ಮತದಾರರ ಓಲೈಸಲು ಅಂತಿಮ ಕಸರತ್ತು
ಮನೆ ಮನೆಗೆ ತೆರಳಿ ಮತಯಾಚನೆ, ಕಾಂಚಾಣದ ಮೇಲೆ ಹದ್ದಿನ ಕಣ್ಣು
ಕೋಲಾರ: ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲದಿರುವುದರಿಂದ ವಿವಿಧ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಓಲೈಸಿಕೊಳ್ಳಲು ಬುಧವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತದಾರರ ಬಳಿಗೆ ಹೋಗಲು ಪೈಪೋಟಿ ನಡೆಸಿದರೆ, ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಕೈಗೆ ಸಿಗುತ್ತಿಲ್ಲವೆಂದು ಅಸಮಾಧಾನಗೊಂಡು ಕರಪತ್ರಗಳನ್ನು ಮನೆಗಳಿಗೆ ತಲುಪಿಸದೆ ಬೀದಿಗೆ ಎಸೆದರು. ನರಸಾಪುರ, ವೇಮಗಲ್ ಇನ್ನಿತರ ಕಡೆ ಬಿಜೆಪಿ ಕಾರ್ಯಕರ್ತರು ಸಂಭಾವನೆ ಕಡಿಮೆ ಎಂದು ಮುಖಂಡರ ಮೇಲೆ ಮುನಿಸಿಕೊಂಡು ಬರಿಗೈಯಲ್ಲಿ ಹೋದ ಘಟನೆ ನಡೆದಿದೆ. ಅಭ್ಯರ್ಥಿಯಿಂದ ಲಕ್ಷಗಟ್ಟಲೆ ಹಣ ಪಡೆದು ಕಾರ್ಯಕರ್ತರಿಗೆ ನೀಡದೆ ತಮ್ಮ ಜೇಬು ತುಂಬಿಸಿಕೊಂಡಿದ್ದಾರೆಂದು ಕಾರ್ಯಕರ್ತರು ಆರೋಪಿಸಿದಾಗ ಮಾತಿನ ಚಕಮಕಿ ನಡೆದಿದ್ದು ಹಿರಿಯರು ಆಗಬಹುದಾದ ಘರ್ಷಣೆ ತಪ್ಪಿಸಿದ್ದಾರೆ. ಕಾಂಚಾಣದ ಮೇಲೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ತಮ್ಮ ಮನೆಗಳ ಮುಂದೆ ಸೇರಿದ್ದ ಕಾರ್ಯಕರ್ತರಿಗೆ ನಾವೇ ಊರಿಗೆ ಬಂದು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆಂದು ಸಮಾಧಾನಪಡಿಸಿ ಕಳುಹಿಸಿದ್ದಾರೆ.
ಕಾಂಗ್ರೆಸ್ಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಮನೆಯ ಮುಂದೆಯೂ ಕಾರ್ಯಕರ್ತರು ಜಮಾಯಿಸಿದ್ದರಿಂದ ಅವರು ತಮ್ಮ ತೋಟಕ್ಕೆ ಸೇರಿಕೊಂಡು ಅಲ್ಲಿಂದಲೇ ತಮ್ಮ ಹಿಡಿತದಲ್ಲಿರುವ ಗ್ರಾಮಗಳಿಗೆ ಸೇರಬೇಕಾದ ಚುನಾವಣಾ ಸಾಮಾಗ್ರಿಗಳನ್ನು ತಲುಪಿಸಿದ್ದಾರೆ. ಬಿಜೆಪಿಯ ನಿಷ್ಟಾವಂತರು ಮನೆ ಮನೆಗೆ ಹೋಗಿ ಅಂತಿಮ ಸುತ್ತಿನ ಮತಯಾಚಿಸಿದರೆ, ಹಣಕ್ಕಾಗಿಯೇ ಪಕ್ಷ ಸೇರಿದ್ದವರು ಕೈಕೊಟ್ಟು ಹಣ ಸಿಗುವ ದಾರಿ ಹುಡುಕಿಕೊಂಡು ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಣ, ಮದ್ಯ ಹಂಚಿಕೆ ತಪ್ಪಿಸಲು ಕೋಲಾರದಲ್ಲಿ ಪೊಲೀಸರು ಗಸ್ತು ಹೆಚ್ಚು ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಕುಳಿತು ಎಲ್ಲೆಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೆಬ್ ಸೈಟ್ ಮೂಲಕ ಗಮನಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಚುನಾವಣಾ ಸಿಬ್ಬಂದಿ, ಪೊಲೀಸರು ಅಲಸ್ಯ ಮಾಡದೆ ಕೆಲಸ ಮಾಡುತ್ತಿದ್ದಾರೆ.
ಮತದಾರರಿಗೆ ಆಮಿಷ: 2.25 ಲಕ್ಷ ವಶ
ಚಿಕ್ಕಬಳ್ಳಾಪುರ: ಮತದಾರರಿಗೆ ಹಣದ ಆಮಿಷವೊಡ್ಡುಲು ಯತ್ನಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಹಾಯಕ ಚುನಾವಣಾಧಿಕಾರಿಗಳು ಮೂವರನ್ನು ಬಂಧಿಸಿ ಅವರಿಂದ ರು. 2.25 ಲಕ್ಷ, ಎಟಿಎಂ ಕಾರ್ಡ್ಗಳು, ಚೆಕ್ ಬುಕ್ ಮತ್ತು ನಾನಾ ಹೆಸರಿನ ಪಾಸ್ ಬುಕ್ಗಳನ್ನು, ಬಿಜೆಪಿ ಪಕ್ಷಕ್ಕೆ ಸೇರಿದ ಕರಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ತಾವರೆ ಗಾರ್ಡನ್ ಹೊಟೇಲ್ ಬಳಿ ಘಟನೆ ನಡೆದಿದೆ. ಸಹಾಯಕ ಚುನಾವಣಾಧಿಕಾರಿ ಶಾಂತಲಾ ಬಿಜೆಪಿ ಕಾರ್ಯಕರ್ತರು ಎನ್ನಲಾದ ನವೀನ್ ಕುಮಾರ್ ಸೇರಿದಂತೆ ಮೂವರನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಶಾಂತಲಾರವರ ದೂರಿನಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮುಚ್ಚಳಿಕೆ ಬರೆಸಿಕೊಂಡು ಆರೋಪಿಗಳನ್ನು ಹೊರ ಬಿಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

