ಗ್ರಂಥಾಲಯ ಹೊಣೆ ಇನ್ನು ಜಿಪಂ ಸಿಇಒ ಹೆಗಲಿಗೆ
ಪ್ರಥಮ ಸಭೆಯಲ್ಲಿ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ,
ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಚರ್ಚೆ
-ಪಾ.ಶ್ರೀ.ಅನಂತರಾಮ್
ಕೋಲಾರ: ಸರ್ಕಾರದ ಆದೇಶದಂತೆ ಕೋಲಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಪಂ ಸಿಇಒ ವಿನೋತ್ ಪ್ರಿಯಾ ವಹಿಸಿಕೊಂಡಿದ್ದಾರೆ.
ಫೆಬ್ರುವರಿಯಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಸಿಇಒ ವಿನೋತ್ ಪ್ರಿಯಾ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಮೇ 24ರಂದು 58ನೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯನ್ನು ನಡೆಸುವ ಮೂಲಕ ಜಿಲ್ಲಾ ಗ್ರಂಥಾಲಯದ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ವಿನೋತ್ ಪ್ರಿಯಾ ಅವರು ಜಿಲ್ಲೆಯ ಎರಡು ನಗರಸಭೆ, ನಾಲ್ಕು ಪುರಸಭೆ ಹಾಗೂ 156 ಗ್ರಾಪಂಗಳಿಂದ ಪಾವತಿಯಾಗಬೇಕಾದ 1,81,92,660 ಕರ ವಸೂಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಂಥಾಲಯಗಳ ಅಭಿವೃದ್ಧಿಗೆ ಹಣವಿಲ್ಲದ್ದರೆ ಯಾವುದೇ ಸಾಧನೆ ಆಗುವುದಿಲ್ಲ. ಬಾಕಿ ಇರುವ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಗಣೇಶ್ ಅವರಿಗೆ ಸೂಚನೆ ನೀಡಿದ್ದಾರೆ. 1993ರಿಂದ 2013-41ನೇ ಸಾಲಿನವರೆಗೂ ಬಾಕಿ ಇರುವ ಕರ ವಸೂಲಾತಿಗಾಗಿ ಸಾಕಷ್ಟು ಬಾರಿ ಪತ್ರಗಳನ್ನು ಸಂಬಂಧಪಟ್ಟವರಿಗೆ ಬರೆಯಲಾಗಿದೆ. ಖುದ್ದು ಸಂಸ್ಥೆಗಳಿಗೆ ಭೇಟಿ ನೀಡಿ ಮನವಿ ಮಾಡಲಾಗಿದೆ. ಆದರೂ ಹಣ ಸಂದಾಯವಾಗುತ್ತಿಲ್ಲ. ತಾಮೊಮ್ಮೆ ನಗರಸಭೆ, ಪುರಸಭೆ ಹಾಗೂ ಗ್ರಾಪಂಗಳಿಗೆ ಪತ್ರ ಬರೆದಲ್ಲಿ ಅನುಕೂಲವಾಗಬಹುದೆಂದು ಮನವಿ ಮಾಡಿದಾಗ, ಇದಕ್ಕೆ ಸಿಇಒ ಒಪ್ಪಿಕೊಂಡಿದ್ದಾರೆ.
ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ
ಜಿಲ್ಲೆಯಲ್ಲಿನ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಹಿಂದೆ ಜಿಲ್ಲಾ ಗ್ರಂಥಾಲಯ ಅಧಿಕಾರಿಯಾಗಿದ್ದ ಪ್ರಸ್ತುತ ಬೆಂಗಳೂರಿನಲ್ಲಿ ವಿಶೇಷ ಅಧಿಕಾರಿ ಆಗಿರುವ ಚನ್ನಕೇಶವ ಅವರು ಸಾವಿರಾರು ರುಪಾಯಿ ಬೆಲೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ಪುಸಕ್ತಗಳನ್ನು ಖರೀದಿ ಮಾಡಿದ್ದಾರೆ.
