ಕೋಲಾರ

ಹುಳಿಯಾರು ಬಳಿ 2 ಕಾಡಾನೆ ಪ್ರತ್ಯಕ್ಷ

Published On :

ಹುಳಿಯಾರು: ಸಮೀಪದ ಬೋರನಕಣಿವೆ ಜಲಾಶಯದಲ್ಲಿ ಬುಧವಾರ ಮುಂಜಾನೆ ಎರಡು ಕಾಡಾನೆಗಳು  ಕಾಣಿಸಿಕೊಂಡು ನಂತರ ಜಲಾಶಯದ ಪಕ್ಕದ ಗುಡ್ಡದಲ್ಲಿ ಠೀಕಾಣಿ ಹೂಡಿವೆ.
 ಮುಂಜಾನೆ ಜಲಾಶಯದ ಹಿನ್ನಿರೀನ ಅಂಗಳದಲ್ಲಿ ಮಧ್ಯವಯಸ್ಸಿನ ಗಂಡಾನೆಗಳು ಕಾಣಿಸಿಕೊಂಡಿವೆ. ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮುಗಿಬಿದ್ದಿದ್ದರಿಂದ ಗಾಬರಿಗೊಂಡು ಜಲಾಶಯದ ಪಕ್ಕದ ಗುಡ್ಡಕ್ಕೆ ಸಾಗಿವೆ ಹಾಗೂ  ಗುಡ್ಡದ ಮೂಲಕ ಮುಂದಕ್ಕೆ ಹೋದ ಆನೆಗಳು ಪುನಃ ಸಂಜೆ ವೇಳೆಗೆ ವಾಪಸಾಗಿದ್ದು, ಈ ಆನೆಗಳು ಗುಬ್ಬಿ ಅರಣ್ಯಭಾಗದಿಂದ ಬಂದವಾಗಿದ್ದು, ಈಗ ಬೋರನಕಣಿವೆ ಗುಡ್ಡದಲ್ಲಿವೆ. ರಾತ್ರಿ ವೇಳೆಗೆ  ಹಿಂದಿರುಗುವ ಸಂಭವ ಹೆಚ್ಚಾಗಿದೆ ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜಪ್ಪ ತಿಳಿಸಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಗೋವಿಂದಪ್ಪ, ಬಸವರಾಜು ಹಾಗೂ ಇತರರು ಮೊಕ್ಕಾಂ ಹೂಡಿದ್ದು ಅವುಗಳ ಚಲನವಲನವನ್ನು ಗಮನಿಸುತ್ತಿದ್ದಾರೆ.

ಫ್ಯಾಕ್ಟರಿಯಲ್ಲಿ ಕಳವು, ಭದ್ರತಾ ಸಿಬ್ಬಂದಿ ಕೊಲೆ
ಮೈಸೂರು: ಫ್ಯಾಕ್ಟರಿಯಲ್ಲಿದ್ದ ವಸ್ತುಗಳನ್ನು ಕಳವು ಮಾಡುತ್ತಿದ್ದ ದುಷ್ಕರ್ಮಿಗಳು ತಮ್ಮನ್ನು ಅಡ್ಡಿಪಡಿಸಿ ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿ ಸಂಪ್‌ಗೆ ಹಾಕಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಎಚ್.ಡಿ. ಕೋಟೆ ತಾಲೂಕು ಹಂಪಾಪುರ ನಿವಾಸಿ ರಾಮಚಾರಿ ಎಂಬವರ ಪುತ್ರ ಶಿವಣ್ಣಚಾರಿ (45) ಕೊಲೆಯಾದವರು. ಇಲ್ಲಿನ ಹೆಬ್ಬಾಳಿನಲ್ಲಿರುವ ಚತ್ವಿಕ್ ಸ್ಟ್ಯಾಪಿಂಗ್ ಎಂಬ ಫ್ಯಾಕ್ಟರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬುಧವಾರ ಬೆಳಗಿನ ಜಾವ ಫ್ಯಾಕ್ಟರಿಗೆ ನುಗ್ಗಿದ ಕಳ್ಳರು, 2- 3 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ರಾತ್ರಿ ಗಸ್ತಿನಲ್ಲಿದ್ದ ಶಿವಣ್ಣಚಾರಿ ಕಳ್ಳರ ಮೇಲೆ ಎರಗಿದ್ದಾರೆ. ಈ ವೇಳೆ ಕಳ್ಳರು ಶಿವಣ್ಣಚಾರಿಯನ್ನು ಕೊಲೆ ಮಾಡಿ ಸಂಪ್‌ಗೆ ಬಿಸಾಡಿ ಪರಾರಿಯಾಗಿದ್ದಾರೆ.

