ಬಸವಣ್ಣ ಒಂದು ಸಮುದಾಯಕ್ಕೆ ಸೀಮಿತವಲ್ಲ: ಶ್ರೀನಿವಾಸ್
ಮಾಲೂರು: ಎಲ್ಲ ಸಮಾಜದವರು ಒಗ್ಗೂಡಿ ಆಚರಿಸಬೇಕಾದ ಬಸವೇಶ್ವರ ದಿನಾಚರಣೆ ಕಾರ್ಯಕ್ರಮಕ್ಕೆ ಒಂದು ಸಮುದಾಯದವರನ್ನು ಮಾತ್ರ ಕರೆಸಿ ಆಚರಿಸಿರುವ ತಹಸೀಲ್ದಾರ್ ವರ್ತನೆ ಖಂಡನೀಯ ಎಂದು ದಲಿತ ಸಿಂಹ ಸೇನೆ ಜಿಲ್ಲಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪರಿವರ್ತನಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಕಮದಲ್ಲಿ ಅವರು ಮಾತನಾಡಿದರು. ಸಮಾನತೆ ಸಾರಿದ ಬಸವಣ್ಣ ಜಾತಿ ಸಂಕೋಲೆಯನ್ನು ಮೆಟ್ಟಿ ಸಾಮಾಜಿಕ ಕ್ರಾಂತಿ ಸಾರಿದವರು. ಇತಂಹ ಮಹನೀಯರ ಜಯಂತಿ ಎಲ್ಲ ಸಮಾಜದವರು ಭಾಗವಹಿಸಬೇಕಾಗಿತ್ತು. ಆದರೆ ತಹಸೀಲ್ದಾರ್ ಒಂದು ಸಮುದಾಯದ ಮುಖಂಡರನ್ನು ಮಾತ್ರ ಆಹ್ವಾನಿಸಿ ಆಚರಿಸಿರುವುದು ಬೇಸರ ತಂದಿದೆ ಎಂದರು. ಇದೇ ವೇಳೆ ವಸತಿ ಶಾಲೆ ಮಕ್ಕಳಿಗೆ ಸಿಹಿ ಹಂಚಲಾಯಿತು. ಸಂಸ್ಥೆ ಅಧ್ಯಕ್ಷ ಮುನಿರಾಜು, ನಾರಾಯಣ್, ವೆಂಕಟೇಶ್ ಇದ್ದರು.
ವಿಗ್ರಹಗಳ ಮೂಟೆ ವಶಕ್ಕೆ ತೆಗೆದುಕೊಂಡ ಪೊಲೀಸರು
ಮಾಲೂರು: ಬಹಿರ್ದೆಸೆ ಹೋಗಿದ್ದ ಬಾಲಕನೊಬ್ಬನಿಗೆ ಕೆರೆಯಲ್ಲಿ ಚಿಕ್ಕ ಚಿಕ್ಕ ವಿಗ್ರಹಗಳ ಮೂಟೆ ಸಿಕ್ಕಿರುವ ಘಟನೆ ತಾಲೂಕಿನ ಬಂಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಸಂತೋಷ ಎಂಬ ಬಾಲಕ ಬಹಿರ್ದೆಸೆ ಮುಗಿಸಿ ಕಾಲು ತೊಳೆಯಲು ಗ್ರಾಮದ ಕೆರೆಗೆ ಇಳಿದಾಗ ಕಾಲಿಗೆ ಮೂಟೆ ತಗಲಿದ್ದು, ಹೊರಗೆ ತೆಗೆದು ನೋಡಿದಾಗ 6 ಇಂಚಿನ ವಿವಿಧ ದೇವರುಗಳ ವಿಗ್ರಹ ಕಂಡು ಬಂದಿತ್ತು. ನೆರೆಹೊರೆಯವರು ಪೊಲೀಸರಿಗೆ
ವಿಷಯ ತಿಳಿಸಲಾಗಿ, ಸ್ಥಳಕ್ಕೆ ಆಗಮಿಸಿದ ಎಸ್ಐ ದಯಾನಂದ್ ಸುಮಾರು 3 ಕೆ.ಜಿ.ತೊಕದ ಈ 13 ವಿಗ್ರಹಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಸ್ಥಳೀಯ ಅಚಾರಿಯೊಬ್ಬರಿಂದ ವಿಗ್ರಹಗಳನ್ನು ಪರಿಶೀಲಿಸಿದಾಗ ಅವು ಸಿಲ್ವರ್ ಕೋಟೆಡ್ ಎಂದು ಎಸ್ಐ ದಯಾನಂದ್ ತಿಳಿಸಿದ್ದಾರೆ.
