ಎಸ್ಸೆಸ್ಸೆಲ್ಸಿ ಮಂಡಳಿ ಮುಚ್ಚಲ್ಲ: ಗೋಪಾಲರೆಡ್ಡಿ
ಕೋಲಾರ: ಹೊಸ ಶಿಕ್ಷಣ ನೀತಿ ಅನ್ವಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಚ್ಚುವರೆಂಬ ಊಹಾಪೋಹಗಳಿಗೆ ಬೆಂಗಳೂರಿನ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಿರ್ದೇಶಕ ದೇವಪ್ರಕಾಶ್ ತೆರೆ ಎಳೆದಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ 500 ಅಂಕಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಗೋಪಾಲರೆಡ್ಡಿ ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಗೋಪಾಲರೆಡ್ಡಿ ಸಭೆಯಲ್ಲಿ ಕೈಗೊಂಡ ನಿರ್ಧಾರ ಹಾಗೂ ನಡಾವಳಿಗಳನ್ನು ವಿವರಿಸಿದ್ದಾರೆ.
ಹೊಸ ಶಿಕ್ಷಣ ನೀತಿ ಅನ್ವಯ ಸಮಗ್ರ ಮೌಲ್ಯಮಾಪನ (ಸಿಸಿಇ) ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಿದೆ. ಮಂಡಳಿ ನಿರ್ದೇಶಕ ದೇವಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ತಜ್ಞರು, ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳ ಸಲಹೆಗಳ ಮೇರೆಗೆ ಪ್ರತಿ ವಿಷಯಕ್ಕೆ 80 ಅಂಕಗಳಿಗೆ ಪರೀಕ್ಷೆ ಹಾಗೂ 20 ಅಂಕಗಳಿಗೆ ನಿರಂತರ ಮೌಲ್ಯಮಾಪನದಡಿ ಆಂತರಿಕ ಅಂಕ ನೀಡಲು ನಿರ್ಧರಿಸಲಾಗಿದೆ ಎಂದರು.
ಬೆಂಗಳೂರಿನ ಎಂಇಎಸ್ಸಿ ಬಿಎಡ್ ಕಾಲೇಜಿನ ಪ್ರಾಂಶುಪಾಲ ಹಾಗೂ ಶಿಕ್ಷಣ ತಜ್ಞ ಗಣೇಶ್ ಭ ಟ್ ನೇತೃತ್ವದಲ್ಲಿ ಸಿಸಿಇ ಅಳವಡಿಕೆ ಅನುಷ್ಠಾನ ವರದಿ ಕುರಿತಂತೆ ಮಂಡಿಸಿದ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು. ಈ ವೇಳೆ, ಸಹ ನಿರ್ದೇಶಕ ಗೋವಿಂದಗೌಡ, ರಾಜ್ಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರೇಗೌಡ ಸೇರಿದಂತೆ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು ಎಂದು ತಿಳಿಸಿದರು. 80:20ರ ಅನುಪಾತದಲ್ಲೇ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗದ್ದು, ಅಂತಿಮವಾಗಿ ಸಾರ್ವಜನಿಕರಿಗೂ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಏನಿದು ಸಮಗ್ರ ಮೌಲ್ಯಮಾಪನ?: ಪ್ರತಿ ವಿಷಯದ ತೇರ್ಗಡೆಗೆ 80ಕ್ಕೆ 28 ಅಂಕ ನಿಗದಿ, ಪ್ರತಿ ವಿಷಯದಲ್ಲೂ ಸರಾಸರಿ 24 ಅಂಕ ಬಂದು ಒಟ್ಟಾರೆಯಾಗಿ ಶಾಲೆಯಲ್ಲಿ ನಿರಂತರ ಮೌಲ್ಯಮಾಪನದಡಿ ನೀಡುವ ಅಂತರಿಕ ಅಂಕಗಳೂ ಸೇರಿ ಶೇ. 35 ಅಂಕ ಬಂದರೆ ತೇರ್ಗಡೆಯಾಗಲು ಸಾಕು ಎಂಬ ತೀರ್ಮಾನಕ್ಕೆ ಬರಲಾಗಿದೆ. ಕನ್ನಡ ಭಾಷಾ ವಿಷಯಕ್ಕೆ ಈ ವರೆಗೂ 125 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಇನ್ನು ಮುಂದೆ 100 ಅಂಕಗಳಿಗೆ ಪರೀಕ್ಷೆ ಹಾಗೂ 25 ಅಂಕ ಸಿಸಿಇಯಡಿ ಆಂತರಿಕ ಅಂಕಗಳೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪಠ್ಯಕ್ರಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಮಧ್ಯ ವಾರ್ಷಿಕ ಪರೀಕ್ಷೆಗೆ ಮುನ್ನಾ 2 ಹಾಗೂ ನಂತರ 2 ಟೆಸ್ಟ್ ನಡೆಸಲು ಸೂಚಿಸಲಾಗಿದ್ದು, ಇದರ ಆಧಾರದ ಮೇಲೆ ಆಂತರಿಕ ಅಂಕ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಈ ಸಾಲಿನ ಜೂನ್ ಹಾಗೂ ಜುಲೈ ತಿಂಗಳಲ್ಲೇ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿ ಹೊಸ ವಿಧಾನದ ಅಳವಡಿಕೆ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

