ಮೃತ್ಯು ಕೊಳದತ್ತ ಹೋಗಲು ಬಿಡಬೇಡಿ
ಕೋಲಾರ: ಈಗಾಗಲೇ ಎಂಟು ಜನರನ್ನು ಬಲಿ ತೆಗೆದುಕೊಂಡಿರುವ ತಾಲೂಕಿನ ಅರಾಭಿಕೊತ್ತನೂರು ಬಳಿಯ ಅಪಾಯಕಾರಿ ಕೊಳದಲ್ಲಿ ಈಜಲು ಯಾರೊಬ್ಬರಿಗೂ ಅವಕಾಶ ನೀಡಬಾರದೆಂದು ಬಿಜೆಪಿ ರಾಜ್ಯ ಸ್ಲಮ್ ಮೋರ್ಚಾ ಕಾರ್ಯದರ್ಶಿ ನೀಲಿ ಕೆ. ಜಯಶಂಕರ್ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಲ್ಯಾಂಕೋ ಕಂಪನಿಯವರು ಹೆದ್ದಾರಿ ನಿರ್ಮಾಣಕ್ಕೆ ಬೇಕಾದ ಮಣ್ಣು ಮತ್ತು ಜಲ್ಲಿಗಾಗಿ ಅರಾಭಿಕೊತ್ತನೂರು ಬಳಿ ಇರುವ ಕೆಂದಟ್ಟಿ ಕ್ವಾರಿಯನ್ನು ಗುತ್ತಿಗೆಗೆ ಪಡೆದು ಕಾಮಗಾರಿ ನಂತರ ಅಪಾಯಕಾರಿ ಸ್ಥಳಕ್ಕೆ ಬೇಲಿ ನಿರ್ಮಿಸದೆ ಹೋಗಿದ್ದಾರೆ. ಈ ಕ್ವಾರಿಯಲ್ಲಿ ಪ್ರಾಕೃತಿಕ ಕೊಳವೊಂದು ಸೃಷ್ಟಿಯಾಗಿ ಅದರಲ್ಲಿ ನೀಲಿ ಬಣ್ಣದ ತಳಿ ನೀರು ಶೇಖರಣೆಯಾಗುತ್ತಿದೆ. ಇದರಲ್ಲಿ ಈಜುವ ದೃಶ್ಯಗಳು ಹಾಗೂ ಜಾಗದ ವಿವರಗಳನ್ನು ಫೇಸ್ ಬುಕ್ನಲ್ಲಿ ಹಾಕಿರುವುದರಿಂದ ಕೋಲಾರ ಮಾತ್ರವಲ್ಲದೆ ಬೆಂಗಳೂರು ಇತ್ಯಾದಿ ಕಡೆಗಳಿಂದ ವಿದ್ಯಾರ್ಥಿಗಳು ಬಂದು ನೀರಿನಲ್ಲಿ ಮುಳುಗಿ ಸಾಯುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಈ ಅಪಾಯಕಾರಿ ಪ್ರದೇಶಕ್ಕೆ ಜನರು ಪ್ರವೇಶ ಮಾಡದಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೂ ವಿದ್ಯಾರ್ಥಿಗಳು ಮೋಜಿಗಾಗಿ ಇಲ್ಲಿಗೆ ಬರುವುದು ತಪ್ಪಿಲ್ಲ, ಇತ್ತೀಚೆಗೆ ಬೆಂಗಳೂರಿನ ಎಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಚೆಕ್ಕರ್ ಹೊಡೆದು ಕೆಂದಟ್ಟಿ ಕ್ವಾರಿ ಕೊಳದಲ್ಲಿ ಈಜಲು ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಕೊಳದಲ್ಲಿ ಈಜುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ನೀಲಿ ಕೆ. ಜಯಶಂಕರ್ ಒತ್ತಾಯಿಸಿದ್ದಾರೆ.
ಅರಾಭಿಕೊತ್ತನೂರಿನಲ್ಲಿ ಏ.21ರಂದು ಸಿದ್ದೇಶ್ವರ, ಬೀರೇಶ್ವರ, ಭತ್ತೇಶ್ವರ ದೇವಾಲಯದ ಮನೆ ದೇವರ ದೊಡ್ಡಜಾತ್ರೆ ನಡೆಯುತ್ತಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅರಾಭಿಕೊತ್ತನೂರು ಸಮೀಪದ ಕ್ವಾರಿಯ ಕೊಳದಲ್ಲಿ ಈಜಲು ಬೇರೆ ಬೇರೆ ಊರುಗಳಿಂದ ಬರುವ ಜನರು ಕೊಳದತ್ತ ಹೋಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ವಾರಿಯ ಬಳಿ ಬಿಗೀ ಬಂದೋಬಸ್ತ್ ವ್ಯವಸ್ಥೆ ಮಾಡಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

