ನಿಷ್ಠೆಯಿಂದ ಕೆಲಸ ಮಾಡಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಎಚ್ಚರಿಕೆ
ಕೋಲಾರ: ಡಿಸಿಸಿ ಬ್ಯಾಂಕ್ ಈ ಹಿಂದೆ ಮುಚ್ಚಲು ಕಾರಣರು ಯಾರೆಂಬುದು ತಮಗೆ ಗೊತ್ತಿದೆ. ಹಳೆಯ ವಿಚಾರಗಳನ್ನು ಕೆದಕಲು ಇಷ್ಟವಿಲ್ಲ. ಹೊಸ ಆಡಳಿತ ಮಂಡಳಿ ರಚನೆಯ ಬಳಿಕ ಬ್ಯಾಂಕಿನ ಗತವೈಭವ ನಾಂದಿಗೆ ಸಂಕಲ್ಪ ಮಾಡಲಾಗಿದೆ. ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.
ಭಾನುವಾರ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಗಮಿಸಿದ್ದ ಡಿಸಿಸಿ ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.
'ಒಂದು ವೇಳೆ ಬ್ಯಾಂಕ್ ಅಭಿವೃದ್ಧಿ ಹಾಗೂ ಗ್ರಾಹಕರ ಹಿತರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ರಾಜಿನಾಮೆ ಕೊಟ್ಟು ಹೋಗಿ' ಎಂದು ಖಡಕ್ಕಾಗಿ ತಾಕಿತು ಮಾಡಿದರು. ಪ್ರಸಕ್ತ ಸಾಲಿನಲ್ಲಿ ರೈತರಿಗೆ 100 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದಗೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಅತಿ ಹೆಚ್ಚು ಕಾಳಜಿಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದಲ್ಲಿ ಗುರಿ ಸಾಧನೆ ಕಷ್ಟವಾಗದು. ಸಾಲ ಮರು ಪಾವತಿಗೆ ಆದ್ಯತೆ ನೀಡುವ ಮೂಲಕ ಬ್ಯಾಂಕ್ ಅನ್ನು ಉಳಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದರು.
ಕಳೆದ ಸಾಲಿನಲ್ಲಿ 7.30 ಕೋಟಿ ಸಾಲ ವಸೂಲಾತಿ ಗುರಿಯಲ್ಲಿ ಕೇವಲ 1.54 ಕೋಟಿ ಮಾತ್ರ ವಸೂಲಿ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ತರಾಟೆಗೆ ತೆಗೆದುಕೊಂಡರು. ಚಿಂತಾಮಣಿ ತಾಲೂಕಿನ ಯಗವಕೋಟೆ ಸೊಸೈಟಿಯಲ್ಲಿ 2 ಲಕ್ಷ ವ್ಯವಹಾರ ನಡೆಸಿರುವ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ತಾವು ಅಧ್ಯಕ್ಷರಾದ ಮೇಲೆ ಸಿಬ್ಬಂದಿಯಲ್ಲಿ ಶಿಸ್ತು ಮೂಡಿಸಲು ಸಮವಸ್ತ್ರ, ಮೊಬೈಲ್ ಒದಗಿಸಲಾಗಿದೆ. ಇಷ್ಟಾದರೂ ನಿರೀಕ್ಷಿತ ಪ್ರಗತಿ ಸಾಧನೆಯಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಆನ್ಲೈನ್ ವ್ಯವಸ್ಥೆಗೆ ಸಜ್ಜುಗೊಳಿಸಲಾಗುತ್ತದೆ. ಐಎಫ್ಎಸ್ಸಿ ಕೋಡ್ ಬಂದಿದೆ. ಎರಡು ಜಿಲ್ಲೆಗಳ ಶಾಖೆಗಳು ಈ ನಿಟ್ಟಿನಲ್ಲಿ ಬ್ಯಾಂಕ್ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿ ಕೆಲಸ ಮಾಡಬೇಕು. ಬ್ಯಾಂಕ್ ಬಗ್ಗೆ ಸಲ್ಲದ ಮಾತು ನಿಲ್ಲಿಸಿ. ಆಡಳಿತ ಮಂಡಳಿ ಬಿಗಿಯಾಗಿದೆ. 16.90 ಕ್ರೋಡೀಕೃತ ನಷ್ಟವನ್ನು ಕಡಿಮೆ ಮಾಡಿ ಎಂದು ಹೇಳಿದರು.ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕರಾದ ಎಂ.ವೆಂಕಟೇಶಪ್ಪ, ಸಾಲ ವಿಭಾಗದ ಬೈರೇಗೌಡ, ಕೋಲಾರ ಶಾಖೆಯ ಹುಸೇನ್, ದೊಡ್ಡಮನಿ ಸೇರಿದಂತೆ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