ಚಂಪಕಧಾಮ ಕಲ್ಯಾಣ ಮಂಟಪ ಲೋಕಾರ್ಪಣೆ
ಮಾಲೂರು: ಕಲ್ಯಾಣ ಮಂಟಪಗಳು ಸೂಲಿಗೆ ಕೇಂದ್ರವಾಗದೆ ಬಡವರ-ದೀನ-ದಲಿತರಿಗೆ ಸ್ಪಂದಿಸುವ ರೀತಿಯಲ್ಲಿ ವ್ಯವಹರಿಸಬೇಕು ಎಂದು ಶಾಸಕ ಮಂಜುನಾಥ್ ಪತ್ನಿ ಅರಿದ್ರಾ ಮಂಜುನಾಥ್ಗೌಡ ಕಿವಿಮಾತು ಹೇಳಿದರು.
ಪಟ್ಟಣದ ಮಾರುತಿ ಬಡಾವಣೆಯಲ್ಲಿ ಆಧುನಿಕವಾಗಿ ನವೀಕರಣಗೊಂಡ ಚಂಪಕಧಾಮ ಕಲ್ಯಾಣ ಮಂಟಪವನ್ನು ಉದ್ಘಾಟಿಸಿ ಮಾತನಾಡಿ, ಹೂಸ ಜೀವನ-ಹೂಸ ಬದುಕುನ್ನು ಮಕ್ಕಳಿಕೆ ಕಸ್ಪಿಸುವ ನಿಟ್ಟಿನಲ್ಲಿ ಬರುವ ಪೋಷಕರು ಇಂದಿನ ಕಲ್ಯಾಣ ಮಂಟಪಗಳ ದುಬಾರಿ ಬಾಡಿಗೆಯಿಂದ ಸುಸ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಡವ-ದಲಿತರಿಗೆ ಸ್ಪಂದಿಸುವ ಮನಸ್ಸು ಕಲ್ಯಾಣ ಮಂಟಪ ಮಾಲೀಕರು ಹೊಂದಬೇಕಾಗಿದೆ ಎಂದು ಅರಿದ್ರಾ ಮಂಜುನಾಥ್ಗೌಡ ಕಿವಿಮಾತು ಹೇಳಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ,ಉಪಾಧ್ಯಕ್ಷೆ ಶ್ರೀವಲ್ಲಿ, ಸದಸ್ಯರಾದ ರಾಮಮೂರ್ತಿ,ಎಂ.ವಿ.ವೇಮನ, ಕಲ್ಯಾಣ ಮಂಟಪ ವ್ಯವಸ್ಥಾಪಕ ವೈ.ಸಂಪಂಗಿ ಇದ್ದರು.
'ಬಾಲ ಕಾರ್ಮಿಕ ಪದ್ಧತಿ ತಡೆಗೆ ಯುವಕರು ಸಹಕರಿಸಿ'
ಕೋಲಾರ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿದ್ಯಾರ್ಥಿಗಳು ಸಹಕಾರ ನೀಡಬೇಕೆಂದು ವಕೀಲ ಸುರೇಂದ್ರ ಕುಮಾರ್ ತಿಳಿಸಿದರು.
