ಕನಕ ಬಾಸ್ಕೆಟ್ ಬಾಲ್ ಸಂಸ್ಥೆಯ ಸಾರ್ಥಕ ಸೇವೆ
ಮಕ್ಕಳ ಬೇಸಿಗೆ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಟಿ ಪ್ರತಿದಿನ ಉಚಿತವಾಗಿ ಬಿಸಿ ಹಾಲು, ಬಿಸ್ಕತ್, ಮೊಟ್ಟೆ, ಬಾಳೆ ಹಣ್ಣು ವಿತರಣೆ
-ಪಾ.ಶ್ರೀ. ಅನಂತರಾಮ್
ಕೋಲಾರ: ನಗರದ ಶ್ರೀ ಕನಕ ಬಾಸ್ಕೆಟ್ ಬಾಲ್ ಸಂಸ್ಥೆ ಕಳೆದ ಆರವತ್ತು ವರ್ಷಗಳಿಂದ ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುವ ಮೂಲಕ ಕ್ರೀಡಾಭಿಮಾನಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ.
1954ರಲ್ಲಿ ಶ್ರೀ ಕನಕ ಬಾಸ್ಕೆಟ್ ಬಾಲ್ ಸಂಸ್ಥೆ ಪ್ರಾರಂಭವಾಯಿತು. ನಗರದ ಮಾಜಿ ಕೌನ್ಸಿಲರ್ಗಳಾದ ಮುನಿನಾರಾಯಣ, ಕೆ. ರಾಮಯ್ಯ, ನಾರಾಯಣ್ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ ಬಾಸ್ಕೆಟ್ ಬಾಲ್ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರಕ್ಕೆ ಅನೇಕ ಆಟಗಾರರನ್ನು ಕೊಡುಗೆಯಾಗಿ ನೀಡಿದೆ.
ಈ ಸಂಸ್ಥೆಯಲ್ಲಿ ಬಾಸ್ಕೆಟ್ ಬಾಲ್ ಆಟ ಕಲಿತ ಗುರುಪ್ರಸಾದ್, ಸುಂದರರಾಜ್, ರಘುವೀರ್, ಗಿರೀಶ್, ರಾಕೇಶ್ ಇತರರು ಕೋಲಾರ ಜಿಲ್ಲೆಗೆ ಕೀರ್ತಿ ತಂದುಕೊಟ್ಟವರಾಗಿದ್ದಾರೆ.
ಪ್ರಸ್ತುತ ಸಂಸ್ಥೆಯನ್ನು ಪಿ. ಗೋಪಾಲ್, ಎಲ್.ಎ. ಮಂಜುನಾಥ್, ಅಂಚೆ ಅಶ್ವತ್ಥ್, ಮುದ್ದಪ್ಪ, ತ್ಯಾಗರಾಜ್, ನಟರಾಜು, ಗುರುಪ್ರಸಾದ್, ತ್ಯಾಗರಾಜ್, ಜಯಪ್ರಕಾಶ್ ನಾರಾಯಣ್, ಎನ್. ಗೋವಿಂದರಾಜು ಇತರರು ಮುನ್ನಡೆಸುತ್ತಿದ್ದಾರೆ.
28ನೇ ಬೇಸಿಗೆ ಶಿಬಿರ: ಸಂಸ್ಥೆಯ ಕಾರ್ಯದರ್ಶಿಯಾಗಿರುವ ಅಂಚೆ ಅಶ್ವತ್ಥ್ ಹಾಗೂ ಇತರ ಪದಾಧಿಕಾರಿಗಳ ಇಚ್ಛಾಶಕ್ತಿ ಹಾಗೂ ಮಾರ್ಗದರ್ಶನದಿಂದಾಗಿ ಕಳೆದ 28 ವರ್ಷಗಳಿಂದ ನಿರಂತರವಾಗಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಯುತ್ತಿದೆ. ಮುಂಚೆ ಬಾಸ್ಕೆಟ್ ಬಾಲ್ ಅಂಗಳ ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನ ಪಕ್ಕದಲ್ಲಿತ್ತು. ಈಗ ಅಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ.
ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಮುಂಚಿತವಾಗಿಯೇ ಕನಕ ಬಾಸ್ಕೆಟ್ ಬಾಲ್ ಸಂಸ್ಥೆಯವರು ಕ್ರೀಡಾಪಟುಗಳಿಗೆ ಮತ್ತು ಕಲಿಯುವ ಮಕ್ಕಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ನಗರದ ಕಠಾರಿ ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಾಸ್ಕೆಟ್ ಬಾಲ್ ಅಂಗಳ(ಮೈದಾನ)ವನ್ನು ಮಾಡಿಸಿ ಪ್ರತಿನಿತ್ಯ ಆಟಾಭ್ಯಾಸದ ಜೊತೆಗೆ ಪ್ರತಿವರ್ಷ ಬೇಸಿಗೆಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಕ್ರೀಡಾಸಕ್ತಿಯ ಜೊತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ತರಬೇತಿ ನೀಡಲಾಗುತ್ತಿದೆ.
ಪ್ರಾರಂಭದಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇತ್ತು. ಈಗ ಸುಮಾರು 78ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಬೆಳಿಗ್ಗೆ 6.30ಕ್ಕೆ ಬಂದು ಸುಮಾರು ಎರಡುವರೆ ಗಂಟೆಗಳ ಕಾಲ ಆಟಾಭ್ಯಾಸ ಮಾಡುತ್ತಿದ್ದಾರೆ.
ಶಿಬಿರಕ್ಕೆ ಬರುವ ಮಕ್ಕಳಿಗೆ ಪ್ರತಿನಿತ್ಯ ಕೋಚಿಮುಲ್ ನೀಡುವ ಉಚಿತ ಹಾಲನ್ನು ಬಿಸಿ ಮಾಡಿ ಕೊಡಲಾಗುತ್ತಿದೆ. ಸಂಸ್ಥೆಯ ಖಜಾಂಚಿ ಎನ್. ಗೋವಿಂದರಾಜು ಎಲ್ಲಾ ಮಕ್ಕಳಿಗೆ ಮೊಟ್ಟೆ ಹಾಗೂ ಇತರ ದಾನಿಗಳು ಬಾಳೆ ಹಣ್ಣು, ಬಿಸ್ಕತ್ ನೀಡುತ್ತಿದ್ದಾರೆ. ದೈಹಿಕ ಶಿಕ್ಷಕ ನಟರಾಜು ಮಕ್ಕಳಿಗೆ ವ್ಯಾಯಾಮ ಹೇಳಿಕೊಟ್ಟರೆ, ಮುದ್ದಪ್ಪ, ನಾಗರಾಜ್, ತ್ಯಾಗರಾಜ್,ನಾಗೇಶ್, ವಿ. ನಾಗರಾಜ್, ಅಂಚೆ ಅಶ್ವತ್ಥ್ ಇತರರು ಮಕ್ಕಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವ ಜವಾಬ್ದಾರಿ ಹೊತ್ತಿದ್ದಾರೆ.
ಮಕ್ಕಳು ಬೇಸಿಗೆ ಶಿಬಿರದಲ್ಲಿ ಪ್ರತಿದಿನ ಪಾಲ್ಗೊಂಡು ಬ್ಯಾಸ್ಕೆಟ್ ಬಾಲ್ ಕಲಿಯಲು ಆಸಕ್ತಿ ತೋರುತ್ತಿರುವುದು ಸಂತಸ ಉಂಟು ಮಾಡಿದೆ. ಮಕ್ಕಳಿಗೆ ಪಾಠ-ಪ್ರವಚನದ ಜೊತೆಗೆ ಕ್ರೀಡೆಗಳಲ್ಲಿ ಸಾಧನೆ ಮಾಡಲು ಉತ್ತಮ ತಳಪಾಯದ ಅವಶ್ಯಕತೆ ಇರುವುದರಿಂದ ಸಂಸ್ಥೆ ಕಳೆದ 28 ವರ್ಷಗಳಿಂದ ಬೇಸಿಗೆ ಶಿಬಿರ ನಡೆಸುತ್ತಿದೆ.
-ಅಂಚೆ ಅಶ್ವತ್ಥ್,
ಕಾರ್ಯದರ್ಶಿ, ಕನಕ ಬಾಸ್ಕೆಟ್ ಬಾಲ್ ಸಂಸ್ಥೆ, ಕೋಲಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

