ಕೋಲಾರ

ಶೈಕ್ಷಣಿಕ ಪ್ರವಾಸದಿಂದ ಜ್ಞಾನ ವೃದ್ಧಿ

Published On :

ಚಿಂತಾಮಣಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದಿಂದ ಜ್ಞಾನ ಮತ್ತು ಹೊರ ಜಗತ್ತಿನ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಜಿಪಂ ಉಪಾಧ್ಯಕ್ಷೆ ವೀಣಾ ಗಂಗುಲಪ್ಪ ಹೇಳಿದರು. ನಗರದ ಗುರುಭವನ ಮುಂಭಾಗದಲ್ಲಿ ಜಿಪಂ ಹಾಗೂ ಸಾಶಿಇ ವತಿಯಿಂದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 'ಕರ್ನಾಟಕ ದರ್ಶನ' ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ಬಡ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕರ್ನಾಟಕ ದರ್ಶನ ಪ್ರವಾಸ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷ ಜಿಯಾವುಲ್ಲಾ ರೆಹಮಾನ್ ಅವರು ವಿದ್ಯಾರ್ಥಿಗಳ ಪ್ರವಾಸಕ್ಕೆ ಶುಭ ಕೋರಿದರು.ಈ ವೇಳೆ, ಬಿಇಒ ಕೆ.ಜಿ. ರಂಗಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಜನಾರ್ದನ ರೆಡ್ಡಿ, ನಗರಸಭೆ ಸದಸ್ಯರಾದ ಡಿ.ಸಾದಪ್ಪ, ಆರ್.ಪ್ರಕಾಶ್, ಸುಜಾತಮ್ಮ ಶಿವಣ್ಣ, ಇಸಿಒ ಕೃಷ್ಣಮೂರ್ತಿ, ಶಿಕ್ಷಕರಾದ ತಿಪ್ಪೇಸ್ವಾಮಿ, ಲೋಕೇಶ್, ಹನುಮಂತಯ್ಯ, ವಿಶ್ವನಾಥ್, ನರಸಿಂಹಪ್ಪ, ಸುಜಾತ, ಸುಧಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆ
ಗೌರಿಬಿದನೂರು: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಸಮಿತಿ ಅಧ್ಯಕ್ಷರಾಗಿ ಹೀರೇಬಿದನೂರಿನ ಎಚ್.ಆರ್. ಗೋವಿಂದರಾಜು, ಕಾರ್ಯದರ್ಶಿಯಾಗಿ ಜಿ.ವಿ. ರಾಜಶೇಖರ್, ಖಜಾಂಚಿಯಾಗಿ ದೇವರಾಜು ಆಯ್ಕೆಯಾಗಿದ್ದಾರೆ. ಜಿ.ವಿ. ಕೃಷ್ಣಮೂರ್ತಿ, ಕೆ.ವಿ. ನಂಜುಂಡಗೌಡ. ವಿ.ಪಿ.ನಾರಾಯಣಗೌಡ, ಸಿ.ಆರ್. ನರಸಿಂಹಮೂರ್ತಿ ಇದ್ದರು.

ರೋಜ್‌ಗಾರ್ ದಿನಾಚರಣೆ
ಟೇಕಲ್: ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ರೋಜ್‌ಗಾರ್ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಗಾರರ ಉದ್ಯೋಗ ಚೀಟಿಗಳ ಪರಿಷ್ಕರಣೆ ಮಾಡಲಾಯಿತು. ಸಭೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎಚ್.ಗೋವಿಂದೇಗೌಡ ಮಾತನಾಡಿ, ನರೇಗಾ ಕಾರ್ಯಕ್ರಮದಿಂದ ಗ್ರಾಮಗಳಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಕೂಲಿಗಾರರಿಗೂ ಹಣ ಸಂದಾಯವಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಮುನಿಯಪ್ಪ, ಕಾಯಕ ಬಂಧು ಮೇಘರಾಜ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮೋಟಾರ್ ಜಪ್ತಿ, ನಲ್ಲಿ ಸಂಪರ್ಕ ಕಡಿತ
ಶಿಡ್ಲಘಟ್ಟ: ಪಟ್ಟಣದಲ್ಲಿ ಕುಡಿಯುವ ನೀರಿನ ನಲ್ಲಿಗಳಿಗೆ ವಿದ್ಯುತ್ ಮೋಟಾರ್ ಪಂಪ್ ಅಳವಡಿಸಿದ್ದ ಕಂಡು ಬಂದರೆ, ಅಂಥ ಮೋಟಾರ್‌ಗಳನ್ನು ಜಪ್ತಿ ಮಾಡಿ ನಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಾಮ್ ಪ್ರಕಾಶ್ ತಿಳಿಸಿದರು.  
ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಬೋರ್‌ವೆಲ್‌ಗಳನ್ನು ಕೊರೆಸಿದರೂ ಸಹ ನೀರು ಸಿಗುವುದು ಕಷ್ಟಕರ. ಕುಡಿಯುವ ನೀರು ಬಿಡುವ ಸಮಯದಲ್ಲಿ ನಲ್ಲಿಗಳಿಗೆ ಪಂಪ್ ಅಳವಡಿಸುವ ಬಗ್ಗೆ ದೂರು ಕೇಳಿ ಬರುತ್ತಿವೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಯಾರಾದರೂ ನೀರಿನ ಪೈಪ್ ಲೈನ್‌ಗಳಿಗೆ ವಿದ್ಯುತ್ ಮೋಟಾರ್ ಪಂಪ್ ಬಳಸಿದರೆ ಅಂಥವರ ನಲ್ಲಿ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಗುವುದು. ಅಲ್ಲದೆ, ಅಕ್ರಮವಾಗಿ ನಲ್ಲಿಯಿಂದ ನೀರೆತ್ತಲು ಬಳಸುವ ವಿದ್ಯುತ್ ಮೋಟಾರ್ ಪಂಪ್‌ಗಳನ್ನು ಕೂಡಾ ಜಪ್ತಿ ಮಾಡಿಕೊಂಡು ಮತ್ತೆ ಹಿಂದಿರಿಗಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರೈತ ವಂಚಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕೋಲಾರ: ರಸಗೊಬ್ಬರವನ್ನು ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಖಾಸಗಿ ಗೊಬ್ಬರ ಅಂಗಡಿ ಮಾಲೀಕರು ಹಾಗೂ ಬಯೋ ನಕಲಿ ಕೀಟನಾಶಕಗಳ ಮಾರಾಟಗಾರರ ಕಡಿವಾಣಕ್ಕೆ ಒತ್ತಾಯಿಸಿ ರೈತ ಸಂಘದಿಂದ ಸೋಮವಾರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಕಳೆದ ವರ್ಷವೂ ಇದೇ ಕಾರಣಕ್ಕೆ ಪ್ರತಿಭಟನೆ ನಡೆಸಲಾಗಿದೆ. ಈ ವರ್ಷವೂ ರೈತರನ್ನು ವಂಚಿಸಲಾಗುತ್ತಿದೆ. ಗೊಬ್ಬರದ ಅಂಗಡಿಗಳ ಮಾಲೀಕರು ಸರ್ಕಾರ ನಿಗದಿಪಡಿಸಿರುವ ಬೆಲೆಗಿಂತ ಹೆಚ್ಚಿನ ಹಣ ಪಡೆಯುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆಂದು ಮುಖಂಡರು ಆರೋಪಿಸಿದರು. ಬಯೋ ನಕಲಿ ಕೀಟನಾಶಕ ಔಷಧಿಗಳು ಮಾರಾಟ ಮಾಡುತ್ತಿದ್ದವರ ಮೇಲೆ ಮೊಕದ್ದಮೆ ದಾಖಲಾಗಿತ್ತು. ನಕಲಿ ಔಷಧಿ ಮಾರಾಟಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕೋರ್ಟ್‌ನಿಂದ ತೆರವು ಮಾಡಿಸಿ ಮತ್ತೆ ರೈತರನ್ನು ವಂಚಿಸಲಾಗುತ್ತಿದೆ. ಗೊಬ್ಬರದ ಅಂಗಡಿಯ ಮಾಲೀಕರು ಕಡ್ಡಾಯವಾಗಿ ರಸೀದಿ ನೀಡಬೇಕು, ಎಂಆರ್‌ಪಿ ದರದಲ್ಲೇ ಗೊಬ್ಬರ ಮಾರಾಟ ಮಾಡಬೇಕು, ಕಳಪೆ ಬಯೋ ಔಷಧಿಗಳ ಮಾರಾಟ ಜಾಲವನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ನಾರಾಯಣಗೌಡ, ತಾಲೂಕಾಧ್ಯಕ್ಷ ನೀಲಕಂಠಪುರ ಮುನೇಗೌಡ, ಮುಖಂಡರಾದ ಬಂಗವಾದಿ ನಾಗರಾಜ್ ಗೌಡ, ಹುಲ್ಕೂರ್ ಹರಿಕುಮಾರ್, ಯಲ್ದೂರು ಮೋಹನ್‌ಗೌಡ, ಮೂರಂಡಹಳ್ಳಿ ಶಿವಾರೆಡ್ಡಿ, ಹೆಬ್ಬಣಿ ಆನಂದರೆಡ್ಡಿ, ಕೆಂಬೋಡಿ ಕೃಷ್ಣೇಗೌಡ, ರಂಜೀತ್ ಕುಮಾರ್ ಇತರರು ಇದ್ದರು. ಮನವಿ ಸ್ವೀಕರಿಸಿದ ಜಂಟಿ ಕೃಷಿ ನಿರ್ದೇಶಕ ಚಿಕ್ಕಣ್ಣ ಕೋರ್ಟ್‌ನಲ್ಲಿರುವ ತಡೆಯಾಜ್ಞೆಯನ್ನು ಕೃಷಿ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ಯತ್ನಿಸುವುದಾಗಿ ಭರವಸೆ ನೀಡಿದರು.

ಕೆ.ಜಿ.ಹಳ್ಳಿ ತಂಡಕ್ಕೆ ಬಹುಮಾನ
ಟೇಕಲ್: ಶೆಟ್ಟಹಳ್ಳಿ ಗ್ರಾಮದಲ್ಲಿ ವಹ್ನಿಕುಲ ಸೇವಾ ಸಮಿತಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಕೆ.ಜಿ.ಹಳ್ಳಿ ಕ್ರಿಕೆಟ್ ತಂಡ ಪ್ರಥಮ ಬಹುಮಾನ ಪಡೆದಿದೆ. 4 ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸುಮಾರು 45ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಫೈನಲ್‌ನಲ್ಲಿ ದಾಸರಹಳ್ಳಿ ಕ್ರಿಕೆಟ್ ತಂಡ ಹಾಗೂ ಕೆ.ಜಿ.ಹಳ್ಳಿ ಕ್ರಿಕೆಟ್ ತಂಡದ ಮಧ್ಯೆ ನಡೆದ ಸೆಣಸಾಟದಲ್ಲಿ ಕೆ.ಜಿ.ಹಳ್ಳಿ ತಂಡ ಗೆಲವು ಸಾಧಿಸಿತು. ಕೆ.ಜಿ.ಹಳ್ಳಿ ತಂಡದ ನಾಯಕ ಮಂಜುನಾಥಗೌಡ, ಉಪನಾಯಕ ಗಣೇಶ್ ಹಾಗೂ ತಂಡದವರಿಗೆ ಸೇವಾ ಸಮಿತಿಯ ಎಸ್.ಜಿ.ರಾಮಮೂರ್ತಿ ಕಪ್ ಹಾಗೂ 5000 ನಗದು ಬಹುಮಾನ ವಿತರಿಸಿದರು. ಕ್ರೀಡಾಪಟುಗಳಾದ ಸುಬ್ಬು, ತಪರೇಜ್, ಸಲ್ಮಾನ್, ದಶರಥ್, ಪ್ರವೀಣ್, ಆಲಿ, ಚಲಪತಿ, ಆದಿ, ಶಂಕರಾಚಾರಿ, ಉಮೇಶ್ ಅವರುಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ದ್ವಿತೀಯ ಬಹುಮಾನವನ್ನು ದಾಸರಹಳ್ಳಿ ತಂಡದ ನಾಯಕ ಬಾಬು ಪಡೆದುಕೊಂಡರು.