ನಗರದ ಡಿ.ಸೇಲ್ಸ್ ಐಟಿಐ ಕಾಲೇಜಿನಲ್ಲಿ ಪಾರಮಿತ ಅಧ್ಯಯನ ಕೇಂದ್ರದ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗು ಬೆಳೆಯುತ್ತಿದಂತೆ ಮಾಧ್ಯಮಿಕ ಮತ್ತು ಪ್ರೌಢ ಹಂತದಲೇ ಶಾಲೆ ಬಿಟ್ಟು ಕಾರ್ಖಾನೆ, ಗ್ಯಾರೇಜ್ ಸೇರಿದಂತೆ ಇನ್ನಿತರೆ ಕಡೆ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಬಾಲ ಕಾರ್ಮಿಕರಾಗುತ್ತಿದ್ದಾರೆ ಅದರಿಂದ ಬಾಲ ಕಾರ್ಮಿಕರನ್ನು ಶಾಲೆಗೆ ಕರೆತರುವ ಕೆಲಸವನ್ನು ಯುವ ವಿದ್ಯಾರ್ಥಿಗಳು ಮಾಡಬೇಕೆಂದರು. ಖಾದಿ ಅಯೋಗ ಸದ್ಯಸ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿ, ಸರ್ಕಾರವು ಪ್ರತಿ ಹಳ್ಳಿ ಮಟ್ಟದಲ್ಲಿ ಬಾಲಕಾರ್ಮಿಕ, ಭ್ರೂಣಹತ್ಯೆ ತಡೆಯಲು ವಿದ್ಯಾರ್ಥಿಗಳು ಗಮನ ನೀಡಬೇಕೆಂದರು.
ಕೆ.ಎಸ್.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಂಶುಪಾಲ ವಿನೋದ್ ಫಾದರ್, ಪಾರಮಿತ ಅಧ್ಯಯನ ಕೇಂದ್ರದ ಅಧ್ಯಕ್ಷ ಹೂಹಳ್ಳಿ ನಾಗರಾಜ್, ಕಾರ್ಯದರ್ಶಿ ವಿಜಯ್ಕುಮಾರ್ ಇದ್ದರು.
ರಸ್ತೆ ಕಾಮಗಾರಿಗೆ ಶಾಸಕಿ ವೈ.ರಾಮಕ್ಕ ಚಾಲನೆ
ಕೆಜಿಎಫ್: ನಗರ ಹಾಗೂ ಗ್ರಾಮೀಣ ಭಾಗದ ಪ್ರಮುಖ ರಾಜ್ಯ ಹೆದ್ದಾರಿ ಹಾಗೂ ಅಂತರರಾಜ್ಯ ಗಡಿ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಹಲವು ರಸ್ತೆಗಳ ಅಭಿವೃದ್ಧಿ ಯೋಜನೆ ಪ್ರಾರಂಭವಾಗಿದೆ ಎಂದು ಶಾಸಕಿ ವೈ.ರಾಮಕ್ಕ ಹೇಳಿದರು.
ಇಲ್ಲಿಗೆ ಸಮೀಪದ ಪಾರಂಡಹಳ್ಳಿ ಮುಖ್ಯ ರಸ್ತೆಯಲ್ಲಿ ರು. 4.25 ಕೋಟಿ ವೆಚ್ಚದಲ್ಲಿ ಆಂಧ್ರಪ್ರದೇಶಕ್ಕೆ ಸಂಪರ್ಕಿಸುವ ರಾಮಕುಪ್ಪಂ ಹಾಗೂ ರಾಜಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಹಾಗೂ ಗ್ರಾಮೀಣ ಭಾಗದಿಂದ ಸಂಪರ್ಕ ರಸ್ತೆಗಳ ನಿರ್ಮಾಣದಿಂದ ರೈತರಿಗೆ ರಸ್ತೆ ಅಭಿವೃದ್ಧಿಯಿಂದ ಹೆಚ್ಚು ಅನುಕೂಲವಾಗಲಿದೆ ಎಂದರು. ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಪಾರಂಡಹಳ್ಳಿ ಗ್ರಾಮದ ಮುಖ್ಯ ರಸ್ತೆ ಕಾಮಗಾರಿಯಿಂದ ಗ್ರಾಮೀಣ ಪ್ರದೇಶದ ಮೂಲ ಸೌಲಭ್ಯ ಒದಗಿಸಲು ಅದ್ಯತೆ ನೀಡಲಾಗುವುದು ಎಂದರು.
'ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಲಿ'
ಶಿಡ್ಲಘಟ್ಟ: ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಸರಕಾರದಿಂದ ಸಿಗುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ 18,000ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿದ್ದು, ಎಲ್ಲಾ ಶಾಲಾ ಮಕ್ಕಳಿಗೆ ಜೂನ್ 1ರಂದೇ ಉಚಿತವಾಗಿ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ ಮಾಡಲಾಗುತ್ತದೆ ಎಂದರು. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ಕರೆತರಲು ಪಟ್ಟಣದಲ್ಲಿ ನಾಲ್ಕು ಶಾಲೆಗಳಲ್ಲಿ ಚಿಣ್ಣರ ಅಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂತಹ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಶಿಕ್ಷಣ ಸಂಯೋಜಕರಾದ ಮನ್ನಾರಸ್ವಾಮಿ, ನಾರಾಯಣಸ್ವಾಮಿ, ಸಹಾಯಕ ಬೈರಾರೆಡ್ಡಿ ಮುಂತಾದವರು ಹಾಜರಿದ್ದರು.
'ಯಶಸ್ವಿನಿ ಯೋಜನೆ ಸದುಪಯೋಗವಾಗಲಿ'
ಶಿಡ್ಲಘಟ್ಟ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನರು ಯಶಸ್ವಿನಿ ಯೋಜನೆ ಮುಖಾಂತರ ನೋಂದಣಿ ಮಾಡಿಕೊಂಡು ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕಾರ್ಯದಶರ್ಗಳು ಗಮನಹರಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪ ನಿಬಂಧಕ ಶಿವಣ್ಣ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಏರ್ಪಡಿಸಿದ್ದ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಟ್ರಸ್ಟ್ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿನ ರೈತರು ರು. 250 ಹಣ ಪಾವತಿ ಮಾಡಿ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪರಿಶಿಷ್ಟ ಜಾತಿ-ಪಂಗಡದ ಜನಾಂಗ ರು.50 ಪಾವತಿ ಮಾಡಿದರೆ ಸರ್ಕಾರ ರು.200 ಭರಿಸಲಿದೆ ಎಂದರು. ಪರಿಶಿಷ್ಟ ಜಾತಿ, ಪಂಗಡದ ಜನಾಂಗ ಸೂಕ್ತ ದಾಖಲೆ ಹೊಂದಿರಬೇಕು.
