ಕೋಲಾರ

ಕಿರುಕುಳ ಪ್ರಕರಣ: ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಜಟಾಪಟಿ

Published On :

ಎಂಎಲ್‌ಸಿ ನಾರಾಯಣಸ್ವಾಮಿ ಎದುರು ವಿದ್ಯಾರ್ಥಿಗಳ ಅಳಲು
ಕೇಸ್ ದಾಖಲಿಸಲು ಒತ್ತಾಯ, ಪ್ರಾಧ್ಯಾಪಕ ಬಂಧನಕ್ಕೆ ಆಗ್ರಹ


ಕೋಲಾರ: ತಾಲೂಕಿನ ಮಂಗಸಂದ್ರದಲ್ಲಿರುವ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ ಮೇಲೆ ಮಾರ್ಗದರ್ಶಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆಯಲು ಸೋಮವಾರ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಪಿಜಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಶಾಸಕರು ವಿದ್ಯಾರ್ಥಿನಿಯರ ಬಳಿ ಸಮಸ್ಯೆಗಳನ್ನು ಆಲಿಸುತ್ತಿದ್ದಾಗ ಪಿಜಿ ಕೇಂದ್ರಕ್ಕೆ ಎಬಿವಿಪಿ ಬಾವುಟಗಳೊಂದಿಗೆ ಆಗಮಿಸಿದ ಮುಖಂಡರು, ತರಗತಿಗಳಿಗೆ ಹೋಗಿ ಪಿಎಚ್‌ಡಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಧ್ಯಾಪಕ ಡಾ. ಕಾ.ವೆಂ.ಶ್ರೀನಿವಾಸಮೂರ್ತಿಯವನ್ನು ಇಲ್ಲಿಂದ ಹೊರ ಹಾಕಲು ವಿದ್ಯಾರ್ಥಿಗಳು ಸಂಘಟಿತರಾಗಿ ಹೋರಾಟ ಮಾಡಬೇಕು. ಎಬಿವಿಪಿ ಬೆಂಬಲ ನೀಡಲಿದೆ ಎಂದು ಪ್ರಕಟಿಸಿದರು.
ಇದನ್ನು ವಿರೋಧಿಸಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷರೂ ಆಗಿರುವ ಹಾಗೂ ಇದೇ ಪಿಜಿ ಕೇಂದ್ರದ ವಿದ್ಯಾರ್ಥಿ ವಾಸುದೇವರೆಡ್ಡಿ ಮತ್ತು ಇತರರು, ಶ್ರೀನಿವಾಸಮೂರ್ತಿ ಒಳ್ಳೆಯ ಉಪನ್ಯಾಸಕರು. ನಮ್ಮ ಕೇಂದ್ರದಲ್ಲಿನ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ. ಬೇರೆಯವರು ಮಧ್ಯ ಪ್ರವೇಶ ಮಾಡುವುದು ಸರಿಯಲ್ಲವೆಂದು ವಾದಿಸಿದರು.
ಇದರಿಂದ ಕುಪಿತರಾದ ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ ತೀವ್ರ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿರುವ ಅಪಾಧ್ಯಕರನ್ನು ಬೆಂಬಲಿಸುವುದು ಸರಿಯಲ್ಲ. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಲೇಬೇಕೆಂದು ಘೋಷಣೆ ಕುಗಿದಾಗ ಎಸ್‌ಎಫ್‌ಐ ವಾಸುದೇವರೆಡ್ಡಿ ಹಾಗೂ ಮುರಳಿ ನಡುವೆ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿತು. ಎಬಿವಿಪಿ ಬಾವುಟವನ್ನು ವಾಸುದೇವರೆಡ್ಡಿ ಕಸಿದುಕೊಂಡಾಗ ಕುಪಿತರಾದ ಎಬಿವಿಪಿಯ ಮುರಳಿ ಇನ್ನಿತರರು ಬಾವುಟವನ್ನು ವಾಪಸ್ ನೀಡುವಂತೆ ತಾಕೀತು ಮಾಡಿ ಪರಸ್ಪರರು ಕೈ ಕೈ ಮೀಲಾಯಿಸಿಕೊಂಡರು. ವಾಸುದೇವರೆಡ್ಡಿ, ಮುರಳಿಯ ಗಲ್ಲಾಪಟ್ಟಿ ಹಿಡಿದಾಗ ಎರಡು ಗುಂಪುಗಳ ನಡುವೆ ರಣಾಂಗಣಕ್ಕೆ ಎಡೆ ಮಾಡಿಕೊಟ್ಟಿತು.
ಇತ್ತ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಬಂದಿದ್ದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವಿದ್ಯಾರ್ಥಿ ಸಂಘಟನೆಗಳು ಯಾರೇ ತಪ್ಪು ಮಾಡಲಿ ನ್ಯಾಯ ಸಮ್ಮತವಾಗಿ ಹೋರಾಟ ಮಾಡಬೇಕೇ ಹೊರತು ಹೊಡೆದಾಟ-ಬಡಿದಾಟ ನಡೆಸಿದರೆ ವಿದ್ಯಾರ್ಥಿ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಬುದ್ಧಿವಾದ ಹೇಳಿದರು.
ಶ್ರೀನಿವಾಸಮೂರ್ತಿ ಪರವಾಗಿ ವಾಸುದೇವರೆಡ್ಡಿ ನೇತೃತ್ವದಲ್ಲಿ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ವಿರುದ್ಧವಾಗಿ ಎಬಿವಿಪಿಯ ಮುಖಂಡರು ಘೋಷಣೆ ಕೂಗಿದಾಗ ಪರಿಸ್ಥಿತಿ ಬಿಗಡಾಯಿಸಿರುವುದನ್ನು ಅರಿತ ಕಾಲೇಜಿನ ಅಪಾಧ್ಯಪಕರು, ವಿದ್ಯಾರ್ಥಿಗಳು ಹಾಗೂ ವೈ.ಎ.ನಾರಾಯಣಸ್ವಾಮಿ ಜೊತೆ ಬಂದಿದ್ದ ಮುಖಂಡರು ಎರಡು ಗುಂಪುಗಳನ್ನು ಬೇರ್ಪಡಿಸಿ ಸಂಘರ್ಷ ತಹಬದಿಗೆ ತರಲು ಹೆಣಗಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.