ಕೋಲಾರ

ನಾಲ್ವರು ಪೇದೆಗಳ ಸಸ್ಪೆಂಡ್

Published On :

ಚಿಕ್ಕಬಳ್ಳಾಪುರ: ವಕೀಲ ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಿಂದ ಉಂಟಾದ ವಿವಾದದಲ್ಲಿ ನಾಲ್ವರು ಪೊಲೀಸರನ್ನು ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಅಮಾನತು ಮಾಡಿದ್ದಾರೆ. ಅಲ್ಲದೇ ವಕೀಲನ ದುವರ್ತನೆ ವಿರುದ್ಧವೂ ಲಾಯರ್ಸ್ ಬಾರ್ ಕೌನ್ಸಿಲ್‌ಗೆ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದಾರೆ.
ಜೂ.29ರಂದು ನಗರದ ಬಲಮುರಿ ಗಣಪತಿ ವೃತ್ತದಲ್ಲಿ ವಕೀಲ ಶ್ರೀನಿವಾಸ್ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ಪರಸ್ಪರ ಹಲ್ಲೆಯ ಮಟ್ಟಕ್ಕೆ ಹೋಗಿ ಕೊನೆಗೆ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಶ್ರೀನಿವಾಸ್ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿದ್ದರು. ಇದರಿಂದ ತೀವ್ರ ಗಾಯಗೊಂಡ ಶ್ರೀನಿವಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಈ ಘಟನೆಯಿಂದ ಕೆರಳಿದ ಜಿಲ್ಲಾ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ನ್ಯಾಯಾಲಯದ ಆವರಣದ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿತ್ತು.
ಕಾನೂನನ್ನು ಉಲ್ಲಂಘಿಸಿದ್ದರೆ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಬೇಕೇ ಹೊರತು ಹೊಡೆಯುವ ಹಕ್ಕನ್ನು ಪೊಲೀಸರಿಗೆ ಯಾರು ಕೊಟ್ಟರು ಎಂದು ಪ್ರಶ್ನಿಸಿತ್ತು. ಅಲ್ಲದೇ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿತ್ತು. ಮೂರು ದಿನಗಳ ಕಾಲ ನಡೆದ ಪ್ರತಿಭಟನೆಗೆ ದಲಿತ ಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.
ಅಮಾನತಾದವರು ಯಾರು?: ವಿವಾದ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ರಕ್ಷಣಾಧಿಕಾರಿ ದಿವ್ಯಾ ಗೋಪಿನಾಥ್, ಪ್ರಕರಣದ ಬಗ್ಗೆ ತನಿಖಾ ವರದಿಯನ್ನು ನೀಡಬೇಕೆಂದು ಡಿವೈಎಸ್‌ಪಿಗೆ ಸೂಚನೆ ನೀಡಿದ್ದು ಇದರ ವರದಿನ್ವಯ ನಾಲ್ವರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಆದರೆ, ಅಮಾನತಾಗಿರುವ ಪೊಲೀಸರ ಹೆಸರನ್ನು ತಿಳಿಸಲು ಜಿಲ್ಲಾ ರಕ್ಷಣಾಧಿಕಾರಿಗಳು ಇಚ್ಛಿಸಿಲ್ಲ. ನಗರ ಪೊಲೀಸ್ ಠಾಣೆಯ ಪೇದೆಗಳಾದ ರಾಜಶೇಖರ್, ದಿನೇಶ್, ಮುರಳೀಧರ, ಶಿವಪ್ಪ ಎಂಬವರೇ ಅಮಾನತಾಗಿರುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಪೊಲೀಸ್  ಸಿಬ್ಬಂದಿಯ ಅಮಾನತಿನ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ವಕೀಲರ ಸಂಘ ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ನಡುವೆ ವಕೀಲ ಶ್ರೀನಿವಾಸ್ ಸಹ ದುವರ್ತನೆಯನ್ನು ತೋರಿರುವುದು ತಿಳಿದು ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಾಯರ್ಸ್ ಬಾರ್ ಕೌನ್ಸಿಲ್‌ಗೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.