ಸರಗೂರು ಬಳಿ ಚಿರತೆ ದಾಳಿ: ಕರು ಬಲಿ
ಸರಗೂರು: ಸಮೀಪದ ಹಂಚೀಪುರದಲ್ಲಿ ಮಂಗಳವಾರ ರಾತ್ರಿ ಚಿರತೆ ದಾಳಿಗೆ ಕರು ಬಲಿಯಾಗಿದೆ. ಗ್ರಾಮದ ಎಚ್.ಸಿ. ಮಹದೇವಸ್ವಾಮಿ ಅವರ ಜಮೀನಿನ ಬ್ಯಾರನ್ ಪಕ್ಕದಲ್ಲಿ ಕೊಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಹಂಚೀಪುರ ಮತ್ತು ಸಿದ್ದಾಪುರ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ 8 ಹಸು ಮತ್ತು ಕರುಗಳು ಮೃತಪಟ್ಟಿವೆ. ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಸರಗೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹದೇವಸ್ವಾಮಿ ಆರೋಪಿಸಿದ್ದಾರೆ.

ಮಾಲೂರು: ಗುಪ್ತ ಮತಯಾಚನೆ
ಮಾಲೂರು: ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದ್ದ ಹಾಗೆ ಮುಖಂಡರುಗಳು ಮತದಾರರ ಮನೆಗಳಿಗೆ ಎಡತಾಗುತ್ತಿನಾನಾ ಪಕ್ಷಗಳ ಮುಖಂಡರು ತಾಲೂಕಿನಾದ್ಯಂತ ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದರು. ಕಾಂಗ್ರೆಸ್‌ನ ಕೃಷ್ಣಯ್ಯ ಶೆಟ್ಟಿ, ತಾಪಂ ಸದಸ್ಯ ಲೋಕೇಶ್,ಪುರಸಭೆ ಸದಸ್ಯ ಸಿ. ಲಕ್ಷಿನಾರಾಯಣ್ ಸೇರಿದಂತೆ ಕಾರ್ಯಕರ್ತರು ರೇಲ್ವೇ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣೀಕರ ಬಳಿ ಮತಯಾಚಿಸಿದರು. ಬಿಜೆಪಿ ನಗರಾಧ್ಯಕ್ಷ ಕುಟ್ಟಿ ಮುನಿರಾಜು ನೇತೃತ್ವದಲ್ಲಿ ಪಟ್ಟಣದ ಲಾಯ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಮತ ಯಾಚಿಸಿದರು. ಸುರೇಶ್,ಶ್ರೀನಿವಾಸ್, ಶಂಕರ್, ಮಂಜುನಾಥ್ ಇದ್ದರು. ಪುರಸಭೆ ಸದಸ್ಯ ಎಂ.ಪಿ. ವಿಜಯಕುಮಾರ್ ಕಾರ್ಯಕರ್ತರೂಡನೆ ವಾರ್ಡ್‌ನಲ್ಲಿ ಮತಯಾಚಿಸಿದರು. ಜೆಡಿಎಸ್ ನಗರಾಧ್ಯಕ್ಷ ರಾಮಚಂದ್ರ ನೇತೃತ್ವದಲ್ಲಿ ವಿವಿಧ ಬಡಾವಣೆಗಳಲ್ಲಿ ಮತಯಾಚಿಸಿದರು.

