ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಹಸ್ತಕ್ಷೇಪ ತಡೆಗಟ್ಟಿ
ಕ.ಪ್ರ. ವಾರ್ತೆ ಬೆಂಗಳೂರು ಮೇ 20
ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸಂಪೂರ್ಣ ತಡೆಗಟ್ಟಬೇಕು. ಆದರೆ ನೀತಿನಿರೂಪಣೆಯ ಹಂತದಲ್ಲಿ ರಾಜಕೀಯ ನಾಯಕರೊಂದಿಗೆ ಉತ್ತಮ ಸಂಬಂಧ ನಿಭಾಯಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು ಹೇಳಿದರು.
ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ 49ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಭಾರತದ ವಿಶ್ವವಿದ್ಯಾಲಯಗಳು ಸಾರ್ವಜನಿಕ ನಿಧಿಯ ಮೇಲೆ ಅವಲಂಬಿತವಾಗಿರುವುದರಿಂದ ಅವು ತಮ್ಮ ಪ್ರತಿನಿಧಿಗಳಿಗೆ ಹೊಣೆಯಾಗಲೇಬೇಕಿದೆ. ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಸ್ವಾಯತ್ತತೆ ಕಾಪಾಡಿಕೊಳ್ಳುತ್ತಲೇ ಅಭಿವೃದ್ಧಿಗಾಗಿ ಖಾಸಗಿ ಸಂಪತ್ತನ್ನು ಅವಲಂಬಿಸಬಹುದಾಗಿದೆ ಹಾಗೂ ಖಾಸಗಿಯವರ ಸಲಹೆಗಳನ್ನೂ ಪಡೆಯಬಹುದಾಗಿದೆ. ಆದರೆ, ಹೀಗೆ ಮಾಡುವಾಗ ವಿವಿಯ ಮೂಲೋದ್ದೇಶವಾದ ಜ್ಞಾನಸೃಷ್ಟಿ, ಸಂರಕ್ಷಣೆ ಮತ್ತು ವಿತರಣೆಯಿಂದ ದೂರವಾಗಬಾರದು ಎಂದು ತಿಳಿಸಿದರು.
ಕೇವಲ ಅಂಕಿಅಂಶಗಳ ಗುರಿಯನ್ನು ಸರಿದೂಗಿಸುವ ಉದ್ದೇಶದಿಂದ ಯಾವುದೇ ಬೇಡಿಕೆಯಿರದ ವಿಷಯಗಳ ಪದವೀಧರರನ್ನು ಉತ್ಪಾದಿಸುವುದರಲ್ಲಿ ಅರ್ಥವಿಲ್ಲ. ಶೈಕ್ಷಣಿಕ ಕ್ಷೇತ್ರದ ಹೊಸ ಪರಿಕಲ್ಪನೆಗಳೊಂದಿಗೆ ಪ್ರಯೋಗದಲ್ಲಿ ತೊಡಗುವ ಸ್ವಾಯತ್ತತೆಯನ್ನು ವಿಶ್ವವಿದ್ಯಾಲಯಗಳು ಪಡೆದಿರಬೇಕು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯ ಆಯ್ದುಕೊಳ್ಳಲು ಸ್ವಾತಂತ್ರ್ಯವಿರಬೇಕು ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ, ಸಂಶೋಧನೆಗೆ ಒತ್ತು ನೀಡಿ: ಇತ್ತೀಚೆಗೆ ವಿದ್ಯಾರ್ಥಿಗಳು ವಿಜ್ಞಾನದಿಂದ ದೂರ ಸರಿಯುತ್ತಿದ್ದಾರೆ. ಶಾಲಾ ಹಂತದಲ್ಲಿ ವಿಜ್ಞಾನ ಮತ್ತು ಸಂಶೋಧನೆಗೆ ಒತ್ತು ನೀಡಬೇಕು. ಬಹುತೇಕ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವಾಣಿಜ್ಯ ಪದವೀಧರರು ಉದ್ಯೋಗದ ದೃಷ್ಟಿಯಿಂದ ಮ್ಯಾನೇಜ್ಮೆಂಟ್ ಕೋರ್ಸ್ಗಳಿಗೆ ಮೊರೆ ಹೋಗುತ್ತಿದ್ದಾರೆ. ಅನ್ವೇಷಣಾ ಮನೋಭಾವ ಮುಗಿದೇ ಹೋಗಿದೆಯೇನೋ ಎಂದೆನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾನವ ಸಂಪನ್ಮೂಲಕ್ಕೆ ಮಹತ್ವದ ಸ್ಥಾನವಿದೆ. ಶಿಕ್ಷಣಕ್ಕಾಗಿ ನಾವು ವ್ಯಯಿಸುವ ಸಂಪನ್ಮೂಲ ಮತ್ತು ವಿಶ್ಲೇಷಣಾತ್ಮಕ ವಿಮರ್ಶೆ ತೀರಾ ಸಣ್ಣ ಪ್ರಮಾಣದ್ದಾಗಿದೆ. ದೇಶದಲ್ಲಿ ನಡೆಯುವ ಸಾರ್ವಜನಿಕ ಪರೀಕ್ಷೆಗಳು ಯುವ ಜನಾಂಗಕ್ಕೆ ಅವಕಾಶ ಸೃಷ್ಟಿಸುವ ಬದಲು ಬಾಗಿಲು ಮುಚ್ಚುವ ಕೆಲಸ ಮಾಡುತ್ತಿವೆ ಎಂದರು.
