ಕೋಲಾರ

ವರ್ತೂರ್ ಬಣಕ್ಕೆ ಜೆಡಿಎಸ್ ಮುಖಂಡರ ಸೇರ್ಪಡೆ

Published On :

ಕೋಲಾರ:ಕೋಲಾರ ತಾಲೂಕು ಪಂಚಾಯತ್ ಸದಸ್ಯ ಅರಹಳ್ಳಿ ಚಂದ್ರಮ್ಮ ದೇವರಾಜ್ ಜೆಡಿಎಸ್ ತೊರೆದು ಶಾಸಕ ವರ್ತೂರು ಬಣಕ್ಕೆ ಸೇರ್ಪಡೆಯಾಗಿದ್ದಾರೆ.  ಶಾಸಕರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೇರ್ಪಡೆಗೊಂಡ ಚಂದ್ರಮ್ಮ ದೇವರಾಜ್, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅವರ ಬಣಕ್ಕೆ ಸೇರುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಬೆಂಬಲಿಗರಾಗಿದ್ದ ದೇವರಾಜ್ ಜೆಡಿಎಸ್ ತೊರೆರಿದುವುದು ಪಕ್ಷಕ್ಕೆ ಅರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ದೊಡ್ಡ ಹೊಡೆತ ನೀಡಿದಂತಾಗಿದೆ. ಈ ವೇಳೆ, ಬೆಗ್ಲಿ ಪ್ರಕಾಶ್, ವಿ.ಮಂಜುನಾಥಗೌಡ, ಸರಸ್ವತಿ ಮುನಿಕೃಷ್ಣ, ಸದಸ್ಯರಾದ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿಇದ್ದರು.

ಸಿಸಿಇ ಅಳವಡಿಕೆ
ತರಬೇತಿ ಇಂದು
ಕೋಲಾರ: ಜಿಲ್ಲೆಯ ಪ್ರೌಢಶಾಲಾ ವೃತ್ತಿ ಶಿಕ್ಷಕರಿಗೆ ಬೋಧನಾ ಗುಣಮಟ್ಟ ಹೆಚ್ಚಿಸಲು ಹಾಗೂ ಸಮಗ್ರ ವ್ಯಾಪಕ ಮೌಲ್ಯಮಾಪನ ವಿಧಾನದ ಕುರಿತು ಅರಿವು ಮೂಡಿಲು ಜು. 30 ರಂದು ಬೆಳಗ್ಗೆ 10 ಗಂಟೆಗೆ ನಗರದ ಸುವರ್ಣಸೆಂಟ್ರಲ್ ಶಾಲೆಯಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಡಿಡಿಪಿಐ ಎಸ್.ವಿ. ಪದ್ಮನಾಭ್ ತಿಳಿಸಿದ್ದಾರೆ. ಈ ಕಾರ್ಯಾಗಾರದಲ್ಲಿ ಜಿಲ್ಲೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ, ಅನುದಾನರಹಿತ ಪ್ರೌಢಶಾಲಾ ವೃತ್ತಿ ಶಿಕ್ಷಕರು ತಪ್ಪದೇ ಭಾಗವಹಿಸಬೇಕಾಗಿದ್ದು, ಮುಖ್ಯಶಿಕ್ಷಕರು, ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಕಳುಹಿಸುವಂತೆ ಸೂಚಿಸಿದ್ದಾರೆ. ಕಾರ್ಯಾಗಾರ ಕುರಿತು ಹೆಚ್ಚಿನ ಮಾಹಿತಿಯನ್ನು ವಿಷಯ ಪರಿವೀಕ್ಷಕ ಶಿವಮಾದಯ್ಯರಿಂದ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕಾನೂನು ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ
ಕೋಲಾರ: ನಗರ ಹೊರವಲಯದ ಅರಹಳ್ಳಿ ಬಳಿ ನಿರ್ಮಾಗೊಂಡಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸರಿಯಾದ ನಿರ್ವಹಣೆ ಇಲ್ಲ. ಕಾಲೇಜಿನ ಪ್ರಮುಖ ವಸ್ತುಗಳು ಕಣ್ಮರೆಯಾಗುತ್ತಿದೆ ಎಂದು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಕೆ.ಎನ್.ಸುರೇಶ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಲೇಜು ನಿರ್ಮಾಣವಾಗಿ ಸುಮಾರು 5 ವರ್ಷಗಳಾದರೂ ಕಾಲೇಜಿಗೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ಇಳಿಮುಖವಾಗುತ್ತಿದೆ. ಕೋಲಾರ ನಗರದಲ್ಲಿದ್ದಾಗ ಕಾಲೇಜಿಗೆ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಈಗ ಕೇವಲ 218 ವಿದ್ಯಾರ್ಥಿಗಳಿದ್ದಾರೆ. ಕಾಲೇಜಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆ ನೀಗಿಸಲು ಪ್ರಯತ್ನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೆಂಚರೆಡ್ಡಿಗೆ ಪಿಎಚ್‌ಡಿ
ಕೋಲಾರ: ಶ್ರೀನಿವಾಸಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದ ಕೆ.ಎಂ.ಕೆಂಚರೆಡ್ಡಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಪ್ರೊ. ಟಿ.ಜಯದೇವ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಪ್ರಬಂಧಕ್ಕೆ ಪಿಎಚ್‌ಡಿ ಲಭಿಸಿದೆ. ಕೆ.ಮುನಿಶಾಮಿರೆಡ್ಡಿ ಅಂಕಮ್ಮ ದಂಪತಿಗಳ ಮೂರನೇ ಪುತ್ರರಾದ ಕೆಂಚರೆಡ್ಡಿ ಪ್ರಸ್ತುತ ಬೆಂಗಳೂರಿನ ಕೃಷ್ಣ ಇನ್ಸಿಟಿಟ್ಯೂಟ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಶಿಕ್ಷಕರ ಸಂಘಕ್ಕೆ ಆಯ್ಕೆ
ಕೋಲಾರ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮುಳಬಾಗಿಲು ತಾಲೂಕು ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರಾಗಿ ಮುಳಬಾಗಿಲಿನ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಂ.ನಾಗರಾಜ್, (ಕೆಂಬೋಡಿ ನಾಗರಾಜ್) ಉಪಾಧ್ಯಕ್ಷರಾಗಿ ಎಸ್.ಎನ್.ಶಾರದ ಬಾಲಕಿಯರ ಪ್ರೌಢಶಾಲೆಯ ಬಿ.ಆರ್. ರಾಮಕೃಷ್ಣಾ ರೆಡ್ಡಿ, ಕಾರ್ಯದರ್ಶಿಯಾಗಿ ಪತ್ತಿಮಿಟ್ಟ ಜನತಾದತ್ತಿ ಪ್ರೌಢಶಾಲೆಯ ಪಿ.ರಾಮಚಂದ್ರ, ಕೋಶಾಧ್ಯಕ್ಷರಾಗಿ ತಾಯಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿ.ಹನುಮಂತಪ್ಪ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಂಗಲಿಯ ವರಸಿದ್ಧಿ ವಿನಾಯಕ ಪದವಿ ಪೂರ್ವಕಾಲೇಜಿನ ಎನ್. ರವೀಂದ್ರನಾಥ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸೀನಪ್ಪ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವ ಹಿಸಿದ್ದರು.