ಬಾಲಕಿನಿಗೆ ಕಚ್ಚಿದ ಹಾವು
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಒಕ್ಕಲೆಬ್ಬಿಸಿದ ಹಿನ್ನೆಲೆಯಲ್ಲಿ ನಗರದ ಹೊರ ವಲಯದ ಕಂದವಾರದ ಬಳಿ ವಾಸವಾಗಿರುವ ಬಸಪ್ಪನ ಛತ್ರದ ನಿವಾಸಿಗಳ ಬಿಡಾರದಲ್ಲಿ ಹಾವೊಂದು ಬಾಲಕನಿಗೆ ಕಚ್ಚಿದ್ದು, ಆತ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಬಾಲಕ ಭವಾನಿ ಪ್ರಸಾದ್ ಹಾವು ಕಚ್ಚಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಆರೋಗ್ಯ ತಪಾಸಣಾ ಶಿಬಿರ
ಮಾಲೂರು: ಗ್ರಾಮೀಣ ಭಾಗದ ಯುವಕರು ವಿದ್ಯಾವಂತರಾದಾಗ ಮಾತ್ರ ಗ್ರಾಮಗಳ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಂಸದ ಕೆ.ಹೆಚ್. ಮುನಿಯಪ್ಪ ಹೇಳಿದರು. ಅವರು ತಾಲೂಕಿನ ಪುರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘವು ಡಾ. ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತ  ಹಳ್ಳಿಗಳಲ್ಲಿ ಶಾಂತಿ-ಸ್ವಚ್ಛತೆ ಕಾಪಾಡಬೇಕಾದರೆ ಗ್ರಾಮದ ಶೈಕ್ಷಣಿಕ ಅಭಿವೃದ್ಧಿಯಾಗಬೇಕು. ರೈತರ ಮಕ್ಕಳು ಕೃಷಿ ಜತೆಯಲ್ಲಿ ಶಿಕ್ಷಣಕ್ಕೂ ಮಹತ್ವ ನೀಡಬೇಕು.ಜತೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮುತರ್ವಜಿ ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಜನನಿ ಚಾರಿಟಬಲ್ ಟ್ರಸ್ಟ್ ಸಹಕಾರದಲ್ಲಿ ನಡೆಸಲಾದ ಆರೋಗ್ಯ ತಪಾಸಣೆ ಶಿಬಿರದಲ್ಲಿ 123 ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ದಸಂಸ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್,ಗೀತೆ ರಚನೆಕಾರ ಗೊಲ್ಲಹಳ್ಳಿ ಶಿವಪ್ರಸಾದ್, ಜಾನಪದ ಗಾಯಕ ಮುನಿರೆಡ್ಡಿ, ಜಾನಪದ ಅಕಾಡೆಮಿ ಅದ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಚೆನ್ನಕೇಶವ, ಜಿ.ಪಂ. ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಕೆ.ಪಿ.ಸಿ.ಸಿ. ಸದಸ್ಯ ರಘುನಾಥ್, ಕೊಲಂಬಿಯಾ ವಿಶ್ವವಿದ್ಯಾಲಯ ವೀರಸ್ವಾಮಿ ರೆಡ್ಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭಯ್ಯ, ಸಂಘಟನೆಯ ಕೆ. ಮುರಳಿ, ದೇವೇಂದ್ರ, ಪ್ರಕಾಶ್, ರವಿ ಇದ್ದರು.

