ಕೋಲಾರ

ಮುಂಗಾರು ಹಂಗಾಮು ಕೃಷಿ ಇಲಾಖೆ ಭರ್ಜರಿ ಸಜ್ಜು

Published On :

ಚಿಕ್ಕಬಳ್ಳಾಪುರ: ಮುಂಗಾರು ಮಳೆ ಹಂಗಾಮಿನಲ್ಲಿ ಬಿರುಸಿನ ಕೃಷಿ ಚಟುವಟಿಕೆ ಕೈಗೊಂಡು ರೈತರು ಆರ್ಥಿಕ ಪ್ರಗತಿ ಸಾಧಿಸಲು ಪೂರಕ ವಾತಾವರಣ ನಿರ್ಮಾಣ ಮಾಡಲು ಕೃಷಿ ಇಲಾಖೆ ಸಿದ್ಧತೆ ಕೈಗೊಳ್ಳುತ್ತಿದ್ದು ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿನೊಂದಿಗೆ ರೈತರ ಜೊತೆಗೆ ಉತ್ತಮ ಮಳೆ ಬೀಳುವ ನಿರೀಕ್ಷೆಯಲ್ಲಿ ಕಾದಿದೆ.
ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ 1,54,000 ಹೆಕ್ಟೇರ್ ಗುರಿಯಲ್ಲಿ 1,46,360 ಹೆಕ್ಟೇರ್ ಪ್ರದೇಶದಲ್ಲಿ ಶೇ.95.04 ರಷ್ಟು ಬಿತ್ತನೆಯಾಗಿತ್ತು. ಆದರೆ, ವಾರ್ಷಿಕ ಸರಾಸರಿ 750.3 ಮಿ. ಮೀ ಮಳೆಗೆ 578.7 ಮಿ.ಮೀ ಮಳೆಯಾಗಿ ಶೇ.27.9 ರಷ್ಟು ಕೊರತೆ ಕಂಡು ಬಂದಿದ್ದು ಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಹೊಂದಲಾಗಿದೆ. 97300 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳು, 17,200 ಹೆಕ್ಟೇರ್  ಪ್ರದೇಶದಲ್ಲಿ ದ್ವಿದಳ ಧಾನ್ಯಗಳು, 39,150 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆ ಕಾಳು ಬೆಳೆಗಳು ಮತ್ತು 350 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳು ಸೇರಿದಂತೆ ಒಟ್ಟಾರೆ 1,54,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಪ್ರಮುಖವಾಗಿ 43,000 ಹೆಕ್ಟೇರ್  ಪ್ರದೇಶದಲ್ಲಿ ರಾಗಿ, 49,300 ಹೆಕ್ಟೇರ್ ಪ್ರದೇಶದಲ್ಲಿ ಹೈ.ಮು. ಜೋಳ, 9,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 5,500 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಮತ್ತು 37,850 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆ ಬೆಳೆಯುವ ಗುರಿ ಇದೆ.ಕಳೆದ ಏಪ್ರಿಲ್ ಅಂತ್ಯಕ್ಕೆ ವಾಡಿಕೆ ಮಳೆ 51.3 ಮಿ.ಮೀ ಆಗಬೇಕಾಗಿದ್ದು, ವಾಸ್ತವವಾಗಿ 15.5 ಮಿ.ಮೀ ಮಾತ್ರ ಮಳೆಯಾಗಿ ಶೇ.70.7 ರಷ್ಟು ಕೊರತೆಯಾಗಿದೆ. ಮೇ ತಿಂಗಳ ವಾಡಿಕೆ ಮಳೆಯು 73.5 ಮಿ.ಮೀ ಮಳೆಯಾಗಿದ್ದು, ಮೇ. 14 ಕ್ಕೆ 11.4 ಮಿ.ಮೀ ಮಳೆಯಾಗಿದೆ.
ರೈತರಿಗಾಗಿ ಅರಿವು: ಮುಂಬರುವ ಮುಂಗಾರು ಹಂಗಾಮನ್ನು ದೃಷ್ಟಿಯಲ್ಲಿಟ್ಟುಕೊಂಡು ರೈತರಲ್ಲಿ ಅರಿವು ಮೂಢಿಸುವ ಕೆಲಸವನ್ನು ಕೃಷಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ರೈತರಿಗೆ ಅಧುನಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ಪರಿಚಯ ಮಾಡಿಕೊಡಲು ಮುಂದಾಗಿರುವುದಲ್ಲದೇ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗುತ್ತಿದೆ.

 ಬೀಜ ಮತ್ತು ರಸಗೊಬ್ಬರ ದಾಸ್ತಾನು
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 19,070 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳು ಬೇಕಾಗಿದ್ದು, ಇದುವರೆವಿಗೆ ಜಿಲ್ಲೆಯಲ್ಲಿ 9,600 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನಿದೆ. ಈ ತಿಂಗಳಾಂತ್ಯದೊಳಗೆ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ವಿತರಿಸಲು ಯೋಜನೆ ರೂಪಿಸಿದ್ದು ಈಗಾಗಲೇ ಜಿಲ್ಲೆಯ ಆರು ತಾಲೂಕುಗಳಲ್ಲಿನ 26 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಂಡಿದ್ದು ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಬಿತ್ತನೆ ಬೀಜಗಳಿಗೆ ಕೊರತೆ ಕಂಡು ಬರುವ ಸಾಧ್ಯತೆಯಿಲ್ಲ.   ಇನ್ನೂ 2014ರ ಮುಂಗಾರು ಹಂಗಾಮಿಗೆ 48,270 ಮೆ.ಟನ್ ವಿವಿಧ ರಸಗೊಬ್ಬರಗಳು ಹಂಚಿಕೆಯಾಗಿದ್ದು, ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಗಮದ ಚಿಕ್ಕಬಳ್ಳಾಪುರ ಶಾಖೆಯಲ್ಲಿ ಕಾಪು ದಾಸ್ತಾನು 3439 ಮೆ.ಟನ್ ಮತ್ತು ಖಾಸಗಿ ಮಾರಾಟಗಾರರಲ್ಲಿ 13,003  ಮೆ.ಟನ್ ಸೇರಿದಂತೆ ಒಟ್ಟಾರೆ 16,442 ಮೆ.ಟನ್  ರಸಗೊಬ್ಬರಗಳು ದಾಸ್ತಾನಿದ್ದು ಜಿಲ್ಲೆಗೆ ಸಮರ್ಪಕವಾಗಿ ರಸಗೊಬ್ಬರ ಸರಬರಾಜಾಗಿದ್ದು ಕೊರತೆಯಾದರೆ ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.