ಟೇಕಲ್ ವ್ಯಾಪ್ತಿಯಲ್ಲಿ ಉತ್ಸಾಹದ ಮತದಾನ
ಟೇಕಲ್: ಈ ಬಾರಿ ಲೋಕಸಭಾ ಚುನಾವಣೆ ಮತದಾನ ಬಿಸಿಲಿನ ತಾಪಮಾನದಲ್ಲಿಯೂ ಮತದಾರರು ಹುರುಪಿನಿಂದ ಬಂದು ಮತದಾನಕ್ಕೆ ಬಂದಿದ್ದು ವಿಶೇಷವಾಗಿತ್ತು.
ಬೆಳಗ್ಗೆ ಮಂದಗತಿಯಲ್ಲಿದ ಮತದಾನ ಮಧ್ಯಾಹ್ನದ ಬಳಿಕ ಚುರುಕುಗೊಂಡಿತು. ಟೇಕಲ್ ಮತ್ತು ಮಾಸ್ತಿ ಹೋಬಳಿಗಳಲ್ಲಿ ಶೇ.55ರಿಂದ 60ರವರೆಗೂ ಮತದಾನ ನಡೆದಿದೆ.ಲಲ್ಮತ್ತು ಮಾಸ್ತಿ ಒಟ್ಟಾರೆ ಸಣ್ಣಪುಟ್ಟ ಘಟನಾವಳಿಗಳು ಬಿಟ್ಟರೆ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಯುವಕರಿಂದ ವೃದ್ಧರವರೆಗೂ ಮತದಾನ ತುಂಬಾ ಉತ್ಸಾಹದಿಂದ ನಡೆಯಿತು. ಟೇಕಲ್ ಜಿಪಂ ಕ್ಷೇತ್ರದ ಸದಸ್ಯೆ ರತ್ಮಮ್ಮನಂಜೇಗೌಡರು ತಮ್ಮ ಸ್ವಗ್ರಾಮವಾದ ಕೊಮ್ಮನಹಳ್ಳಿಯಲ್ಲಿ ತಮ್ಮ ಪತಿ, ಕೆ.ವೈ.ನಂಜೇಗೌಡರ ಜೊತೆ ಸೇರಿ ಅತಿ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಿದರು.
ಚಿಕ್ಕ ಪುಟ್ಟ ಘಟನೆಗಳು: ಮಾಸ್ತಿ, ಮಾಕಾರಹಳ್ಳಿ ಯಲ್ಲಿ ಸಣ್ಣಪುಟ್ಟ ಘಟನೆಗಳಾಗಿದ್ದು ಮಾಸ್ತಿ ಗ್ರಾಮದಲ್ಲಿ 3ನೇ ವಾರ್ಡ್ನ ಗಲ್ಲಿಯೊಂದರಲ್ಲಿ ಬುಧವಾರ ರಾತ್ರಿ ಚುನಾವಣಾ ಜಾಗೃತ ದಳದ ಸಿಬ್ಬಂದಿ, ಹಣ ಹಂಚುತ್ತಿದ್ದಾನೆಂಬ ಗುಮಾನಿ ಮೇರೆಗೆ ವ್ಯಕ್ತಿಯೊಬ್ಬನ್ನನ್ನು ಪ್ರಶ್ನಿಸುತ್ತಿದ್ದರು. ಆಗ ಸ್ಥಳೀಯರು ಮತ್ತು ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪೋಲಿಸರು ನಮ್ಮ ಮೇಲೆ ಮತ್ತು ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗುರುವಾರ ಮತದಾನ ದಿನ ಆ ಕಾಲೋನಿಯ ಜನ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮತದಾನ ಮಾಡದೆ ಬಹಿಷ್ಕರಿಸಿದ್ದರು. ನಂತರ ಸ್ಥಳೀಯರು ಸಂಧಾನ ನಡೆಸಿ ನಂತರ ಮತದಾನ ಮಾಡಲಾಯಿತು.
ಮಾಕಾರಹಳ್ಳಿ ಗ್ರಾಮದಲ್ಲಿ ಮತದಾನದ ದಿನ ಬಿಎಲ್ಒ ಮತಗಟ್ಟೆ ಚೀಟಿ ಕೊಡುತ್ತಿದ್ದ ಸಂದರ್ಭದಲ್ಲಿ ಚೀಟಿಯನ್ನು ಹರಿದ ಹಿನ್ನಲೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಮಿತಿಮೀರಿದಾಗ ತಕ್ಷಣ ಪೋಲಿಸರು ಕಾರ್ಯಪ್ರವೃತ್ತರಾಗಿ ಘಟನೆಯನ್ನು ತಿಳಿಗೊಳಿಸಿದರು. ನಂತರ ಶಾಂತಿಯುತ ಮತದಾನ ನಡೆಯಿತು.
ಅದರಂತೆ ರಾಜೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾತಂಗಪುರ, ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಓಬಟ್ಟಿ ಗ್ರಾಮಗಳು ಬುಧವಾರ ಮತದಾನ ಬಹಿಷ್ಕರಿಸಿದ್ದರು. ಆದರೆ, ಕೆಲವು ಮುಖಂಡರ ಮಾತುಕತೆಗೆ ಓಗೊಟ್ಟು ಗುರುವಾರ ಮತದಾನ ಮಾಡಿದರು.
ಮಾತಿನ ಚಕಮಕಿ
ಚಿಂತಾಮಣಿ: ಮತದಾನಕ್ಕೆ ಉತ್ಸಾಹ ತೋರಿದ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಮತದಾನ ಶಾಂತಿಯುತವಾಗಿತ್ತು.
ಚಿಂತಾಮಣಿ ತಾಲೂಕಿನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದ ಮತಗಟ್ಟೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನಲಮಾಚನಹಳ್ಳಿ ಹಾಗೂ ಉಪ್ಪರಪೇಟೆ ಗ್ರಾಮದ ಮತಗಟ್ಟೆಗಳಲ್ಲಿ ಮುಖಂಡರನ್ನು ಮತಗಟ್ಟೆ ಅಧಿಕಾರಿಗಳು ಅಗೌರವವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ಮಾತಿನ ಚಕಮಕಿ ನಡೆಯಿತು. ಅದೇ ರೀತಿ, ಧನಮಿಟ್ಟೇನಹಳ್ಳಿ, ದೊಡ್ಡಹಳ್ಳಿ ಗ್ರಾಮಗಳ ಮತಗಟ್ಟೆ ಬಳಿ ಎರಡು ರಾಜಕೀಯ ಪಕ್ಷಗಳ ಮುಖಂಡರ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮುಕಿ ನಡೆದು ನೂಕಾಟ ತಳ್ಳಾಟ ನಡೆದಿದೆ. ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಮಾಡಲು ಜನರು ಬೆಳಗಿನಿಂದ ಸಂಜೆಯವರೆವಿಗೂ ಬಂದು ಮತ ಚಲಾಯಿಸುತ್ತಿರುವುದು ಸಾಮಾನ್ಯವಾಗಿ ಕಂಡುಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

