ಕೋಲಾರ

ವಿರೋಧದ ನಡುವೆ ಎತ್ತಿನಹೊಳೆಗೆ ಶಂಕು

Published On :

ಚಿಕ್ಕಬಳ್ಳಾಪುರ: ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ತೀವ್ರ ಚರ್ಚೆಗೆ ಗುರಿಯಾಗಿ, ವಿವಾದ ಸೃಷ್ಟಿಸಿದ್ದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಅಂತೂ ಇಂತು ಶಂಕುಸ್ಥಾಪನೆ ನೆರವೇರಿಸಿದರು.
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ತರುತ್ತಿರುವ 12912.36 ಕೋಟಿ ರು. ವೆಚ್ಚದ ಈ ನೀರಾವರಿ ಯೋಜನೆ ಜಾರಿಯಿಂದ ಯಾವುದೇ ಭಾಗಕ್ಕೆ ಧಕ್ಕೆಯಾಗುವುದಿಲ್ಲ. ಅಲ್ಲದೇ ನೂರಕ್ಕೆ ನೂರು 24 ಟಿಎಂಸಿ ನೀರು ಸಿಕ್ಕೇ ಸಿಗುತ್ತದೆ. ಇದನ್ನು ಖ್ಯಾತ ಭಾರತೀಯ ವಿಜ್ಞಾನ ಸಂಸ್ಥೆಯ ಜಲತಜ್ಞರಿಂದ ವೈಜ್ಞಾನಿಕವಾಗಿ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂಬ ಸ್ಪಷ್ಟನೆಯನ್ನೂ ಈ ಸಂದರ್ಭದಲ್ಲಿ ನೀಡಿದರು.
ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಡಾ. ಪರಮಶಿವಯ್ಯನವರ ವರದಿಯಾಧಾರಿತ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕಳೆದ ಒಂದೂವರೆ ದಶಕದಿಂದ ಹೋರಾಟ ನಡೆಸಿ ಒತ್ತಡ ಹೇರಿಕೊಂಡು ಬಂದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯ ಮೂಲಕ ಈ ಭಾಗಕ್ಕೆ ಕುಡಿಯುವ ನೀರು ಒದಗಿಸಲು ಸರ್ಕಾರ ಮುಂದಾಗಿದೆ ಎಂದರು.
ನಗರದ ಹೊರ ವಲಯದ ಬಿ.ಬಿ. ರಸ್ತೆಯಲ್ಲಿರುವ (ಅದಿಚುಂಚನಗಿರಿ ಶಾಖಾ ಮಠದ ಸಮೀಪದ) ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, 3716.59 ಕೋಟಿ ರು. ವೆಚ್ಚದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕೆಲವರು ದಾರಿ ತಪ್ಪಿಸುವ ಸಲುವಾಗಿಯೇ ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಸುಳ್ಳು ಮಾತುಗಳನ್ನು ಹೇಳುತ್ತಿದ್ದಾರೆ. ಇದನ್ನು ಯಾರೂ ನಂಬುವ ಅವಶ್ಯಕತೆಯಿಲ್ಲ. ಜನರಿಗೆ ಸುಳ್ಳು ಭರವಸೆ ನೀಡಲು 13 ಸಾವಿರ ಕೋಟಿ ರು.ಗಳನ್ನು ಹುಣಸೇಹಣ್ಣು ತೊಳೆದಂತೆ ವ್ಯರ್ಥ ಮಾಡಲು ರಾಜ್ಯ ಸರ್ಕಾರಕ್ಕೆ ಬುದ್ದಿ ಇಲ್ಲವೇನು ಎಂದು ಪ್ರಶ್ನಿಸಿದರು.
