ಕೋಲಾರ

ಮಾಸ್ತಿ ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಕೋಲಾರ: ಮಾಲೂರು ತಾಲೂಕಿನ ಆಲಹಳ್ಳಿ ಗ್ರಾಮದ ಶಶಿಕಲಾ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಮಾಸ್ತಿ ಪೊಲೀಸ್ ಠಾಣೆ ಪಿಎಸ್‌ಐ ಸಿದ್ದಪ್ಪ ಅವರನ್ನು ಅಮಾನತುಗೊಳಿಸಬೇಕು ಹಾಗೂ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿತು.
ಕಳೆದ ಏ.19 ರಂದು ರಾತ್ರಿ ಆಲಹಳ್ಳಿ ಗ್ರಾಮದಲ್ಲಿ ಭೂವಿವಾದದ ವೈಷಮ್ಯದ ಹಿನ್ನೆಲೆಯಲ್ಲಿ ಸದರಿ ಗ್ರಾಮದ ಗೋವಿಂದಪ್ಪ, ನಾರಾಯಣಪ್ಪ, ಮುನಿಯಪ್ಪ, ಮುನಿಶಾಮಿ, ಕೋನೇಪುರದ ಈರಪ್ಪನ ಮಗ ಮುನಿಶಾಮಿ ಎಂಬುವರು ಗುಂಪು ಕಟ್ಟಿಕಟ್ಟಿಕೊಂಡು ದೇವರಾಜ್ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ಜಗಳ ಬಿಡಿಸಲು ಮುಂದಾದ ಶಶಿಕಲಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಆಕೆಯ ಬಲಗಾಲು ಮುರಿದಿದ್ದಾರೆಂದು ದೂರಿದರು. ಘಟನೆಯ ಬಗ್ಗೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ಗಾಯಾಳು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಇನ್ನು ಚೇತರಿಕೆ ಆಗಿಲ್ಲವೆಂದು ತಿಳಿಸಿದ್ದಾರೆ. ಹಲ್ಲೆಕೋರರು ರಾಜಾರೋಷವಾಗಿ ಗ್ರಾಮದಲ್ಲಿ ಓಡಾಡುತ್ತಿದ್ದರೂ ಅವರನ್ನು ಬಂಧಿಸದೆ ಪಿಎಸ್‌ಐ ಕರ್ತವ್ಯ ಲೋಪವೆಸಗಿರುತ್ತಾರೆಂದು ದೂರಿದ ಪ್ರತಿಭಟನಾಕಾರರು, ಪಿಎಸ್‌ಐ ಸಿದ್ದಪ್ಪ ಆರೋಪಿಗಳೊಂದಿಗೆ ಶಾಮೀಲಾಗಿರುವುದರಿಂದ ಶಿಸ್ತಿನಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಾಲು ಮುರಿದಿರುವ ಶಶಿಕಲಾ ಅವರನ್ನು ದೇವರಾಜು ಎತ್ತಿಕೊಂಡು ಹೋಗಿ ಎಸ್ಪಿಯವರ ಮುಂದೆ ಹಾಜರು ಪಡಿಸಿ ನ್ಯಾಯ ಕಲ್ಪಿಸುವಂತೆ ಕೋರಿದರು. ಕದಸಂಸ ಜಿಲ್ಲಾ ಪ್ರಧಾನ ಸಂಚಾಲಕ ವರದಗಾನಹಳ್ಳಿ ಮುನಿವೆಂಕಟಪ್ಪ, ಕೆ.ಸಿ. ರಾಜಣ್ನ, ಮದಿವಣ್ಣನ್, ಎಟ್ಟಕೋಡಿ ರಾಮಚಂದ್ರಪ್ಪ, ಕೂಟೇರಿ ಅಶ್ವಥ್ ಇದ್ದರು.

ಪರವಾನಗಿ ನವೀಕರಣಕ್ಕೆ ಲೇವಾದೇವಿಗಾರರಿಗೆ ಸೂಚನೆ
ಕೋಲಾರ: ಲೇವಾದೇವಿ ಹಾಗೂ ಹಣಕಾಸು ಸಂಸ್ಥೆಯವರು ಜೂ.16ರೊಳಗೆ ಪರವಾನಗಿ ನೋಂದಣಿ ಮಾಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೋಲಾರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಆರ್.ಸೋಮಶೇಖರ್ ತಿಳಿಸಿದ್ದಾರೆ.
ಸಾಲಗಾರರಿಗೆ ನೀಡುವ ಸಾಲಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ಫಾರಂ-6ರಲ್ಲಿ ಮತ್ತು ಸಾಲಗಾರರಿಂದ ಬರಬೇಕಾಗಿರುವ ಸಾಲದ ವಿವರ ತೋರಿಸುವ ವಾರ್ಷಿಕ ಲೆಕ್ಕವನ್ನು  ಫಾರಂ-7ರಲ್ಲಿ 31.3.2014ರೊಳಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಸಲ್ಲಿಸಿ ಹೊಸದಾಗಿ ಪರವಾನಗಿ ಪಡೆಯಬೇಕಾಗಿತ್ತು. ಆದರೆ, ಇನ್ನೂ ಕೆಲವರು ಪರವಾನಿಗೆ ಪಡೆಯದೇ ಇರುವುದರಿಂದ ಜೂ.16ಕ್ಕೆ ಗಡುವು ವಿಸ್ತರಿಸಲಾಗಿದೆ. ಇಷ್ಟಾಗಿಯೂ ನಿಗದಿತ ಶುಲ್ಕ ಪಾವತಿಸಿ, ಪರವಾನಿಗೆಯನ್ನು ನವೀಕರಿಸದಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.