ನಿಷೇಧವಿದ್ದರೂ ಮಾರ್ವೆ ಮಾರಾಟಕ್ಕೆ ತಡೆಯಿಲ್ಲ
ಚಿಂತಾಮಣಿ: ಮಾರ್ವೆ (ಆಫ್ರಿಕನ್ ಕ್ಯಾಟ್ ಮೀನು) ಸರ್ಕಾರ ಸಾಕಾಣಿಕೆ ಮತ್ತು ಮಾರಾಟ ನಿಷೇಧಿಸಿದೆ. ಆದರೆ ತಾಲೂಕಿನಲ್ಲಿ ಈ ವ್ಯಾಪಾರ ಜೋರಾಗಿ ನಡೆಯುತ್ತಿದ್ದರೂ ತಾಲೂಕು ಆಡಳಿತ ಮೌನವಹಿಸುವುದನ್ನು ಸಾರ್ವಜನಿಕರು ಖಂಡಿಸಿದ್ದಾರೆ.
ನಗರದ ರೇಲ್ವೆ ಸ್ಟೇಷನ್, ಚಿನ್ನಸಂದ್ರ, ಕೋನಪಲ್ಲಿ, ಹಾಗೂ ಕೆಂದನಹಳ್ಳಿ ಹಲವು ಕಡೆ ಎಗ್ಗಿಲ್ಲದಂತೆ ರಾಜಾರೋಷವಾಗಿ ಮಾರ್ವೆ ಸಾಕಾಣಿಕೆ ಮಾಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಾದ ಹಳೇ ಸಂತೆ ಮೈದಾನ, ಎನ್ಎನ್ಟಿ ವೃತ್ತ, ಚೇಳೂರು ವೃತ್ತ ಸೇರಿದಂತೆ ನಗರದ ಇತರೆ ಪ್ರದೇಶಗಳಲ್ಲಿ ಈ ಮೀನುಗಳನ್ನು ರಾಜಾರೋಷವಾಗಿಯೇ ಮಾರಾಟ ಮಾಡಲಾಗುತ್ತಿದೆ.
ಮಾರ್ವೆ ಮೀನುಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವುಗಳನ್ನು ಸರ್ಕಾರ ನಿಷೇಧಿಸಿದೆ. ಹೀಗಿದ್ದಾಗ್ಯೂ, ಸಾಕಾಣಿಕೆ ಮತ್ತು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.
ಎಲ್ಲೆಂದರಲ್ಲಿ ತ್ಯಾಜ್ಯ: ಮಾರ್ವೆ ಮೀನುಗಳನ್ನು ಕತ್ತರಿಸಿ ಅದರ ತ್ಯಾಜ್ಯ ವಸ್ತುಗಳನ್ನು ಎಲ್ಲಂದರಲ್ಲೇ ಬಿಸಾಡಲಾಗುತ್ತಿದೆ. ಪರಿಣಾಮ ಬೀದಿ ನಾಯಿಗಳು ಇವುಗಳನ್ನು ತಿನ್ನಲು ಗುಂಪು ಗುಂಪುಗಟ್ಟಿರುತ್ತವೆ. ಇದರಿಂದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ನಗರದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ನಡೆಯುವ ಈ ಅಕ್ರಮ ಮಾರಾಟ ಮತ್ತು ಸಾಕಾಣಿಕೆಯನ್ನು ತಡೆಯಲು ವಿಫಲವಾಗಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ಈ ಹಿಂದೆ ಪರರಾಜ್ಯ ಲಾರಿಯೊಂದನ್ನು ಹೆಸರಿಗೆ ಮಾತ್ರ ಹಿಡಿದು ಪೋಲೀಸರಿಗೆ ಒಪ್ಪಿಸಿರುವುದನ್ನು ಬಿಟ್ಟರೆ ತಾಲ್ಲೂಕು ವ್ಯಾಪ್ತಿಯಲ್ಲಿ ಮತ್ತೆ ಅಂಥ ಕಾರ್ಯಾಚರಣೆ ನಡೆದೇ ಇಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಮಾರ್ವೆ ಸಾಕಾಣಿಕೆಗೆ ತೋಡಿರುವ ಗುಣಿಗಳನ್ನು ತೆಗೆದು, ಅಕ್ರಮ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

