ತೊಟ್ಲಿಯಲ್ಲಿ ನೀರು ಭಾರಿ ತುಟ್ಟಿ!
ಕೋಲಾರ: ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಜನತೆ ಒಂದು ಬಂದಿಗೆ ಕುಡಿಯುವ ನೀರಿಗೆ ರು.3ರಿಂದ 5ಕೊಟ್ಟು ಖರೀದಿಸುವಂತಾಗಿದೆ.
ಚುನಾವಣೆ ಸಂದರ್ಭದಲ್ಲಿ ಮತಹಾಕಿ ನೀರು ಕೊಡ್ತೀವಿ ಎಂದು ಹೇಳಿದ್ದ ರಾಜಕೀಯ ಪಕ್ಷಗಳ ಮುಖಂಡರು, ಈಗ ಸಮಸ್ಯೆ ನಿವಾರಣೆಗೆ ಗಮನ ಹರಿಸಿಲ್ಲ.
ತೊಟ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, 350ಕ್ಕೂ ಹೆಚ್ಚು ಮನೆಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕುಡಿಯುವ ನೀರಿಗೆ ಜನತೆ ಕೊಳವೆ ಬಾವಿಯನ್ನು ಆಶ್ರಯಿಸುತ್ತಿದ್ದು ಅಂತರ್ಜಲ ಕುಸಿತದಿಂದಾಗಿ ಪರದಾಡುತ್ತಿದ್ದಾರೆ.
ಅಧಿಕಾರಿಗಳು ಕೆಲವು ತಿಂಗಳ ಹಿಂದೆ ಮೂರು ಕೊಳವೆ ಬಾವಿ ಕೊರೆಸಿದ್ದಾರೆ. ಈ ಪೈಕಿ ಎರಡು ಕೊಳವೆ ಬಾವಿಯಲ್ಲಿ ನೀರು ಒತ್ತಿದೆ. ಉಳಿದ ಒಂದು ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದರೂ ಅಧಿಕಾರಿಗಳು ಚುನಾವಣೆ ಗುಂಗಿನಿಂದ ಎಚ್ಚರಗೊಳ್ಳದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ಗ್ರಾಮದಲ್ಲಿ ಬಹುತೇಕರು ಕೂಲಿ ಕಾರ್ಮಿಕರಿದ್ದಾರೆ. ನೀರಿಗಾಗಿ ಕೆಲಸ ಕಾರ್ಯ ಬಿಟ್ಟು ಊರಿನಾಚೆಯಿಂದ ನೀರು ತರಲು ಸೈಕಲ್, ಮೋಟಾರ್ ಬೈಕ್, ಎತ್ತಿನಗಾಡಿಯನ್ನು ಅವಲಂಬಿಸಿದ್ದಾರೆ. ನೀರಿಗಾಗಿ ಗಂಟೆ ಕಟ್ಟಲೆ ಕಾಯಬೇಕು. ಕರೆಂ ಟ್ ಕಾಟದಿಂದಾಗಿ ಜನತೆ ರೋಸಿ ಹೋಗಿದ್ದಾರೆ.
ಜನತೆಯ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಎತ್ತಿನ ಬಂಡಿಯಲ್ಲಿ ನೀರು ತಂದು ಒಂದು ಬಿಂದಿಗೆಗೆ ರು. 3 ರಿಂದ 5ರು. ಗೆ ಮಾರಾಟ ಮಾಡುತ್ತಿದ್ದಾರೆ ಹಣ ಕೊಟ್ಟರೂ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದೆ
ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಮದ್ಯ ಭಾಗದಲ್ಲಿ ಕಲ್ಯಾಣಿಯೊಂದಿದೆ. ಒಂದು ಕಾಲದಲ್ಲಿ ಈ ಕಲ್ಯಾಣಿಯಲ್ಲಿ ಸಿಗುವ ನೀರು ಜನರ ಪಾಲಿಗೆ ವರದಾನವಾಗಿತ್ತು. ಜನ-ಜಾನುವಾರುಗಳು ಕಲ್ಯಾಣಿಯ ನೀರನ್ನು ಆಶ್ರಯಿಸಿದ್ದರು. ಊರಿನ ಕಲ್ಯಾಣಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಮಳೆ ಅಭಾವದಿಂದ ಕಲ್ಯಾಣಿಯಲ್ಲಿ ನೀರಿನ ಸಂಗ್ರಹಣೆಯಾಗಿಲ್ಲ. ಅಲ್ಪಸ್ವಲ್ಪ ಇರುವ ನೀರು ಕಲುಷಿತವಾಗಿದೆ. ಜನ ನೀರು ಬಳಕೆ ಮಾಡುತ್ತಿಲ್ಲ, ಕುರಿ, ಮೇಕೆಗಳು ಸಹ ಈ ನೀರು ಕುಡಿಯದಂತಾಗಿದೆ.
ಚುನಾವಣಾ ಸಂದರ್ಭದಲ್ಲಿ ಎಲ್ಲ ಪಕ್ಷಗಳ ಮುಖಂಡರು ಪ್ರಚಾರಕ್ಕೆ ಬಂದಾಗ ನೀರು ಕೊಡುವುದಾಗಿ ಹೇಳಿದ್ದರು. ಆದರೆ ಮತದಾನ ಮುಗಿದಿದ್ದರೂ ನೀರು ಕೊಟ್ಟಿಲ್ಲವೆಂದು ಜನತೆ ಆರೋಪಿಸಿದ್ದಾರೆ. ಗ್ರಾಮದ ಜನರ ಕಷ್ಟ ಅರಿತು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನೀರಿನ ವ್ಯವಸ್ಥೆ ಮಾಡದಿದ್ದರೆ ಖಾಲಿ ಕೊಡಗಳ ಸದ್ದು ಹೆಚ್ಚಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

