ಕೋಲಾರ

ಕಾಂಗ್ರೆಸ್ ನಾಯಕನ ಮಗನಿಂದ ಸಾರ್ವಜನಿಕರ ಮೇಲೆ ಹಲ್ಲೆ

Published On :

ಪೆರಿಕಲ್ ಮುನಿಯಪ್ಪರ ಪುತ್ರ ಮಿಥುನ್ ಹಲ್ಲೆ ನಡೆಸಿದ ಆರೋಪಿ, ಕುಡಿದ ಅಮಲಿನಲ್ಲಿ ಯದ್ವಾತದ್ವಾ ದಾಳಿ ನಡೆಸಿದ ಆರೋಪ
ಚಿಕ್ಕಬಳ್ಳಾಪುರ: ಕುಡಿದು ಗೆಳೆಯರೊಂದಿಗೆ ರಸ್ತೆಯಲ್ಲಿ ಗಲಾಟೆ ಮಾಡುತ್ತಿರುವುದನ್ನು ಪ್ರಶ್ನಿಸಿದ ಕಾರಣ ಕಾಂಗ್ರೆಸ್ ಮುಖಂಡರೊಬ್ಬರ ಮಗ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ. ಇವರಲ್ಲಿ ಒಬ್ಬನಿಗೆ ಮಾಂಸ ಕಿತ್ತು ಬರುವಂತೆ ತುಟಿ ಕಚ್ಚಿ ಗಾಯಗೊಳಿಸಿದ್ದಾನೆ.
ಕಾಂಗ್ರೆಸ್ ಮುಖಂಡ ಪೆರಿಕಲ್ ಮುನಿಯಪ್ಪರ ಪುತ್ರ ಮಿಥುನ್ ಹಲ್ಲೆ ನಡೆಸಿದ ಆರೋಪಿ. ಈತನಿಂದ ಹಲ್ಲೆಗೊಳಗಾದ ಮಹಮದ್ ಆಲಿ, ಅಶೋಕ್  ಕುಮಾರ್ ಮತ್ತು ಮುಬಾರಕ್ ಪಾಷಾ ಗಾಯಾಳುಗಳಾಗಿದ್ದಾರೆ. ಮಹಮದ್ ಆಲಿಯ ಮುಖದ ಮೇಲೆಲ್ಲಾ ಗಾಯಗಳಾಗಿ, ತುಟಿ ಕಿತ್ತು ಬಂದಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ ಇಬ್ಬರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಹಿನ್ನೆಲೆ: ಕುಡಿದ ನಶೆಯಲ್ಲಿದ್ದ ಮಿಥುನ್ ಮತ್ತು ಆತನ ಗೆಳೆಯರು ನಗರದ ದೊಡ್ಡಮಸೀದಿ ರಸ್ತೆಯಲ್ಲಿ ಶನಿವಾರ ರಾತ್ರಿ ಯುವಕನೊಬ್ಬನಿಗೆ ಥಳಿಸುತ್ತಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ ಮನೆಯ ಸಮೀಪದಲ್ಲಿ ನಿಲ್ಲಿಸಿದ್ದ ಮಹಮದ್ ಅಲಿ ಕಾರಿಗೆ ಕಲ್ಲು ಎಸೆದು ಅದರ ಗಾಜು ಪುಡಿಪುಡಿ ಮಾಡಿದ್ದಾರೆ. ಇದರಿಂದ ಹೊರ ಬಂದ ಮಹಮದ್ ಅಲಿ ಪ್ರಶ್ನಿಸಿದಾಗ ಆಕ್ರೋಶಗೊಂಡ ಮಿಥುನ್ ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜೊತೆಗೆ ಬೆದರಿಕೆ ಹಾಕಿದ್ದಾನೆ. ಆದರೆ ಕಾರಿಗೆ ಜಖಂ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಆಗ ಏಕಾಏಕಿ ಮಹಮದ್ ಅಲಿ ಮೇಲೆ ಎರಗಿದ ಮಿಥುನ್ ತುಟಿ ಕಚ್ಚಿ ಸ್ನೇಹಿತರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾನೆ.
ಸ್ಥಳೀಯರು ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಮಹಮದ್ ಅಲಿ ತುಟಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಎನ್ನಲಾಗಿದೆ. ಗಾಯಾಳುಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಿಥುನ್ ವಿರುದ್ಧ ಹಲ್ಲೆ, ಕೊಲೆ ಯತ್ನ, ದಾಂಧಲೆ ಆರೋಪದಡಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೌಡಿ ಶೀಟರ್: ಮಿಥುನ್ ಈಗಾಗಲೇ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಹಲವರಿಗೆ ಬೆದರಿಕೆ ಹಾಕಿರುವುದು, ಹಲ್ಲೆ ನಡೆಸಿರುವುದು, ದಾಂಧಲೆ ನಡೆಸಿರುವುದು, ಕಿರುಕುಳ ನೀಡಿರುವುದರ ಬಗ್ಗೆ ದೂರುಗಳು ದಾಖಲಾಗಿದ್ದು, ಆರೋಪಿಗೆ ಈಗಾಗಲೇ ಪೊಲೀಸರು ರೌಡಿಶೀಟರ್ ಪಟ್ಟ ನೀಡಿದ್ದಾರೆ. ಗಲಾಟೆಗಳಿಗೆ ಹೋಗದಂತೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಮಿಥುನ್ ತನ್ನ ಚಾಳಿ ಬದಲಿಸಿಲ್ಲ. ಪೊಲೀಸರು ಸೆಕ್ಷನ್  307 ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಿಥುನ್  ನನ್ನು ಬಂಧಿಸಿದ್ದು ಈತನ ಗೆಳೆಯರಾದ ಗೋಪಿ, ರಮೇಶ್  ಸೇರಿದಂತೆ ನಾಲ್ವರನ್ನು ಬಂಧಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.