ಪ್ರಕರಣ ದಾಖಲು
ಗುಡಿಬಂಡೆ: ಪ್ರಚಾರದಲ್ಲಿ ಅನುಮತಿ ಇಲ್ಲದೆ ದ್ವಿ ಚಕ್ರ ವಾಹನ ಬಳಸಿದ ಆರೋಪದ ಮೇಲೆ ಅಧಿಕಾರಿಗಳು ಕಾಂಗ್ರೆಸ್ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಜಿ ಶಾಸಕ ಎನ್. ಸಂಪಗಿ ಸೇರಿದಂತೆ ಪಕ್ಷದ ಹಲವು ಮುಖಂಡರು ಚಿಕ್ಕಬಳ್ಳಾಪುರ ಲೋಕಸಭೆ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನಗಳಿಗೆ ಪಕ್ಷದ ಚಿಹ್ನೆಯುಳ್ಳ ಬಾವುಟಗಳನ್ನು ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದರು. ಇದನ್ನು ಗಮನಿಸಿದ ಎಂಸಿಸಿ ತಂಡದ ಅಧಿಕಾರಿಗಳು ನಿಯಮಗಳ ಪ್ರಕಾರ ದ್ವಿಚಕ್ರ ವಾಹನಗಳಿಗೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆದಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಪಕ್ಷಿ ಪ್ರೇಮಿಯಿಂದ ಹದ್ದಿನ ರಕ್ಷಣೆ
ಕೋಲಾರ: ಸಾವಿನ ದವಡೆಗೆ ಸಿಕ್ಕಿದ್ದ ಹದ್ದಿಗೆ ಪಕ್ಷಿ ಪ್ರೇಮಿ ಸಿ.ಜಿ. ಮುರಳಿ ರಕ್ಷಣೆ ನೀಡಿ ಬದುಕುಳಿಯಂತೆ ಮಾಡಿದ್ದಾರೆ.ತಾಲೂಕಿನ ವೇಮಗಲ್‌ನಿಂದ ಕೋಲಾರಕ್ಕೆ ಬೈಕಿನಲ್ಲಿ ಬರುತ್ತಿರುವಾಗ ಮಾರ್ಗಮಧ್ಯೆ ಹದ್ದೊಂದು ಅಪಘಾತಕ್ಕೆ ಸಿಕ್ಕಿ ಗಾಯಗೊಂಡು ಹಾರಲಾಗದೆ ನರಳಾಡುತ್ತಿತ್ತು.ಇದನ್ನು ಗಮನಿಸಿದ ಮುರಳಿ ತಕ್ಷಣ ಹದ್ದಿಗೆ ಧನಮಟ್ನಹಳ್ಳಿಯ ಗೇಟ್‌ನಲ್ಲಿರುವ ಅಂಗಡಿ ಬಳಿ ನೀರು ಕುಡಿಸಿ ನಗರದ ಪಶು ವೈದ್ಯಾಸ್ಪತ್ರೆಗೆ ತಂದು ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಪರೀಕ್ಷೆ ಮಾಡಿದಾಗ ರೆಕ್ಕೆಯ ಕೊಂಡಿಗೆ ಗಾಯವಾಗಿರುವುದು ಕಂಡುಬಂದಿದೆ.ಗಾಯಕ್ಕೆ ಔಷಧ ಹಚ್ಚಿ ಎರಡು ರೀತಿಯ ಜೀವರಕ್ಷಕ ಚುಚ್ಚು ಮದ್ದನ್ನು ನೀಡಿ ಮತ್ತೆ ನೀರು ಕುಡಿಸಿ ವಿಶ್ರಾಂತಿಗೆ ಬಿಡಲಾಯಿತು, ಸಕಾಲಿಕ ಚಿಕಿತ್ಸೆಯಿಂದ ಚೇತರಿಸಿಕೊಂಡ ಹದ್ದು ಸ್ವಲ್ಪ ಹೊತ್ತಿಗೆ ರೆಕ್ಕೆ ಬಡಿದು ಹಾರಿ ಹೋದಾಗ ಅಲ್ಲಿದ್ದವರಿಗೆ ಸಂತಸದ ಉಂಟಾಯಿತು.

ಕುಡಿವ ನೀರಿಗೆ ಆಗ್ರಹಿಸಿ ರಸ್ತೆತಡೆ
ಕೆಜಿಎಫ್: ಕುಡಿಯುವ ನೀರಿಗೆ ಆಗ್ರಹಿಸಿ ಆಂಡ್ರಸನ್‌ಪೇಟೆ ವ್ಯಾಪ್ತಿಯ ಗಿಲ್ಬರ್ಟ್ಸ್ ಬಡಾವಣೆ ನಿವಾಸಿಗಳು ರಸ್ತೆತಡೆದು ಖಾಲಿ ಕೊಡಗಳನ್ನಿಟ್ಟು ಪ್ರದರ್ಶನ ಮಾಡಿದರು. ಕಳೆದ ಒಂದು ವರ್ಷದಿಂದ ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ಖಾಸಗಿ ಟ್ಯಾಂಕರ್‌ಗಳ ಮೂಲಕ ಒಂದು ಬಿಂದಿಗೆಗೆ 3 ರಿಂದ 4 ರು.ಗಳನ್ನು ನೀಡಿ ಖರೀದಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ವಾರ್ಡ್‌ನ ನಗರಸಭೆ ಸದಸ್ಯೆ ಜಯದೇವಿ ಅವರಿಗೆ ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕ್ಷೇತ್ರದ ಶಾಸಕರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಕ್ಯಾರೆ ಎನ್ನುತ್ತಿಲ್ಲ ಆದ್ದರಿಂದ ಈ ಭಾಗದಲ್ಲಿ ಕೊಳವೆ ಬಾವಿ ಕೊರೆಸಿ ನೀರನ್ನು ಪೂರೈಸುವಂತೆ ಒತ್ತಾಯಿಸಿದರು. ಪ್ರತಿಟನೆಯಲ್ಲಿ ಜಯಕಾಂತ್, ಕಮಲ್, ನೇಸಕುಮಾರ್, ಪ್ರವೀಣ್, ಮಿಲ್ಕೀ, ಶೀಲಾ, ಸುಗುಣ, ಕಲೈವಾಣಿ, ವಾಸಲ, ಅಶ್ವಿನಿ ಇದ್ದರು.

