ಮತ ಯಂತ್ರಗಳಿಗೆ ಬಿಗಿ ಭದ್ರತೆ
ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಗಾಗಿ ಬಳಕೆ ಮಾಡಿದ ವಿದ್ಯುನ್ಮಾನ ಯಂತ್ರಗಳನ್ನು ನಗರದ ಸರ್ಕಾರಿ ಬಾಲಕರ ಕಾಲೇಜಿನ ಕೊಠಡಿಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 2,041 ಮತಗಟ್ಟೆಗಳಿಂದ ವಿದ್ಯುನ್ಮಾನ ಯಂತ್ರಗಳನ್ನು ಮತದಾನದ ಬಳಿಕ ಮಸ್ಟರಿಂಗ್ ಮತ್ತು ಡೀ ಮಸ್ಟರಿಂಗ್ ಸ್ಥಳಗಳಿಗೆ ತಂದು ನಂತರ ಕೋಲಾರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಲಾಯಿತು.
ಮತ ಯಂತ್ರಗಳು ಶೇಕರಿಸಿಟ್ಟಿರುವ ಕೊಠಡಿಗಳಿಗೆ ಭದ್ರತೆ ಒದಗಿಸಲು ಕೇಂದ್ರದ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಮತಯಂತ್ರಗಳನ್ನು ಒಳಗೊಂಡ ಪಟ್ಟಿಗೆಗಳನ್ನು ಕಾಲೇಜಿನ ತರಗತಿ ಕೊಠಡಿಗಳಲ್ಲಿ ಇಡಲಾಗಿದ್ದು ಕಟ್ಟಡದ ಕಿಟಕಿ ಹಾಗೂ ಬಾಗಿಲುಗಳನ್ನು ಭದ್ರಪಡಿಸಿ ಮೊಹರು ಹಾಕಲಾಗಿದೆ, ಮತಯಂತ್ರಗಳು ಇರುವ ಪ್ರತಿ ಕೊಠಡಿಯ ಬಾಗಿಲುಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿಯವರ ಸಹಿ ಇರುವ ಬಿಳಿಯ ಹಳೆಯನ್ನು ಅಂಟಿಸಲಾಗಿದೆ.
ಪ್ರತಿ ಕೊಠಡಿಗೆ ಇಬ್ಬರು ಭದ್ರತಾ ಪಡೆಯ ಪೊಲೀಸರು, ಮತ್ತಲವು ಕೊಠಡಿಗಳಿಗೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದ್ದು ಮೇಲ್ವಿಚಾರಣೆಗಾಗಿ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೋಲಾರ ಡಿವೈಎಸ್ಪಿ ಅಶೋಕ್ ಕುಮಾರ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನಿಯೋಜಿಸಲಾಗಿದೆ.
ಕೇಂದ್ರದಿಂದ ಚುನಾವಣಾ ಕಾರ್ಯಕ್ಕೆ ಬಂದಿರುವ ಕೈಗಾರಿಕಾ ಭದ್ರತಾ ಸಿಬ್ಬಂದಿಗೆ ಕಾಲೇಜಿನ ಅವರಣದಲ್ಲೇ ವಾಸ್ತವ್ಯಕ್ಕಾಗಿ ಜಾಗ ಮಾಡಿಕೊಡಲಾಗಿದೆ. ಭದ್ರತಾ ಸಿಬ್ಬಂದಿ ಕಾಲೇಜಿನ ಅವರಣದಲ್ಲೇ ತಾತ್ಕಾಲಿಕ ಅಡುಗೆ ಕೋಣೆ ನಿರ್ಮಿಸಿಕೊಂಡಿದ್ದಾರೆ. ಸ್ನಾನದ ಗೃಹವಿಲ್ಲದೆ ಹಾಗೂ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದರಿಂದ ಬಯಲು ಪ್ರದೇಶವನ್ನು ಉಪಯೋಗಿಸುತ್ತಿದ್ದಾರೆ. ಕಾಲೇಜಿನಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಭದ್ರತಾ ಪಡೆಯವರು ಟ್ಯಾಂಕರ್ಗಳಲ್ಲಿ ನೀರು ತರಿಸಿಕೊಳ್ಳುವಂತಾಗಿದೆ.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಮತಯಂತ್ರಗಳು ಇರುವ ಪ್ರತಿ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಬಂದೋಬಸ್ತ್ ಮಾಡಲಾಯಿತು. ಮತ ಎಣಿಕೆ ಮೇ 16ಕ್ಕೆ ಇದೇ ಕಾಲೇಜಿನಲ್ಲಿ ನಡೆಯಲಿದ್ದು ಯಾವುದೇ ಲೋಪ ದೋಷಕ್ಕೆ ಅವಕಾಶವಿಲ್ಲದೆ ಕಾರ್ಯ ನಿರ್ವಹಿಸಬೇಕು, ಮತಯಂತ್ರಗಳು ಇರುವ ಕೊಠಡಿಗಳ ಭದ್ರತೆಗೆ ನಿಯೋಜಿಸಿರುವ ಸಿಬ್ಬಂದಿ ನಿಯೋಜಿತ ಸ್ಥಳದಿಂದ ಕದಲಬಾರದು, ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಡಿ.ಕೆ. ರವಿ ಸೂಚಿಸಿದ್ದಾರೆ.
