ಜಿಲ್ಲಾದ್ಯಂತ ಈದ್ ಉಲ್ ಫಿತರ್ ಪರಸ್ಪರ ಶುಭಾಶಯ ವಿನಿಮಯ
ಕೋಲಾರ: ಮುಸಲ್ಮಾನರ ಪವಿತ್ರ ರಂಜಾನ್ ಹಬ್ಬ ಮಂಗಳವಾರ ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದ ಚಿಕ್ಕಬಳ್ಳಾಪುರ ರಸ್ತೆಯ ಮೌಲಾ ಖಾಜಾ ಈದ್ಗಾ ಮೈದಾನದಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಬೆಸ್ಕಾಂ ಕಚೇರಿಯ ಸಮೀಪದ ಈದ್ಗಾ ಮೈದಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಂಸದ ಕೆ.ಎಚ್. ಮುನಿಯಪ್ಪ ಸೇರಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹೊಲೋರಿ, ಮಾಜಿ ಸಚಿವ ನಿಸಾರ್ ಅಹಮ್ಮದ್, ನಗರಸಭೆ ಅಧ್ಯಕ್ಷ ಮುಬಾರಕ್, ನಗರಸಭೆ ಸದಸ್ಯ ಪ್ರಸಾದ್ ಬಾಬು, ಮುಖಂಡರಾದ ಸಾಬೀರ್ ಪಾಷ, ಅತ್ತಾವುಲ್ಲಾ ಖಾನ್, ಅಂಜುಮನ್ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಜಮೀಲ್ ಅಹ್ಮದ್, ಕಾರ್ಯದರ್ಶಿ ಸೈಫುಲ್ಲಾ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.
ಮಾನ್ಯತೆ: ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಮೌಲಾನಾ ತಾಯಿದ್, ರಂಜಾನ್ ಸಂದರ್ಭದಲ್ಲಿ ಕೇವಲ ನಮ್ಮ ಸಮುದಾಯಕ್ಕೆ ಸೇರಿದ ಬಡವರಿಗೆ ಮಾತ್ರವಲ್ಲದೆ, ಬಡ ಹಿಂದೂಗಳಿಗೂ ಕೈಲಾದಷ್ಟು ಸಹಾಯ ಮಾಡಿದಲ್ಲಿ ಮಾತ್ರ ಕುರಾನ್ ಗ್ರಂಥದಲ್ಲಿ ತಿಳಿಸಿರುವ ಸಂದೇಶಗಳಿಗೆ ಮಾನ್ಯತೆ ನೀಡಿದಂತಾಗುತ್ತದೆ ಎಂದರು. ಮುಸ್ಲಿಮ್ ಸಮುದಾಯದ ಶ್ರೀಮಂತರು ಹಬ್ಬಗಳ ಸಂದರ್ಭದಲ್ಲಿ ಮಾತ್ರವಲ್ಲದೆ ಎಲ್ಲಾ ವರ್ಗದ ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದಲ್ಲಿ ಅಲ್ಲಾ ಮೆಚ್ಚುತ್ತಾನೆಂದು ಹೇಳಿದರು.
