ಕೋಲಾರ

20 ನಿಮಿಷ 20 ಸುದ್ದಿ

Published On :

ಚಿಂತಾಮಣಿ: ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ತರಕಾರಿ ಅಂಗಡಿಗೆ ಬೆಂಕಿ ಇಟ್ಟ ಪರಿಣಾಮ ಸಾವಿರಾರು ರುಪಾಯಿ ಮೌಲ್ಯದ ತರಕಾರಿ ಸೇರಿದಂತೆ ಹಲವು ವಸ್ತುಗಳು ಬೆಂಕಿ ಆಹುತಿಗೆ ಬೂದಿಯಾಗಿ ನಷ್ಟ ಉಂಟಾಗಿದೆ ಎಂದು ನಷ್ಟ ಹೊಂದಿದ ಮಾಲೀಕ ಕೆ.ಎನ್. ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.ನಗರದ ಐಡಿಎಂಸಿ ಮಾರುಕಟ್ಟೆ ಆವರಣದಲ್ಲಿ ಇರುವ ತಾಲೂಕಿನ ಕಾಗತಿ ಗ್ರಾಮದ ಕೆ.ಎನ್.ಮಂಜುನಾಥ್ ಎಂಬುವರ ತರಕಾರಿ ಅಂಗಡಿಗೆ ಶುಕ್ರವಾರ ರಾತ್ರಿ ಹಲವು ಕಿಡಿಗೇಡಿಗಳು ಸೇರಿ ಕ್ಷುಲ್ಲಕ ಕಾರಣಕ್ಕಾಗಿ ತರಕಾರಿ ಅಂಗಡಿಗೆ ಬೆಂಕಿ ಇಟ್ಟ ಪರಿಣಾಮ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಗಲ್ಲಾಪೆಟ್ಟಿಗೆಯಲ್ಲಿರುವ ನಗದು ಹಣ ಸೇರಿದಂತೆ ಸುಮಾರು ರು.20 ಸಾವಿರ ಮೌಲ್ಯದ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ. ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಇಟ್ಟಿರುವುದಾಗಿ ಕೆ.ಎನ್.ಮಂಜುನಾಥ್ ಪೊಲೀಸರ ದೂರಿನಲ್ಲಿ ತಿಳಿಸಿದ್ದಾರೆ.

