ಪರಿಸರ ಸಂರಕ್ಷಣೆಯಿಂದ ಕೋಲಾರ ಮಾಲಿನ್ಯ ಮಂಡಳಿ ದೂರ
ಕೋಲಾರ: ಪರಿಸರ ದಿನಾಚರಣೆ ಎಂದರೆ ವರ್ಷಕ್ಕೊಮ್ಮೆ ಯಾವುದೋ ಒಂದು ಶಾಲಾ-ಕಾಲೇಜಿನ ಆವರಣದಲ್ಲಿ ಗಿಡ ನೆಡುವುದು ಇಲ್ಲವೇ ಶಾಲಾ ಮಕ್ಕಳನ್ನು ಬಳಸಿಕೊಂಡು ಜಾಥಾ ನಡೆಸಿ ಪ್ರಚಾರ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಾಧನೆ ಎಂದು ಕೋಲಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಭಾವಿಸಿದಂತಿದೆ.
ಜನತೆಯಲ್ಲಿ ಪರಿಸರದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳೊಂದಿಗೆ ಕೋಲಾರ ಜಿಲ್ಲೆಯನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯ ತೋರಿಸಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ನೆಪದಲ್ಲಿ ಕಾಟಾಚಾರದ ಕಾರ್ಯಕ್ರಮ ನಡೆಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗ್ರಾಸವಾಗಿದೆ.
ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗದಿರುವುದು, ಪ್ಲಾಸ್ಟಿಕ್ ಹಾವಳಿ ಹೆಚ್ಚಿರುವುದು, ಜನ ವಸತಿ ಪ್ರದೇಶದಲ್ಲಿ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ತಡೆಗಟ್ಟಲು ಕೋಲಾರದ ಮಂಡಳಿಯಿಂದ ಯಾವುದೇ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಬಂದಿಲ್ಲ.
ಅಂತರ್ಜಲ ಸಮಸ್ಯೆಗೆ ಕಾರಣವಾಗಿರುವ ನೀಲಗಿರಿ ಮರಗಳನ್ನು ಬೆಳೆದಂತೆ ರೈತರಲ್ಲಿ ಅರಿವು ಮೂಡಿಸಲು ಮಂಡಳಿಯಿಂದ ಶಿಬಿರ, ವಿಚಾರ ಸಂಕಿರಣ, ಕಾರ್ಯಾಗಾರ ನಡೆದಿಲ್ಲ.
ಕೋಲಾರ ನಗರ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸ್ಥಳೀಯ ಸಂಸ್ಥೆಗಳು ಸೂಕ್ತವಾದ ಜಾಗ ಹುಡುಕಲು ಆಗಿಲ್ಲ. ಇದರಿಂದ ಪ್ರತಿದಿನ ಸಂಗ್ರಹಣೆ ಆಗುವ ನೂರಾರು ಟನ್ ಕಸ ಅದರಲ್ಲೂ ವಿಶೇಷವಾಗಿ ಪ್ಲಾಸ್ಟಿಕ್ ಕೆರೆ,ಕುಂಟೆ, ಕಲ್ಯಾಣಿ ಹಾಗೂ ಹಾದಿ ಬೀದಿಗಳಲ್ಲಿ ಹರಡಿ ಪರಿಸರಕ್ಕೆ ಹಾನಿ ಆಗುತ್ತಿದ್ದರೂ ಮಂಡಳಿಯ ಅಧಿಕಾರಿಗಳು ಯಾವುದೇ ಕಾರ್ಯಾಚರಣೆ ನಡೆಸುತ್ತಿಲ್ಲ.