ಗೊಂದಲ ಹೋಗುತ್ತದೆ: ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ರಾಜ್ಯ ಸರ್ಕಾರದ ಪ್ರಮುಖ ಕರ್ತವ್ಯ. ಇದನ್ನರಿತುಕೊಂಡೇ ಬಯಲುಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ 24 ಟಿಎಂಸಿ ನೀರನ್ನು ಒದಗಿಸಲಾಗುತ್ತದೆಯೇ ಹೊರತು ರಾಜಕೀಯ ಮಾಡುವುದಕ್ಕಲ್ಲ. 24 ಟಿಎಂಸಿ ನೀರಿನಲ್ಲಿ 15 ಟಿಎಂಸಿ ನೀರನ್ನು ಕುಡಿಯಲು ಒದಗಿಸಲಾಗುವುದು ಮತ್ತು 9 ಟಿಎಂಸಿ ನೀರನ್ನು ಸುಮಾರು 500 ಕೆರೆಗಳಿಗೆ ತುಂಬಿಸಲಾಗುವುದು. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 198 ಕೆರೆಗಳು ಮತ್ತು ಕೋಲಾರ 139 ಕೆರೆಗಳು ಸೇರಿವೆ. ಪ್ರಮುಖವಾಗಿ ಪ್ರತಿ ಕೆರೆಯ ಸಾಮರ್ಥ್ಯದ ಅರ್ಧದಷ್ಟು ಪ್ರಮಾಣದಲ್ಲಿ ನೀರನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ತಪ್ಪು ಮಾಹಿತಿಯಿಂದ ಎತ್ತಿನಹೊಳೆ ಯೋಜನೆಯನ್ನು ಬಯಲುಸೀಮೆ ಮತ್ತು ಕರಾವಳಿ ಭಾಗದ ಕೆಲ ಜನರು ಗೊಂದಲದಿಂದ ನೋಡುತ್ತಿದ್ದಾರೆ. ಇದನ್ನು ದೂರ ಮಾಡಲು ಎರಡು ಭಾಗದ ಜನರ ಸಭೆಯನ್ನು ತ್ವರಿತವಾಗಿ ಕರೆದು ವೈಜ್ಞಾನಿಕವಾಗಿಯೇ ಚರ್ಚಿಸಲಾಗುವುದು. ಆಗ ಜನರೇ ಸರ್ಕಾರದ ಈ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, (ಡಿಪಿಆರ್) ವಿಸ್ಕೃತ ವರದಿ ಪಡೆದುಕೊಂಡ ನಂತರವೇ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು. ಇದು ನೇತ್ರಾವತಿ ತಿರುವಲ್ಲ, ಕರಾವಳಿ ಭಾಗದ ಪರಿಸರವನ್ನು ಹಾಳು ಮಾಡುವುದಿಲ್ಲ. ಇದರಿಂದ ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಪಶ್ಚಿಮಘಟ್ಟಗಳಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ 2000 ಟಿಎಂಸಿ ನೀರಿನಲ್ಲಿ ಶೇ.1.2 ರಷ್ಟು ಮತ್ತು ನೇತ್ರಾವತಿ ಸಮೀಪದ ಜಲಾನಯನ ಪ್ರದೇಶ ವ್ಯಾಪ್ತಿಯ ವಿವಿಧ ನೀರಾವರಿ ಮೂಲಗಳಲ್ಲಿ ಸಿಗುವ 400 ಟಿಎಂಸಿ ನೀರಿನಲ್ಲಿ ಶೇ.6 ರಷ್ಟು ನೀರನ್ನು ಬಯಲುಸೀಮೆ ಭಾಗಕ್ಕೆ ಹರಿಸಲಾಗುವುದು ಎಂದ ಅವರು, ಎತ್ತಿನಹೊಳೆ ಯೋಜನೆಯ 2 ನೇ ಹಂತದ ಕಾಮಗಾರಿಗೂ ಅತಿ ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುತ್ತಿದೆ ಎಂದರು.
ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ಫ್ಲೋರೈಡ್ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಈ ಭಾಗದ ಜನರ ನೋವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಎತ್ತಿನಹೊಳೆ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸುವ ಮೊದಲು ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಸಚಿವ ಡಿ.ಕೆ. ಶಿವಕುಮಾರ್, ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಸಚಿವರಾದ ರೋಷನ್ ಬೇಗ್, ಟಿ.ಬಿ. ಜಯಚಂದ್ರ, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಶಾಸಕರು, ವಿಧಾನಪರಿಷತ್ ಸದಸ್ಯರು ಇದ್ದರು.

ಯಶಸ್ವಿ ಶಂಕು, ಕಪ್ಪು ಬಾವುಟ ಪ್ರದರ್ಶನ...
ಚಿಕ್ಕಬಳ್ಳಾಪುರ: ಒಂದು ಕಡೆ ಅದ್ಧೂರಿ ವೇದಿಕೆಯಲ್ಲಿ ಎತ್ತಿನಹೊಳೆ ಯೋಜನೆಗೆ ಯಶಸ್ವಿಯಾಗಿ ಶಂಕುಸ್ಥಾಪನೆ, ಮತ್ತೊಂದು ಕಡೆ ಯೋಜನೆ ಜಾರಿ ವಿರೋಧಿಸಿ ಕಪ್ಪುಪಟ್ಟಿ ಮತ್ತು ಖಾಲಿ ಪೈಪುಗಳ ಪ್ರದರ್ಶನ.