ಬಾಂಧವ್ಯ: ರಂಜಾನ್ ಕೇವಲ ಮುಸ್ಲಿಮರು ಆಚರಿಸಬೇಕೆಂದು ಕುರಾನ್ನಲ್ಲಿ ಹೇಳಿಲ್ಲ. ಹಿಂದೂಗಳು ಸಹ ಈ ಹಬ್ಬದಲ್ಲಿ ಭಾಗವಹಿಸಬಹುದು. ಆಗ ಮಾತ್ರ ಹಿಂದೂ-ಮುಸ್ಲಿಮ್ ನಡುವೆ ಹೆಚ್ಚಿನ ಸೌಹಾರ್ದತೆ, ಬಾಂಧವ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು. ರಂಜಾನ್ ಪ್ರಯುಕ್ತ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಸೋದರರಂತೆ ಬಾಳಿ: ನಾರಾಯಣಸ್ವಾಮಿ
ಬಂಗಾರಪೇಟೆ: ಹಿಂದು, ಕ್ರೈಸ್ತ, ಮುಸ್ಲಿಂ ಬಂಧುಗಳು ಒಟ್ಟಾಗಿ ಒಗ್ಗಟ್ಟಿನಿಂದ ಪಟ್ಟಣದಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದ್ದು ಅದೇ ರೀತಿ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಭಾಂದವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಎಸ್.ಎಸ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಶಂಶು ದರ್ಗಾ ಮಸೀದಿ ಆವರಣದಲ್ಲಿ ಮುಸ್ಲಿಂ ಬಂಧುಗಳೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಮುಸ್ಲಿಂ ಬಂಧುಗಳು ಎಲ್ಲಾ ಜನಾಂಗದವರು ಸ್ನೇಹ ಮನೋಭಾವದಿಂದ ಅಣ್ಣ-ತಮ್ಮಂದಿರಂತೆ ಸಹಬಾಳ್ವೆಯಿಂದ ಜೀವನ ಮಾಡಿಕೊಂಡು ಬರುತ್ತಿದ್ದು ಅಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶಂಶುದ್ದೀನ್ ಬಾಬು, ಮಾಜಿ ಉಪಾಧ್ಯಕ್ಷ ಅಸ್ಲಾಂಪಾಷ, ಪುರಸಭೆ ಸದಸ್ಯ ಷಫಿ, ಸಾಧೀಕ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ, ಮುಖಂಡರುಗಳಾದ ಮುಕ್ತಿಯಾರ್, ಖಲೀಲ್, ಬಾಷಾ ಹಾಗೂ ಇತರರು ಇದ್ದರು.
ಈದ್ಗಾ ಮೈದಾನಕ್ಕೆ 5 ಎಕರೆ ಜಮೀನು
ಚಿಕ್ಕಬಳ್ಳಾಪುರ: ಈದ್ಗಾ ಮೈದಾನ ಮತ್ತು ಸ್ಮಶಾನಕ್ಕಾಗಿ ಅಗತ್ಯವಿರುವ 5 ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಡಲು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಸಂಸದ ಡಾ. ವೀರಪ್ಪ ಮೊಯ್ಲಿ ಭರವಸೆ ನೀಡಿದರು.
ನಗರದಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿ, ಈಗಾಗಲೇ ಈದ್ಗಾ ಮೈದಾನ ಮತ್ತು ಸ್ಮಶಾನಕ್ಕಾಗಿ ಭೂಮಿ ಬೇಕೆಂಬ ಮನವಿ ಬಂದಿದೆ. ಜಿಲ್ಲಾಡಳಿತ ಸರ್ಕಾರಿ ಜಾಗವನ್ನು ಗುರುತಿಸಿದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಅಗತ್ಯವಿರುವ ಅನುದಾನದೊಂದಿಗೆ ಆ ಜಾಗವನ್ನು ಕೊಡಿಸುತ್ತೇನೆ. ಶಾದಿಮಹಲ್ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ ಹಣ ನೀಡುವುದಾಗಿಯೂ ಭರವಸೆ ನೀಡಿದರು.
ದೇವರು ಒಬ್ಬನೇ. ಎಲ್ಲಾ ಧರ್ಮದವರು ಶಾಂತಿ-ಸೌಹಾರ್ದತೆಯಿಂದ ಸಹೋದರರಂತೆ ಜೀವನ ನಡೆಸಬೇಕು. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಇಸ್ಲಾಂನ ಅರ್ಥ ಶಾಂತಿ. ಪ್ರವಾದಿ ಮಹಮದ್ ಪೈಗಂಬರ್ ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದರು. ಅವರು ತಿಳಿಸಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದುಕೊಂಡು ಹೋಗಬೇಕೆಂದರು.
ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ನಗರದಲ್ಲಿ ಶಾದಿಮಹಲ್ ನಿರ್ಮಿಸಲು ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅಲ್ಲದೇ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 10 ಲಕ್ಷ ನೀಡಲಾಗಿದೆ. ಆದರೆ, ಇದು ಸಾಕಾಗುತ್ತಿಲ್ಲ. ಕಟ್ಟಡ ನಿರ್ಮಾಣ ಲೆಕ್ಕಾಚಾರವನ್ನು ಹಾಕಿದಾಗ ಇನ್ನೂ ಬೇರೆ ಬೇರೆ ಕೆಲಸಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ 50 ಲಕ್ಷ ಅನುದಾನ ಬೇಕಾಗಿದೆ. ಇದಕ್ಕೆ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.