ಮಾಹಿತಿ ಕೊರತೆಯಿಂದ ವಿನಾಶ
ಬಂಗಾರಪೇಟೆ: ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತಿಳುವಳಿಕೆ ಹಾಗೂ ಮಾಹಿತಿ ಕೊರತೆಯಿಂದಾಗಿ ಸಹಕಾರಿ ಸಂಘಗಳು ಅಭಿವೃದ್ಧಿಯತ್ತ ಸಾಗದೆ ವಿನಾಶದತ್ತ ಸಾಗಲು ಕಾರಣವಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಪ್ರಸಾದ್ ರೆಡ್ಡಿ ಹೇಳಿದರು. ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಯೂನಿಯನ್, ಕೋಲಾರ ಹಾಲು ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಹಾಲು ಉತ್ಪಾದಕರ, ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ 97ನೇ ಸಂವಿಧಾನದ ತಿದ್ದುಪಡಿ ಹಾಗೂ ಯಶಸ್ವಿನಿ ಯೋಜನೆ ಅನುಷ್ಠಾನದ ಬಗ್ಗೆ ಹಮ್ಮಿಕೊಂಡಿದ್ದ ತರಬೇತಿ ಭಾಗವಹಿಸಿದ್ದರು. ಜಿಲ್ಲೆಯಲ್ಲಿ 1415 ಸಹಕಾರ ಸಂಘಗಳಿವೆ. ಇವುಗಳ ಪೈಕಿ 150 ಸಂಘಗಳು ಚಟುವಟಿಕೆಗಳಿಲ್ಲದೆ ಸ್ಥಗಿತಗೊಂಡಿವೆ ಎಂದರು.

