ವಿಕಲಚೇತನ ಮಕ್ಕಳ ಬೇಸಿಗೆ ತರಬೇತಿ ಶಿಬಿರ
ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ ವಿಕಲಚೇತನ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ತಾಲೂಕಿನ ನಂದಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.21 ರಂದು ಮಧ್ಯಾಹ್ನ 12 ಗಂಟೆಗೆ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರ 20 ದಿನ ನಡೆಯಲಿದೆ ಎಂದು ಎಪಿಡಿ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಎಚ್.ಎಂ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಬಿರದಲ್ಲಿ ಸುಮಾರು 80 ಕ್ಕೂ ಹೆಚ್ಚು ಮಂದಿ ಅಂಗವಿಕಲ ಮಕ್ಕಳು ಭಾಗವಹಿಸಲಿದ್ದು, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತರುವುದು, ವೈಯಕ್ತಿಕ ಗಮನ ಮತ್ತು ನಾಯಕತ್ವದ ಗುಣ ಬೆಳೆಸುವುದು ಸಾಮಾನ್ಯ ಗಣಿತ, ಇಂಗ್ಲಿಷ್ ಮತ್ತು ಕನ್ನಡ ವ್ಯಾಕರಣ ಕಲಿಸಲಾಗುವುದು. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಮಾಡಲಾಗುವುದು. ಬೇಸಿಗೆ ಶಿಬಿರ ಏ.21 ರಿಂದ ಮೇ 10 ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೌಲ್ಯ ಮಾಪನ ಆರಂಭ
ಕೋಲಾರ: ಜಿಲ್ಲೆಯ ಆರು ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕಾರ್ಯ ಭಾನುವಾರ ಆರಂಭಗೊಂಡಿದ್ದು, ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡವರು ಗೈರು ಹಾಜರಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್ ತಿಳಿಸಿದರು.
ನಗರದ ಸುಭಾಷ್ ಪ್ರೌಢಶಾಲೆ ಕೇಂದ್ರದಲ್ಲಿ ಮೌಲ್ಯಮಾಪನ ಕಾರ್ಯ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ನಗರದ ಆರು ಮೌಲ್ಯಮಾಪನ ಕೇಂದ್ರಗಳಲ್ಲಿ 225 ಉಪ ಮುಖ್ಯಮೌಲ್ಯಮಾಪಕರು ಮತ್ತು 1,163 ಸಹ ಮೌಲ್ಯಮಾಪಕರು ಸೇರಿದಂತೆ 1,163 ಮಂದಿ ಮೊದಲ ದಿನ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದಾರೆಂದರು. ನಗರದ ಎಲ್ಲಾ ಆರು ಮೌಲ್ಯಮಾಪನ ಕೇಂದ್ರಗಳ ಸುತ್ತ ಇಂದಿನಿಂದ ಮೌಲ್ಯಮಾಪನ ಮುಗಿಯುವವರೆಗೂ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ವ್ಯಾಪ್ತಿಯಲ್ಲಿ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮೌಲ್ಯಮಾಪನ ನಡೆಯುತ್ತಿರುವ ಕೇಂದ್ರಗಳಿಗೆ ತಲಾ ಒಬ್ಬರಂತೆ ವ್ಯವಸ್ಥಾಪಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಗಂಡ, ಅತ್ತೆ ಕಿರುಕುಳ: ಮಹಿಳೆ ರೈಲಿಗೆ ಸಿಲುಕಿ ಆತ್ಮಹತ್ಯೆ