ಗೋಶಾಲೆ ತೆರೆಯಲು ಹಸಿರು ಸೇನೆ ಒತ್ತಾಯ
ಕೋಲಾರ: ಜಿಲ್ಲೆಯಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಸೂಕ್ತ ಕ್ರಮ ಮತ್ತು ಜಾನುವಾರುಗಳಿಗೆ ಗೋಶಾಲೆಗಳನ್ನು ತೆರೆಯವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣೇಶ್ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕುಡಿವ ನೀರಿಗೆ ಹಾಹಾಕಾರವಿದ್ದು, ಜಿಲ್ಲೆಯ ಪ್ರತಿನಿಧಿಗಳ್ಯಾರು ಇದರ ಕಡೆ ೋಮಗಮನ ಹರಿಸುತ್ತಿಲ್ಲ. ಜಿಲ್ಲಾಧಿಕಾರಿ ಮತ್ತು ಜಿ ಪಂ ವತಿಯಿಂದ ಕುಡಿವ ನೀರಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದರೂ ಸಹ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಬಳಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಗ್ರಾಪಂ ಮೂಲಕ ಹಳ್ಳಿಗಳಿಗೆ ನೀರು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದು, ಬಿಂದಿಗೆ ನೀರಿಗೆ ರು.5 ವಸೂಲಿ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಘನತೆ ದಿನಾಚರಣೆ
ಗುಡಿಬಂಡೆ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲೂಕಿನ ಜಿವಿಕಾ ಸಂಘಟನೆ ವತಿಯಿಂದ ಗುಂಡ್ಲು ಕೊತ್ತೂರು ಗ್ರಾಮದಲ್ಲಿ ಘನತೆ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಪ್ರತಿ ವರ್ಷ ಘನತೆ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ಸಮಾಜದ ಕಟ್ಟ ಕಡೆ ವ್ಯಕ್ತಿಯ ತನಕ ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕೆಂಬುದು ಇದರ ಆಶಯ. ಅಂಬೇಡ್ಕರ್ ತತ್ವ- ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ರೀತಿ ಬದುಕು ಸಾಧ್ಯ ಎಂದು ನುಡಿದರು. ಜಿಲ್ಲಾ ಸಂಚಾಲಕ ಹನುಮಂತು, ಶೋಷಿತರ ಏಳಿಗೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಅಂಬೇಡ್ಕರ್ ದೀನ ದಲಿತರ ಉದ್ಧಾರಕ್ಕಾಗಿ ದೇಶಕ್ಕೆ ಸಂವಿಧಾನ ರಚಿಸಿ ಕೊಟ್ಟವರು ಎಂದರು. ಗ್ರಾಪಂ ಸದಸ್ಯರಾದ ನಾಗರತ್ಮಮ್ಮ, ರಮೇಶ್, ರಾಮಾಂಜನೇಯ, ಸುಜಾತ, ಗೌರಮ್ಮ, ನಾಗಮಣಿ,ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ದಲಿತ ಸಿಂಹ ಸೇನೆಯಿಂದ ರಾಮ್ದೇವ್ ಪ್ರತಿಕೃತಿ ದಹನ