ಗುರುವಂದನಾ ಕಾರ್ಯಕ್ರಮ
ಮಾಲೂರು: ಸಂಘಟನೆಯಲ್ಲಿ ಸಮುದಾಯದ ಬಲವಿರುವುದರಿಂದ ಸಂಘವನ್ನು ಕಟ್ಟುವ ಮೂಲಕ ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರಿಯಾಗಬೇಕು ಎಂದು ಶ್ರೀ ಯೋಗಿಶ್ವರ ಯಾಜ್ಞವಲ್ಕೃ ಸಂಘದ ಅಧ್ಯಕ್ಷ ಆರ್. ವಿಠಲ್ ರಾವ್  ಹೇಳಿದರು. ಅವರು ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಜಿಲ್ಲಾ ಕಣ್ವ ಶಾಖ ಸಮಾವೇಶದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡುತ್ತ ಸಾಮುದಾಯ ಅಭಿವೃದ್ಧಿಯಾಗಬೇಕಾದರೆ ಸಮುದಾಯದ ಸಂಘಗಳು ಪ್ರತಿದಿನ ಚಟುವಟಿಕೆ ಇಂದ ಇರಬೇಕು ಎಂದರು. ಪಟ್ಟಣದಲ್ಲಿ ಜಿಲ್ಲಾ ಕಣ್ವ ಶಾಖ ಸಮಾವೇಶ ಹಮ್ಮಿಕೊಳ್ಳಲು ಜಿಲ್ಲಾಧ್ಯಕ್ಷರಾದ ಅಶ್ವಥ್ ನಾರಾಯಣ್ ರಾವ್ ಒಪ್ಪಿಗೆ ಸೂಚಿಸಿದ್ದು, ಸಮಾವೇಶ ಯಶಸ್ವಿಯಾಗಲು ಪ್ರತಿಯೂಬ್ಬರ ಸಹಕಾರ ಅಗತ್ಯ ಎಂದರು. ತಾಲೂಕು ವಲ್ಕ್ಯ ಸಂಘದ ಕಾರ್ಯದರ್ಶಿ ಸೀತಾರಾಮ ಮೂರ್ತಿ ಮಾತನಾಡಿದರು. ಸಹಕಾರ್ಯದರ್ಶಿ ಶ್ರೀನಿವಾಸ ಮೂರ್ತಿ,ಶ್ರೀಧರ ಮೂರ್ತಿ, ಗಣೇಶ್, ಸಂಘಟನಾ ಕಾರ್ಯದರ್ಶಿ ಕಮಲೇಶ್, ಹೆಚ್.ಎಲ್. ಮಹೇಶ್, ಅನಂತು, ಕೃಷ್ಣಮೂರ್ತಿ,ನಾಗರಾಜ್ ಹೆಚ್.ಎಸ್. ಜನಾರ್ದನ್, ಸುಬ್ರಮಣಿ ಇದ್ದರು.

ಅಧ್ಯಕ್ಷರ ಆಯ್ಕೆಗೆ ಮನವಿ  
ಚಿಂತಾಮಣಿ: ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಆಗಸ್ಟ್ 1, 2 ಮತ್ತು 3 ರಂದು ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ಅವರನ್ನು ಆಯ್ಕೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎನ್.ವೆಂಕಟಾಚಲಪತಿ ಮನವಿ ಮಾಡಿದ್ದಾರೆ.

ಸಾಹಿತ್ಯ ಬೆಳವಣಿಗೆಗೆ ಚುಟುಕು ಸಾಹಿತ್ಯ ಸಹಕಾರಿ
ಗೌರಿಬಿದನೂರು: ಸಂಯುಕ್ತ ಪದವಿ ಪೂರ್ವಕಾಲೇಜು ಆವರಣದಲ್ಲಿ ನೆಡೆದ ತಾಲೂಕು ಚುಟುಕ ಸಾಹಿತ್ಯ ಪರಿಷತ್ ಪಧಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಸಾ.ನಾ. ಲಕ್ಷ್ಮಣಗೌಡ, ಚುಟುಕ ಸಾಹಿತ್ಯ ಪ್ರತಿಭೆ ಎಲ್ಲಾ ಸಾಹಿತ್ಯಾಸಕ್ತರಲ್ಲಿಯೂ ಅಡಗಿರುತ್ತದೆ. ಆ ಪ್ರತಿಭೆಯ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಲು ಚುಟುಕ ಸಮ್ಮೆಳನಗಳು ನಿರಂತರವಾಗಿ ನೆಡಸುತ್ತ ಸಾಹಿತ್ಯವನ್ನು ಉಳಿಸಿ ಬೆಳಸುವ ಕಾರ್ಯನೆಡೆಯಬೇಕಾಗಿದೆ ಎಂದರು.