ವಿಶ್ರಾಂತಿಗೆ ಮೊರೆ ಹೋದ ಬಿಜೆಪಿಯ ನಾರಾಯಣಸ್ವಾಮಿ
ಬಂಗಾರಪೇಟೆ: ಕಳೆದೊಂದು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೋಲಾರ ಲೋಕಸಭಾ ಕ್ಷೇತ್ರವಿಡಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಶನಿವಾರ ವಿಶ್ರಾಂತ ಮನಸ್ಥಿತಿಯಲ್ಲಿದ್ದರು. ಮತದಾನ ಬಳಿಕ ನಾರಾಯಣಸ್ವಾಮಿ ತಮ್ಮ ಸ್ವಗ್ರಾಮ ಕ್ಯಾಸಂಬಳ್ಳಿ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಶನಿವಾರ ಪಟ್ಟಣದ ತಮ್ಮ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆಯಲ್ಲಿ ತಲ್ಲೀನರಾಗಿದ್ದರು. ಬಂಗಾರಪೇಟೆ ತಾಲೂಕು ಅಧ್ಯಕ್ಷ ಮಾಕಂರ್ಡೇಗೌಡ, ಮುಖಂಡರಾದ ಪ್ರಭಾಕರ್, ಸೀತಾರಾಮಪ್ಪ, ಕಣಿಂಬೆಲೆ ಚಿನ್ನಪ್ಪ, ಜುಂಜನಹಳ್ಳಿ ನಾರಾಯಣಸ್ವಾಮಿ, ಶ್ರೀನಿವಾಸಗೌಡ ಮತ್ತಿತರರ ಜತೆ ಲೋಕಾಭಿರಾಮ ಮಾತುಕತೆಯೊಂದಿಗೆ ಮತದಾನದ ಪ್ರಮಾಣದ ಲೆಕ್ಕಾಚಾರದ ತರ್ಕಗಳಲ್ಲಿ ತೊಡಗಿದ್ದರು. ಈ ಬಾರಿ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆಯುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಚಾರ್ಯ ತುಳಸಿ ಜನ್ಮದಿನ ಜನಾಂದೋಲನ ಅಭಿಯಾನ
ಕೆಜಿಎಫ್: ಜೈನ್‌ಗುರು ಆಚಾರ್ಯ ತುಳಸಿ ಜನ್ಮಶತಾಬ್ದಿ ಸಮಾರಂಭ ಅಂಗವಾಗಿ ಅಣುವ್ರತ ಸಂಕಲ್ಪ ಜನಾಂದೋಲನ ಅಭಿಯಾನ ಕಾರ್ಯಕ್ರಮವನ್ನು ನಗರದ ತೇರಾಪಂಥ್ ಜೈನ್ ಮಂದಿರದಲ್ಲಿ ಆಯೋಜಿಸಲಾಗಿತ್ತು. ಜೈನ್ಗುರು ತುಳಸಿ ಆಚಾರ್ಯ ಸಂಕಲ್ಪದ ಮುಖ್ಯ ಬೋಧಕರಾದ ಗುರುಜೀ ಸಾರ್ಮಿನಿ ಕಾಂಚನ್ ಪ್ರಗ್‌ಯಾಂಜಿ ಮಾತನಾಡಿ, ಪ್ರಪಂಚದಲ್ಲಿ ಯಾವುದೇ ಸಮುದಾಯ ಧರ್ಮ, ಜಾತಿ ಇರಲಿ ಮೊದಲು ನಾವು ಮನುಷ್ಯರು ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಆನಂತರವಷ್ಟೆ ನಾವು ಹಿಂದುಗಳು, ಕ್ರೈಸ್ತರು, ಮುಸಲ್ಮಾನರು ಎಂದು ಗುರುತಿಸಿಕೊಳ್ಳಬೇಕು ಎಂಬುದು ಆಚಾರ್ಯ ತುಳಸಿ ಅವರ ಬೋಧನೆಯಾಗಿದೆ ಎಂದರು. ಧರ್ಮಸಹಿಷ್ಣುತೆ ಒಪ್ಪಬೇಕು. ವ್ಯಾಪಾರ-ವ್ಯವಹಾರದಲ್ಲಿ ಪ್ರಾಮಾಣಿಕವಾಗಿರಬೇಕು ಎಂದು ಕಿವಿಮಾತು ಹೇಳಿದರು. ನಗರದ ತೇರಾಪಂಥ್ ಜೈನ್ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು

ತುಳಸಿ ಜನ್ಮಶತಾಬ್ದಿ...
ಕೆಜಿಎಫ್ ಪಟ್ಟಣದ ತೇರಾಪಂಥ್ ಜೈನ್ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ಮಿನಿ ಕಾಂಚನ್ ಪ್ರಗ್‌ಯಾಂಜಿ ಮತ್ತಿತರರು ಮಾತನಾಡಿದರು.

ವಿದ್ಯಾರಣ್ಯ ಸಂಸ್ಥೆಯಲ್ಲಿ ಸಮುದಾಯ ರೇಡಿಯೋ
ಚಿಕ್ಕಬಳ್ಳಾಪುರ: ಇಲ್ಲಿನ ಆಶಾಕಿರಣ ಶಿಕ್ಷಣ ಮತ್ತು ಪುನ-ಶ್ಚೇತನ ಸಂಸ್ಥೆಯಲ್ಲಿ ಸಮುದಾಯ ರೇಡಿಯೋ ನಿಲಯವನ್ನು ವಿದ್ಯಾರಣ್ಯ ಸಂಸ್ಥೆಯಿಂದ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮುದಾಯ ರೇಡಿಯೋ ತಜ್ಞ ಎಂ.ಅಬ್ದುಲ್ ರೆಹಮಾನ್ ಪಾಷ, ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಉಪೇಕ್ಷಿತವಾಗುವ ಮಹಿಳೆ, ದಲಿತ, ಹಿಂದುಳಿದ ವರ್ಗ, ಬಡವರ್ಗದ ಕ್ಷೀಣ ಧ್ವನಿಗಳಿಗೆ ಸಮೂಹ ಮಾಧ್ಯಮದ ಬಲವನ್ನು ನೀಡುವುದೇ ಸಮುದಾಯ ರೇಡಿಯೋ. ಅಂತಹ ಒಂದು ಸಮುದಾಯ ರೇಡಿಯೋ ನಿಲಯ ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು. ಜನರು ತಮ್ಮ ತಮ್ಮ ಭಾಷೆಯಲ್ಲಿಯೇ ತಮ್ಮ ಸಮಸ್ಯೆಗಳ ಕುರಿತು ಮಾತನಾಡಿ ಪರಿಹಾರಗಳನ್ನು ಕಂಡುಕೊಳ್ಳಲು ಸಮುದಾಯ ರೇಡಿಯೋ ತುಂಬಾ ಸಹಕಾರಿ ಎಂದರು. ಆಶಾಕಿರಣದ ಪ್ರಧಾನ ಕಾರ್ಯದರ್ಶಿ ಪಿ.ಎಂ.ನಾಗರಾಜಯ್ಯ, ಡಿ.ಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.

