ಶಿಕ್ಷಕರ ಮೇಲೆ ಹಲ್ಲೆ: ಗುಮಾಸ್ತನ ಅಮಾನತಿಗೆ ಆಗ್ರಹ
ಕೋಲಾರ: ಶಿಕ್ಷಣ ಇಲಾಖೆ ನಿರ್ದೇಶಕರಿಗೆ ದೂರು ನೀಡಲು ಬಂದಿದ್ದ ಮುಖ್ಯ ಶಿಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಡಿಡಿಪಿಐ ಕಚೇರಿ ಗುಮಾಸ್ತ ಜಗನ್ನಾಥ್ರನ್ನು ಅಮಾನತುಗೊಳಿಸಬೇಕೆಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಶಿಕ್ಷಣ ಇಲಾಖೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಂಗಮಂದಿರ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾಲೂರು ಗೌತಮ್ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ ಮೇಲೆ ಡಿಡಿಪಿಐ ಕಚೇರಿಯ ಗುಮಾಸ್ತ ಜಗನ್ನಾಥ್ ಹಲ್ಲೆ ಮಾಡಿರುವ ವಿಷಯ ತಿಳಿದು ದೂರವಾಣಿ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರು,ನಿರ್ದೇಶಕ ಹಾಗೂ ಡಿಡಿಪಿಐರನ್ನು ಸಂಪರ್ಕಿಸಿ ಕೂಡಲೇ ಗುಮಾಸ್ತರನ್ನು ಅಮಾನತು ಮಾಡಿ ಎಂದು ತಿಳಿಸಿದರು.
ಮಾಲೂರು ಗೌತಮ್ ಶಾಲೆ ಮುಖ್ಯ ಶಿಕ್ಷಕ ವೀರಭದ್ರಪ್ಪ ಶಾಲೆಯ ಮಾನ್ಯತೆ ನವೀಕರಣಕ್ಕಾಗಿ ಹಲವು ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ನವೀಕರಣ ಕಡತ ಮಂಡಿಸುವಲ್ಲಿ ಗುಮಾಸ್ತ ಜಗನ್ನಾಥ್ ಲಂಚಕ್ಕೆ ಪೀಡಿಸುತ್ತಿದ್ದ ಎಂದು ಆರೋಪಿಸಿದರು.
ಸಮಸ್ಯೆಗೆ ಸ್ಪಂದಿಸದ ಹಾಗೂ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡಿದ ಜಗನ್ನಾಥ್ ವಿರುದ್ಧ ಜಿಲ್ಲೆಯ 20ಕ್ಕೂ ಹೆಚ್ಚು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಕೋಲಾರದ ಡಿಡಿಪಿಐ ಕಚೇರಿಗೆ ಆಗಮಿಸಿದ್ದ ಇಲಾಖೆಯ ನಿರ್ದೇಶಕ ಫಿಲೋಮಿನಾ ಲೋಭೋರಿಗೆ ದೂರು ನೀಡಲು ಬಂದಿದ್ದಾಗ ಜಗನ್ನಾಥ್ ಮತ್ತು ಆತನ ಸಹಚರರು ದೂರು ನೀಡಲು ಅಡ್ಡಿಪಡಿಸಿದ್ದಲ್ಲದೇ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿದರು.
ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾಗಿದ್ದ ಜಿಲ್ಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಿ.ಎನ್. ಮುಕುಂದ, ನೌಕರರ ಸಂಘದ ಚೌಡಪ್ಪ, ಮುರಳಿ ಮೋಹನ್, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸಿ.ಎಂ. ವೆಂಕಟರಮಣಪ್ಪ ಮುಖ್ಯ ಶಿಕ್ಷಕರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರಲ್ಲದೆ ಘಟನೆಯನ್ನು ಖಂಡಿಸಿದರು.
ಸಂಬಂಧಿಸಿದ ಗುಮಾಸ್ತನ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮುಳಬಾಗಲು ಪಿಯು ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್, ಸುಭಾಷ್ ಶಾಲೆಯ ಗೋಪಾಲರೆಡ್ಡಿ, ಎಕ್ಸಲೆಂಟ್ ಕಾಲೇಜಿನ ಸಂಸ್ಥಾಪಕ ಎಂ.ವಿ. ರಂಗಪ್ಪ ಇದ್ದರು.
ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಡಿಡಿಪಿಐ ಕಚೇರಿಯ ಗುಮಾಸ್ತ ಜಗನ್ನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಈ ಸಂಬಂಧ ಶಿಕ್ಷಕರು ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