ಆರೋಗ್ಯ ಶಿಬಿರದ ಲಾಭ ಪಡೆದುಕೊಳ್ಳಲು ಸಲಹೆ
ಚಿಂತಾಮಣಿ: ಬಡವರು ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ನಗರಸಭಾ ಸದಸ್ಯ ಶ್ರೀರಾಮಪ್ಪ ಹೇಳಿದರು.
ನಗರದ ವಿನೋಭಾ ಕಾಲೋನಿಯ ಮುಂದುವರಿಕೆ ಶಿಕ್ಷಣ ಕೇಂದ್ರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಮತ್ತು ಕೋಲಾರದ ಶ್ರೀ ಸರಸ್ವತಿ ಮಹಿಳಾ ಮಂಡಳಿ, ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಸಾಮಾನ್ಯ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬಡವರು ಲಕ್ಷಾಂತರ ರುಪಾಯಿ ವ್ಯಯಿಸಬೇಕಾದ ದುಸ್ಥಿತಿ ಬಂದಿದೆ. ಇಂಥ ಸಂದರ್ಭದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಶಿಬಿರದಲ್ಲಿ ವೈದ್ಯರಾದ ಹರೀಷ್, ಸಂಗೀತಾ, ನಂದಿನಿ, ಅವಿನಾಶ್, ಕೃಷ್ಣಮೂರ್ತಿ  ಇದ್ದರು.

ಅರಿವು ಮೂಡಿಸುವ ಸಾಹಿತ್ಯ ರಚನೆಯಾಗಲಿ
ಮಾಲೂರು: ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಅತ್ಯಾಚಾರಗಳಂಥ ಪಿಡುಗಿನ ಬಗ್ಗೆ ಅರಿವು ಮೂಡಿಸುವ ಸಾಹಿತ್ಯವನ್ನು ಸಾಹಿತಿಗಳು ರಚನೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಡಿ.ಎಂ.ವೆಂಕಟೇಶ್ ಹೇಳಿದರು. ಚೈತನ್ಯ ಕಲಾ ನಿಕೇತನ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 65 ನೇ ತಿಂಗಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಕವಿ ವೆಂಕಟೇಶ್, ಕವಿ ಜ.ಮು.ಚಂದ್ರ, ಶಿಕ್ಷಕರಾದ ಕೋಳಾಲಪ್ಪ, ಮುನಿರತ್ನಂ ಮಾತನಾಡಿದರು. ಕವಿಗೋಷ್ಠಿಯಲ್ಲಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಡಾ.ನಾ.ಮುನಿರಾಜು, ಡಿ.ಟಿ.ಪ್ರಸನ್ನ, ಸರ್ವೆಶ್ ಬಂಟಹಳ್ಳಿ, ಸತೀಶ್ ಕಾಟೇರಿ, ನಾರಿಗಾನಹಳ್ಳಿ ಶ್ರೀನಿವಾಸ್, ಶ್ರೀನಿಧಿ ಶ್ರೀನಿವಾಸ್, ಸುರೇಶ್ ಜಕಾತಿ, ಡಾ.ಮಂಜುನಾಥ್,ಬಿ.ಎಚ್. ಸುರೇಶ್ ಇದ್ದರು.

ಪ್ರಭಾಕರ್ ಭಟ್ ಆ.14ಕ್ಕೆ
ಗೌರಿಬಿದನೂರು: ಆ.14 ರ ಮಧ್ಯರಾತ್ರಿ ಭಾರತ ಮಾತಾ ಟ್ರಸ್ಟ್‌ನಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು ಈ ಭಾರಿ ಕಲ್ಲಡ್ಕ ಪ್ರಭಾಕರ್ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರವಿನಾರಾಯಣರೆಡ್ಡಿ ಹೇಳಿದರು. ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್‌ಗೌಡ ಮಾತನಾಡಿ, ರವಿನಾರಾಯಣರೆಡ್ಡಿಯವರು ಜನರಲ್ಲಿ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷದಿಂದ ಶಿಡ್ಲಘಟ್ಟದಲ್ಲಿಯೂ ಇದೇ ರೀತಿಯ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಜಿಪಂ ಸದಸ್ಯ ಸಿ.ಆರ್. ನರಸಿಂಹಮೂರ್ತಿ, ಎಸ್. ಕೃಷ್ಣಪ್ಪ, ಜಯಣ್ಣ ಇದ್ದರು.

ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಚಿಕ್ಕಬಳ್ಳಾಪುರ: ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಶಾಲೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಓದುತ್ತಿರುವ ವರ್ಗ 1, 2ಎ, 3ಎ ಹಾಗೂ 3ಬಿ ವರ್ಗದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಮುಖ್ಯೋಪಾಧ್ಯಾಯರ ಮೂಲಕ ಬಿಸಿಎಂ ಇಲಾಖೆಗೆ ಸಲ್ಲಿಸಲು ತಿಳಿಸಿದೆ. ನವೀಕರಣ ಅರ್ಜಿ ಸಲ್ಲಿಸಲು ಆ.14 ಹಾಗೂ ಹೊಸದಾಗಿ ವಿದ್ಯಾರ್ಥಿ ವೇತನ ಪಡೆಯುವವರು ಆ.30 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಗಳ ಆಯ್ಕೆ
ಗುಡಿಬಂಡೆ: ಜಿಲ್ಲೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್ ಪ್ರಸಾದ್, ಉಪಾಧ್ಯಕ್ಷರಾಗಿ ಎನ್.ವೆಂಕಟರವಣಪ್ಪ, ವಿ.ಎನ್. ಅಶ್ವತ್ಥಪ್ಪ, ಕಾರ್ಯದರ್ಶಿಯಾಗಿ ಜಿ.ಗಂಗಿರೆಡ್ಡಿ, ಸಹಕಾರ್ಯದರ್ಶಿಯಾಗಿ ಕೆ.ವಿ. ರಮಣಾರೆಡ್ಡಿ, ಪರೀಕ್ಷಾ ಸಂಚಾಲಕರಾಗಿ ಸತ್ಯನಾರಾಯಣರಾವ್, ಖಜಾಂಚಿಯಾಗಿ ಚೆನ್ನಮಲ್ಲಿಕಾರ್ಜುನಯ್ಯ, ತಾಲೂಕು ಪ್ರತಿನಿಧಿಗಳಾಗಿ ಶಿಡ್ಲಘಟ್ಟ ಶ್ರೀಕಂಠ, ಗುಡಿಬಂಡೆ ಪರಮನಟ್ಟಿ, ಗೌರಿಬಿದನೂರಿನ ರಾಮ್ಕುಮಾರ್, ಚಿಂತಾಮಣಿಯ ಬೈರಾರೆಡ್ಡಿ, ಚಿಕ್ಕಬಳ್ಳಾಫುರದ ಶಿವಣ್ಣ, ಬಾಗೇಪಲ್ಲಿಯ ವೆಂಕಟರವಣಪ್ಪ ಆಯ್ಕೆಯಾಗಿದ್ದಾರೆ.

ರಾಷ್ಟ್ರಧ್ವಜಕ್ಕೆ ಅವಮಾನ
ಮುಳಬಾಗಲು: ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕೂಡಿದ ರಾಷ್ಟ್ರ ಧ್ವಜದ ಬದಲು ಹಸಿರು, ಬಿಳಿ, ಕೇಸರಿ ಬಣ್ಣದ ಟೋಪಿ ಹಾಗೂ ರಾಷ್ಟ್ರಧ್ವಜಗಳು ಮೇಡ್ ಇನ್ ಚೀನಾ ಹೆಸರಿನಲ್ಲಿ ಮುಳಬಾಗಲು ಮಾರುಕಟ್ಟೆದೆ ಲಗ್ಗೆಯಿಟ್ಟಿವೆ. ಈ ಬಗ್ಗೆ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು  ಹಿಂದೂ ಯುವ ಶಕ್ತಿ ಅಧ್ಯಕ್ಷ ಐಡಿಯಾ ಮಂಜುನಾಥ್. ವಕೀಲ ಜಯಪ್ಪ, ಆಂಜನಪ್ಪ, ಸತೀಶ್ ಬಾಲಾಜಿ ಆರೋಪಿಸಿದ್ದಾರೆ. ರಾಷ್ಟ್ರ ಧ್ವಜಕ್ಕೆ ತನ್ನದೇ ಮೌಲ್ಯವಿದೆ. ಹೋರದೇಶದಲ್ಲಿ ಬಾವುಟ ತಯಾರು ಮಾಡಿ ಅಪವಿತ್ರಗೊಳಿಸಲಾಗಿದೆ. ಆ ಬಗ್ಗೆ ಸೂಕ್ತವಾದ ತನಿಖೆ ನಡೆಯಲು ಬಿಜೆಪಿ ಎಸ್‌ಸಿ ಮೋರ್ಚ ಅಧ್ಯಕ್ಷ ವಿ.ಜಯಪ್ಪ ಒತ್ತಾಯಿಸಿದ್ದಾರೆ.

ಅಪಘಾತ: ಮಹಿಳೆ ಸಾವು
ಮುಳಬಾಗಲು: ಟೆಂಪೋ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಬೆಂಗಳೂರು ಹೆಣ್ಣೂರು ವಾಸಿ ವಸಂತಮ್ಮ (43) ಸಾವಿಗೀಡಾಗಿದ್ದಾರೆ. ಪಟ್ಟಣದ ಹೊರವಲಯದ ಕೋಲಾರ ರಾಷ್ಟ್ರೀಯ ಹೆದ್ದಾರಿಯ ಮದರಸ ಬಳಿ ಸೋಮವಾರ ಸಂಜೆ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಜ್ಯೋತಿ, ಅರವಿಂದ್, ಹರ್ಷಿತ್, ಸರಸ್ಪತಿ ಗಾಯಗೊಂಡಿದ್ದು ಕೋಲಾರ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.