ನೀಲಗಿರಿ ಬೆಳೆ ನಿಷೇಧಕ್ಕೆ ಆಗ್ರಹ
ಕೋಲಾರ: ಜಿಲ್ಲೆಯಲ್ಲಿ ಅಂತರ್ಜಲ ಸಮಸ್ಯೆಗೆ ಕಾರಣವಾಗಿರುವ ಹಾಗೂ ಅಭಿವೃದ್ಧಿಗೆ ಮಾರಕವಾದ ನೀಲಗಿರಿ ಬೆಳೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಆಗ್ರಹಿಸಿದರು. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಲಾಭಕ್ಕಾಗಿ ರೈತರನ್ನು ಪ್ರಚೋದಿಸಿ ನೀಲಗಿರಿ ಬೆಳೆ ಜಿಲ್ಲೆಯಲ್ಲಿ ಹರಡುವಂತೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಮತ್ತು ಅರಣ್ಯ ಅಭಿವೃದ್ಧಿ ನಿಗಮಗಳ ಮಟ್ಟದಲ್ಲಿ ನೀಲಗಿರಿ ಬೆಳೆಯಲು ನಿಷೇಧವಿದ್ದರೂ ಈ ಮಧ್ಯೆ ಅರಣ್ಯ ಅಭಿವೃದ್ಧಿ ನಿಗಮ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಬೆಳೆಯಲು ಮುಂದಾಗಿದ್ದು ಇದಕ್ಕೆ ಕಡಿವಾಣ ಹಾಕದಿದ್ದರೆ ಜಿಲ್ಲೆ ಬರಡಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಪರಸರವಾದಿ ಎಂ.ವಿ. ನಾಗಭೂಷಣ, ಚಲಪತಿ ರೆಡ್ಡಿ, ನಿವೃತ್ತ ರಾಜಸ್ವ ನಿರೀಕ್ಷಕ ಇ. ಕೃಷ್ಣಪ್ಪ, ಮುಳಬಾಗಲು ತಾಲೂಕು ಅಗರ ಗ್ರಾ.ಪಂ. ಅಧ್ಯಕ್ಷ ಎಂ.ಎನ್. ಬಲರಾಮೇಗೌಡ, ಸಾಮಾಜಿಕ ಕಾರ್ಯಕರ್ತ ಡಿ. ಮುನೇಶ್ ಮನವಿ ನೀಡುವ ಸಂದರ್ಭದಲ್ಲಿದ್ದರು.

ನಾ ಕಂಡ ಕವಿ ಕಾರ್ಯಕ್ರಮಕ್ಕೆ ಚಾಲನೆ
ಮಾಲೂರು: ಇಂದಿನ ಸ್ಪರ್ಧಾತ್ಮಕ ಯುಗದ ಪೀಳಿಗೆಯವರು ತಮ್ಮ ಬದುಕು ಕಟ್ಟಿಕೊಳ್ಳುವ ಅವಸರದಲ್ಲಿ ಸಾಹಿತ್ಯ-ಸಂಸ್ಕೃತಿಯಿಂದ ದೂರ ಸಾಗುತ್ತಿರುವುದು ದುರಂತ ಎಂದು ಬಾಪೂಜಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ವಿ. ಹನಮಂತಯ್ಯ ಹೇಳಿದರು.  ಅವರು ಇಲ್ಲಿನ ಪತ್ರಕರ್ತರ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ನಾ ಕಂಡ ಕವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇಂದಿನ ಯುವ ಪೀಳಿಗೆಯನ್ನು ಸಾಹಿತ್ಯ ಕಡೆ ಸೆಳೆಯುವ ಹಾಗೂ ಮುಂದಿನ ಪೀಳಿಗೆಗೆ ಸಾಹಿತ್ಯ ಭಂಡಾರ ರಕ್ಷಿಸಿ ಉಳಿಸುವ ಜವಾಬ್ದಾರಿ ಈಗಿನ ಹಿರಿಯ ಕವಿ-ಸಾಹಿತಿಗಳ ಮೇಲಿದೆ ಎಂದರು. ಈ ನಿಟ್ಟಿನಲ್ಲಿ ಸ್ಥಳೀಯ ಸಾಹಿತಿ ವೇಣುಗೋಪಾಲ್ ವಹ್ನಿ ರವರ ಸಾಹಿತ್ಯ ಕೃಷಿ ಶ್ಲಾಘನೀಯವಾಗಿದೆ ಎಂದರು.