ಲೆಕ್ಕ ಪಕ್ಕಾ ಆಗದೆ ಕಕ್ಕಾಬಿಕ್ಕಿ!
ಪಾ.ಶ್ರೀ.ಅನಂತರಾಮ್
ಕನ್ನಡಪ್ರಭ ವಾರ್ತೆ, ಕೋಲಾರ, ಏ.19
ಲೋಕಸಭಾ ಚುನಾವಣೆ ಮುಗಿದು ಮೂರು ದಿನ ಕಳೆದಿದ್ದರೂ ಮತದಾರ ಯಾರ ಪರವಾಗಿ ಬಟನ್ ಒತ್ತಿದ್ದಾನೆ ಎಂಬ ಗುಟ್ಟು ಗುಟ್ಟಾಗಿಯೇ ಉಳಿದಿದೆ.
ಏ.17ರ ರಾತ್ರಿಯಿಂದಲೇ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮುಖಂಡರು ವಿವಿಧ ಬೂತ್ಗಳಲ್ಲಿ ಆಗಿರುವ ಮತದಾನ ಪ್ರಮಾಣ ಮುಂದಿಟ್ಟುಕೊಂಡು ಲೆಕ್ಕಾಚಾರ ಮುಂದುವರೆಸಿದ್ದಾರೆ. ಆದರೆ, ಲೆಕ್ಕ ಪಕ್ಕಾ ಮಾಡಿಕೊಳ್ಳಲಾಗದೆ ತಲೆ ಕೆದರಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ
ಆರು ಬಾರಿ ಲೋಕಸಭಾ ಚುನಾವಣೆ ಎದುರಿಸಿರುವುದರ ಜೊತೆಗೆ ವಿಧಾನಸಭಾ, ವಿಧಾನಪರಿಷತ್,ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕೆಲಸ ಮಾಡಿರುವುದರಿಂದ ಕ್ಷೇತ್ರದ ಮತದಾರರ ಮನದಾಳವನ್ನು ಇಂಚಿಚು ಅರಿತಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಯಾರಿಗೆ ಒಲಿದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಲಾಗದೆ ಪೇಚಿಗೆ ಸಿಲುಕಿದ್ದಾರೆ.
ಜೆಡಿಎಸ್ ಹವಾ: ಜೆಡಿಎಸ್ ಅಭ್ಯರ್ಥಿ ಕೇಶವ ತಮ್ಮ ಅನುಕೂಲಕ್ಕಾಗಿ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಅವರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಬ್ಬರದಿಂದ ಪ್ರಚಾರ ನಡೆಸಿ ಹವಾ ಸೃಷ್ಟಿಸಿರುವುದು.
ಮುಖಂಡರಲ್ಲಿ ಕಳವಳ: ಜತೆಗೆ ಮಾಜಿ ಸಚಿವ ಶ್ರೀನಿವಾಸಗೌಡರು ಸಹ ತಮ್ಮ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಮತ್ತು ಕೆ. ಎಚ್.ಮುನಿಯಪ್ಪ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಪ್ರಬಲ ಹೋರಾಟ ನೀಡಿ ಕೋಲಾರ ನಗರದಲ್ಲಿ ಕಾಂಗ್ರೆಸ್ಗೆ ಓಟು ಕಡಿಮೆ ಆಗುವಂತೆ ಮಾಡಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷದ ಮುಖಂಡರು ಕಳವಳಕ್ಕೆ ಒಳಗಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನನಜೀರ್ ಅಹಮ್ಮದ್ ಸೋಲಿಗೆ ಬೇಕಾದಷ್ಟು ಕಾರಣಗಳಿವೆ. ಚುನಾವಣೆಗೆ ಸ್ಪರ್ಧಿಸಲು ನಜೀರ್ ಅವರಿಗೆ ಆಸಕ್ತಿ ಇರಲಿಲ್ಲ. ಮುನಿಯಪ್ಪ ನಜೀರ್ ಅವರ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದರಿಂದ ಇತರೆ ಅಕಾಂಕ್ಷಿಗಳ ಪರವಾಗಿ ಹೈಕಮಾಂಡ್ ಮುಂದೆ ವಕಲತ್ತು ವಹಿಸಲಾಗಿಲ್ಲ. ಕೋಲಾರ ಕ್ಷೇತ್ರದಿಂದ ಅಲ್ಪಸಂಖ್ಯಾತರಿಗೆ ಅವಕಾಶ ಸಿಕ್ಕಿ ಬಹಳ ವರ್ಷಗಳಾಗಿರುವುದರಿಂದ ಅಲ್ಪಸಂಖ್ಯಾತರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ಪಕ್ಷದ ಕೆಲ ಅಲ್ಪಸಂಖ್ಯಾತ ಮುಖಂಡರು ಒತ್ತಾಯಿಸಿ ಈ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆಗೆ ಚುನಾವಣೆ ಸಮೀಪಿಸಿತ್ತು.
