ಜನಪದ ಕಲಾವಿದರ ಗಣತಿಗೆ ಚಿಂತನೆ
ಕೋಲಾರ: ರಾಜ್ಯದ ಜನಪದ ಕಲಾ ಪ್ರಕಾರಗಳು ಮತ್ತು ಇದರಲ್ಲಿ ತೊಡಗಿಸಿಕೊಂಡಿರುವ ಕಲಾವಿದರನ್ನು ಪಟ್ಟಿ ಮಾಡಲು ಅದಷ್ಟು ಬೇಗನೆ ಸರ್ಕಾರದ ಸಹಯೋಗದೊಂದಿಗೆ ಸಮೀಕ್ಷೆ ನಡೆಸಲು ಉದ್ದೇಶಿಸಿರುವುದಾಗಿ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.
ಅಕಾಡೆಮಿ ಅಧ್ಯಕ್ಷರಾದ ಬಳಿಕ ತಮ್ಮ ತವರು ಜಿಲ್ಲೆಯಾದ ಕೋಲಾರದಲ್ಲಿ ಮಂಗಳವಾರ ಪ್ರಥಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜನಪದ ಅಕಾಡೆಮಿ 1980ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದರೂ ಹಳ್ಳಿಗಾಡಿನಲ್ಲಿ ಎಲೆಮರೆ ಕಾಯಿಯಂತೆ ಇರುವ ಸಾವಿರಾರು ಪ್ರತಿಭಾವಂತ ಜನಪದ ಕಲಾವಿದರನ್ನು ಮತ್ತು ಕಲಾ ಪ್ರಕಾರಗಳನ್ನು ಸಮಗ್ರವಾಗಿ ಪಟ್ಟಿ ಮಾಡಲು ಸಾಧ್ಯವಾಗಿಲ್ಲದ ಕಾರಣ ತಾವು ಕಲಾವಿದರ ಸಮೀಕ್ಷೆ(ಗಣತಿ)ಕಾರ್ಯಕ್ಕೆ ಹೆಚ್ಚಿನ ಅದ್ಯತೆ ನೀಡಲು ಬಯಸಿರುವುದಾಗಿ ಹೇಳಿದರು.
ಜನಪದ ಅಕಾಡೆಮಿ ವ್ಯಾಪ್ತಿಗೆ 145 ವಿವಿಧ ಪ್ರಕಾರಗಳ ಕಲೆಗಳು ಒಳಪಟ್ಟಿವೆ. ಈ ಕಲೆಗಳಲ್ಲಿ ತಳ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭೂಮಿತತ್ವ ಒಳಗೊಂಡಿರುವ ಜಾನಪದಕ್ಕೆ ಹೆಚ್ಚಿನ ಶಕ್ತಿ ನೀಡುವುದು ನನ್ನ ಗುರಿಯಾಗಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲಸಿರುವ ಕಲಾವಿದರನ್ನು ಮತ್ತು ಕಲೆಗಳನ್ನು ಗುರುತಿಸದೆ ಹೋದರೆ ಸಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಕಷ್ಟವಾಗುತ್ತದೆ ಎಂದರು.
ಈ ಹಿಂದೆ ಜನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಬಹುತೇಕರು ವೈಟ್ ಕಾಲರ್ ಸಂಸ್ಕೃತಿಯವರಾಗಿದ್ದರಿಂದ ಬೆಂಗಳೂರು ಮತ್ತಿತರ ದೊಡ್ಡ ನಗರಗಳು ಮಾತ್ರ ಅವರಕಣ್ಣಿಗೆ ಕಾಣಿಸಿತ್ತು, ಇದರಿಂದಾಗಿ ಹಳ್ಳಿ ಹಳ್ಳಿಗೆ ಜಾನಪದ ತಲುಪಿಸಲು ವಿಫಲರಾಗಿದ್ದಾರೆ, ತಾವು ಪಿಚ್ಚಳ್ಳಿಯವನಾಗಿರುವುದರಿಂದ ಹಳ್ಳಿಗಳಲ್ಲಿನ ಪ್ರತಿಭಾವಂತ ಕಲಾವಿದರನ್ನು ಜನಪದ ಅಕಾಡೆಮಿಯ ವ್ಯಾಪ್ತಿಗೆ ತಂದು ಅಕಾಡೆಮಿ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನುಡಿದರು. ರಾಜ್ಯದ ವಿವಿಧ 13 ಅಕಾಡೆಮಿಗಳಿಗೆ ಹೋಲಿಕೆ ಮಾಡಿದಲ್ಲಿ ಜನಪದ ಅಕಾಡೆಮಿಯ ವ್ಯಾಪ್ತಿ ದೊಡ್ಡದಾಗಿದೆ, ಸರ್ಕಾರ ನೀಡುವ ವಾರ್ಷಿಕ 75 ಲಕ್ಷ ಅನುದಾನದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟ. ಮಂದಿನ ಬಜೆಟ್ನಲ್ಲಿ 1 ಕೋಟಿ ರು. ಅನುದಾನ ಸಿಗುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಉಮಾಶ್ರೀ ಅವರು ಜನಪದ ಅಕಾಡೆಮಿಯ ಎಲ್ಲಾ ರೀತಿಯ ಒಳ್ಳೆಯ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಬದ್ಧರಾಗಿದ್ದಾರೆಂದು ತಿಳಿಸಿದರು. ಗೋರೂರು ಚನ್ನಬಸಪ್ಪನವರು ಜನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಜನಪದ ಕಲಾವಿದರಿಗಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿದ್ದಾರೆ, ಸರ್ಕಾರ, ಸಂಘ ಸಂಸ್ಥೆ ಹಾಗೂ ಧಾನಿಗಳ ಸಹಾಯದಿಂದ ಕ್ಷೇಮಾಭಿವೃದ್ಧಿ ನಿಧಿಯ ಗಾತ್ರ ವಿಸ್ತರಣೆ ಮಾಡಿ ಕನಿಷ್ಠ 1 ಕೋಟಿ ರು. ಮೀಸಲಿಟ್ಟು ಈ ನಿಧಿಯಿಂದ ಬಡ ಕಲಾವಿದರಿಗೆ ಹೆಚ್ಚಿನ ಆರ್ಥಿಕ ಸಹಾಯ ನೀಡುವುದು ತಮ್ಮ ಆಶಯಗಳಲ್ಲಿ ಒಂದಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್, 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಾಹಿತಿ ಡಾ. ಚಂದ್ರಶೇಖರ ನಂಗಲಿ, ಗೋಕುಲ್ ಕಾಲೇಜಿನ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ ಹಾಗೂ ಕಸಾಪ ಪದಾಧಿಕಾರಿಗಳು ಇದ್ದರು.
