ಗೋಲೀಬಾರ್ ಖಂಡಿಸಿ ಧರಣಿ
ಗೌರಿಬಿದನೂರು: ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೂಡಿಗಿಯಲ್ಲಿ ನಡೆದಿರುವ ರೈತರ ಮೇಲಿನ ಗೋಲೀಬಾರ್ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಸಿಪಿಎಂ ಮುಖಂಡ ಸಿ.ಸಿ. ಅಶ್ವತ್ಥಪ್ಪ ಒತ್ತಾಯಿಸಿದ್ದಾರೆ.
ಸಿಪಿಎಂ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ ರವಿಚಂದ್ರರೆಡ್ಡಿ, ಕೂಡಗಿ ಬಳಿ ಉಷ್ಣಸ್ಥಾವರ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆಯಲ್ಲಿ ವಿನಾ ಕಾರಣ ಗೋಲೀಬಾರ್ ನಡೆಸಿರುವುದು ಖಂಡನೀಯ ಎಂದರು.
ಹವಾಮಾನ ತಜ್ಞರ ಪ್ರಕಾರ ಮುಂಗಾರು ಹಿನ್ನಡೆಯಾಗಿದ್ದು ಸರ್ಕಾರ ಈಗಿನಿಂದಲೇ ಎಚ್ಚೆತ್ತುಕೊಂಡು ಮುಂಬರುವ ನೀರಿನ ಭವಣೆ ನೀಗಿಸ ಬೇಕಾಗಿದೆ. ಜಾನುವಾರುಗಳಿಗೆ ಗೋಶಾಲೆಗಳನ್ನು ತೆರೆದು ಮೇವು ನೀಡಬೇಕೆಂದು ಆಗ್ರಹಿಸಿದರು. ದರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಆರ್.ಎನ್. ರಾಜು, ಅನ್ವರ್ ಪಾಷ, ಗಂಗಾದರಪ್ಪ, ಚಿಕ್ಕನಾಯ್ಡು, ರತ್ನಮ್ಮ, ಲತೀಫ್ ಇದ್ದರು.
ಬಂಗಾರಪೇಟೆಯಲ್ಲಿ...
ಬಂಗಾರಪೇಟೆ: ಬಿಜಾಪುರ ಜಿಲ್ಲೆ ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ರೈತರು ಶಾಂತಿಯುತವಾಗಿ ಮಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ಸರ್ಕಾರ ಪೊಲೀಸರನ್ನು ಬಳಸಿ ಲಾಠಿ ಪ್ರಹಾರ ಮಾಡಿ ಗುಂಡು ಹಾರಿಸಿರುವ ಸರ್ಕಾರಕ್ಕೆ ಧಿಕ್ಕಾರ. ಕೂಡಲೇ ಸರ್ಕಾರ ರೈತರ ಕ್ಷಮೆ ಕೋರಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದಿಂದಾಗಿ ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ. ಇದರಿಂದ ಫಲವತ್ತಾದ ಭೂಮಿಯನ್ನು ರೈತರು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಆದ್ದರಿಂದ ಈ ಯೋಜನೆಯನ್ನು ಕೈಬಿಡುವಂತೆ ರೈತರು ಕಳೆದೊಂದು ವಾರದಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರೂ ರೈತರ ಬೇಡಿಕೆಗಳ ಕಡೆ ಸರ್ಕಾರ ಗಮನಹರಿಸಿಲ್ಲ. ಈಗ ಏಕಾಏಕಿ ಪ್ರತಿಭಟನೆ ನಿರತರನ್ನು ಚದುರಿಸಲು ಪೊಲೀಸರ ಮುಖಾಂತರ ಗುಂಡು ಹಾರಿಸಿ ಹಲವು ರೈತರು ಗಾಯಗೊಳ್ಳುವಂತೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಅಧಿಕಾರಕ್ಕೆ ಬರುವ ಎಲ್ಲ ಸರ್ಕಾರಗಳು ರೈತರನ್ನು ಏನೋ ಉದ್ಧಾರ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ನಿಜವಾದ ಬಣ್ಣ ತೋರಿಸುತ್ತಿವೆ ಎಂದು ಆರೋಪಿಸಿದರು.
ಪೊಲೀಸರ ದೌರ್ಜನ್ಯಕ್ಕೆ ಸಿಲುಕಿ ಗಾಯಗೊಂಡಿರುವ ರೈತರಿಗೆ ತಲಾ 20 ಲಕ್ಷ ಪರಿಹಾರ ನೀಡಬೇಕು ಹಾಗೂ ಹಲ್ಲೆ ಮಾಡಿರುವ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಉಷಾ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಮುಖಂಡ ಕೆ.ಶ್ರೀನಿವಾಸಗೌಡ, ತಾಲೂಕಾಧ್ಯಕ್ಷ ಮರಗಲ್ ಶ್ರೀನಿವಾಸ್, ಐತಾಂಡಹಳ್ಳಿ ಅಮರೇಶ್, ಇಲಿಯಾಜ್ ಜಾನ್, ಗೋಪಾಲಪ್ಪ, ಹನುಮಪ್ಪ, ರಾಮಕ್ಕ, ಸರಸ್ವತಮ್ಮ, ರತ್ನಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