ಈ ಮೂಲಕ ಚಿಕ್ಕಬಳ್ಳಾಪುರದಲ್ಲಿ ವ್ಯಕ್ತವಾದ ಪರ ಮತ್ತು ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಯ ಮೂಲಕ ನೀರು ಹರಿದು ಬರುವ ನಿರೀಕ್ಷೆ ಜನರಲ್ಲಿ ಹೆಚ್ಚಾಗಿದೆ. ಡಾ. ಪರಮಶಿವಯ್ಯನವರ ವರದಿ ಜಾರಿಗೆ ತರಬೇಕೆಂಬ ಒತ್ತಾಯ ಕಳೆದ ಒಂದೂವರೆ ದಶಕದಿಂದಲೂ ಕೇಳಿ ಬರುತ್ತಿದೆ. ಪ್ರತಿಭಟನೆಗಳು, ಧರಣಿಗಳು ನಡೆಸಲಾಗಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ ಎತ್ತಿನಹೊಳೆ ಯೋಜನೆಯಿಂದ ಕೇವಲ 6 ಟಿಎಂಸಿ ನೀರು ಬರುವುದು. ಇದು ಅವೈಜ್ಞಾನಿಕ ಯೋಜನೆ ಎಂದು ಆರೋಪಿಸುತ್ತಿರುವುದರ ನಡುವೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನೂರಕ್ಕೆ ನೂರು 24 ಟಿಎಂಸಿ ನೀರು ಲಭ್ಯವಾಗುತ್ತದೆ. ನೀರಾವರಿ ತಜ್ಞರಿಂದ ಸ್ಪಷ್ಟವಾದ ಭರವಸೆ ಸಿಕ್ಕಿದೆ ಎಂದು ತಿಳಿಸಿರುವುದು ನೆಮ್ಮದಿ ತರುವ ವಿಷಯ.
ಸರ್.ಎಂ.ವಿ. ವೇದಿಕೆಯ ಮುಂಭಾಗದಲ್ಲಿಯೇ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಭಿನಂದಿಸುವ ಫ್ಲೆಕ್ಸುಗಳು, ಬ್ಯಾನರ್‌ಗಳು ರಾರಾಜಿಸಿದವು. ಕಂಬಗಳಿಗೆ ಕಾಂಗ್ರೆಸ್ ಬಾವುಟಗಳನ್ನು ಎಲ್ಲೆಂದರಲ್ಲಿ ಕಟ್ಟಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಹುತೇಕ ವಿರೋಧ ಪಕ್ಷದ ಮುಖಂಡರು ಗೈರು ಹಾಜರಾಗಿದ್ದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತುಂಬಿ ತುಳುಕಾಡುತ್ತಿದ್ದರು.
ಕಾರ್ಯಕ್ರಮಕ್ಕಾಗಿ ಜನರನ್ನು ವಿವಿಧೆಡೆಯಿಂದ ಕರೆದುಕೊಂಡು ಬರಲು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರೆರಡ್ಡಿ ಮತ್ತು ಕಾಂಗ್ರೆಸ್ ನಾಯಕರು ಬಸ್ ಸೌಲಭ್ಯವನ್ನು ಕೈಗೊಂಡಿದ್ದರು. ಈ ನಡುವೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 350 ಕ್ಕೂ ಹೆಚ್ಚು ಬಸ್ಸುಗಳನ್ನು ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡಬೇಕಾಯಿತು. ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಬೇಕಾಯಿತು. ಚಿಕ್ಕಬಳ್ಳಾಪುರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎಲ್ಲರ ತಲೆ ನೋವಿಗೆ ಕಾರಣವಾಯಿತು.