ಸರ್ಪಗಾವಲಲ್ಲಿ ಮತಯಂತ್ರಗಳು ಭದ್ರ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವ ವಿದ್ಯುನ್ಮಾನ ಮತಯಂತ್ರಗಳನ್ನು ನಗರದ ಹೊರ ವಲಯದಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೋಪಾನವಾಗಿಡಲಾಗಿದೆ. ಭದ್ರತೆಗಾಗಿ ಅರೆಸೇನಾ ಮತ್ತು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಏ.17ರಂದು ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆದಿದ್ದು, ಕಳೆದ ಬಾರಿ ಶೇ.68 ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.77.95ರಷ್ಟು ಮತದಾನವಾಗಿ ಶೇ.10 ರಷ್ಟು ಪ್ರಮಾಣ ಹೆಚ್ಚಾಗಿದೆ.
ಸಂಜೆ 6 ಗಂಟೆ ನಂತರ ಆಯಾ ಮತಗಟ್ಟೆಗಳಿಂದ ಮತಯಂತ್ರಗಳನ್ನು ಜೋಪಾನವಾಗಿ ಸಂಗ್ರಹಿಸಿ, ಪೊಲೀಸ್ ಪಡೆಯ ನೇತೃತ್ವದಲ್ಲಿ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿಗೆ ತರಲಾಯಿತು. ಆ ನಂತರ ಜಿಲ್ಲಾ ಚುನಾವಣಾಧಿಕಾರಿ ಡಾ. ಆರ್.ವಿಶಾಲ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಸಮ್ಮುಖದಲ್ಲಿ ಮತಯಂತ್ರಗಳನ್ನು ಕಾಲೇಜಿನ ಕೊಠಡಿಯಲ್ಲಿಟ್ಟು, ಸೀಜ್ ಮಾಡಲಾಯಿತು. ಮತ ಎಣಿಕೆ ನಡೆಯಲಿರುವ ಮೇ 16ರಂದು ಈ ಕೊಠಡಿ ಬಾಗಿಲು ತೆರೆಯಲಾಗುತ್ತದೆ.
ಸ್ವೀಪ್ ಪ್ರಯತ್ನ: ಇನ್ನೂ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಾಕಷ್ಟು ಯಶಸ್ವಿಯಾಗಿದೆ. ಸ್ವೀಪ್ ಕಾರ್ಯಕ್ರಮದಡಿ ವಿವಿಧೆಡೆ ಬೀದಿನಾಟಕ, ಕರಪತ್ರಗಳ ಹಂಚಿಕೆ, ರ್ಯಾಲಿ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತದಾನ ಅರಿವು ವಸ್ತು ಪ್ರದರ್ಶನದ ಮೂಲಕ ಸಹ ಗಮನ ಸೆಳೆಯಲಾಗಿತ್ತು. ಇದಲ್ಲದೇ ಸ್ವಯಂ ಸೇವಾ ಸಂಸ್ಥೆಗಳು ಸಹ ಮತದಾನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದು, ಕಳೆದ ಬಾರಿ ಶೇ.10 ಹೆಚ್ಚಿಗೆ ಮತ ಚಲಾವಣೆಯಾಗಿರುವುದು ಖುಷಿ ತಂದಿದೆ ಎಂದು ಚುನಾವಣಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