ಚುನಾವಣೆಗೆ ಸ್ಪರ್ಧಿಸಲು ಒಲವು ತೋರದ ನಜೀರ್ ಒತ್ತಡಕ್ಕೆ ಮಣಿದು ಒಪ್ಪಿಗೆ ಸೂಚಿಸಿದರು.ನಾಮಪತ್ರ ಸಲ್ಲಿಸಿ ರಾಜ್ಯ ವಿವಿಧ ಕಡೆ ಪ್ರಚಾರಕ್ಕೆ ಹೋಗಿ ಕ್ಷೇತ್ರಕ್ಕೆ ಬರುವ ವೇಳೆಗೆ ಸಾಕಷ್ಟು ಬದಲಾವಣೆ ಆಗಿತ್ತು. ವರ್ತೂರ್ ಪ್ರಕಾಶ್ ಈ ಬಾರಿ ತನಗೆ ಅಲ್ಪಸಂಖ್ಯಾತರು ಕೈಕೊಡಬಹುದೆಂಬುದನ್ನು ಅರಿತು ಅಹಿಂದ ಮತಗಳನ್ನು ಬಟ್ಟಿಗೆ ಹಾಕಿಕೊಳ್ಳಲು ಬೇಕಾದ ಎಲ್ಲ ರೀತಿಯ ತಂತ್ರಗಾರಿಕೆ ಮಾಡಿ ಯಶಸ್ವಿಯಾದರು.
ನಜೀರ್ಗೆ ಮುಸ್ಲಿಮ್ ಸಮುದಾಯದ ಮತಗಳು ಸಾರಾಸಗಟಾಗಿ ಬೀಳುತ್ತವೆ ಎಂದು ನಂಬಿದ್ದರು. ಆದರೆ, ಜೆಡಿಎಸ್ ಈ ಮತ ಕೋಟೆಗೆ ಲಗ್ಗೆ ಹಾಕಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮುಸ್ಲಿಮ್ ಮತಗಳು ಬೀಳಲಿಲ್ಲ. ಜೊತೆಗೆ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳನ್ನು ಸೆಳೆಯಲು ನಜೀರ್ ಅವರಿಗೆ ಕಾಲಾವಕಾಶ ಸಿಗಲಿಲ್ಲ.
ಇದಕ್ಕಿಂತ ಮುಖ್ಯವಾಗಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕೋಲಾರದಲ್ಲಿ ಹೆಚ್ಚು ಪ್ರಚಾರ ಮಾಡಲು ಆಗಲಿಲ್ಲ. ಇದಕ್ಕೆ ಕಾರಣ, ಮುಳಬಾಗಿಲು ಇಲ್ಲವೇ ಕೆಜಿಎಫ್ನಿಂದ ತನ್ನ ಪುತ್ರಿ ರೂಪಾಶಶಿಧರ್ ಸ್ಪರ್ಧೆಗೆ ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದರು. ಹೈಕಮಾಂಡ್ ಆಸೆಗೆ ತಣ್ಣೀರು ಎರಚಿದ್ದರಿಂದ ಮುನಿಯಪ್ಪ ಬೇಸತ್ತಿದ್ದರು. ಹಾಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲಾಗಲಿಲ್ಲ. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸೋತವರೆಲ್ಲಾ ಮುನಿಯಪ್ಪ ಅವರೇ ಸೋಲಿಗೆ ಕಾರಣ ಎಂದು ನೇರವಾಗಿಯೇ ಆರೋಪಿಸತೊಡಗಿದರು. ನಜೀರ್ ಅಹಮ್ಮದ್ ಬಹಿರಂಗವಾಗಿ ಎಲ್ಲೂ ಮುನಿಯಪ್ಪ ವಿರುದ್ಧ ಆರೋಪ-ಟೀಕೆ ಮಾಡಲಿಲ್ಲ. ಮನಸ್ಸಿಗೆ ಆದ ನೋವನ್ನು ಅದುಮಿಕೊಂಡು ಎಲ್ಲಿ ತಿಳಿಸಬೇಕಾಗಿತ್ತೋ ಅಲ್ಲಿ ನಮ್ಮ ದೂರು ಮುಟ್ಟಿಸಿ ಸೈಲೆಂಟ್ ಆಗಿದ್ದರು.