ಬಿಗಿ ಬಂದೋಬಸ್ತ್: ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಕೈಗೊಂಡಿದ್ದ ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು. ನಗರದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾರ್ಯಕ್ರಮದ ಸ್ಥಳದಲ್ಲಿ ಗೊಂದಲವನ್ನುಂಟು ಮಾಡಬಹುದೆಂಬ ಭಾವನೆಯಲ್ಲಿ ಎಚ್ಚರಿಕೆ ವಹಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕಪ್ಪುಬಾವುಟ ತರಲಾಗಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲಾಯಿತು. ನೀರಿನ ಬಾಟಲ್, ಬೆಂಕಿಪೊಟ್ಟಣ, ಸಿಗರೇಟುಗಳನ್ನು ವೇದಿಕೆ ಬಳಿಗೆ ತರಲು ಬಿಡಲಿಲ್ಲ. ಇದರಿಂದ ರಾಶಿಗಟ್ಟಲೇ ಬೆಂಕಿಪೊಟ್ಟಣ ಮತ್ತು ಸಿಗರೇಟು ಪ್ಯಾಕುಗಳನ್ನು ವಶಪಡಿಸಿಕೊಳ್ಳಲಾಯಿತು.

ರಾಜಕೀಯ ಸ್ವಾರ್ಥಕ್ಕಾಗಿ ಎತ್ತಿನಹೊಳೆ: ಆಕ್ರೋಶ
ಚಿಕ್ಕಬಳ್ಳಾಪುರ: ಸ್ವಾರ್ಥ ಲಾಭಕ್ಕಾಗಿ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು, ನಗರದಲ್ಲಿ ಕಪ್ಪುಪಟ್ಟಿ ಮತ್ತು ಖಾಲಿ ಪೈಪುಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟದಿಂದ ಮುಖ್ಯಮಂತ್ರಿಗಳ ಭಾಗವಹಿಸುತ್ತಿರುವ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತದೆ ಎಂದು ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಆನಂತರ ಬಿಡುಗಡೆ ಮಾಡಿದರು. ಬಂಧನದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ನಗರದ ಸಿಟಿಜನ್‌ಕ್ಲಬ್ ನಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಪ್ರತಿಭಟನಾ ಮೆರವಣಿಗೆ ಹೊರಟು ನಗರದ ಶಿಡ್ಲಘಟ್ಟ ವೃತ್ತ ಮತ್ತು ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಕೆಲ ಸಮಯ ಸಂಚಾರ ತಡೆದು ಧಿಕ್ಕಾರಗಳನ್ನು ಕೂಗಿದರು.
ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಕರಾವಳಿ ಭಾಗದಲ್ಲಿ ಸೋತು ಬಂದಾಗ ಇಲ್ಲಿನ ಜನರು ರಾಜಕೀಯ ಪುನರ್ ಜನ್ಮ ನೀಡಿದರು. ಹೆಚ್ಚಿನ ಮತ ಕೊಟ್ಟು ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಿದರು. ಆಗ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಡಾ. ಪರಮಶಿವಯ್ಯನವರ ವರದಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ ಅವರು, ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸಿದರು. ಇಲ್ಲಿಯವರೆಗೂ ಸುಳ್ಳು ಭರವಸೆಗಳನ್ನು ಕೊಡುತ್ತ ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಸಲುವಾಗಿ ಆತುರಾತುರವಾಗಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎತ್ತಿನಹೊಳೆ ಯೋಜನೆಗಾಗಿ ಇನ್ನೂ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ತಾಂತ್ರಿಕ ವರದಿಯಲ್ಲೂ ಗೊಂದಲವಿದೆ ಎಂದ ಅವರು, ಕರಾವಳಿ ಭಾಗದ ಜನರಲ್ಲಿನ ಗೊಂದಲ ಬಗೆಹರಿಸಿ, ಈ ಭಾಗಕ್ಕೆ ನಿಜವಾಗಿಯೂ ಅನುಕೂಲವಾಗುವ ಡಾ. ಪರಮಶಿವಯ್ಯನವರ ವರದಿ ಜಾರಿಗೆ ತರಬೇಕಾಗಿತ್ತು. ಆದರೆ, ಅವರಿಗೆ ಚುನಾವಣಾ ರಾಜಕಾರಣವೇ ಮುಖ್ಯವಾಗಿದೆ. ಇದಕ್ಕಾಗಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ, ಎನ್. ಜ್ಯೋತಿರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಡಾ. ಮಧುಸೀತಪ್ಪ, ಭಕ್ತರಹಳ್ಳಿ ಭೈರೇಗೌಡ, ಲಕ್ಷ್ಮೀನಾರಾಯಣ್ ಇದ್ದರು.

