ರೈಲ್ವೆ ಕೋಚ್ ಘಟಕ 5 ವರ್ಷದೊಳಗೆ ನಿರ್ಮಾಣ
ಕೋಲಾರ: ಇನ್ನು ಐದು ವರ್ಷದೊಳಗೆ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕೋಚ್ ಘಟಕ ನಿರ್ಮಿಸಿ ಉತ್ಪಾದನೆ ಆರಂಭಿಸಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದಾನಂದಗೌಡರು ಮಂಡಿಸಿರುವ ರೈಲ್ವೆ ಬಜೆಟ್ ವಾಸ್ತವ ಸಂಗತಿಗಳನ್ನು ಆಧರಿಸಿದ್ದು, ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಈ ಹಿಂದಿನ ಸರ್ಕಾರ ರೈಲ್ವೆ ಕೋಚ್ ಕಾರ್ಖಾನೆಗೆ ಹಣ ಮೀಸಲು ಇಟ್ಟಿರಲಿಲ್ಲ. ಈಗ ಸದಾನಂದಗೌಡರು ರು. 146 ಕೋಟಿ ನಿಗದಿ ಮಾಡಿ, 2014-15ನೇ ಸಾಲಿನಲ್ಲಿ ರು. 10ಕೋಟಿ ಬಿಡುಗಡೆ ಮಾಡಲು ಸಮ್ಮತಿಸುವ ಮೂಲಕ ಯೋಜನೆ ಸ್ಥಗಿತವಾಗದಂತೆ ಎಚ್ಚರವಹಿಸಿದ್ದಾರೆಂದರು.
ರೈಲ್ವೆ ಕೋಚ್ ಕಾರ್ಖಾನೆಗೆ ಚಾಲನೆ ಸಿಗಬೇಕೆಂದು ತಾವು ರೈಲ್ವೆ ಬಜೆಟ್ ಮಂಡನೆಗೆ ಮುಂಚಿತವಾಗಿ ಸದಾನಂದಗೌಡರನ್ನು ಭೇಟಿ ಮಾಡಿ, ಒತ್ತಾಯಿಸಿದ್ದೆ. ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ. ಕೋಚ್ ಘಟಕಕ್ಕೆ ರು. 1460.92 ಕೋಟಿ ಬೇಕಾಗುತ್ತದೆ. ವರ್ಷಕ್ಕೆ 500 ಕೋಚ್ಗಳನ್ನು ನಿರ್ಮಿಸಬಹುದಾಗಿದೆ. ಇದರಿಂದ 5 ಸಾವಿರ ಜನರಿಗೆ ಉದ್ಯೋಗ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಹಾಯವಾಗುತ್ತದೆ. ಪ್ರಾರಂಭದಲ್ಲಿ ರು. 10 ಕೋಟಿ ನೀಡಲು ಒಪ್ಪಿದ್ದರೂ, ಐದು ವರ್ಷಗಳಲ್ಲಿ ಯೋಜನೆಗೆ ಬೇಕಾಗುವ ಪೂರ್ಣ ಹಣವನ್ನು ಬಿಡುಗಡೆ ಮಾಡಿ, ಕೋಚ್ ಘಟಕವನ್ನು ಐದು ವರ್ಷಗೊಳಗೆ ಮುಗಿಸಿಕೊಡುವ ನಂಬಿಕೆ ಇದೆ ಎಂದರು.
ರಾಜ್ಯ ಸರ್ಕಾರ ಕೂಡಲೇ ತನ್ನ ಪಾಲಿನ ಹಣವನ್ನು ಹಾಗೂ ಘಟಕ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ರೈಲ್ವೆ ಇಲಾಖೆಗೆ ನೀಡಬೇಕು. ಸರ್ಕಾರಿ ಮತ್ತು ಖಾಸಗಿ ಭೂಮಿಯ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೂಡಲೇ ಸದಾನಂದಗೌಡ ಹಾಗೂ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸದಾನಂದಗೌಡರು 64 ಸಾವಿರ ಕೋಟಿ ಗಾತ್ರದ ರೈಲ್ವೆ ಬಜೆಟ್ ಮಂಡಿಸಿದ್ದು, ಇದರಲ್ಲಿ ರಾಜ್ಯಕ್ಕೆ 1605.50 ಕೋಟಿ ರು. ಮೀಸಲಿಟ್ಟಿದ್ದಾರೆ. ಹೊಸ ರೈಲು ಮಾರ್ಗಕ್ಕೆ ರು. 517 ಕೋಟಿ, ಗೇಜ್ ಪರಿವರ್ತನೆಗೆ ರು. 12 ಕೋಟಿ, ಗೇಜ್ ಡಬ್ಲಿಂಗ್ಗೆ ರು. 759ಕೋಟಿ, ಕೆಳ ಸೇತುವೆ ಮತ್ತು ಮೇಲು ಸೇತುವೆಗಾಗಿ ರು. 171 ಕೋಟಿ ಮತ್ತು ರೈಲ್ವೆ ಕೋಚ್ ಘಟಕಕ್ಕೆ ರು. 146.6 ಕೋಟಿ ಮೀಸಲಿಟ್ಟಿದ್ದಾರೆ. ಬುಲೆಟ್ ರೈಲು ಯೋಜನೆಯನ್ನು ಘೋಷಣೆ ಮಾಡಿದ್ದು, ಆರಂಭಿಕ ಹಂತದಲ್ಲಿ ಮುಂಬೈ-ಅಹಮದಾಬಾದ್ ನಡುವೆ ಪ್ರಥಮ ಬುಲೆಟ್ ರೈಲು ಓಡಿಸಲು ಚಿಂತನೆ ನಡೆಸಿದ್ದಾರೆಂದು ಹೇಳಿದರು.
ಕೇಂದ್ರ ರೈಲ್ವೆ ಸಚಿವ ಸದಾನಂದಗೌಡರು ಯಾವುದೇ ಒಂದು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದೆ, ಎಲ್ಲಾ ರಾಜ್ಯಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದ್ದಾರೆಂದು ಹೇಳಿದರು. ರೈಲುಗಳ ತಾಂತ್ರಿಕ ವ್ಯವಸ್ಥೆ ಮತ್ತು ಇತರ ವಿಷಯಗಳ ಬಗ್ಗೆ ಶಿಕ್ಷಣ ನೀಡುವ ಉದ್ದೇಶದಿಂದ ರೇಲ್ವೆ ವಿವಿ ಸ್ಥಾಪನೆ, ಮಹಿಳಾ ಭಧ್ರತೆಗೆ 4 ಸಾವಿರ ಮಹಿಳಾ ಕಾನ್ಸ್ಟೆಬಲ್ಗಳ ನೇಮಕ ಖಾಸಗಿ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ನೀಡಲು ನಿರ್ದರಿಸಿರುವುದು ರೈಲ್ವೆ ಇಲಾಖೆಯ ದೂರದೃಷ್ಟಿಯ ಸಂಕೇತವಾಗಿದೆ. ರಾಜ್ಯದವರೇ ಆದ ಸದಾನಂದಗೌಡರು ರೇಲ್ವೆ ಇಲಾಖೆಯನ್ನು ಮಾದರಿ ಇಲಾಖೆ ಮಾಡಲಿದ್ದಾರೆಂದರು. ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ನಗರ ಅಧ್ಯಕ್ಷ ಜಯಂತಿಲಾಲ್, ಗ್ರಾಮಾಂತರ ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಮಾಗೇರಿ ನಾರಾಯಣಸ್ವಾಮಿ, ಮಹೇಶ್ ಶಿಳ್ಳಂಗೆರೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

