು ಸಾಕು, ಸದೃಢ ನಾಯಕತ್ವ ಬೇಕು ಇದು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಯ ಒಕ್ಕೂರಲ ಅಭಿಪ್ರಾಯ.
ಆರಂಭದಿಂದ ಇಂದಿನವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಶ್ವತ ಎನ್ನುವ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿಲ್ಲ. ಜನತೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ತಲುಪಿದ್ದಾರೆ. ಯುವಜನತೆ ಉದ್ಯೋಗ ಆರಿಸಿ ಗುಳೆ ಹೋಗುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳೆನಿಸಿಕೊಂಡವರಿಗೆ ಇದು ಯಾವುದೂ ಕಾಣಿಸುತ್ತಿಲ್ಲ. ಅವರಿಗೆ ಬೇಕಿರುವುದು ಕೇವಲ ಮತ. ಈ ಸಮಸ್ಯೆಗಳ ನಿವಾರಣೆ ಮಾಡುವ ನಾಯಕರೇ ಬರವಾಗಿದ್ದಾರೆ.
ಕಳೆದ ವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರದಲ್ಲಿ ನಡೆಸಿದ ಬಹಿರಂಗ ಸಭೆಯಲ್ಲಿ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನೀಡಿರುವ ಭರವಸೆಯಿಂದ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಇದರಿಂದಾಗಿ ಕ್ಷೇತ್ರದ ಯುವ ಮತದಾರರು ಮೋದಿ ಪರ ಒಲವು ತೋರಿಸುತ್ತಿರುವುದು ಕಂಡು ಬರುತ್ತಿದೆ. ಆಸೆ ಆಮಿಷಗಳಿಗೆ ಬಲಿಯಾಗದಂತೆ ಮತಚಾಲಾಯಿಸಲು ಪೋಷಕರಲ್ಲಿಯೂ ಅರಿವು ಮೂಡಿಸುತ್ತಿದ್ದು, ಈ ಬಾರಿ ಬಿಜೆಪಿ ಗೆಲವು ಕಟ್ಟಿಟ್ಟ ಬುತ್ತಿ ಎಂಬ ಸಂದೇಶವನ್ನು ಕೊನೆಗಳಿಗೆಯಲ್ಲಿ ರವಾನಿಸಿದ್ದಾರೆ.
ಈ ಹಿಂದೆ ಐದು ವರ್ಷಗಳ ಕಾಲ ಕೇಂದ್ರ ಸರ್ಕಾರದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದರೂ ಕ್ಷೇತ್ರದ ಕಡೆ ಗಮನ ಹರಿಸದ ವೀರಪ್ಪ ಮೊಯ್ಲಿ ವಿರುದ್ಧ ಕ್ಷೇತ್ರದ ಜನತೆ ಭ್ರಮನಿರಸನಗೊಂಡಿದ್ದಾರೆ. ರಾಮನಗರ ನನ್ನ ಕರ್ಮ ಭೂಮಿ ಎಂದು ಹೇಳುವ ಮಾಜಿ ಸಿಎಂ ಕುಮಾರಸ್ವಾಮಿಗಳಿಂದ ಅಭಿವೃದ್ಧಿ ನಿರೀಕ್ಷಿಸಲು ಯುವ ಮತದಾರರ ಮನಸ್ಸು ಒಪ್ಪುತ್ತಿಲ್ಲ. ಕಾರಣ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಅವರು ಮಾತಿಗೆ ತಪ್ಪಿದ್ದಾರೆ ಮುಂದೆ ಅವರು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿಯೂ ಮಾತು ತಪ್ಪಲ್ಲ ಎಂಬ ನಂಬಿಕೆ ಏನು ಎಂಬುದು  ಯುವಕರ ಪ್ರಶ್ನೆ.
ಜೊತೆಗೆ ರಾಜ್ಯದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಸ್ಥಾನಗಳು ಬರವುದೂ ಇಲ್ಲ, ಕೇಂದ್ರದಲ್ಲಿ ತೃತೀಯರಂಗ ಅಧಿಕಾರಕ್ಕೇರುವುದೂ ಇಲ್ಲ ಹಾಗಿದ್ದ ಮೇಲೆ ಅವರನ್ನು ಆರಿಸಿ ಪ್ರಯೋಜನವಾದರೂ ಏನು ಬದಲಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾದರೆ ಕೇಂದ್ರದಲ್ಲಿ ರಚನೆಯಾಗುವ ಎನ್‌ಡಿಎ ಸರ್ಕಾರದಿಂದ ಹೆಚ್ಚಿ ಹಣ ತಂದು ಕ್ಷೇತ್ರವನ್ನು ಮಾದರಿ ಮಾಡಲಿದ್ದಾರೆ ಎಂಬ ಬಿಜೆಪಿ ನಾಯಕರ ಭರವಸೆ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಇನ್ನು ವೀರಪ್ಪ ಮೊಯ್ಲಿ ವಿಚಾರಕ್ಕೆ ಬಂದರೆ ಕಳೆದ ಬಾರಿ ಅವರು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಯಾವುದೇ ಭರವಸೆಗಳು ಈಡೇರಿಸಿಲ್ಲ ಎಂಬುದು ಮತದಾರರೂ ಸೇರಿದಂತೆ ವಿರೋಧ ಪಕ್ಷಗಳ ನೇರ ಆರೋಪ. ಆದರೂ ಅವರು ನೂರಕ್ಕೆ ನೂರರಷ್ಟು ಭರವಸೆ ಈಡೇರಿಸಲಾಗಿದೆ ಎಂಬ ಹಸಿ ಸುಳ್ಳು ಹೇಳಿ ಮತದಾರರನ್ನು ವಂಚಿಸುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಲಾಗುತ್ತಿದೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿ ಕಾರ್ಯನಿರ್ವಹಿಸಿದ ಮೊಯ್ಲಿ ಮನಸ್ಸು ಮಾಡಿದ್ದರೆ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದಿತ್ತು. ಆದರೆ ಆಕೆಲಸವನ್ನು ಅವರು ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿದೆ ಎಂದು ಯುವಕರು ಪ್ರತಿಪಾದಿಸುತ್ತಿದ್ದಾರೆ.
ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣಾ ದಿನದವರೆಗೆ ರಾಜಕೀಯ ಪಕ್ಷಗಳ ಮೇಲಾಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದ ಮತದಾರ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಕಳೆದ ವಾರ ಮೋದಿ ನೀಡಿದ ಭರವಸೆಗಳು ಮತದಾರರಲ್ಲಿ ನಂಬಿಕೆ ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಹೊಸ ಹುರುಪಿನೊಂದಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಮತದಾರ ಅಂತಿಮ ತೀರ್ಮಾನ ಮಾಡಿದ್ದಾನೆ ಎಂಬುದರಲ್ಲಿ ಸಂಶಯವಿಲ್ಲ.

ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದ ಜನತೆಗೆ ವೀರಪ್ಪ ಮೊಯ್ಲಿ ಮೋಸ ಮಾಡಿದ್ದಾರೆ. ಕೇಂದ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆದರೂ ಎಲ್ಲವನ್ನು ಈಡೇರಿಸಲಾಗಿದೆ ಎಂದು ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ.
-ಎನ್. ಮಹೇಶ್, ನೂತನ ಮತದಾರ, ಬಾಗೇಪಲ್ಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.