ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಕೆಜಿಎಫ್: ಬೇತಮಂಗಲ ಗ್ರಾಮೀಣ ಪ್ರದೇಶಕ್ಕೆ ಬೇತಮಂಗಲ ನೀರು ಸರಬರಾಜು ಇಲಾಖೆ ಸರಿಯಾಗಿ ಕುಡಿಯುವ ನೀರನ್ನು ಪೂರೈಸುತ್ತಿಲ್ಲ ಎಂದು ಆರೋಪಿಸಿ ಬೇತಮಂಗಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬೇತಮಂಗಲ ನೀರು ಸರಬರಾಜು ಇಲಾಖೆಗೆ ಸರ್ಕಾರದಿಂದ ಕುಡಿಯುವ ನೀರಿಗಾಗಿ ಕೋಟ್ಯಂತರ ಅನುದಾನ ಬಿಡುಗಡೆಯಾಗುತ್ತಿದ್ದರೂ 20 ದಿನಗಳಿಗೊಮ್ಮೆ ಪ್ರತಿದಿನಕ್ಕೆ ಕೇವಲ 1 ಗಂಟೆ ಸಹ ನೀರನ್ನು ಪೂರೈಸದ ಕಾರಣ ಬೇತಮಂಗಲ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಬೇತಮಂಗಲ ನೀರು ಸರಬರಾಜು ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಅಧಿಕಾರಿಗಳು ಭಾರಿ ಅವ್ಯವಹಾರ ನಡೆಸಿದ್ದು ಅನುದಾನವನ್ನು ಗುಳಂ ಮಾಡಿದ್ದು ಗ್ರಾಮಸ್ಥರಿಗೆ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸದೆ ವಂಚಿಸುತ್ತಿದ್ದಾರೆ ಈ ಬಗ್ಗೆ ಲೋಕಾಯುಕ್ತರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಬೇತಮಂಗಲ ಬಸ್ ನಿಲ್ದಾಣದಲ್ಲಿ ರಸ್ತೆತಡೆ ನಡೆಸಿ ಕಾಲಿ ಕೊಡಗಳನ್ನು ಪ್ರದರ್ಶಿಸಿ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಬೇತಮಂಗಲ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಕರವೇ ಕಾರ್ಯಕರ್ತರಾದ ಕೃಷ್ಣಪ್ಪ, ಕೋದಂಡರಾಮಯ್ಯ, ಸುಕನ್ಯ, ರಾಜೇಂದ್ರ, ಮುಖಂಡರಾದ ದುರ್ಗಾಪ್ರಸಾದ್, ರೈತ ಸಂಘದ ಮುಖಂಡರು ಹಾಜರಿದ್ದರು.
ಕೌಟುಂಬಿಕ ಕಲಹ; ಗೃಹಿಣಿ ಆತ್ಮಹತ್ಯೆ
ಬಂಗಾರಪೇಟೆ: ಕೌಟುಂಬಿಕ ಕಲಹದಿಂದ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೂದಿಕೋಟೆ ಹೋಬಳಿ ದಿನ್ನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀನಿವಾಸ್ ಎಂಬುವರ ಪತ್ನಿ ನೇತ್ರಾವತಿ (27) ಎಂಬವರು ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರಿಗೂ ಮದುವೆಯಾಗಿ 9 ತಿಂಗಳಾಗಿದೆ. ಮನೆಯಲ್ಲಿ ಆಗಾಗ ಸಣ್ಣಪುಟ್ಟ ಜಗಳವಾಗುತ್ತಿದ್ದವು. ಅಲ್ಲದೆ ಮಗಳ ಅತ್ತೆ ಮತ್ತು ಮಾವರ ಕಾಟ ಇತ್ತು ಎನ್ನಲಾಗಿದ್ದು, ಅವರ ಕಿರುಕುಳದಿಂದಲೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತ ನೇತ್ರಾವತಿ ತಾಯಿ ನಾರಾಯಣಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೊಂದಲ ನಿವಾರಿಸಲಿ
ಕೋಲಾರ: ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿಗಳು ತರಾತುರಿಯಲ್ಲಿ ಶಂಕು ಸ್ಥಾಪನೆ ಮಾಡಿರುವುದು ಸರಿಯಲ್ಲ, ಯೋಜನೆಯ ಬಗ್ಗೆ ಸಾಕಷ್ಟು ಗೊಂದಲ, ಅನುಮಾನಗಳು ಇರುವುದರಿಂದ ಕೂಡಲೇ ಬಯಲುಸೀಮೆ ಹಾಗೂ ಕರಾವಳಿ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಂತರ ಕಾಮಗಾರಿಗೆ ಚಾಲನೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಎ.ಎಚ್. ಶಿವಯೋಗಿಸ್ವಾವು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನ ಹೊಳೆ ಯೋಜನೆಗೆ ಶಂಕು ಸ್ಥಾಪನೆ ಕೇವಲ ಚುನಾವಣೆ ಗಿಮಿಕ್ ಎಂದು ಟೀಕಿಸಿದರು. ಶಾಶ್ವತ ನೀರಾವರಿ ಯೋಜನೆಯಾದ ಎತ್ತಿನಹೊಳೆ ಯೋಜನೆ ಜಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾದ ಅವಶ್ಯಕತೆಯಿಲ್ಲವೆಂದು ತಮಗೆ ನೀರಾವರಿ ಸಚಿವರು ಉತ್ತರಿಸಿದ್ದಾರೆ. ಆದರೂ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದಲ್ಲಿನ ದ್ವಂದ್ವಕ್ಕೆ ಕಾರಣವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