ಮಾಲೂರು: ಗಂಡ, ಅತ್ತೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಪಟ್ಟಣದ ನೂಸಗೆರೆ ಸಮೀಪದ ಎಸ್.ಎಲ್.ಎನ್. ನರ್ಸರಿ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವಳನ್ನು ಶಿವಾರ ಪಟ್ಟಣದ ಲಕ್ಷ್ಮಿ(27)ಎಂದು ಗುರುತಿಸಲಾಗಿದೆ. ಮದುವೆಯಾಗಿ ಹತ್ತು ವರ್ಷವಾಗಿರುವ ಲಕ್ಷ್ಮಿಗೆ ಗಂಡು, ಹೆಣ್ಣು ಮಕ್ಕಳು ಇದ್ದು, ಗಂಡ ರವಿ ಹಾಗೂ ಅತ್ತೆ ಮುನಿಯಮ್ಮರವರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದು ರೈಲಿಗೆ ಸಿಕ್ಕಿದ್ದಾಳೆ. ಈ ಸಂಬಂಧ ಮೃತಳ ಪತಿ ರವಿ ಯನ್ನು ಬಂಧಿಸಿರುವ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಾಹನ ಸಂಚಾರಕ್ಕೆ ಕಿರಿಕಿರಿ
ಮಾಲೂರು: ತಾಲೂಕಿನ ಲಕ್ಕೂರು-ಪುರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಪಾದಚಾರಿ ಸೇರಿದಂತೆ ವಾಹನಗಳ ಸಂಚಾರಕ್ಕೂ ತೊಂದರೆ ಪಡುವಂತಾಗಿದೆ.
ಕಳದೆ ಮೂರು ವರ್ಷದ ಹಿಂದೆ ಅಂದಿನ ಜಿಪಂ ಸದಸ್ಯ ನಾರಾಯಣಸ್ವಾಮಿ ಪ್ರಯತ್ನದಿಂದ ಗ್ರಾಮದ ಬಾಲಾಜಿ ವೃತ್ತದಿಂದ ಪುರ ಗ್ರಾಮದವರೆಗೂ 1.5 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಗುಣಮಟ್ಟದ ಕಾಮಗಾರಿ ನಡೆಯದ ಕಾರಣ ಕೇವಲ ಒಂದು ವರ್ಷದಲ್ಲಿ ರಸ್ತೆಯ ಡಾಂಬರ್ ಕಿತ್ತು ರಸ್ತೆ ಸಂಪೂರ್ಣ ಹಾಳಾಗಿತ್ತು. ಜಲ್ಲಿಕಲ್ಲುಗಳು ಹೂರ ಬಂದಿದ್ದರಿಂದ ವಾಹನ ಸಂಚಾರ ಸುಗಮವಾಗದೆ ದಿನನಿತ್ಯರಸ್ತೆ ಅಪಘಾತಗಳಿಗೆ ಕಾರಣವಾಗಿತ್ತು. ಅಂದಿನಿಂದ ಕಳೆದ ಎರಡು ವರ್ಷಗಳಿಂದ ಗಮನ ಹರಿಸದ ಕಾರಣ ರಸ್ತೆಯಲ್ಲಿ ಪಾದಚಾರಿಗಳು ನಡೆಯದ ಪರಿಸ್ಥಿತಿವುಂಟಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಹೆಜ್ಜೆ ಇಡಲು ಸಾಧ್ಯವಾಗದ ರೀತಿಯಲ್ಲಿ ಕೆಸರುಮಯವಾಗಿರುತ್ತದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಅಭಿವೃದ್ಧಿ ಪಡಿಸಬೇಕಾಗಿ ಲಕ್ಕೂರು ಹಾಗೂ ಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.