ಎಲ್ಲೆ ಹಿಂಸಾಚಾರಗಳು ನಡೆದರೂ ಪ್ರತಿಯೊಬ್ಬರು ಖಂಡಿಸಬೇಕು. ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಶ್ರಮಿಸಬೇಕು. ಪ್ಯಾಲೇಸ್ತೆನ್ ಮೇಲೆ ಇಸ್ರೇಲ್ ದಾಳಿ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾಗಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಎಲ್ಲೂ ನಡೆಯದಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲಾ ರಕ್ಷಣಾಧಿಕಾರಿ ದಿವ್ಯಗೋಪಿನಾಥ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ನಗರಸಭೆ ಅಧ್ಯಕ್ಷೆ ಲೀಲಾವತಿ, ಹಿರಿಯ ಸದಸ್ಯ ಎಸ್.ಎಂ.ರಫಿಕ್, ಮಾಜಿ ಅಧ್ಯಕ್ಷ ಮಹಮದ್ ಇಕ್ಬಾಲ್, ಮುಖಂಡ ಅಬ್ದುಲ್ ರವೂಪ್ ಮುಂತಾದವರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಸಾವಿರಾರೂ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ನಗರದ ಬಿ.ಬಿ.ರಸ್ತೆ, ಬಜಾರ್ ರಸ್ತೆ, ಒಪಿಓ ರಸ್ತೆ ಹಾಗೂ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ಹೊರಟು ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂವಿಧಾನಬದ್ಧವಾಗಿ ಪ್ರತಿಪಕ್ಷ ಸ್ಥಾನ ನೀಡಲಿ
ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ಪ್ರತಿಪಕ್ಷ ಬೇಡಿ ಪಡೆದುಕೊಳ್ಳುವುದಕ್ಕಾಗಲ್ಲ. ಸಂವಿಧಾನಬದ್ಧವಾಗಿ ನೀಡಬೇಕೆಂದು ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು. ಈದ್ ಉಲ್ ಫಿತರ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪ ಸ್ಥಾನಗಳನ್ನು ಗೆದ್ದುಕೊಂಡಿದ್ದರೂ ಇತರೆ ಪಕ್ಷಗಳ ಬೆಂಬಲ ಹೆಚ್ಚಾಗಿಯೇ ಇದೆ. ಪ್ರತಿಪಕ್ಷಕ್ಕೆ ಅಗತ್ಯವಿರುವ ಸ್ಥಾನಗಳಿವೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ,ಪಕ್ಷಕ್ಕೆ ವಿರೋಧ ಪಕ್ಷವನ್ನು ನೀಡುವಲ್ಲಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದರು. ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿರುವುದನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಳ್ಳು ದೂರು ಕೊಟ್ಟು ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಕೆಜಿಎಫ್ನಲ್ಲಿ ಪ್ರಾರ್ಥನೆ
ಕೆಜಿಎಫ್: ರಂಜಾನ್ ಹಬ್ಬದ ಪ್ರಯುಕ್ತ ಕೆಜಿಎಫ್ನ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ನಗರದ ಜಮ್ಮಾ ಮಸೀದಿಯಿಂದ ಬೆಳಗ್ಗೆ 10 ಗಂಟೆಗೆ ಸಾವಿರಾರು ಮುಸ್ಲಿಮರು ಮೆರವಣಿಗೆ ಹೊರಟು ಅಶೋಕನಗರದ ಈದ್ಗಾ ಮೈದಾನದಲ್ಲಿ ಸೇರಿದರು. ಪ್ರಾರ್ಥನೆ ಮುಗಿಸಿ ಹೊರ ಬರುತ್ತಿದ್ದಂತೆ ಒಬ್ಬರನ್ನೊಬ್ಬರು ಪರಸ್ಪರ ಅಪ್ಪಿಕೊಂಡು ರಂಜಾನ್ ಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಭಕ್ತವತ್ಸಲಂ, ವೈ.ಸಂಪಂಗಿ ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಮರಿಗೆ ಶುಭ ಕೋರಿದರು. ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.