ಅವರ ಕಾಲದಲ್ಲಿ ಹತ್ತಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸಕ್ತಗಳನ್ನು ಗ್ರಂಥಾಲಯಕ್ಕೆ ಬಂದು ಓದಿ ಸರ್ಕಾರದ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಬೇಕೆಂಬ ಅವರ ಆಸೆ ಬಡ್ತಿ ಹಾಗೂ ವರ್ಗಾವಣೆಯಿಂದ ಸಾಧ್ಯವಾಗಿರಲಿಲ್ಲ. ಈಗ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಪ್ರಾಧಿಕಾರದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಅಧ್ಯಯನ ಕೇಂದ್ರಕ್ಕೆ ಬೇಕಾದ ಪುಸ್ತಕಗಳು ಸಂಗ್ರಹಣೆ ಆಗಿರುವುದರಿಂದ ಜೂನ್ ಅಂತ್ಯಕ್ಕೆ ಇಲ್ಲವೇ ಜುಲೈ ಮೊದಲ ವಾರದಲ್ಲಿ ಅಧ್ಯಯನ ಕೇಂದ್ರ ಉದ್ಘಾಟನೆ ನೆರವೇರಿಸಲು ಸಿದ್ಧತೆ ನಡೆದಿದೆ.
ಕಟ್ಟಡ ನಿರ್ಮಾಣಕ್ಕೆ ನಿವೇಶನ
ಕೋಲಾರ ಜಿಲ್ಲೆಯಲ್ಲಿ 181 ಗ್ರಂಥಾಲಯಗಳಿವೆ. ಅನೇಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಜಾ ರಾಮ್ ಮೋಹನ್ ರಾಯ್ ಗ್ರಂಥಾಲಯ ಫೌಂಡೇಷನ್ ಕಟ್ಟಡ ನಿರ್ಮಿಸುವ ಯೋಜನೆ ಜಾರಿಯಲಿದೆ. ಜಿಲ್ಲೆಯಲ್ಲಿ 25 ಗ್ರಂಥಾಲಯಗಳ ನಿರ್ಮಾಣಕ್ಕೆ ನಿವೇಶನ ಗುರುತಿಸಿ ನೋಂದಣಿ ಮಾಡಿಸಲಾಗಿದೆ. ಸರ್ಕಾರ ಇ-ಸ್ವತ್ತು ಯೋಜನೆ ಜಾರಿ ಮಾಡಿರುವುದರಿಂದ ಇನ್ನು ಅನೇಕ ಕಡೆ ನಿವೇಶನ ಗುರುತಿಸಿ ನಕ್ಷೆ ಸಮೇತ ನೋಂದಾಣಿ ಮಾಡಬೇಕಾಗಿರುವುದರಿಂದ ಪ್ರಕ್ರಿಯೆ ಮುಂದುವರೆದಿದೆ. ಕೋಲಾರ ತಾಲೂಕಿನಲ್ಲಿ 8, ಶ್ರೀನಿವಾಸಪುರ-5, ಬಂಗಾರಪೇಟೆ-5, ಮಾಲೂರು-2 ಹಾಗೂ ಮುಳಬಾಗಲು ತಾಲೂಕಿನಲ್ಲಿ 5 ನಿವೇಶನಗಳನ್ನು ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ನೋಂದಾಣಿ ಮಾಡಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
22983 ಸದಸ್ಯರು
ಪ್ರಸ್ತುತ ಜಿಲ್ಲೆಯಲ್ಲಿ 22983 ಮಂದಿ ಮಾತ್ರ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕೋಲಾರ ತಾಲೂಕಿನಲ್ಲಿ 5175 ಮಂದಿ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು ಜನಸಂಖ್ಯೆ 15 ಲಕ್ಷ ದಾಟಿದೆ. ಶೇ.65ಕ್ಕಿಂತ ಹೆಚ್ಚು ಸಾಕ್ಷರರು ಇದ್ದಾರೆ. ವಿದ್ಯಾರ್ಥಿ ಸಮೂಹ 3.50 ಲಕ್ಷ ಮೀರಿದ್ದರೂ ಗ್ರಂಥಾಲಯಕ್ಕೆ ಸದಸ್ಯರಾಗಿರುವವರ ಸಂಖ್ಯೆ ಮಾತ್ರ ಏರಿಕೆ ಕಾಣದಿರುವುದಕ್ಕೆ ಅಧಿಕಾರಿಗಳು ಕಾರಣ ಹುಡುಕಿ, ಗುಣಮಟ್ಟದ ಪುಸಕ್ತಗಳನ್ನು ಒದಗಿಸುವ ಜೊತೆಗೆ ಅರಿವು ಮೂಡಿಸುವ ಕಾರ್ಯ ನಿರಂತವಾಗಿ ನಡೆಯದಿದ್ದರೆ ಸರ್ಕಾರ ಖರೀದಿ ಮಾಡಿರುವ ಗ್ರಂಥಗಳು ಗೆದ್ದಲುಗಳ ಪಾಲಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