ಸಾರಿಗೆ ಅವ್ಯವಸ್ಥೆ; ವಿದ್ಯಾರ್ಥಿಗಳ ಪ್ರತಿಭಟನೆ
-ವಿ.ಡಿ. ಗಣೇಶ್
ಗೌರಿಬಿದನೂರು: ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆಗಾಗಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸಚಿವರು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರೆ ಕಾರ್ಯಕ್ರಮ ಯಶಸ್ವಿಗಾಗಿ ಜನರನ್ನು ಕರೆತರಲು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಳಸಿಕೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ವಿವಿಧ ಕೆಲಸಕಾರ್ಯಗಳಿಗಾಗಿ ಪಟ್ಟಣದಿಂದ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಿಗೆ ತೆರಳಲು ಮುಖ್ಯವಾಗಿ ನೌಕರರು ಮತ್ತು ವಿದ್ಯಾರ್ಥಿಗಳು ತೀವ್ರ ಪರದಾಡಿದರು.ಗೌರಿಬಿದನೂರು ಸಾರಿಗೆ ಘಟಕದಿಂದ ಸುಮಾರು 80 ಬಸ್‌ಗಳನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಿದ್ದು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಲು ಒಂದೂ ಬಸ್ ಇಲ್ಲದೆ ಪ್ರಯಾಣಿಕರು ತೀವ್ರ ಕಷ್ಟ ಎದುರಿಸಿದರು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನೂ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಕಾರಣದಿಂದ ಡಿಪೋದಲ್ಲಿರುವ ಎಲ್ಲ ಬಸ್ಸುಗಳನ್ನೂ ಕಾರ್ಯಕ್ರಮಕ್ಕೆ  ನಿಯೋಜಿಸಲಾಗಿದ್ದು, ಚಿಕ್ಕಬಳ್ಳಾಪುರಕ್ಕೆ ವಿವಿಧ ಕೋರ್ಸ್‌ಗಳಿಗೆ ಪ್ರತಿನಿತ್ಯ ಹೋಗುವ ನೂರಾರು ವಿದ್ಯಾರ್ಥಿಗಳು, ನೌಕರರು ಒಂದೂ ಬಸ್ ಬಾರದ ಕಾರಣ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ವಿನಾಕಾರಣ ಬಸ್ ಸಂಚಾರ ನಿಗದಿತವಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಮಾಡುತ್ತಿಲ್ಲ. ರಾಜಕೀಯ ಪಕ್ಷಗಳ ಒಲೈಕೆಗಾಗಿ ತಾಲೂಕಿನಿಂದ 80ಕ್ಕೂ ಹೆಚ್ಚು ಬಸ್‌ಗಳನ್ನು ಕಳಿಸಿರುವುದೇ ಇದಕ್ಕೆ ಕಾರಣ ಎಂದು ದೂರಿದರು.
ಆಯಾ ದಿನಗಳಲ್ಲಿ ಹೆಚ್ಚಿನ ಬಸ್‌ಗಳನ್ನು ನಿಯೋಜಿಸದೇ ಬೇಜವಾಬ್ದಾರಿತನ ತೋರಿಸುವ ಅಧಿಕಾರಿಗಳು ಇದೇ ರೀತಿ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ, ಡಿಪೋದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದರಿಂದ ಸಿಬ್ಬಂದಿಗೂ ಮತ್ತು ಅಧಿಕಾರಿ ನಡುವೆ ಸದಾ ಗಲಾಟೆಗಳು ನಡೆಯುತ್ತಲೇ ಇದೆ ಎಂದು ಆರೋಪಿಸಿದರು.

ಶಾಶ್ವತ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ನೂರಾರು ವಿದ್ಯಾರ್ಥಿಗಳು ನಗರದ ಮುಖ್ಯ ಬೀದಿಗಳಲ್ಲಿ ಸಂಚಿರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಇಲ್ಲಿನ ಜನರಿಗೆ ವಿವಿಧ ಮೂಳೆ ರೋಗಗಳು ಹೆಚ್ಚಾಗಿವೆ. ಕೂಡಲೇ ಸರ್ಕಾರಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿಸಬೇಕೆಂದು ಒತ್ತಾಯಿಸಿದರು. ನವಾಜ್, ಸುರೇಶ್, ರಮೇಶ್, ಮಂಜುನಾಥ್, ಅಂಬರೀಷ್ ಇದ್ದರು.