ಸಡಗರದ ರಂಜಾನ್
ಗುಡಿಬಂಡೆ: ಶ್ರದ್ಧಾ ಭಕ್ತಿ, ದಾನ ಧರ್ಮಗಳಿಗೆ ಪ್ರತೀಕವಾದ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ಪಟ್ಟಣದ ಹಾಗೂ ನೆರೆಯ ಗ್ರಾಮಗಳಿಂದ ಬಂದ ಮುಸ್ಲಿಮರು ಹಿರಿಯರ ಸಮಾಧಿಗಳಿಗ ಪ್ರಾರ್ಥನೆ ಸಲ್ಲಿಸಿ, ನಂತರ ಸಿಹಿ ಹಂಚಿ ಹಾಗೂ ಹಿರಿಯರು ಕಿರಿಯರೆಂಬ ಭೇದವಿಲ್ಲದೆ, ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಪುಟಾಣಿ ಮಕ್ಕಳು ಹಬ್ಬದ ಪ್ರಯುಕ್ತ ಬಣ್ಣ ಬಣ್ಣದ ಸುಂದರ ವಸ್ತ್ರವಿನ್ಯಾಸವನ್ನು ಹೊಂದಿರುವ ಉಡುಪುಗಳನ್ನು ಧರಿಸಿ, ಹೆಣ್ಣು ಮಕ್ಕಳು ಮೆಹಂದಿ ಹಚ್ಚಿ, ವಿವಿಧ ಬಣ್ಣದ ಬಳೆಗಳನ್ನು ಧರಿಸಿಕೊಂಡು ಸಭ್ರಮದಿಂದಿದ್ದರು.
ಸಾಮೂಹಿಕ ಪ್ರಾರ್ಥನೆ
ಮಾಲೂರು: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮಂಗಳವಾರ ಬೆಳಗ್ಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ರಂಜಾನ್ ಹಬ್ಬದ ಪ್ರಾರ್ಥನೆ ಸಲ್ಲಿಸುತ್ತಿದ್ದ ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಶಾಸಕ ಮಂಜುನಾಥ್ ಗೌಡ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು. ಪುರಸಭೆ ಸದಸ್ಯ ಜಾಕೀರ್ ಖಾನ್, ಅಲೂಮಂಜು, ರಮೇಶ್, ಮುರಳೀಧರ್, ಮುಸ್ಲಿಂ ಮುಖಂಡ ಆಶ್ರಫ್, ಸಾದಿಕ್, ಮಾಲಿಕ್, ಜೆಡಿಎಸ್ ಮುಖಂಡ ರಾಮಚಂದ್ರ ಇದ್ದರು. ಬಿಜೆಪಿಯ ಮುಖಂಡ ಜಿ.ಇ.ರಾಮೇಗೌಡ ಸಹ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.
ಶಿಡ್ಲಘಟ್ಟದಲ್ಲಿ ಸಂಭ್ರಮ
ಶಿಡ್ಲಘಟ್ಟ: ಶ್ರದ್ಧಾಭಕ್ತಿಯ ಸಂಕೇತವಾದ ರಂಜಾನ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು. ಸಂಪ್ರದಾಯದಂತೆ ಸ್ಥಳೀಯ ಐತಿಹಾಸಿಕ ಜಾಮೀಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ನಿಧನ ಹೊಂದಿರುವ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಎಂ.ರಾಜಣ್ಣ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮಹಬೂಬ್ ಖಾನ್, ಯುವ ಕಾಂಗ್ರೆಸ್ ಮುಖಂಡ ಎಂ.ಅಬ್ದುಲ್ ಗಫೂರ್, ಹಝರತ್ ಬಿಲಾಲ್, ಯುವಜನ ಸಮಿತಿ ಅಧ್ಯಕ್ಷ ಅಬ್ದುಲ್ ವಹಾಬ್, ಮುಬಾರಕ್ ಖಾನ್ ಮತ್ತಿತರರು ಮುಸ್ಲಿಂ ಸಮಾಜದವರಿಗೆ ಹಬ್ಬದ ಶುಭಾಶಯ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

