ತಿಮ್ಮಪ್ಪನ ಮೊರೆಗೆ ಮುನಿಯಪ್ಪ
ಕೋಲಾರ: ಇಪ್ಪತ್ತೈದು ದಿನಗಳ ಚುನಾವಣಾ ಸಮರದಲ್ಲಿ ದಣಿದು ಸುಸ್ತಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ ಶುಕ್ರವಾರ ಕೋಲಾರದಲ್ಲಿನ ತಮ್ಮ ನಿವಾಸದಲ್ಲಿ ಬೆಳಿಗ್ಗೆ ದೇವರ ಪೂಜೆ ನಂತರ ಪತ್ನಿ ನಾಗರತ್ನಮ್ಮ ಮಾಡಿಕೊಟ್ಟ ತಿಂಡಿಯನ್ನು ಸೇವಿಸಿ ವಿವಿಧ ಕಡೆಗಳಿಂದ ಬಂದಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮತದಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಮಾಡಿದರು.
ಪ್ರತಿ ಚುನಾವಣೆಯ ಬಳಿಕ ಪುಣ್ಯ ಕ್ಷೇತ್ರಗಳಿಗೆ ತೆರಳಿ ಸಂಕಟ ನಿವಾರಣೆಗೆ ವಿಶೇಷ ಪೂಜೆ ಸಲ್ಲಿಸುವ ಸಾಂಪ್ರದಾಯವನ್ನು ರೂಢಿಸಿಕೊಂಡಿರುವ ಮುನಿಯಪ್ಪನವರು ತಮ್ಮ ಮನೆಗೆ ಭೇಟಿ ನೀಡಿದ್ದ ಜನರೊಂದಿಗೆ ಸಮಾಲೋಚನೆ ಬಳಿಕ ಪತ್ನಿ ನಾಗರತ್ನಮ್ಮನವರೊಂದಿಗೆ ತಿರುಮಲ ತಿರುಪತಿಗೆ ಪ್ರಯಾಣಿಸಿದರು.
ಪ್ರತಿ ಶನಿವಾರ ತಾವು ಎಲ್ಲೇ ಇರಲಿ ಹತ್ತಿರದ ಶನೇಶ್ವರ ಸ್ವಾಮಿ, ಆಂಜನೇಯಸ್ವಾಮಿ ಇಲ್ಲವೇ ವೆಂಕಟೇಶ್ವರ ಸ್ವಾಮಿಯ ಗುಡಿಗೆ ಭೇಟಿ ನೀಡಿ ಸಂಕಟ ನಿವಾರಣೆ ಮಾಡುವಂತೆ ಶ್ರದ್ಧಾ-ಭಕ್ತಿಯಿಂದ ಕೋರುವ ಅಭ್ಯಾಸವನ್ನು ಕರಗತ ಮಾಡಿಕೊಂಡಿರುವ ಮುನಿಯಪ್ಪ ಚುನಾವಣೆಯಲ್ಲಿ ಜಯ ಸಿಗಲಿ ಎಂದು ದೇವರಲ್ಲಿ ಮೊರೆ ಹೋಗಲು ತಿಮ್ಮಪ್ಪನ ಸನ್ನದಿಗೆ ಹೋಗಿದ್ದಾರೆ.
ಬೆಂಗಳೂರಿನತ್ತ ಬಿಜೆಪಿ ಅಭ್ಯರ್ಥಿ: ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಸಹ ಕೆ.ಹೆಚ್. ಮುನಿಯಪ್ಪನವರಂತೆ ದೈವ ಭಕ್ತರು. ಚುನಾವಣೆಯ ಕೆಲಸ ಮುಗಿದ ಬಳಿಕ ತಮ್ಮ ಸ್ವಂತ ಸ್ಥಳವಾದ ಕ್ಯಾಸಂಬಳ್ಳಿಗೆ ಹೋಗಿ ವಿಶ್ರಾಂತಿ ಪಡೆದು ಪಾರ್ಟಿ ಮಿಟಿಂಗ್‌ನಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿರುವುದರಿಂದ ಯಾರ ಕೈಗೂ ಸಿಕ್ಕಿಲ್ಲ.
ಪ್ರತ್ಯಕ್ಷವಾದ ಕೇಶವ: ಜೆಡಿಎಸ್ ಅಭ್ಯರ್ಥಿ ಕೇಶವ ಶುಕ್ರವಾರ ಸಂಜೆ ಕೋಲಾರದ ಪತ್ರಕರ್ತರ ಭವನದಲ್ಲಿ ಪ್ರತ್ಯಕ್ಷರಾದರು.
ಮತದಾನಕ್ಕೆ ಎರಡು ದಿನಗಳ ಹಿಂದೆ ಯಾರ ಕೈಗೂ ಸಿಗದೆ ಪಕ್ಷದ ಕಾರ್ಯಕರ್ತರಲ್ಲಿ ತಳಮಳ ಉಂಟು ಮಾಡಿದ್ದ ಕೇಶವ ಮಾಧ್ಯಮದವರೊಂದಿಗೆ ಮಾತನಾಡಿ, ತಾನು ಎಲ್ಲೂ ನಾಪತ್ತೆ ಆಗಿರಲಿಲ್ಲವೆಂದು ತಿಳಿಸಿದರು.
ಗೆಲ್ಲುವ ವಿಶ್ವಾಸವಿದೆ, ಒಂದು ವೇಳೆ ಸೋತರೂ ಜನರ ಜೊತೆ ನಿಕಟ ಸಂಪರ್ಕವಿಟ್ಟುಕೊಳ್ಳುವುದಾಗಿ ತಿಳಿಸಿದರು.
ಜ್ವರದಿಂದ ಬಳಲುತ್ತಿರುವ ರಾಮಯ್ಯ: ಆದಿಮದಲ್ಲಿ ತಿಂಗಳಿಗೊಮ್ಮೆ ನಡೆಸುತ್ತಿರುವ ಹುಣ್ಣಿಮೆ ಹಾಡು ಕಾರ್ಯಕ್ರಮ ಸಿದ್ಧತೆ ಮಾಡಿಕೊಂಡು ನಾಟಕ,ಹಾಡು,ಜನಪದ ಕಲೆಗಳತ್ತ ಗಮನ ನೀಡುತ್ತಿದ್ದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ರಾಜಕಾರಣಕ್ಕೆ ಇಳಿಯುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಇದ್ದಕ್ಕಿದಂತೆ ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 20ದಿನಗಳ ಕಾಲ ಚುನಾವಣೆ ನೆಪದಲ್ಲಿ ಇಡೀ ಲೋಕಸಭಾ ಕ್ಷೇತ್ರದಲ್ಲಿ ಜನಪದ ಕಲೆಯನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸುತ್ತಾಡಿದ ಪರಿಣಾಮ ಜ್ವರದಿಂದ ಬಳಲುತ್ತಿದ್ದಾರೆ. ಏ.15ರಂದೇ ಕೋಟಿಗಾನಹಳ್ಳಿ ರಾಮಯ್ಯ ಆದಿಮ ಕುಟೀರ ಸೇರಿ ಸಂಪೂರ್ಣ ವಿಶ್ರಾಂತಿಗೆ ಶರಣಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