 ಉದ್ಘಾಟನೆ...
ಕೋಲಾರದ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗವುಂದಿರದಲ್ಲಿ ನಡೆದ 81ನೇ ವರ್ಗದ ಉದ್ಘಾಟನೆಯನ್ನು ಮುಖ್ಯ ಶಿಕ್ಷಕ ಬಾಲಾಜಿ ಮತ್ತಿತರರು ಉದ್ಘಾಟಿಸಿದರು.

ಇಂದು ಕೊತ್ತನೂರಿನಲ್ಲಿ ದೊಡ್ಡಜಾತ್ರೆ ಮಹೋತ್ಸವ
ಕೋಲಾರ: ಸಿದ್ದೇಶ್ವರ, ಬೀರೇಶ್ವರ, ಭತ್ತೇಶ್ವರ, ಬೆಳ್ಳೂರೇಶ್ವರ, ಬಿಡದೀಶ್ವರಸ್ವಾಮಿ ದೇವಾಲಯದ ಮನೆ ದೇವರ ದೊಡ್ಡ ಜಾತ್ರಾ ಮಹೋತ್ಸವವನ್ನು ತಾಲೂಕಿನ ಅರಾಬಿಕೊತ್ತನೂರಿನಲ್ಲಿ ಏ.20ರಿಂದ 21ರವರೆಗೆ ಏರ್ಪಡಿಸಲಾಗಿದೆ ಎಂದು ಗ್ರಾಮದ ಮುಖಂಡ ಕೆ.ಟಿ.ಅಮರ್‌ನಾಥ್ ತಿಳಿಸಿದ್ದಾರೆ.
ಕಾಗಿನೆಲೆ ಕನಕಗುರುಪೀಠ ಮಹಾಸಂಸ್ಥಾನ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಬೆಂಗಳೂರು ಕನಕಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದ್ದು, ಚಿಂತಾಮಣಿ ತಾಲೂಕಿನ ಚೆನ್ನಕೇಶವಪುರ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಕುಮಾರ್ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿವೆ. ಏ.20 ರಂದು ಬೆಳಿಗ್ಗೆ ಬಸವನ ಸಮೇತ ಗುರುಗಳ ಆಹ್ವಾನ, ಗಂಗಾಪೂಜೆ, ಸಂಜೆ ಕೂಟ ಸೇರುವುದು, 21ರಂದು ಸೋಮವಾರ ಬೆಳಿಗ್ಗೆ 6 ಕ್ಕೆ ನಾಗದೇವತೆಗಳಿಗೆ ತನಿ ಎರೆಯುವುದು, ಹಿರಿಯರಿಗೆ ಬಟ್ಟೆ ಇಡುವುದು, ವೀರಗಾರರಿಗೆ ಗುಡಿಪೂಜೆ ನಡೆಯಲಿದೆ.

