ಕೋಲಾರ

ನೀರಾವರಿಗೆ ವಿರೋಧ ಆರೋಪ; ಸಚಿವರಿಗೆ ಮುತ್ತಿಗೆ

Published On :

ಕೋಲಾರ: ಬಯಲು ಸೀಮೆ ಜಿಲ್ಲೆಗಳಿಗೆ ಪಶ್ಚಿಮಘಟ್ಟದಿಂದ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿರೋಧ ವ್ಯಕ್ತಪಡಿಸಿರುವುದಲ್ಲದೆ ಕರಾವಳಿ ಭಾಗದ ಜನತೆಯಲ್ಲಿ ವಿಷ ಬೀಜ ಬಿತ್ತಿ ನೀರಾವರಿ ಯೋಜನೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಸಚಿವರಿಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿದರು.
ಜಿಪಂನಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವರನ್ನು ತಡೆದ ರೈತ ಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರ ಬಯಲು ಸೀಮೆ ಜಿಲ್ಲೆಗಳಿಗೆ ಪರಮಶಿವಯ್ಯನವರ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಮುಂದಾಗಿದೆ, ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿ ಕೊಂಚ ಮಟ್ಟಿಗಾದರೂ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಯತ್ನಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಅವರು ಕರಾವಳಿ ಭಾಗದ ಜನತೆ ಪ್ರಚೋದನೆಗೆ ಒಳಗಾಗುವ ರೀತಿಯಲ್ಲಿ ಹೇಳಿಕೆ ನೀಡಿ ಬಯಲು ಸೀಮೆಯ ಬಗ್ಗೆ ಅಸಡ್ಡೆ ಮನೋಭಾವನೆ ತೋರಿರುವುದರಿಂದ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪೊಲೀಸರ ಹರ ಸಾಹಸ: ಸಚಿವರ ಕಾರು ತಡೆದು ರೈತ ಸಂಘದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರ ಸಾಹಸ ಮಾಡಿದರು.
ಸಚಿವರು ಕಾರಿನಿಂದ ಕೆಳೆಗಿಳಿದು ತಾವು ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸದಾನಂದಗೌಡರು ಕರಾವಳಿ ಭಾಗದ ರೈತರು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಯೋಜನೆ ಘೋಷಣೆ ಮಾಡದಿದ್ದರಿಂದ ವಿವಾದ ಸೃಷ್ಟಿಯಾಗಿದೆ, ಇದನ್ನು ಈಗ ನಮ್ಮ ಸರ್ಕಾರ ಸರಿಪಡಿಸಿ ಎತ್ತಿನಹೊಳೆ ಮೂಲಕ 9 ಜಿಲ್ಲೆಗಳಿಗೆ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದು, ಈ ಯೋಜನೆಗೆ ತಾವು ಯಾವುದೇ ಕಾರಣಕ್ಕೂ ವಿರೋಧ ವ್ಯಕ್ತಪಡಿಸಿಲ್ಲ, ಕರಾವಳಿ ಪ್ರದೇಶದ ಜನತೆ ಮನವೊಲಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಲ್ಲಿ ಸಚಿವರ ಮುಖಕ್ಕೆ ಕಪ್ಪು ಮಸಿ ಬಳೆಯಲು ಹೊಂಚು ಹಾಕಿದ್ದ ಪ್ರತಿಭಟನಾಕಾರರು ಸಚಿವರು ತಾವು ಬಯಲು ಸೀಮೆಗೆ ನೀರು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲವೆಂದು ಉಲ್ಟಾ ಹೊಡೆದ ಮೇಲೆ ಸುಮ್ಮನಾದರು.
ನಾವು ಎತ್ತಿನಹೊಳೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಕೆಲವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆತುರದಿಂದ ಮುಖ್ಯಮಂತ್ರಿಗಳ ಮೂಲಕ ಶಂಕುಸ್ಥಾಪನೆ ಮಾಡಿಸಿದ್ದಾರೆ. ಯೋಜನೆಯ ಬಗ್ಗೆ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಉಂಟಾಗಿರುವ ಸಂಶಯ, ಗೊಂದಲಗಳನ್ನು ನಿವಾರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ತಾವು ಬಯಲು ಸೀಮೆಗೆ ಸೇರಿದ ಕೋಲಾರ ಜಿಲ್ಲೆ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
ಸಚಿವರ ಭರವಸೆ: ಸಚಿವ ಖಾದರ್ ಅವರು, ತಾವು ಕೋಲಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುವುದಿಲ್ಲ, ಒಂದು ವೇಳೆ ತಮ್ಮ ಹೇಳಿಕೆ ತಪ್ಪಾಗಿದ್ದರೆ ಹಿಂದಕ್ಕೆ ಪಡೆಯುತ್ತೇನೆ, ಇನ್ನು ಮುಂದೆ ಬಯಲು ಸೀಮೆಯ ಪರವಾಗಿ ಮಾತನಾಡುವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ರೈತ ಸಂಘದ ಮುಖಂಡರಾದ ಕೆ. ಶ್ರೀನಿವಾಸಗೌಡ, ನಾರಾಯಣಗೌಡ, ಹುಲ್ಕೂರು ಹರಿಕುಮಾರ್, ಶೆಟ್ಟಿಗಾನಹಳ್ಳಿ ರಾಜೇಶ್, ಬಂಗವಾದಿ ನಾಗರಾಜಗೌಡ, ನರಸಾಪುರ ಪುರುಷೋತ್ತಮ್, ರಾಮು, ರಂಜಿತ್, ಮರಗಲ್ ಶ್ರೀನಿವಾಸ್, ಕಾರಿ ಸುಬ್ರಮಣಿ, ಈಕಂಬಳ್ಳಿ ಮಂಜುನಾಥ್, ನೀಲ್ಟೂರು ರಮೇಶ್, ನೀಲಕಂಠಪುರ ಮುನೇಗೌಡ, ಅಯ್ಯಪ್ಪ, ಗೊಟ್ಟಿಕುಂಟೆ ಕೃಷ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.