ಮಾಲೂರು: ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಾಬಾ ರಾಮದೇವ್ ವಿರುದ್ಧ ದಲಿತ ಸಿಂಹ ಸೇನೆ ಕಾರ್ಯಕರ್ತರು ಶನಿವಾರ ಬಾಬಾ ಪ್ರತಿಕೃತಿ ಅಣುಕು ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಬಸ್ನಿಲ್ದಾಣ ಬಳಿ ಉದ್ಯಾನವನದಿಂದ ಬಾಬಾ ಶವ ಯಾತ್ರೆ ನಡೆಸಿದ ಸಿಂಹಸೇನೆಯ ಕಾರ್ಯಕರ್ತರು ಮಿನಿ ವಿಧಾನಸೌಧದ ಎದುರು ಅಣುಕು ಶವ ಇಟ್ಟು ಪ್ರತಿಭಟನೆ ನೆಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ತಿ.ಶ್ರೀನಿವಾಸ್ ಮತ್ತಿತರರು ಮಾತನಾಡಿ, ಬಾಬಾ ಅವರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಅಗ್ರಹಿಸಿದರು. ತಂಬಳ್ಳಿ ಶ್ರೀನಿವಾಸ್,ಅರಳೇರಿ ನಾರಾಯಣಸ್ವಾಮಿ, ತಾಳಕುಂಟೆ ಪ್ರಕಾಶ್, ದ್ಯಾಪಸಂದ್ರ ವೆಂಕಟೇಶ್, ರಾಜೇನಹಳ್ಳಿ ವೆಂಕಟೇಶ್,ಮಾರಸಂದ್ರ ಮಂಜು, ಸಂತೋಷ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಪೊಲೀಸರ ಮಧ್ಯಸ್ಥಿಕೆ: ತಪ್ಪಿದ ಬಾಲ್ಯವಿವಾಹ
ಕೆಜಿಎಫ್: ಬಾಲಕಿ ಮದುವೆ ನಿಶ್ಚಯವಾಗಿದ್ದು, ಮದುವೆ ಕಾರ್ಯಕ್ಕೆ ಪೋಷಕರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಪೊಲೀಸರ ಮನವೊಲಿಕೆಯಿಂದಾಗಿ ವಿವಾಹ ರದ್ಧಾಗಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮುನಿಯಪ್ಪ ಎಂಬುವರ ಪುತ್ರಿ ಸುಮಿತ್ರಳ ವಿವಾಹ ಅದೇ ಗ್ರಾಮದ ವೆಂಕಟರಾಮಪ್ಪ ಎಂಬುವರ ಪುತ್ರ ಶಿವಕುಮಾರ್(25)ನೊಂದಿಗೆ ನಡೆಸಲು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಡಂಪಲ್ಲಿ ಗ್ರಾಮದಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿತ್ತು. ಮೇ 2ರಂದು ಮುಹೂರ್ತ ನಿಗದಿಯಾಗಿತ್ತು. ಜಿಲ್ಲಾ ಬಾಲ್ಯ ವಿವಾಹ ತಡೆ ಇಲಾಖೆ ಅಧಿಕಾರಿ ಮಹೇಶ್ಬಾಬು ನೀಡಿದ ದೂರಿನ ಮೇರೆಗೆ ಬೇತಮಂಗಲ ಠಾಣಾ ಸಬ್ಇನ್ಸ್ಪೆಕ್ಟರ್ ಗೋವಿಂದಯ್ಯ ನೇತತ್ವದಲ್ಲಿ ಸುಮಿತ್ರ- ಶಿವಕುಮಾರ್ ಪೋಷಕರನ್ನು ಠಾಣೆಗೆ ಕರೆಸಿ ಇಬ್ಬರ ಜನ್ಮ ದಿನಾಂಕದ ದಾಖಲಾತಿ ಪರಿಶೀಲಿಸಿದಾಗ ಸುಮಿತ್ರಾಗೆ 16 ವರ್ಷ 6 ತಿಂಗಳು ಆಗಿದ್ದು, ಶಿವಕುಮಾರ್ಗೆ 25 ವರ್ಷವಾಗಿರುವುದು ಬೆಳಕಿಗೆ ಬಂದು, ಪೊಲೀಸರು ಪೋಷಕರಿಗೆ ವಿವರಿಸಿ ನಂತರ ಪೋಷಕರು ವಿವಾಹ ರದ್ದುಗೊಳಿಸಿದ್ದಾರೆ.
ಬಾಲಕೃಷ್ಣ ಭಾಗವತ್ಗೆ ಶಾಸಕರ ಅಭಿನಂದನೆ
ಚಿಂತಾಮಣಿ: ಹಣ ಸಂಪಾದನೆಯೇ ಮುಖ್ಯವಾಗಿರುವ ಇಂದಿನ ಕಾಲಘಟ್ಟದಲ್ಲಿ ಬಾಲಕೃಷ್ಣ ಭಾಗವತ್ ತಮ್ಮ ಸಂಗೀತ ಸೇವೆಯನ್ನು ಹಣದ ವ್ಯಾಮೋಹಕ್ಕೆ ಮಾರು ಹೋಗದೆ ಸಮಾಜದ ಒಳಿತಿಗಾಗಿ ಮುಡುಪಾಗಿಟ್ಟಿರುವುದು ಶ್ಲಾಘನೀಯ ಎಂದು ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೈವಾರ ಯೋಗಿನಾರಾಯಣ ಮಠದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯತ್ವ ಪಡೆದ ಬಾಲಕೃಷ್ಣ ಭಾಗವತ್ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಜಾನಪದ ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್, ಎನ್.