ಕೋಲಾರ

ವಾಯುವಿಹಾರ ಮಾಡುತ್ತಿದ್ದ ಮುನಿರಾಜು ಬಳಿ 40 ಸಾವಿರ ವಶ

Published On :

ಕೋಲಾರ: ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಆಧೀಕ್ಷಕ ಮುನಿರಾಜು ಎಂಬುವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂಬ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳ್ಳಂಬೆಳಿಗ್ಗೆ ದಾಳಿ ಮಾಡಿ ಲಕ್ಷಾಂತರ ರು.ಬೆಲೆ ಬಾಳುವ ಚಿನ್ನ-ಬೆಳ್ಳಿ ಆಭರಣ, ನಗದು, ಗೃಹೋಪಯೋಗಿ ವಸ್ತುಗಳು ಹಾಗೂ ವಿವಿಧ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಮುನಿರಾಜು ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಎಸ್‌ಎನ್‌ಆರ್ ಆಸ್ಪತ್ರೆಯ ಆಧೀಕ್ಷಕ ಮುನಿರಾಜು 1988ರ ಆಗಸ್ಟ್ 8 ರಲ್ಲಿ ಆರೋಗ್ಯ ಇಲಾಖೆಗೆ ಸೇರಿಕೊಂಡಿದ್ದು ಗುಮಾಸ್ತರಾಗಿ ಹಾಗೂ ಹಂತ ಹಂತವಾಗಿ ದೊರೆತ ಭಡ್ತಿಯ ನಂತರ ಈಗ ಆಧೀಕ್ಷಕರಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ 5.30ರಲ್ಲಿ ಕನಕನಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮುನಿರಾಜು ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಮಾಡಿದಾಗ ಮುನಿರಾಜು ವಾಯು ವಿಹಾರಕ್ಕೆಂದು ಮನೆಯಿಂದ ಹೊರ ಹೋಗಿದ್ದರು. ವಿಷಯ ತಿಳಿದ ಲೋಕಾಯುಕ್ತರ ಪೊಲೀಸರು ವಾಯು ವಿಹಾರ ಸ್ಥಳಕ್ಕೆ ಹೋಗಿ ಮುನಿರಾಜು ಅವರನ್ನು ವಶಕ್ಕೆ ತೆಗೆದುಕೊಂಡು ಶೋಧನೆ ನಡೆಸಿದಾಗ ರು. 40 ಸಾವಿರ ನಗದು ಸಿಕ್ಕಿದ ಹಿನ್ನಲೆಯಲ್ಲಿ ಮನೆಯನ್ನು ಶೋಧಿಸಿದಾಗ ರು. 3.10ಲಕ್ಷ ನಗದು ಪತ್ತೆಯಾಗಿದೆ.
ರು. 8.40 ಲಕ್ಷ ಬೆಲೆಯ 360 ಗ್ರಾಂ ತೂಕದ ಚಿನ್ನಾಭರಣ, ರು. 22.540 ಬೆಲೆ ಬೆಳ್ಳಿ, ರು. 2.41 ಲಕ್ಷ ಬೆಲೆ ಗೃಹೋಪಯೋಗಿ ವಸ್ತುಗಳು ಹಾಗೂ ಕನಕನಪಾಳ್ಯದಲ್ಲಿ ನಿರ್ಮಿಸಿರುವ ಲಕ್ಷಾಂತರ ರು.ಮೌಲ್ಯದ ಭವ್ಯ ವಸತಿ ಗೃಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ನೇತೃತ್ವದಲ್ಲಿ ದಾಳಿ: ಹೊಸ ಮನೆಯ ಮೌಲ್ಯದ ಬಗ್ಗೆ ಮಾಹಿತಿ ನೀಡಲು ಲೋಕಾಯುಕ್ತ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದ್ದು ವರದಿ ಬಂದ ನಂತರ ಮನೆಗೆ ಎಷ್ಟು ಹಣ ಖರ್ಚು ಮಾಡಿರಬಹುದೆಂದು ತಿಳಿಯುತ್ತದೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿ. ಮೋಹನ್ ದಾಸ್ ಕನ್ನಡಪ್ರಭಕ್ಕೆ ತಿಳಿಸಿದರು. ಮುನಿರಾಜು ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ. ಆರೋಪ ಸಾಬೀತು ಆದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮುನಿರಾಜು ಹೇಳಿದ್ದು
ಆರೋಗ್ಯ ಇಲಾಖೆಗೆ ಸೇರಿದ ಮೇಲೆ ತಾವು ಯಾವುದೇ ಅಕ್ರಮ ಆಸ್ತಿ ಗಳಿಸಿಲ್ಲ, ಶಿಡ್ಲಘಟ್ಟ ಬಳಿ ಇರುವ ಪಿತ್ರಾರ್ಜಿತ ಆಸ್ತಿಯಲ್ಲಿ ಸಿಕ್ಕ ಪಾಲಿನಿಂದ ಜಮೀನು ಖರೀದಿ ಮಾಡಲಾಗಿತ್ತು, ಕೋಲಾರದಲ್ಲಿ ಮನೆ ಕಟ್ಟಲು ಜಮೀನು ಮಾರಾಟ ಮಾಡಿದ್ದೇನೆ, ಜೊತೆಗೆ ಸಾಲ ಮಾಡಿದ್ದು, ಮುಂದಿನ ಮೇ 9ರಂದು ಮನೆ ಗೃಹ ಪ್ರವೇಶ ನಿಗದಿ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಹಣದ ಕೊರತೆ ಉಂಟಾಗಿ ಸ್ನೇಹಿತರಿಂದ 2 ಲಕ್ಷ ರು.ಸಾಲ ಮಾಡಿದ್ದೆ. ಈ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರಿಂದ ಅಕ್ರಮ ಗಳಿಕೆ ಎಂದು ಲೋಕಾಯುಕ್ತರು ಭಾವಿಸಿರಬಹುದು. ವಿಚಾರಣೆ ಮುಗಿದ ಬಳಿಕ ಸತ್ಯ ಹೊರ ಬರುತ್ತದೆ ಎಂದು ಮುನಿರಾಜು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.