ಯಾವುದೇ ಅಕ್ರಮ ನಡೆದಿಲ್ಲ: ಜಿಲ್ಲಾಧಿಕಾರಿ ಡಿ.ಕೆ.ರವಿ
ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರಿಂದ ಮತದಾನ ದಿನ ಯಾವುದೇ ಅಕ್ರಮ ನಡೆದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ಸ್ಪಷ್ಟಪಡಿಸಿದ್ದಾರೆ. ಏ.17ರಂದು ಹಾರೋಹಳ್ಳಿ ಮತಗಟ್ಟೆಗೆ ಮತದಾನ ಮಾಡಲು ಕೆ.ಎಚ್.ಮುನಿಯಪ್ಪ ಹೋಗಿದ್ದಾಗ ಮತಯಂತ್ರ ಮತಗಟ್ಟೆ ಅಧಿಕಾರಿ ಪಕ್ಕದಲ್ಲಿತ್ತು. ಜೊತೆಗೆ ಬೆಳಕು ಇಲ್ಲವೆಂದು ಅಭ್ಯರ್ಥಿ ಹೇಳಿದ್ದರಿಂದ ಮತಯಂತ್ರವಿದ್ದ ಟೇಬಲ್ ಸೇರಿಸಲಾಗಿಯೇ ಹೊರತು ಬೇರೆ ಯಾವುದೇ ಅಕ್ರಮ ನಡೆದಿಲ್ಲ. ಮತಗಟ್ಟೆ ಅಧಿಕಾರಿಯು ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಅಧಿಕಾರಿ ಬದಲಾಯಿಸಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಮತದಾನದಂದು ಕೋಲಾರ ಸೇರಿದಂತೆ ಯಾವುದೇ ಕಡೆಗಳಲ್ಲೂ ಅಕ್ರಮ ನಡೆದಿಲ್ಲ,ಇದಕ್ಕೆ ನಾವು ಕೈಗೊಂಡ ಕಟ್ಟುನಿಟ್ಟಿನ ಕ್ರಮ ಕಾರಣ ಎಂದಿದ್ದಾರೆ.

ಜನಸೇವಾ ಸಮಿತಿಯಿಂದ ಅಂಬೇಡ್ಕರ್ ಜಯಂತಿ
ಕೋಲಾರ: ಜಿಲ್ಲಾ ಜನಸೇವಾ ಸಮಿತಿಯಿಂದ ಖಾದ್ರಿಪುರದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮ ದಿನೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಇದೇ ವೇಳೆ ಗ್ರಾಮದ ಎನ್.ಮುನಿರಾಜು ಮಾತನಾಡಿ, ಅಂಬೇಡ್ಕರ್ ತತ್ವ-ಚಿಂತನೆಗಳ ಅನುಪಾಲನೆಯಾಗದಿರುವುದೇ ವಿವಿಧ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಜನಸೇವಾ ಸಮಿತಿ ಅಧ್ಯಕ್ಷ ವೈ.ವೆಂಕಟಚಲಾಪತಿ,  ಗ್ರಾಪಂ ಸದಸ್ಯ ಎಂ.ರಾಜೇಶ್, ಭಾರತೀಯ ದಲಿತ ಸೇನೆಯ ದಲಿತ ನಾರಾಯಣಸ್ವಾಮಿ, ಶಿಕ್ಷಕ ವಿ.ನಾಗರಾಜ್, ರಾಜಣ್ಣ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

'ಸಾರ್ವಜನಿಕ ಸೇವೆಯಲ್ಲಿ ಸಾರ್ಥಕತೆ ಕಾಣುವಂತಾಗಲಿ'
ಕೋಲಾರ: ಸಾರ್ವಜನಿಕರ ಸೇವೆಯಲ್ಲಿ ತೃಪ್ತರಾಗಬೇಕು. ಸೇವೆಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕತೆ, ತೃಪ್ತಿ ಕಾಣಬಹುದು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ್‌ನೌಕರರಿಗೆ ಕಿವಿಮಾತು ಹೇಳಿದರು. ಇಲ್ಲಿನ ಸರ್ಕಾರಿ ನೌಕರರ ಭವವದಲ್ಲಿ ಇತ್ತೀಚೆಗೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಲಿಂಗದೇವರು ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿಗೆ ಪೂರಕವಾಗಿ ದುಡಿಯುತ್ತಿರುವ ನೌಕರರು ತಮ್ಮ ಆಡಳಿತಾವಧಿಯಲ್ಲಿ ಪರಿಪೂರ್ಣವಾದ ಸಹಕಾರ ಜನ ಸಾಮಾನ್ಯರಿಗೆ ನೀಡುವಂತಾಗಬೇಕೆಂದರು. ಸಮಿತಿರಾಜ್ಯ ಮುಖಂಡ ಆರ್. ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಮುನಿರಾಜು ಸಂಘಟನೆಯೇ ಆಸ್ತಿ ಎಂಬಂತೆ ಇದ್ದ ಲಿಂಗದೇವರ ನಿಧನದಿಂದ ತೀರ ನಷ್ಟವಾಗಿದೆ ಎಂದರು. ಸಮಿತಿ ಅಧ್ಯಕ್ಷ ಜಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ...
ಕೋಲಾರದ ತೊರದೇವಂಡಹಳ್ಳಿಯ ಸಿ.ಬೈರೇಗೌಡ ತಾಂತ್ರಿಕ ವಿದ್ಯಾಲಯ ವಾರ್ಷಿಕೋತ್ಸವ ಕ್ರಾರ್ಯಕ್ರಮದಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡರನ್ನು ಸನ್ಮಾನಿಸಲಾಯಿತು.

ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ತರಬೇತಿ ಶಿಬಿರ
ಚಿಕ್ಕಬಳ್ಳಾಪುರ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ವತಿಯಿಂದ ಪರಿಶಿಷ್ಟ ಪಂಗಡದ (ಎಸ್‌ಟಿ.) ನಿರುದ್ಯೋಗಿ ಯುವಕರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಭಾರಿ ವಾಹನ ಹಾಗೂ ಲಘು ವಾಹನ ತರಬೇತಿ ನೀಡಲಾಗುತ್ತಿದೆ.ಭಾರಿ ವಾಹನ ತರಬೇತಿಗಾಗಿ 8ನೇ ತರಗತಿಯಲ್ಲಿ ಉತ್ತೀರ್ಣಗೊಂಡು ಲಘು ವಾಹನ ಪರವಾನಗಿ ಜೊತೆ ಬ್ಯಾಡ್ಜ್ ಹೊಂದಿರಬೇಕು ಮತ್ತು ಲಘು ವಾಹನ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ (ನಿ), 2ನೇ ಮಹಡಿ, ಜಿಲ್ಲಾಡಳಿತ ಭವನ, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರದ ಕಚೇರಿಗೆ ಪೂರ್ಣ ಮಾಹಿತಿಯೊಂದಿಗೆ (ದಾಖಲಾತಿಗಳು) ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08156-277161 ಸಂಪರ್ಕಿಸಬಹುದು.

ತಿಂಗಳ ಹುಣ್ಣಿಮೆ ಪ್ರಯುಕ್ತ ಭಜನೆ, ಕೀರ್ತನೆ, ವಚನಾಮೃತ
ಚಿಂತಾಮಣಿ: ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಪಂಗೆ ಸೇರಿದ ಬಡಗವಾರ ಹಳ್ಳಿಯ ಮುನೇಶ್ವರಸ್ವಾಮಿ ದೇವಾಲಯದಲ್ಲಿ ತಿಂಗಳ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹವು ರಾತ್ರಿಯಿಡೀ ಭಜನೆ, ಕೀರ್ತನೆ ಹಾಗೂ ತತ್ವಪದಗಳನ್ನು ಭಕ್ತಿ ಪೂರಕವಾಗಿ ಹಾಡುವುದರ ಮೂಲಕ ಚೈತ್ರ ಹುಣ್ಣಿಮೆಗೆ ಭಕ್ತಿ ಸಿಂಚನಗೈದರು. ದೇಗುಲ ಧರ್ಮದರ್ಶಿ ಕಾಗತಿ ವಿ.ವೆಂಕಟರತ್ನಂ ಮಾತನಾಡಿ, ಜನರ ಭಾವನೆಗಳು ಹುಣ್ಣಿಮೆಯ ಬೆಳಕಿನಂತೆ ನಿಶ್ಕಲ್ಮಷವಾಗಿ ಬೆಳಗಲಿ ಎಂದು ಹಾರೈಸಿದರು. ಎಲ್‌ಐಸಿ ಶಂಕರರೆಡ್ಡಿ ತತ್ವಪದಗಳನ್ನು ಹಾಡಿದರು.