ಮುನಿಶಾಮಿ ಮತ್ತಿತರರು ಮಾತನಾಡಿದರು. ಇದೇ ವೇಳೆ ಬಾಲಕೃಷ್ಣ ಭಾಗವತರಿಗೆ ಕರ್ನಾಟಕ ಸಂಗೀತ ಕಲಾನಿಧಿ ಬಿರುದು ನೀಡಿ ಸನ್ಮಾನಿಸಲಾಯಿತು.ಮುಖಂಡರಾದ ದೊಡ್ಡಬೊನ್ನಹಳ್ಳಿ ವೆಂಕಟರೆಡ್ಡಿ, ನರಸಿಂಹಪ್ಪ, ಸಿ.ಕೆ.ಬಾಬು, ಲಕ್ಷ್ಮಿನಾರಾಯಣ್, ವೆಂಕಟೇಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಶಂಕರ, ರಾಮಾನುಜಚಾರ್ಯ ಜಯಂತಿ ಆಚರಣೆ ಇಂದು
ಕೋಲಾರ: ನಗರದ ಕೋಟೆ ಪ್ರದೇಶದಲ್ಲಿನ ಶಂಕರಸೇವಾ ಸಂಘ ಟ್ರಸ್ಟ್ನಿಂದ ಮೇ.4 ರಂದು ಶಂಕರಾಚಾರ್ಯರ ಜಯಂತಿಯನ್ನು ಶಂಕರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 6ಗಂಟೆಗೆ ಪೂಜಾ ಕಾರ್ಯಗಳು, 7.30ಕ್ಕೆ ಶ್ರೀಶಂಕರರ ರಥೋತ್ಸವ, 11ಗಂಟೆಗೆ ವೇದಪಾರಾಯಣ, 11.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ಶಂಕರ ಸ್ತೋತ್ರಗಾಯನ ಏರ್ಪಡಿಸಲಾಗಿದೆ. ನಗರದ ಖಾದ್ರಿಪುರದ ಕೇಶವ ನಗರದಲ್ಲಿರುವ ಜಿಲ್ಲಾ ವೈಷ್ಣವ ಸಂಘದ ಪ್ರಧಾನ ಕಚೇರಿಯಲ್ಲಿ ಭಗವತ್ ರಾಮಾನುಜಾಚಾರ್ಯರ 997ನೇ (ತಿರುನಕ್ಷತ್ರ) ಜಯಂತಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಮಾನುಜಾ ವಿದ್ಯಾಪೀಠದ ಉದ್ಘಾಟನಾ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದ್ದು ಬೆಳಿಗ್ಗೆ 8.30ರಿಂದ 11.30ರವರೆಗೆ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ವೈಷ್ಣವರು ಭಾಗವಹಿಸಲಿದ್ದಾರೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
137 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ
ಮುಳಬಾಗಲು: ತಾಲೂಕಿನ 36 ಗ್ರಾಮಗಳ ಪೈಕಿ 137 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ತಕ್ಷಣ 30 ಕೊರೆಸಿ ಪಂಪು ಮೋಟರ್ ಆಳವಡಿಸಲು ತಾಲೂಕು ಆಡಳಿತ ಗ್ರಾಪಂಗಳಿಗೆ ಸೂಚಿಸಿದೆ. ಅದರೆ ಜಿಪಂ ತಾಂತ್ರಿಕ ವಿಭಾಗ, ತಾಪಂ, ಗ್ರಾಪಂ ಪಿಡಿಒ ಮತ್ತು ಬೆಸ್ಕಾಂ ಅಧಿಕಾರಿಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದೆ ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಸಿಗದೆ ನೀರು ಸರಬರಾಜು ಯೋಜನೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತಾಲೂಕಿನಲ್ಲಿ 2013ರ ಮೇ 25ರಿಂದ ಇದುವರೆವಿಗೂ 127 ನೂತನ ಸಾರ್ವಜನಿಕ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಪೂರ್ಣಗೊಳಿಸಲಾಗಿದೆ.