ಸಿರ್ಸಿ ಬಳಿಯ ಸಣ್ಣ ಹಳ್ಳಿ ನನ್ನೂರು, ಮುಕ್ಕಾಲು ಎಕರೆ ಜಮೀನಿದ್ದು ತಂದೆ-ತಾಯಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮನೆಯವರು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಸಂಸ್ಕೃತದಲ್ಲಿ 5 ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ಪ್ರೊಫೆಸರ್ ಆಗಿ ನನ್ನಂಥ ನೂರಾರು ವಿದ್ಯಾರ್ಥಿಗಳನ್ನು ರೂಪಿಸಬೇಕೆಂದಿದ್ದೇನೆ.
ಟಿ ರಾಜೇಂದ್ರ ಭಟ್
6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ಡಾ. ಕಿರಣ್ ಮಜುಂದಾರ್ ಷಾ - ವಿಜ್ಞಾನ ಮತ್ತು ತಂತ್ರಜ್ಞಾನ, ಜಿ.ಬಿ. ಪರಮಶಿವಯ್ಯ- ಸಮಾಜ ಸೇವೆ, ಪಿ. ರಾಮಯ್ಯ - ಪತ್ರಿಕೋದ್ಯಮ, ಪ್ರೊ. ಎಸ್.ಎಸ್. ಅರಕೇರಿ - ಸಮಾಜ ಸೇವೆ, ಪ್ರೊ. ಬಿ.ಟಿ. ಲಕ್ಷ್ಮಣ್ - ಶಿಕ್ಷಣ ಹಾಗೂ ಸಿನಿಮಾ ಸಂಗೀತಕ್ಕಾಗಿ ಹಂಸಲೇಖ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಡಿ.ಎಲ್. ಶ್ರುತಿ (ಭೌತಶಾಸ್ತ್ರ) ಎ.ಆರ್. ನೂರ್ಜಾನ್ (ರಸಾಯನಶಾಸ್ತ್ರ), ರಾಜೇಂದ್ರ ಭಟ್ (ಸಂಸ್ಕೃತ), ಎಸ್.ಎಂ. ಮೋಹಿತಾ(ಬಿ.ಇ., ಸಿವಿಲ್), ಎನ್.ಎ. ಐಶ್ವರ್ಯಾ (ಬಿ.ಕಾಂ.), ಜಿ. ಅನುಷಾ (ಬಿ.ಎ.), ಸೌಮ್ಯ ಪಿ. ರಾವ್ (ಬಿ.ಇ., ಮೆಕ್ಯಾನಿಕಲ್), ಎನ್. ಚೈತ್ರಾ (ಬಿಎಸ್ಸಿ), ರಶ್ಮಿ ಎಸ್. ಬಾಲಿಗಾ (ಬಿಇಡಿ) ಹಾಗೂ 223 ವಿದ್ಯಾರ್ಥಿಗಳಿಗೆ ಪಿಎಚ್ಡಿ., ಪದವಿ ವಿತರಿಸಲಾಯಿತು. ಕುಲಪತಿ ಡಾ.ಬಿ. ತಿಮ್ಮೇಗೌಡ, ರಿಜಿಸ್ಟ್ರಾರ್ ಪ್ರೊ. ಕೆ.ಕೆ. ಸೀತಮ್ಮ, ಮೌಲ್ಯಮಾಪನ ಕುಲಸಚಿವ ಡಾ.ಕೆ.ಎನ್.ನಿಂಗೇಗೌಡ ಮತ್ತಿತರರು ಇದ್ದರು.
ಚಿನ್ನದ ಪದಕದ ನಿರೀಕ್ಷೆ ಇತ್ತು. ಆದರೆ ನಾಲ್ಕು ಚಿನ್ನದ ಪದಕ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ದಿನಕ್ಕೆ ಒಂದು ಗಂಟೆ ಕಷ್ಟ ಪಡದೆ ಇಷ್ಟಪಟ್ಟು ಓದುತ್ತಿದ್ದೆ, ಐಎಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂದಿದ್ದೇನೆ. ನನ್ನ ಸಾಧನೆಗೆ ತಂದೆಯೇ ಸ್ಫೂರ್ತಿ.
- ಜಿ. ಅನುಷಾ, ವಿದ್ಯಾರ್ಥಿನಿ, ಬಿ.ಎ.
ತಂದೆ ಬಾಗೇಪಲ್ಲಿಯಲ್ಲಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಯಾರೂ ಅಕ್ಷರಸ್ಥರಲ್ಲ, ಆದರೂ ಕಲಿಕೆಗೆ ಪ್ರೋತ್ಸಾಹಿಸುತ್ತಿದ್ದರು. ಬಿಎಸ್ಸಿಯಲ್ಲಿ ಶೇ. 87 ಅಂಕ ಬಂದಿತ್ತು. ಎಂಎಸ್ಸಿ.ಯಲ್ಲಿ (ರಸಾಯನಶಾಸ್ತ್ರ) 6 ಚಿನ್ನದ ಪದಕ ಬಂದಿದೆ. ಮುಂದೆ ಪ್ರೊಫೆಸರ್ ಆಗುವ ಕನಸಿದೆ.
- ಎ.ಆರ್. ನೂರ್ಜಾನ್, ವಿದ್ಯಾರ್ಥಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