ಗುಡ್‌ಫ್ರೈಡೇ: ಸಿಎಸ್‌ಐ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ
ಚಿಕ್ಕಬಳ್ಳಾಪುರ: ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು ಎಂಬ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದ ಕರುಣಾಮಯಿ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ನೆನಪಿಗೆ ಆಚರಿಸುವ ಗುಡ್‌ಫ್ರೈಡೇ ಧಾರ್ಮಿಕ ಕಾರ್ಯಕ್ರಮ ಪ್ರಯುಕ್ತ ನಗರದ ಬಿ.ಬಿ.ರಸ್ತೆಯ ಸಿಎಸ್‌ಐ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಕೈಗೊಳ್ಳಲಾಯಿತು.
ವಿಶ್ವಚರಿತ್ರೆಯಲ್ಲಿ ಯೇಸುಕ್ರಿಸ್ತನು ಮಾನವರೆಲ್ಲರ ಪಾಪ ಪರಿಹಾರಕ್ಕಾಗಿ ಶ್ರಮಿಸಿದ. ಇಂತಹ ವ್ಯಕ್ತಿಯನ್ನು ಶಿಲುಬೆಗೆ ಹಾಕಿದ್ದು ಕರಾಳ ಘಟನೆಯಾಗಿದೆ. ಲೋಕ ಚರಿತ್ರೆಯಲ್ಲಿಯ ಪುಟಗಳಲ್ಲಿ ಆ ದಿನ ಕತ್ತಲೆಯ ದಿನವೆಂದು ಕರೆಯಲ್ಪಟ್ಟಿದೆ. ಕತ್ತಲೆಯಿಂದ ಬೆಳಕು ಬಂದಂತೆ, ಕೆಸರಿನಲ್ಲಿ ಕಮಲ ಅರಳಿದಂತೆ ಮಾನವನ ಭಯಾನಕ ಪಾಪದ ಬಂಧನದ ನಿಮಿತ್ತ ಕ್ರಿಸ್ತ ತಮ್ಮನ್ನು ಶಿಲುಬೆಗೆ ಸಮರ್ಪಿಸಿಕೊಂಡು ನಿತ್ಯ ಜೀವದ ರಕ್ಷಣೆಯ ಬಾಗಿಲು ತೆರೆದಿದ್ದಾರೆ ಎಂದು ಹೇಳಿದರು.ರವಿಕುಮಾರ್, ಡಿ.ಅರುಣ್ ಕುಮಾರ್,ಪ್ರವೀಣ್, ವಂಶಿ, ನವೀನ್ ಭಾಗವಹಿಸಿದ್ದರು.

ವಿವಾಹಿತೆ, ಇಬ್ಬರು ಬಾಲಕಿಯರ ನಾಪತ್ತೆ
ಬಾಗೇಪಲ್ಲಿ: ವಿವಾಹಿತ ಮಹಿಳೆ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಾಂತಿ ನಿಕೇತನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಕ್ಕ ತಂಗಿಯರಾದ ಶೃತಿ(17) ಮತ್ತು ಶ್ರಾವಣಿ (16) ತಮ್ಮ ಸ್ನೇಹಿತೆ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಇದುವರೆಗೂ ಬಂದಿಲ್ಲ ಎಂದು ಪೋಷಕರು ದೂರು ನೀಡಿದ್ದಾರೆ. ವಿವಾಹಿತ ಮಹಿಳೆ ಸ್ವಾತಿ ಎಂಬುವರು ನಾಪತ್ತೆಯಾಗಿದ್ದು, ಸ್ವಾತಿಗೆ ಒಂಬತ್ತು ತಿಂಗಳ ಮಗು ಇದೆ. ಈ ಸಂಬಂಧ ಶಾಂತಿನಿಕೇತನ ಶಾಲೆಯ ದೈಹಿಕ ಶಿಕ್ಷಕ ಸಂಪತ್‌ಕುಮಾರ್ ಹಾಗೂ ವಿದ್ಯಾರ್ಥಿಗಳಾದ ಆಜೇಯ್, ಹರಿಸಾಯಿನಾರಾಯಣ,ಅರುಣ್ ಅವರ ಮೇಲೆ ಅನುಮಾನವಿದೆ ಎಂದು ಬಾಲಕಿ ತಂದೆ ವೆಂಕಟರಾಮಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪಿಎಸ್‌ಐ ಮುನಿರೆಡ್ಡಿ. ವಿವಾಹಿತೆ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕಿಯರ ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಉಳುವ ಯೋಗಿಯ ನೋಡಿಲ್ಲಿ...
ಈಚೆಗೆ ಸುರಿದ ಅಶ್ವಿನಿ ಮಳೆಗೆ ಭೂಮಿ ಹದಗೊಂಡಿದ್ದು ರೈತ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾನೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಲ್ಲಲ್ಲಿ ಚದುರಿದಂತೆ ಹದವಾದ ಮಳೆಯಾಗಿದ್ದು, ರೈತರು ಬೀಳು ಜಮೀನುಗಳನ್ನು ಬೇಸಾಯ ಮಾಡಿ ಬೀಜಬಿತ್ತಲು ಹದ ಮಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.