ನಾನು ಸಾಯುವ ಮೊದಲು ನೀರು ಕೊಡುತ್ತೇನೆ!
ಚಿಕ್ಕಬಳ್ಳಾಪುರ: ನಾನು ಸಾಯುವುದರೊಳಗಾಗಿ ಶಾಶ್ವತ ನೀರಾವರಿ ಯೋಜನೆ ಮೂಲಕ ಈ ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕೆಂಬ ಬಯಕೆ ಹೊಂದಿರುವ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಎಷ್ಟೇ ಅಡ್ಡಿ ಆತಂಕಗಳು ಬಂದರೂ ನಾನು ನೀರು ಕೊಟ್ಟೇ ಸಾಯಬೇಕು. ಇದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ನಗರದ ಹೊರ ವಲಯದಲ್ಲಿರುವ ಬಿಜಿಎಸ್ ವರ್ಲ್ಡ್ ಸ್ಕೂಲ್‌ನ ಆವರಣದಲ್ಲಿ ಆಯೋಜಿಸಿದ್ದ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಆಡಿದ ಮಾತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫ್ಲೋರೈಡ್ ನೀರಿನ ಸೇವನೆಯಿಂದ ಸಣ್ಣ ವಯಸ್ಸಿನ ಮಕ್ಕಳು 60 ವರ್ಷದ ಮುದುಕರಂತೆ ಕಾಣುತ್ತಿದ್ದಾರೆ. ಅನೇಕ ಮಕ್ಕಳ ಹಲ್ಲುಗಳೇ ಉದುರಿ ಹೋಗಿವೆ. ಇಂತಹ ಪರಿಸ್ಥಿತಿ ನೋಡಲು ಸಾಧ್ಯವಾಗುತ್ತಿಲ್ಲ. ಶುದ್ಧ ನೀರನ್ನು ಕೊಟ್ಟು ಜನರನ್ನು ಕಾಪಾಡಲು ಮನಸ್ಸು ಹಾತೊರೆಯುತ್ತಿದೆ ಎಂದರು. ನಮ್ಮಿಂದ ಜನರಿಗೆ ಕುಡಿಯಲು ಯೋಗ್ಯವಾದ ನೀರನ್ನು ಕೊಡಲು ಸಾಧ್ಯವಾಗದಿದ್ದರೆ ನಾವು ಆಯೋಗ್ಯರಾಗುತ್ತೇವೆ. ಮೊದಲು ನೀರು ಕೊಡಲು ವಿಶೇಷ ಆದ್ಯತೆ ನೀಡಬೇಕೆಂದ ಅವರು, ನೀರಾವರಿ ಸೌಲಭ್ಯವನ್ನು ಒದಗಿಸುವಲ್ಲಿ ಯಾರೂ ರಾಜಕೀಯ ಮಾಡುತ್ತಿಲ್ಲ ಎಂದರು.
ಇನ್ನು ಎರಡು ವರ್ಷದೊಳಗೆ ಈ ಭಾಗಕ್ಕೆ ನೀರು ಕೊಡಲು ಅನುವಾಗುವ ನಿಟ್ಟಿನಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಬೇಕೆಂದು ಆಶಿಸಿದರು.

ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ರಾಜ್ಯ ಸರ್ಕಾರದ ಪ್ರಮುಖ ಕರ್ತವ್ಯ. ಇದನ್ನರಿತುಕೊಂಡೇ ಬಯಲುಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ 24 ಟಿಎಂಸಿ ನೀರನ್ನು ಒದಗಿಸಲಾಗುತ್ತದೆಯೇ ಹೊರತು ರಾಜಕೀಯ ಮಾಡುವುದಕ್ಕಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಇದು ನೇತ್ರಾವತಿ ತಿರುವಲ್ಲ, ಕರಾವಳಿ ಭಾಗದ ಪರಿಸರವನ್ನು ಹಾಳು ಮಾಡುವುದಿಲ್ಲ. ಇದರಿಂದ ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಪಶ್ಚಿಮಘಟ್ಟಗಳಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ 2000 ಟಿಎಂಸಿ ನೀರಿನಲ್ಲಿ ಶೇ.1.2 ರಷ್ಟು ಬಳಸಿಕೊಳ್ಳಲಾಗುವುದು.
-ಎಂ.ಬಿ. ಪಾಟೀಲ್, ಜಲಸಂಪನ್ಮೂಲ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.