ಹೇಮಾದ್ರಿ ಬಿ.ಎಡ್ ಕಾಲೇಜಿಗೆ ರ್ಯಾಂಕ್
ಕೋಲಾರ: ನಗರದ ಹೊರವಲಯದ ಹೇಮಾದ್ರಿ ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳಾದ ಎಸ್. ಸುನೀತಾ 93.88 ಅಂಕಗಳೊಂದಿಗೆ ಪ್ರಥಮ ಸ್ಥಾನ, ಟಿ.ಎಂ. ದೇವಿಕಾ 92.88 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಸಿ.ವಿ. ಶಶಿಕಲಾ 92.32 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ 2012-13 ನೇ ಸಾಲಿನ ಜನವರಿಯಲ್ಲಿ ನಡೆಸಿದ ಬಿ.ಎಡ್ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಹೇಮಾದ್ರಿ ಕಾಲೇಜಿಗೆ 99 ರಷ್ಟು ಫಲಿತಾಂಶ ಲಭಿಸಿದ್ದು ಪರೀಕ್ಷೆಗೆ ಕುಳಿತಿದ್ದ 51 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮುನಿವೆಂಕಟಪ್ಪ, ಪ್ರಾಂಶುಪಾಲ ಜೆ.ಶ್ರೀನಿವಾಸಶೆಟ್ಟಿ, ಆಡಳಿತಾಧಿಕಾರಿ ಸಿ.ಕೆ. ಮುನಿಬೈರಪ್ಪ, ಹಾಗೂ ಭೋಧಕ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದೆ.

ಭಕ್ತಿಸೌರಭ
ಕುಣಿಗಲ್: ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ, ಆರೋಪ, ಪ್ರತ್ಯಾರೋಪಗಳ ಭರಾಟೆಯಿಂದ ಬಳಲಿದ್ದ ಪಟ್ಟಣದ ನಾಗರಿಕರಿಗೆ ಮಂಗಳವಾರ ರಾತ್ರಿ ಖ್ಯಾತ ಗಾಯಕರಾದ ಡಾ. ವಿದ್ಯಾಭೂಷಣರ ಭಕ್ತಿಸೌರಭ ದಾಸರಪದ, ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಮುದ ನೀಡಿತು.
 ಪಟ್ಟಣದ ರಮಣ ಬ್ಲಾಕ್‌ನಲ್ಲಿರುವ ಶ್ರೀರಾಮಮಂದಿರದಲ್ಲಿ ಕಳೆದ ಸಾಲಿನಂತೆ ಈ ಬಾರಿಯೂ ಶ್ರೀರಾಮನವಮಿ ಅಂಗವಾಗಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಏ.8ರಿಂದ 18ರವರಗೆ ಶ್ರೀರಾಮ ಸೇವಾ ಮಂಡಳಿ ಟ್ರಸ್ಟ್, ಜಾನಕಿ ಮಹಿಳಾ ಸಂಘ ಮತ್ತು ರಾಮಸೇವಾ ಮಂಡಳಿ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ದಿನ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಇದರಂತೆ ಮಂಗಳವಾರ ಸಂಜೆ ಡಾ.ವಿದ್ಯಾಭೂಷಣರು ಮತ್ತು ಸಂಗಡಿಗರಿಂದ ಭಕ್ತಿ ಸೌರಭ ದಾಸಸಾಹಿತ್ಯ ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಕೇಳುಗರ ಮನಸೂರೆಗೊಂಡಿತು.

ರವಿತೇಜ ಕಾಣೆ
ಗುಡಿಬಂಡೆ: ಪಟ್ಟಣದ ಇಂದಿರಾನಗರದ ನಿವಾಸಿ ತಿರುಮಳೇಶ್ ಅವರ ಪುತ್ರಟಿ.ರವಿತೇಜ(16) ಎಂಬಾತ ಏ. 13ರ ಸೋಮವಾರ ಬೆಳಗ್ಗೆ 9 ಗಂಟೆಯ ಸರಿಸುಮಾರಿನಲ್ಲಿ ಮನೆಯಿಂದ ಹೊರಗೆ ಹೋಗಿ ಇದುವರೆಗೂ ಮನೆಗೆ ವಾಪಸ್ಸು ಆಗಿಲ್ಲ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.