ರಾಜ್ಯ ಮುದ್ರಣಕಾರರ ಸಹಕಾರ ಸಂಘಕ್ಕೆ ಅಬ್ಬಣಿ ಶಂಕರ್ ಆಯ್ಕೆ
ಕೋಲಾರ: ಕರ್ನಾಟಕ ರಾಜ್ಯ ಮುದ್ರಣಕಾರರ ಸಹಕಾರ ಸಂಘದ ನಿರ್ದೇಶಕರಾಗಿ ಮುದ್ರಕ ಹಾಗೂ ಪತ್ರಕರ್ತ ಅಬ್ಬಣಿ ಶಂಕರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಮುದ್ರಣಕಾರರ ಸಹಕಾರ ಸಂಘದ ಆಡಳಿತ ಮಂಡಳಿ 11 ಮಂದಿ ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 7 ಸಾಮಾನ್ಯ ಸ್ಥಾನ, 2 ಮಹಿಳಾ ಮೀಸಲು ಸ್ಥಾನ, 1 ಪ.ಜಾತಿ, ಪ.ಪಂಗಡ ಮೀಸಲು ಸ್ಥಾನ ಹಾಗೂ 1 ಹಿಂದುಳಿದ ವರ್ಗದ ಮೀಸಲು ಸೇರಿದಂತೆ ಒಟ್ಟು 11 ಸ್ಥಾನಗಳಿಗೆ ಎಲ್ಲವೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 11 ಸ್ಥಾನಕ್ಕೆ 18 ಮಂದಿ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದು ಅಂತಿಮವಾಗಿ 7 ಮಂದಿ ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ಅವಿರೋಧ ಆಯ್ಕೆಗೆ ಸಹಕಾರ ನೀಡಿದರು.
ನಿರ್ದೇಶಕರಾಗಿ ಅಬ್ಬಣಿ ಶಂಕರ್, ಎಸ್.ಶಿವದೇವ್, ಬಿ.ನಾರಾಯಣಮ್ಮ, ಡಾ.ಎ.ಸತೀಶ್, ಎ.ರಮೇಶ್, ಎನ್.ಸುನೀತಾ, ವಿ.ಎಸ್.ನಾಗಭೂಷಣ್ ರಾವ್, ಎಸ್.ಪ್ರಭಾಕರ್, ಜಯಕುಮಾರ್ ಆರ್.ಮಲ್ಲಳ್ಳಿ, ಎನ್.ರಾಘವೇಂದ್ರ ಹಾಗೂ ಶಿವರಾಮ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.
ಚುನಾವಣಾಧಿಕಾರಿಯಾಗಿ ವೆಂಕಟಾಚಲಯ್ಯ, ಸಹಾಯಕರಾಗಿ ಸಂಘದ ಕಾರ್ಯದರ್ಶಿ ಡಿ.ಪಿ.ಬಸವರಾಜ್ ಅವರು ಕಾರ್ಯನಿರ್ವಹಿಸಿದರು.
ಸಂಘದ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಫೆ.25 ರಂದು ಕರ್ನಾಟಕ ರಾಜ್ಯ ಮುದ್ರಣಕಾರರ ಸಹಕಾರ ಸಂಘ ನಿ., ಬೆಂಗಳೂರು ಸಂಘದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ವೆಂಕಟಾಚಲಯ್ಯ ತಿಳಿಸಿದ್ದಾರೆ.
ಆರ್ಥಿಕ ಸೇರ್ಪಡೆ: ಪ್ರಥಮ ಜಿಲ್ಲೆ ಕೋಲಾರ
ಕೋಲಾರ: ಜಿಲ್ಲೆಯ 3,36,472 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 2,34,906 ಕುಟುಂಬಗಳಿಗೆ 8.69 ಲಕ್ಷ ಉಳಿತಾಯ ಖಾತೆ,3.51 ಲಕ್ಷ ಶೂನ್ಯ ಠೇವಣಿ ಖಾತೆಗಳನ್ನು ತೆರೆಯುವ ಮೂಲಕ ಪ್ರತಿ ಗ್ರಾಮದ ಕುಟುಂಬವೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಜಿಲ್ಲಾಡಳಿತ ಮತ್ತು ಮಾರ್ಗದರ್ಶಿ ಕೆನರಾಬ್ಯಾಂಕ್ ಆಶ್ರಯದಲ್ಲಿ ನಗರದ ನಾರಾಯಣಿ ಕನ್ವೆನ್ಷನ್ ಹಾಲ್ನಲ್ಲಿ ಸೋಮವಾರ ಸಂಜೆ ನಡೆದ ಸಂಪೂರ್ಣ ಆರ್ಥಿಕ ಸೇರ್ಪಡೆ ಪ್ರದೇಶ ಘೋಷಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇದರಿಂದಾಗಿ ಕೋಲಾರ ಜಿಲ್ಲೆ ಇಡೀ ದೇಶದಲ್ಲೇ ಶೇ.100 ಆರ್ಥಿಕ ಸೇರ್ಪಡೆಯ ಪ್ರಥಮ ಜಿಲ್ಲೆಯಾಗಿ ಘೋಷಣೆಯಾಗಿದೆ ಎಂದು ಸಂಸತ ವ್ಯಕ್ತಪಡಿಸಿದರು.
ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ಇಡೀ ವಿಶ್ವವೇ ಆರ್ಥಿಕ ಸಮಸ್ಯೆಯಿಂದ ತೊಳಲಾಡಿದರೂ ಭಾರತಕ್ಕೆ ತೊಂದರೆಯಾಗಲಿಲ್ಲ ಎಂದ ಅವರು, ನಮ್ಮ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ಅವರ ನೇತೃತ್ವದಲ್ಲಿ ಎಲ್ಲಾ ಬ್ಯಾಂಕುಗಳು, ಜಿಲ್ಲಾಧಿಕಾರಿಗಳು ಕೈಜೋಡಿಸಿ ಕೋಲಾರ ಜಿಲ್ಲೆಯ ಈ ಸಾಧನೆಗೆ ಕಾರಣವಾಗಿದ್ದು, ದೇಶದ ಭೂಪಟದಲ್ಲಿ ಪ್ರಥಮ ಜಿಲ್ಲೆಯಾಗಿ ಹೊರ ಹೊಮ್ಮಿದೆ ಎಂದರು.
ಪ್ರಧಾನಿ ಉದ್ಯೋಗ ಸೃಜನ ಯೋಜನೆಯಡಿ ಒಂದು ಲಕ್ಷದಿಂದ 25ಲಕ್ಷದವರೆಗೂ ಭದ್ರತೆ ರಹಿತ ಸಾಲ ನೀಡಿಕೆಗೆ ಅವಕಾಶವಿದೆ, ಬ್ಯಾಂಕ್ಗಳ ಸಭೆಯಲ್ಲಿ ವಿತ್ತ ಸಚಿವರು ಸ್ವಷ್ಟ ನಿರ್ದೇಶನ ನೀಡಿದ್ದಾರೆ ಎಂದ ಅವರು, ಈ ನಿಟ್ಟಿನಲ್ಲಿ ಬ್ಯಾಂಕುಗಳ ಗ್ರಾಹಕರಿಗೆ ಸಾಲ ನೀಡಬೇಕೆಂದರು.
ಸರ್ಕಾರದ ನಿರ್ದೇಶನವಿದ್ದರೂ ಭದ್ರತೆ ರಹಿತ ಸಾಲ ನೀಡದ ಕುರಿತು ವಿಷಾದಿಸಿದ ಸಚಿವರು ಬ್ಯಾಂಕ್ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಕೆನರಾ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ದುಬೆ, ನಾವು ಕೋಲಾರದಲ್ಲಿ ಆರ್ಥಿಕ ಸಾಕ್ಷರ ಕೇಂದ್ರ ಸ್ಥಾಪಿಸಿದ್ದೇವೆ, ಗ್ರಾಮೀಣ ಪ್ರದೇಶದಲ್ಲೂ 64 ಎಟಿಎಂ ಸ್ಥಾಪಿಸಿದ್ದೇವೆ, ಸಾಮಾಜಿಕ ಕಾಳಜಿಯಿಂದ ಕುಡಿಯುವ ಶುದ್ದ ನೀರಿನ ಘಟಕಗಳಿಗೆ 208 ಹಳ್ಳಿಗಳಿಗೆ ಧನಸಹಾಯ ಮಾಡಿದ್ದೇವೆ ಎಂದರು.
ಆರೋಗ್ಯ ಸಚಿವ ಯು.ಟಿ. ಖಾದರ್, ಅಭಿವೃದ್ಧಿಯ ಮೂಲಕ ಜಿಲ್ಲೆಗೆ ಮುನಿಯಪ್ಪ ಕೊಡುಗೆ ನೀಡಿದ್ದಾರೆ, ನಮ್ಮ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬ್ಯಾಂಕುಗಳು ಕೋಲಾರದಲ್ಲಿ ಆರ್ಥಿಕ ಪ್ರಗತಿ ಸಾಧಿಸಿರುವುದು ಸಂತಸ ತಂದಿದೆ ಎಂದರು. ಕಾರ್ಪೋರೇಷನ್ ಬ್ಯಾಂಕಿನ ಜನರಲ್ಮ್ಯಾನೇಜರ್ ಎಸ್.ಎಂ. ಸ್ವಾತಿ, ವಿಜಯಾ ಬ್ಯಾಂಕಿನ ಜಯರಾಮಶೆಟ್ಟಿ, ಎಸ್ಬಿಎಂ ಕರುಣಾನಿಧಿ ತಮ್ಮ ಬ್ಯಾಂಕಿನ ಸಾಧನೆ ತಿಳಿಸಿದರು.
ಕೋಲಾರದ ಟಮಕದಲ್ಲಿ ಕೆನರಾ ಬ್ಯಾಂಕ್ ಶಾಖೆ, ರೋಜರಪಲ್ಲಿ, ಗೌನಪಲ್ಲಿ, ಚಿಂತಾಮಣಿಯ ಅಂಜನಿ ಬಡಾವಣೆ ಎಸ್ಬಿಎಂ ಶಾಖೆಗಳು ಹಾಗೂ ರಾಯಲಮ್ಮನ ದಿನ್ನೆ, ನರಸಾಪುರಗಳಲ್ಲಿ ಬರೋಡಾ ಬ್ಯಾಂಕ್ ಶಾಖೆಗಳನ್ನು ಸಚಿವರು ಉದ್ಘಾಟಿಸಿದರು. ಜಿಎಂ. ಸಂಪತ್ ಕುಮಾರ್, ಸಂತೋಷ್ ಕಾಮತ್, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ವಿನೋತ್ಪ್ರಿಯಾ, ಚಿಕ್ಕಬಳ್ಳಾಪುರ ಎಸಿ ಶಾಂತ, ಜಿಎಂ ರವಿ ಸುಧಾಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