ಮುಸ್ಲಿಮರ ಸಿಟ್ಟು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಗಿದು ಹೋದ ಘಟನೆಗಳನ್ನು ಮರೆತು ಬಿಡಿ, ಕಾಂಗ್ರೆಸ್ಗೆ ಮತ ನೀಡಿ ಎಂದು ನಜೀರ್ ತಮ್ಮ ಬೆಂಬಲಿಗರಿಗೆ ಹೇಳಿದರೂ ಕೋಲಾರದ ಮುಸ್ಲಿಂ ಮತದಾರರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಮುನಿಯಪ್ಪ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದ್ದ ತಪ್ಪಿಗೆ ನಜೀರ್ ಕೆಜಿಎಫ್ ಸೇರಿದಂತೆ ಕೆಲವು ಕಡೆ ಪ್ರಚಾರ ಮಾಡಿದರು.
ನಜೀರ್ ಈ ಬಾರಿ ಮುನಿಯಪ್ಪನವರನ್ನು ಸೋಲಿಸುವ ಉದ್ದೇಶವಿಟ್ಟುಕೊಂಡಿದ್ದಾರೆ ಎಂದು ಭಾವಿಸಿ ಚಿಂತಾಮಣಿಯ ಮಾಜಿ ಶಾಸಕ ಸುಧಾಕರ್ ಸೇರಿದಂತೆ ಅನೇಕರು ನಜೀರ್ ಅವರೊಂದಿಗೆ ಮಾತನಾಡಿ, ತಟಸ್ಥವಾಗಿರುವಂತೆ ಒತ್ತಾಯಿಸಿದರಾದರೂ ಯಾವುದೇ ಪ್ರತಿಕ್ರಿಯೆ ನೀಡದೆ ನಜೀರ್ ರಾಜ್ಯಾದ್ಯಂತ ಪಕ್ಷದ ಪರವಾಗಿ ಕೆಲಸ ಮಾಡಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೋಲಾರಕ್ಕೆ ಏ.9ರಂದು ಮುನಿಯಪ್ಪ ಪರವಾಗಿ ಪ್ರಚಾರಕ್ಕೆ ಬಂದಾಗ ನಜೀರ್ ಹಾಗೂ ಶಿಡ್ಲಘಟ್ಟದ ಮುನಿಯಪ್ಪ ಅವರನ್ನು ವೇದಿಕೆಯಲ್ಲಿ ಕೂರಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುನಿಯಪ್ಪ ಜಾಣತನ ಪ್ರದರ್ಶಿಸಿದರೂ ಒಳಗೊಳಗೆ ಮನಸ್ತಾಪ ಇದ್ದೇ ಇದೆ ಎಂದು ಆ ಪಕ್ಷದ ಮುಖಂಡರೇ ಹೇಳುತ್ತಾರೆ.
ಜೆಡಿಎಸ್ ಕೇಶವ ಆಶಾಭಾವ: ಕುಮಾರಸ್ವಾಮಿ ಅಲೆ ಜೊತೆಗೆ ತನ್ನ ಸಂಪನ್ಮೂಲ ಸಹಾಯದಿಂದ ಗೆಲ್ಲಬಹುದೆಂದು ಜೆಡಿಎಸ್ ಕೇಶವ ನಂಬಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಎಂ.ನಾರಾಯಣಸ್ವಾಮಿಯ ಅವರನ್ನು ಸೋಲಿಸಬೇಕೆಂಬ ಕಾರಣಕ್ಕೆ ಕೇಶವ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಮುನಿಯಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆಎಂಬ ಮಾತು ಸಹ ಕ್ಷೇತ್ರದಲ್ಲಿ ತೇಲಾಡುತ್ತಿದೆ.ಎಂ.ನಾರಾಯಣಸ್ವಾಮಿ ಸಹ ಮುನಿಯಪ್ಪರನ್ನು ಕಟುವಾಗಿ ವಿರೋಧಿಸುತ್ತಿರುವ ಮಾಜಿ ಶಾಸಕ ಸುಧಾಕರ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಶಿಡ್ಲಘಟ್ಟದ ವಿ.ಮುನಿಯಪ್ಪನವರ ಸಹಾಯ ನಂಬಿ ಚುನಾವಣೆ ಎದುರಿಸಿರುವುದರಿಂದ ಫಲಿತಾಂಶ ರೋಚಕ ಘಟ್ಟ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