ಮಾಸಾಶನ ವಯೋವುತಿ ಇಳಿಸಿ
ಕೋಲಾರ: ಜನಪದ ಕಲಾವಿದರು ಮಾಸಾಶನ ಪಡೆಯಲು ರಾಜ್ಯ ಸರ್ಕಾರ ನಿಗದಿ ಮಾಡಿರುವ ವಯೋವುತಿಯನ್ನು 58ರಿಂದ 50 ವರ್ಷಕ್ಕೆ ಇಳಿಸುವುದು ಸೂಕ್ತವೆಂದು ಕರ್ನಾಟಕ ಜನಪದ ಅಕಾಡೆಮಿ ಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.
ನಗರದ ಶ್ರೀಗೋಕುಲ ಪಿಜಿ ಸೆಂಟರ್ನಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಾಸಾಶನ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಕಲಾವಿದರ ವಯಸ್ಸು 58 ಆಗಿರಬೇಕೆಂದು ಸರ್ಕಾರ ನಿಯಮ ಜಾರಿಗೊಳಿಸಿದೆ. ಆದರೆ, ಇದರಿಂದ ಅನೇಕರು ಸರ್ಕಾರದ ಸವಲತ್ತು ಪಡೆಯಲು ಕಷ್ಟವಾಗುತ್ತದೆ, ಮಾಸಾಶನಕ್ಕೆ ಅರ್ಜಿ ಸಲ್ಲಿಸಲು 50 ವರ್ಷ ನಿಗದಿ ಮಾಡಿದಲ್ಲಿ ಕನಿಷ್ಟ ಜೀವ ಗಟ್ಟಿಯಾಗಿರುವತನಕ ಮಾಸಾಶನ ಮೂಲಕ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.
ಸರ್ಕಾರ ಈಗ ನೀಡುತ್ತಿರುವ 1 ಸಾವಿರ ರು. ಮಾಸಾಶನ ಸಾಲದು. ಕನಿಷ್ಠ 2 ಸಾವಿರ ನೀಡಬೇಕೆಂದು ಒತ್ತಾಯಿಸಿದ ಪಿಚ್ಚಳ್ಳಿ ಶ್ರೀನಿವಾಸ್, ಜಾನಪದ ಕಲಾವಿದರಿಗೆ ನೀಡುವ ಜಾನಪದಶ್ರೀ ಪ್ರಶಸ್ತಿಯ ಜೊತೆಗೆ ನೀಡುವ 5 ಸಾವಿರ ರು. ನಗದು ಪುರಸ್ಕಾರದ ಮೊತ್ತ ಹೆಚ್ಚಿಸಲು ಹಾಗೂ ವರ್ಷಕ್ಕೆ 5 ಪ್ರಶಸ್ತಿ ನೀಡಲು ಆಗ್ರಹಿಸಿ ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಅಕಾಡೆಮಿಯಿಂದ ಸಿಗುವ ಸವಲತ್ತುಗಳು ನೇರವಾಗಿ ಸಂಬಂಧಪಟ್ಟ ಕಲಾವಿದರಿಗೆ ತಲುಪಬೇಕಾಗಿದೆ, ಪ್ರಸ್ತುತ ಕೆಲ ಮಧ್ಯವರ್ತಿಗಳ ಕಾಟದಿಂದಾಗಿ ಅನೇಕ ಕಲಾವಿದರಿಗೆ ಅನ್ಯಾಯವಾಗುತ್ತಿದೆ, ಇತ್ತೀಚಿನ ದಿನಗಳಲ್ಲಿ ಮೂಲ ಜಾನಪದ ಕಲೆಗೆ ಭಂಗ ಉಂಟಾಗುವ ರೀತಿಯಲ್ಲಿ ಕೆಲ ಕಲಾವಿದರು ದ್ವಂದ್ವಾರ್ಥಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯಕ್ರಮ ಜಾರಿಗೆ ತರುವುದಾಗಿ ಹೇಳಿದರು.
ಜಾನಪದ ಮೂಲ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಲು ಅಕಾಡೆಮಿ ಹೆಚ್ಚಿನ ಗಮನ ನೀಡಬೇಕಾಗಿದೆ. ಸರ್ಕಾರ ಹಾಗೂ ಕಲಾವಿದರ ಸಹಾಯದಿಂದ ಗುರಿ ತಲುಪುವ ವಿಶ್ವಾಸವಿದೆ ಎಂದು ಪಿಚ್ಚಳ್ಳಿ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