ಕನಿಷ್ಠ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುವುದಕ್ಕೂ ಧೈರ್ಯ ತೋರುತ್ತಿಲ್ಲವೆಂಬುದು ಜನತೆಯ ಆರೋಪ. ಪ್ರತಿವರ್ಷ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣದ ಮೂರ್ತಿಗಳನ್ನು ಬಳಸಬೇಡಿ, ನೀರು ಕಲುಷಿತಗೊಳಿಸಬೇಡಿ ಎಂದು ಕರಪತ್ರ ಹಂಚಿಕೆ ಮಾಡಿ ಇದೇ ನಮ್ಮ ಮಂಡಳಿಯ ಮುಖ್ಯ ಕೆಲಸವೆಂದು ತಿಳಿದು ಹಬ್ಬದ ನಂತರ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತರದೆ ಇರುವುದರಿಂದ ಕೋಲಾರ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ಮಂಡಳಿ ಇದ್ದು ಇಲ್ಲದಂತಾಗಿದೆ ಎಂದು ಜನತೆ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಬ್ಧ ಮಾಲಿನ್ಯ ತಡೆಗಟ್ಟಲು ನಿಯಮ 2000 ಅಡಿಯಲ್ಲಿ ಆಸ್ಪತ್ರೆ, ಶಾಲಾ-ಕಾಲೇಜು, ಧಾರ್ಮಿಕ ಸ್ಥಳ, ಜನನಿಬಿಡ ಪ್ರದೇಶದಲ್ಲಿ ಶಬ್ಧ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ, 1974ರ ನಿಯಮದಡಿ ಜಲ ಮಾಲಿನ್ಯ ತಡೆಗಟ್ಟಬೇಕಾಗಿದೆ. 1981ರಡಿ ವಾಯು ಮಾಲಿನ್ಯ, 1998ರ ನಿಯಮ ಪರಿಷ್ಕತಗೊಂಡು 2000ರಲ್ಲಿ ಜಾರಿಗೆ ಬಂದಿರುವ ಬಯೋ ಮೆಡಿಕಲ್ ತ್ಯಾಜ್ಯಗಳಿಂದ ಆಗುತ್ತಿರುವ ಹಾನಿ ತಪ್ಪಿಸುವುದು, 2000ರ ನಿಯಮದಡಿ ಘನತ್ಯಾಜ್ಯ ವಿಲೇವಾರಿ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಪರಿಸರ ಮಾಲಿನ್ಯ ಮಂಡಳಿ ಹೊಂದಿದೆಯಾದರೂ ಕೋಲಾರದಲ್ಲಿ ನಿಯಮಗಳು ಜಾರಿಗೆ ಬಾರದಿರುವುದರಿಂದ ಜನತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಸಾವು-ನೋವು ಅನುಭವಿಸುತ್ತಿದ್ದು ಈ ಸಾಲಿನ ಪರಿಸರ ದಿನಾಚರಣೆಯ ಸಂದರ್ಭದಲ್ಲಾದರೂ ಕೋಲಾರ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಪರಿಸರದ ಬಗ್ಗೆ ಜನತೆಯಲ್ಲಿ ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡುವ ಉತ್ಪನ್ನಗಳನ್ನು ತಯಾರಿಸುತ್ತಿರುವ ಕೈಗಾರಿಕೋದ್ಯಮಿಗಳಿಗೆ ಹಾಗೂ ಕೆರೆಗಳಲ್ಲಿ ಮರಳು ಶೋಧನೆ, ಕಲ್ಲು ಗಣಿಗಾರಿಕೆ, ನೀಲಿಗಿರಿ ಬೆಳೆಯಿಂದ ಆಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡದಿದ್ದರೆ ಪರಿಸರ ಇಲಾಖೆಯಿಂದಲೇ ಜನರಿಗೆ ಶಾಪ ಎಂದು ತಿಳಿಯಬೇಕಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್, ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಹಾಗೂ ಕನಿವೇ ಪದಾಧಿಕಾರಿ ತ್ಯಾಗರಾಜ್, ಪರಿಸರ ಪ್ರೇಮಿ ನಾಗರಾಜ ಶೆಣೈ ಮತ್ತಿತರರು ಮಾರ್ಮಿಕವಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