ಚುನಾವಣೆ ಮುಗಿಯುತ್ತಿದ್ದಂತೆ ಬಂಗಾರಪೇಟೆಯಲ್ಲಿ ಕತ್ತಲು...!
ಬಂಗಾರಪೇಟೆ: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ
ವಿದ್ಯುತ್ ಕಣ್ಣಾ-ಮುಚ್ಚಾಲೆಯಾಟ ಮಿತಿ ಮೀರಿದ್ದು, ಇದರಿಂದ ವಿವಿಧ ಸಮಸ್ಯೆಗಳು ಗರಿಗೆದರಿಕೊಂಡು ಮೊದಲೇ ಬರದಿಂದ ಬೆಂದಿರುವ ಜನರನ್ನು ಮತ್ತಷ್ಟು ಬೆಂಡಾಗುವಂತೆ ಮಾಡಿದೆ.
ಚುನಾವಣೆ ಮುಗಿಯುವವರೆಗೂ ವಿದ್ಯುತ್ ಕಡಿತದಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ. ಈಗ ಎಲ್ಲಾ ಮುಗಿಯುತ್ತಿದ್ದಂತೆ ಬೆಸ್ಕಾಂ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ ದಿನದ 24 ಗಂಟೆಯಲ್ಲಿ ವಿದ್ಯುತ್ ಇರುವುದೇ ಕೇವಲ
ಒಂದೆರೆಡು ಗಂಟೆಗಳು ಮಾತ್ರ ಉಳಿದ ಸಮಯ ಬಂಗಾರಪೇಟೆ ಕತ್ತಲಲ್ಲಿ ಮುಳುಗಿರುತ್ತದೆ. ವಿದ್ಯುತ್ ಕೈಕೊಡುತ್ತಿರುವುದರಿಂದ ಪುರಸಭೆ ಆಡಳಿತ ಮಂಡಳಿ ಮತ್ತಷ್ಟು ಹೈರಾಣಗಿದ್ದು, ನಾಗರಿಕರಿಗೆ ಉತ್ತರಿಸಲಾಗದೆ ಅಧಿಕಾರಿಗಳು ತಮ್ಮ ಮೊಬೈಲ್ ಸ್ಥಗಿತಗೊಳಿಸಿಕೊಂಡಿದ್ದಾರೆ. ಇನ್ನು ರೈತರ ಸ್ಥಿತಿ ಬಗ್ಗೆ ಹೇಳುವಂತಿಲ್ಲ.
ಅತ್ಯಾಚಾರ ಆರೋಪ: ಯುವಕನ ವಿರುದ್ಧ ದೂರು
ಕೆಜಿಎಫ್: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ
ಮೋಡಿ ಮಾಡಿ ಯುವಕನೊಬ್ಬ ಅತ್ಯಾಚಾರ ಮಾಡಿರುವ ಘಟನೆ
ಬೆಮೆಲ್ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಗಾರಪೇಟೆಯ ಶಾರದ(24) ಯುವತಿಯನ್ನು ದಾಸರಹೊಸಹಳ್ಳಿ ನಿವಾಸಿ ಸುಂದರಮೂರ್ತಿ ಎಂಬುವರ ಮಗನಾದ ಸರವಣಮೂರ್ತಿ(25) 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಕಳೆದ 10 ರಂದು ಬೆಮೆಲ್ ಮೆಡಿಕಲ್ ಸೆಂಟರ್ ಪಕ್ಕದಲ್ಲಿರುವ ದೇವಸ್ಥಾನ ಬಳಿ ದೈಹಿಕ ಸಂಪರ್ಕ ಮಾಡಿದ್ದು, ಈದೀಗ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎಂದು ಶಾರದ ಬೆಮೆಲ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸರವಣಮೂರ್ತಿ ವಿರುದ್ಧ ಅತ್ಯಾಚಾರ ಪ್ರಕರಣ ದೂರು ದಾಖಲಿಸಿಕೊಂಡಿರುವ ಬೆಮೆಲ್ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