ಅವರಲ್ಲಿರುವ ಸಾಹಿತ್ಯ ಗೀತೆ ರಚನೆ, ನಾಟಕ ರಚನೆಗಳು ಅವರನ್ನು ಹಲವು ಪ್ರತಿಭೆಗಳ ಸಮ್ಮಿಲನಗಳ ಪ್ರತಿರೂಪವಾಗಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಶಿಶು ಸಾಹಿತಿ ಡಾ.ಸಿ.ಎಂ. ಗೋವಿಂದ ರೆಡ್ಡಿ ರವರು ವೇಣುಗೋಪಾಲ್ ವಹ್ನಿ ರವರ ಸಂಶೋಧನ ಕೃತಿ ಪಳೆಯನ್ನರು ಹಾಗೂ ದ್ರೌಪದಿಗೆ ಡಾಕ್ಟರೇಟ್  ತರಬಹುದಾದ ಕೃತಿಯಾಗಿದೆ ಎಂದ ಡಾ. ಗೋವಿಂದ ರೆಡ್ಡಿ ರವರು ಅವರ ಸರಳ ಸಜ್ಜನ ಹಸನ್ಮುಖಿ ನಡವಳಿಕೆ ಇತರ ಸಾಹಿತಿಗಳಿಗೆ ಮಾದರಿಯಾಗಿದೆ ಎಂದರು. ಕವಿ ಕಾವ್ಯ ಕುರಿತು ಮಾತನಾಡಿದ ಅವರ ಒಡನಾಡಿ ಸಾಹಿತಿ ವಿಮರ್ಶಕ ಮಾ.ವೆಂ. ತಮ್ಮಯ್ಯ ಮಾತನಾಡಿ ನಾ ಕಂಡ ಕವಿ ವೇಣು ಹಾಗೂ ನನ್ನ ಗೆಳೆತನ ಬಹಳ ದೀರ್ಘವಾಗಿದ್ದು, ಸಾಹಿತ್ಯ ವಿಚಾರದಲ್ಲಿ ನನ್ನ ಜತೆ ಜಗಳವಾಡುತ್ತಾ ಗಟ್ಟಿ ಸಾಹಿತ್ಯ ಕಟ್ಟಿಕೊಂಡ ಬಾವುಕ ಕವಿ ವೇಣು ಎಂದ ತಮ್ಮಯ್ಯ ರವರು ವೇಣು ರವರು ಸಾಹಿತ್ಯ ಲೋಕದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು. ಚುಟುಕು ಸಾಹಿತ್ಯ ಪರಿಷತ್ ಅದ್ಯಕ್ಷ ಕುಂತೂರು ಚಂದ್ರಪ್ಪ, ಜ.ಮು. ಚಂದ್ರ, ಲಕ್ಕೂರು ಆನಂದ್, ಕೋಳಾಲಪ್ಪ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಪಿ.ಎಂ.ಕೃಷ್ಣಪ್ಪ, ಕೃಷ್ಣಪ್ಪ, ಸರ್ವೆಶ್ ಬಂಟಳ್ಳಿ, ಸತೀಶ್ ಕಾಟೇರಿ, ವಸಂತ್ ಕೋಡಿಹಳ್ಳಿ, ರೋಣೂರು ವೆಂಕಟೇಶ್, ಪ್ರಶಾಂತ್ ವಹ್ನಿ, ನ. ಗುರುಮೂರ್ತಿ, ಮುನಿರತ್ನಂ,ಸಿರಾಜ್ ಅಹ್ಮದ್, ಗುಟ್ಟ ಅಮಿತ್, ಡಾ. ಮಂಜುನಾಥ್, ಡಿ.ಎಂ. ವೆಂಕಟೇಶ್, ಬಿ.ಹೆಚ್. ಸುರೇಶ್, ನಾರಿಗಾನಹಳ್ಳಿ ಶ್ರೀನಿವಾಸ್,ಕೇಶವ ಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.