23ರಂದು ಮಾಲೂರಿನ ಕರಗ ಮಹೋತ್ಸವ
ಮಾಲೂರು: ಮಾಲೂರಿನ ಸುಪ್ರಸಿದ್ಧ ಕರಗ ಮಹೋತ್ಸವ ಏ. 23 ರಿಂದ ಒಂದು ವಾರ ಕಾಲ ನಡೆಯಲಿದೆ. 23 ರ ಬುಧವಾರ ಧರ್ಮರಾಯ ದೇವಾಲಯದಲ್ಲಿ ಗಣಪತಿ ಹೋಮ ನಡೆಯಲಿದ್ದು, ರಾತ್ರಿ ಧ್ವಜಾರೋಹಣ ನಡೆಯಲಿದೆ. 24 ರ ಗುರುವಾರ ಗಂಗೆಯ ಬಳಿ ಕರದಮ್ಮ ದೇವಾಲಯದಲ್ಲಿ ಗಂಗೆ ಪೂಜೆ ನಡೆಸಿ ಹಸೀಕರಗ ನಡೆಯಲಿದೆ. 25 ರ ಶುಕ್ರವಾರ ಆರತಿ ದೀಪೋತ್ಸವ ನಡೆಯಲಿದ್ದು, 26 ರ ಶನಿವಾರ ದೇವರ ಕಲ್ಯಾಣೋತ್ಸವ ನಡೆಯಲಿದೆ. 27 ರ ಭಾನುವಾರ ರಾತ್ರಿ 11 ಗಂಟೆಗೆ ಕರಗದ ಶಕ್ತುತ್ಸವ ನಡೆಯಲಿದ್ದು,ವಹ್ನಿ ಕುಲದ ಪೂಜಾರಿಯಿಂದ ಸುಪ್ರಸಿದ್ಧ ಹೂವಿನ ಕರಗ ನಡೆಯಲಿದೆ. ಅಂದು ರಾತ್ರಿ ಚಿತ್ರಗೋಪುರೋತ್ಸವ ನಡೆಯಲಿದೆ. 28 ರ ಸೋಮವಾರ ಅಗ್ನಿ ಕುಂಡಕ್ಕೆ ಶಾಂತಿ ಪೂಜೆ ನಡೆದು ರಾತ್ರಿ ಪುರಾಣ ಗಾವು ಹಿಡಿಯುವ ಕಾರ್ಯಕ್ರಮ ನಡೆಯಲಿದೆ.29 ರ ಮಂಗಳವಾರ ವಸಂತೋತ್ಸವ ಮತ್ತು ಧ್ವಜಾವರೋಹಣ ನಡೆಯಲಿದೆ ಎಂದು ಧರ್ಮರಾಯ ದೇವಾಲಯದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಪಿ. ವಿಜಯಕುಮಾರ್ ತಿಳಿಸಿದ್ದಾರೆ.
ಇಂದು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ
ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏ.22 ರಂದು ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್. ದೊರೆಸ್ವಾಮಿ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎನ್. ಕೃಷ್ಣಪ್ಪ ವಹಿಸಲಿದ್ದಾರೆ. ಶಾಸಕ ಕೆ. ಸುಧಾಕರ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ನಗರಸಭಾ ಅಧ್ಯಕ್ಷೆ ಎಸ್. ಲೀಲಾವತಿ ಶ್ರೀನಿವಾಸ್, ಸದಸ್ಯೆ ಗಜೇಂದ ್ರ, ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಉಪ ಕುಲಪತಿ ಎಂ.ಜಿ. ಕೃಷ್ಣನ್, ಎಸ್ಪಿ ದಿವ್ಯ ಗೋಪಿನಾಥ್, ಸಾಹಿತಿ ಕೆ.ವೈ.ನಾರಾಯಣಸ್ವಾಮಿ, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ವಿಚಾರ ಸಂಕಿರಣ ನಾಳೆ
ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ನೇತೃತ್ವದಲ್ಲಿ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಏ.22ರ ಮಂಗಳವಾರ ಮತ್ತು 23ರ ಬುಧವಾರ ನಡೆಯಲಿದೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಇತ್ತೀಚಿನ ಸಂಶೋಧನೆಗಳ ಕುರಿತು ನಡೆಯಲಿರುವ ವಿಚಾರ ಸಂಕಿರಣವನ್ನು ಡಾ.ಎಂ.ಎಚ್.ಕೋರಿ ಉದ್ಘಾಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

